Updated on: Apr 08, 2023 | 10:09 PM
ಭಾರತದಲ್ಲಿ ಐಪಿಎಲ್ ರಂಗೇರುತ್ತಿದ್ದರೆ, ಅತ್ತ ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್ನಲ್ಲಿ ಕೌಂಟಿ ಚಾಂಪಿಯನ್ಶಿಪ್ ಶುರುವಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಸಸೆಕ್ಸ್ ತಂಡವನ್ನು ಭಾರತದ ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ ಮುನ್ನಡೆಸುತ್ತಿರುವುದು ವಿಶೇಷ.
ಇದೀಗ ಮೊದಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸುವ ಮೂಲಕ ಚೇತೇಶ್ವರ ಪೂಜಾರ ಎಲ್ಲರ ಗಮನ ಸೆಳೆದಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡರ್ಹಾಮ್ ತಂಡವು ಮೊದಲ ಇನಿಂಗ್ಸ್ನಲ್ಲಿ 376 ರನ್ ಕಲೆಹಾಕಿತ್ತು.
ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಸಸೆಕ್ಸ್ ತಂಡವು 91 ರನ್ಗಳಿಸುಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕಣಕ್ಕಿಳಿದ ಪೂಜಾರಾ ತಂಡಕ್ಕೆ ಆಸರೆಯಾದರು. ರಕ್ಷಣಾತ್ಮಕ ಆಟದೊಂದಿಗೆ ರನ್ಗಳಿಸುತ್ತಾ ಸಾಗಿದ ಅವರು ಟಾಮ್ ಕ್ಲಾರ್ಕ್ ಅವರೊಂದಿಗೆ 112 ರನ್‌ಗಳ ಜೊತೆಯಾಟವಾಡಿದರು.
ಅಲ್ಲದೆ ಚೇತೇಶ್ವರ ಪೂಜಾರಾ ಈ ಪಂದ್ಯದಲ್ಲಿ 163 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 115 ರನ್ ಬಾಸಿದರು. ವಿಶೇಷ ಎಂದರೆ ಇದು ಸಸೆಕ್ಸ್ ಪರ ಆಡಿದ 14 ಇನ್ನಿಂಗ್ಸ್‌ಗಳಲ್ಲಿ ಪೂಜಾರ ಅವರ ಆರನೇ ಶತಕವಾಗಿದೆ.
ಪೂಜಾರ ಅವರ ಭರ್ಜರಿ ಶತಕದ ನೆರವಿನಿಂದ ಇದೀಗ ಸಸೆಕ್ಸ್ ತಂಡವು 2ನೇ ದಿನದಾಟದ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 332 ರನ್ ಕಲೆಹಾಕಿದೆ.
ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿರುವ ಚೇತೇಶ್ವರ ಪೂಜಾರ ಐಪಿಎಲ್ 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿಯಲು ಅವಕಾಶ ಸಿಕ್ಕಿರಲಿಲ್ಲ. ಅಷ್ಟೇ ಅಲ್ಲದೆ ಕಳೆದ ಸೀಸನ್ನಲ್ಲಿ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು.
ಅಂದರೆ 2021 ರಲ್ಲಿ ಸಿಎಸ್ಕೆ ತಂಡದಲ್ಲಿದ್ದರೂ ಚೇತೇಶ್ವರ ಪೂಜಾರ ಕೊನೆಯ ಬಾರಿಗೆ ಐಪಿಎಲ್ ಪಂದ್ಯ ಆಡಿದ್ದು 2014 ರಲ್ಲಿ. ಅಲ್ಲದೆ ಇದುವರೆಗೆ 30 ಐಪಿಎಲ್ ಪಂದ್ಯಗಳನ್ನಾಡಿರುವ ಪೂಜಾರ 20.52 ಸರಾಸರಿಯಲ್ಲಿ 390 ರನ್ ಗಳಿಸಿದ್ದಾರೆ. ಇದಾಗ್ಯೂ ಈ ಬಾರಿ ಅವರು ಐಪಿಎಲ್ ಹರಾಜಿಗೆ ಹೆಸರು ನೀಡಿರಲಿಲ್ಲ. ಇದೀಗ ಇಂಗ್ಲೆಂಡ್ನಲ್ಲಿ ಶತಕ ಸಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿರುವುದು ವಿಶೇಷ.