ಕೊಪ್ಪಳ, ಆಗಸ್ಟ್ 13: ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್ ವಿರುದ್ಧವೇ 15 ಕಮೀಷನ್ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಶಾಸಕರು ವಸೂಲಿಗಿಳಿದಿದ್ದಾರೆ ಎಂಬ ಮಾಜಿ ಸಚಿವ ಸಿ.ಟಿ. ರವಿ (C.T.Ravi) ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಶಿವರಾಜ್ ತಂಗಡಗಿ (Shivaraj Tangadagi), ಕಾಂಗ್ರೆಸ್ ಶಾಸಕರಿಗೆ ಅಂತಹ ಪರಿಸ್ಥಿತಿ ಬಂದಿಲ್ಲ ಎಂದರು.
ಕಾರಟಗಿ ತಾಲೂಕಿನ ಸಿದ್ದಾಪುರದಲ್ಲಿ ಮಾತನಾಡಿದ ಸಚಿವ ತಂಗಡಗಿ, ಬಹುಶಃ ಬಿಜೆಪಿ ಕಾಲದಲ್ಲಿ ವಸೂಲಿ ಮಾಡಿರುವ ಬಗ್ಗೆ ನೆನಪಾಗಿರಬೇಕು. ವಸೂಲಿಗಿಳಿಯುವ ಪರಿಸ್ಥಿತಿ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಬಂದಿಲ್ಲ. ಅವರು (ಬಿಜೆಪಿ) ವಸೂಲಿ ಮಾಡಿರುವ ಬಗ್ಗೆ ಸಾಕಷ್ಟು ಉದಾಹರಣೆ ಕೊಡಬಲ್ಲೆವು. ಸಿ.ಟಿ.ರವಿ ಈ ರೀತಿ ಮಾತಾಡಿದ್ದಕ್ಕೇ ಜನ ಈಗಾಗಲೇ ಶಿಕ್ಷೆ ಕೊಟ್ಟಿದ್ದಾರೆ ಎಂದರು.
ನಮ್ಮ ಸರ್ಕಾರ ಇನ್ನೂ ಯಾವುದಕ್ಕೂ ಅನುದಾನ ಬಿಡುಗಡೆ ಮಾಡಿಲ್ಲ. ಇನ್ನು 15 ಪರ್ಸೆಂಟ್ ಕಮಿಷನ್ ಮಾತು ಎಲ್ಲಿಂದ ಬರುತ್ತದೆ ಎಂದು ತಂಗಡಗಿ ಪ್ರಶ್ನಿಸಿದರು. 40 ಪರ್ಸೆಂಟ್ ಕಮಿಷನ್ ಬಗ್ಗೆ ತನಿಖೆಗೆ ಬಿಜೆಪಿಯವರೇ ಸದನದಲ್ಲಿ ಹೇಳಿದ್ದರು. ನಾವು ತನಿಖೆ ಮಾಡಲು ಈಗಾಗಲೇ ತಂಡ ರಚಿಸಿದ್ದೇವೆ ಎಂದರು.
ಇದನ್ನೂ ಓದಿ: ಗುತ್ತಿಗೆದಾರರ ಆರೋಪ ಸುಳ್ಳು ಅನ್ನೋದಾದರೆ ಪ್ರಮಾಣ ಮಾಡಲಿ: ಡಿಕೆ ಶಿವಕುಮಾರ್ಗೆ ಸವಾಲು ಹಾಕಿದ ಮಾಜಿ ಶಾಸಕ ಸಿಟಿ ರವಿ
ತನಿಖೆ ಸಂಬಂಧ 30 ದಿನಗಳಲ್ಲಿ ವರದಿ ನೀಡಿಲು ಐದು ಜನ ಐಎಎಸ್ ಅಧಿಕಾರಿಗಳನ್ನು ನೇಮಿಸಿದ್ದೇವೆ ಎಂದು ಹೇಳಿದ ತಂಗಡಗಿ, ಆ ಕಾಮಗಾರಿಗಳಲ್ಲಿ ಬಿಜೆಪಿಯ ಆಶ್ವಥ್ ನಾರಾಯಣ, ಬೊಮ್ಮಾಯಿ, ಸಿಟಿ ರವಿ ಪಾಲುದಾರರು ಇರಬೇಕೆ ಎಂದು ಅನಿಸುತ್ತಿದೆ. ತನಿಖೆ ಮಾಡುವವರೆಗೂ ಸಮಾಧಾನ ಇರಲಿ. ಇವರಿಗೇಕೆ ಅಷ್ಟೊಂದು ಅವಸರ ಎಂದು ಪ್ರಶ್ನಿಸಿದರು.
ಪ್ರಮಾಣಿಕವಾಗಿರುವ ಗುತ್ತಿಗೆದಾರರಿಗೆ ಹಣ ಬಂದೇ ಬರುತ್ತದೆ. ಐಎಎಸ್ ಅಧಿಕಾರಿಗಳು ವರದಿ ನೀಡಲಿ ತಪ್ಪಿತಸ್ಥರು ಯಾರು ಎಂದು ತಿಳಿಯುತ್ತದೆ. ಗುತ್ತಿಗೆದಾರರು ಕಾಮಗಾರಿ ಮಾಡಿದ ಹಣ ಬಿಡುಗಡೆ ಮಾಡೇ ಮಾಡುತ್ತೇವೆ. ಬಿಜೆಪಿ ಅವರಿಗೆ ನಮ್ಮ ಸರ್ಕಾರದ ಮೇಲೆ ಆರೋಪ ಮಾಡಲು ಯಾವುದೇ ವಿಚಾರಗಳಿಲ್ಲ. ಹೀಗಾಗಿ ಅವರಿಗೆ ಹೊಟ್ಟೆ ಉರಿ ಶುರುವಾಗಿದೆ ಎಂದರು.
ಬಾಯಿ ತೆಗೆದರೆ ಮೋದಿ ಮೋದಿ ಅಂತ ಹೇಳಿ ಪ್ರಚಾರ ಮಾಡುತ್ತಿದ್ದರು. ಆದರೆ ಕರ್ನಾಟಕ ಜನರು ಬುದ್ದಿವಂತರು, ಅದು ವರ್ಕೌಟ್ ಆಗಿಲ್ಲ. ಮುಂದೆ ಇವರಿಗೆ ವಿಳಾಸವೇ ಇರಲ್ಲ ಎಂದ ಶಿವರಾಜ ತಂಗಡಗಿ, ಗ್ಯಾರೆಂಟಿ ಜಾರಿ ಮಾಡದಿದರೆ ಹೋರಾಟ ಮಾಡತೀವಿ ಅಂದಿದ್ದರು. 10 ಕೆಜಿಯಲ್ಲಿ ಒಂದು ಕಾಳು ಕೊಡದಿದ್ದರೆ ಹೋರಾಟ ಮಾಡುತ್ತೇವೆ ಎಂದು ಯಡಿಯೂರಪ್ಪ ಸಾಹೇಬ್ರು ಹೇಳಿದ್ದರು. ಐದು ಕೆಜಿ ಕೊಟ್ವಿ, ಐದು ಕೆಜಿ ಹಣ ಕೊಟ್ಟೆವು. ಈಗ ಮಾತನಾಡಲು ಏನೂ ಇಲ್ಲವೆಂದು ಆರೋಪ ಮಾಡುತ್ತಿದ್ದಾರೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ