ಬೆಂಗಳೂರು (ಆ.14): ಸಾಕಷ್ಟು ಜನರು ಹೋರಾಟ ಮಾಡಿ ಅಖಂಡ ಭಾರತಕ್ಕೆ (Akhand Bhart) ಸ್ವಾತಂತ್ರ್ಯ (Independence) ತಂದುಕೊಟ್ಟರು. ಅವರೆಲ್ಲರ ಉದ್ದೇಶ ಅಖಂಡ ಭಾರತ ಉಳಿಯಬೇಕು ಎಂಬುವುದಾಗಿತ್ತು. ಆದರೆ ಆಗಸ್ಟ್ 14 ರಂದು ಭಾರತದ ಒಂದು ಭಾಗ ತಂಡಾಗಿ ಪಾಕಿಸ್ತಾನವಾಯಿತು. ಆಗಸ್ಟ್ 14 ರಂದು ದೇಶ ವಿಭಜನೆಯಾಗಿ ದೇಶಪ್ರೇಮಿಗಳಿಗೆ ಅಪಮಾನವಾಗಿದೆ. ಹೀಗಾಗಿ ಈ ದಿನ ದೇಶ ಪ್ರೇಮಿಗಳಿಗೆ ನೋವಿನ ದಿನ. ಆಗಸ್ಟ್ 14 ಭಾರತಕ್ಕೆ ಕರಾಳ ದಿನ. ಆಗಸ್ಟ್ 15 ಅನ್ನು ನಾವು ಸಂಭ್ರಮಿಸುತ್ತೇವೆ ಎಂದು ಮಾಜಿ ಸಚಿವ ಆರ್ ಅಶೋಕ್ (R Ashok) ಹೇಳಿದರು.
ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ದೇಶ ವಿಭಜನೆ ಪೂರ್ವನಿಯೋಜಿತ. ಬ್ರಿಟಿಷರು ಧರ್ಮಾದರಿತವಾಗಿ ಹಿಂದೂ, ಮುಸ್ಲಿಂ ಎಂಬ ಉದ್ದೇಶದಿಂದ ರಾಷ್ಟ್ರ ನಿರ್ಮಾಣ ಮಾಡಿದರು. ನೆಹರು ನೇತೃತ್ವದ ಕಾಂಗ್ರೆಸ್ ಭಾರತವನ್ನು ತುಂಡು ಮಾಡುವುದರಲ್ಲಿ ತೊಡಗಿರುವುದನ್ನು ನೋಡಬಹುದು. ಇಂದಿಗೂ ಕಾಂಗ್ರೆಸ್ ಅದನ್ನೇ ಮಾಡುತ್ತಿದೆ ಎಂದು ಹರಿಹಾಯ್ದರು.
ನರೇಂದ್ರ ಮೋದಿಯವರು ಬಂದ ಬಳಿಕ ಕಾಶ್ಮೀರ ನಮ್ಮದಾಗಿದೆ. ಆರ್ಟಿಕಲ್ 370 ನಿಷೇಧದ ಬಳಿಕ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ನಾವು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಎಂದು ಹೇಳುತ್ತಾರೆ. ಆದರೆ ನೀವು ದೇಶವನ್ನು ತುಂಡರಿಸಿದ್ದು ಎಂಬುದನ್ನು ಮರೆಯಬೇಡಿ ಎಂದರು.
ಇದನ್ನೂ ಓದಿ: ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ vs ಇತರರು, ಕಾಂಗ್ರೆಸ್ನಲ್ಲಿ ಸತೀಶ್ ಜಾರಕಿಹೊಳಿ vs ಇತರ ನಾಯಕರು
ಕಾಂಗ್ರೆಸ್ ಪಕ್ಷವನ್ನು ಎ ಓ ಹ್ಯೂಮ್ ಸ್ಥಾಪಿಸಿದ್ದಾರೆ. ಇಂದಿಗೂ ಕೂಡ ಅದೇ ಕಾಂಗ್ರೆಸ್ ಪಕ್ಷವಿದೆ. ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ನೀತಿ ಅನುಸರಿಸುತ್ತಿದೆ. ಪ್ರಧಾನಿ ಮೋದಿಯವರು ದೇಶವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಮೋದಿ ಪ್ರಧಾನಿಯಾದ ಬಳಿಕ ಕಾಶ್ಮೀರದ ಒಂದಿಂಚು ಕೂಡ ಕೊಡುವ ಪ್ರಶ್ನೆ ಇಲ್ಲ ಎಂಬ ಸಂದೇಶ ನೀಡಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ದೇಶದಿಂದ ಪಾಕಿಸ್ತಾನಕ್ಕೆ ಹೋಗಿದ ಜನ ಬಹಳ ಕಡಿಮೆ. ಆದರೆ ಅಲ್ಲಿಂದ ಸಿಖ್, ಹಿಂದೂಗಳನ್ನು ಹೊಡೆದು ಓಡಿಸಿದ್ದಾರೆ. ಇದಕ್ಕೆ ನೇರ ಕಾರಣ ಕಾಂಗ್ರೆಸ್. ಇದನ್ನೆಲ್ಲಾ ನೆನಪು ಮಾಡಿಕೊಂಡೆ ನಾವು ಸ್ವಾತಂತ್ರ್ಯ ದಿನ ಆಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಲೀಡರ್ ಲೆಸ್ ಪಾರ್ಟಿ ಬಿಜೆಪಿ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ನಾನು, ಬಿಎಸ್ ಯಡಿಯೂರಪ್ಪ ರಾತ್ರಿ ರಾಷ್ಟ್ರಧ್ವಜ ಹಾರಿಸಿದೇವು. ಆ ಹೋರಾಟದಲ್ಲಿ ಜಗದೀಶ್ ಶೆಟ್ಟರ್ ಕಾಣಲಿಲ್ಲ. ಜಗದೀಶ್ ಶೆಟ್ಟರ್ ಎಲ್ಲಿ ಅವಕಾಶ ಇರುತ್ತದೆ ಅಲ್ಲಿ ಇರುತ್ತಾರೆ. ಊಟ ತಯಾರಿಸಿದರೇ ಸಾಲಿನಲ್ಲಿ ಬಂದು ಕುಳಿತು ಕೊಳ್ಳುತ್ತಾರೆ ಅಷ್ಟೇ. ಬಿಬಿ ಶಿವಪ್ಪರ ಕಾಲದಲ್ಲಿ ಶೆಟ್ಟರ್ ಏನು ಮಾಡಿದರು ಗೊತ್ತಿದೆ ಎಂದು ಮಾಜಿ ಮುಖ್ಯಮತ್ರಿ ಜಗದೀಶ್ ಶೆಟ್ಟರ್ಗೆ ತಿರುಗೇಟು ನೀಡಿದರು.
ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಇದೆ, ಈ ಸರ್ಕಾರ ಬಹಳ ದಿನ ಇರಲ್ಲ. ಕಮಿಷನ್ ಸರ್ಕಾರ, ಎಟಿಎಂ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತದೆ. ಮಂಡ್ಯದಲ್ಲಿ ಈಗಾಗಲೇ ಸರ್ಕಾರದ ವಿರುದ್ಧ ಹೋರಾಟ ಆರಂಭವಾಗಿದೆ. ಭ್ರಷ್ಟ ಸರ್ಕಾರದ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿದ್ದೇವೆ. ಇದು ಭ್ರಷ್ಟ ಸರ್ಕಾರ ಬಹಳ ದಿನ ಇರುವುದಿಲ್ಲ ಎಂದು ಭವಿಷ್ಯ ನುಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:10 pm, Mon, 14 August 23