MQ-9B Sea Guardian drone: ಭಾರತೀಯ ನೌಕಾಪಡೆಗೆ ಎಂಕ್ಯು-9ಬಿ ಸೀ ಗಾರ್ಡಿಯನ್ ಖರೀದಿ: ಆಗಸದಿಂದ ನಿಖರ ಕಣ್ಗಾವಲಿಗೆ ಭಾರತಕ್ಕೆ ಬೇಕಿದೆ ಡ್ರೋನ್-ಆಚಾರ್ಯ!

|

Updated on: Jun 17, 2023 | 3:19 PM

ನವೆಂಬರ್ 2020ರಿಂದಲೂ ಭಾರತೀಯ ನೌಕಾಪಡೆ ಎರಡು ಎಂಕ್ಯು-9ಬಿ ಸೀ ಗಾರ್ಡಿಯನ್ ಡ್ರೋನ್‌ಗಳನ್ನು ಗುತ್ತಿಗೆಗೆ ಪಡೆದುಕೊಂಡು, ದಕ್ಷಿಣ ಭಾರತದ ಅರಕ್ಕೋಣಂ ವಾಯುಸೇನಾ ನೆಲೆಯಿಂದ ಕಾರ್ಯಾಚರಿಸುತ್ತಿದೆ. ಈ ಗುತ್ತಿಗೆ ಒಪ್ಪಂದವನ್ನು ಕನಿಷ್ಠ ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿದ್ದು, ಈ ಡ್ರೋನ್‌ಗಳು ಡಿಸೆಂಬರ್ 2022ರ ತನಕ ಸೇವೆಗೆ ಬಳಕೆಯಾಗಿವ ನಿರೀಕ್ಷೆಗಳಿವೆ.

MQ-9B Sea Guardian drone: ಭಾರತೀಯ ನೌಕಾಪಡೆಗೆ ಎಂಕ್ಯು-9ಬಿ ಸೀ ಗಾರ್ಡಿಯನ್ ಖರೀದಿ: ಆಗಸದಿಂದ ನಿಖರ ಕಣ್ಗಾವಲಿಗೆ ಭಾರತಕ್ಕೆ ಬೇಕಿದೆ ಡ್ರೋನ್-ಆಚಾರ್ಯ!
ಸಾಂದರ್ಭಿಕ ಚಿತ್ರ
Follow us on

ಗುರುವಾರ, ಜೂನ್ 15ರಂದು ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಖರೀದಿ ಸಮಿತಿಉ ಸಭೆಯಲ್ಲಿ ರಕ್ಷಣಾ ಸಚಿವಾಲಯ ಅಮೆರಿಕಾ ನಿರ್ಮಿತ ಎಂಕ್ಯು-9ಬಿ ರೀಪರ್ ಶಸ್ತ್ರಸಜ್ಜಿತ ಡ್ರೋನ್‌ಗಳ ಖರೀದಿಗೆ ಅನುಮತಿ ನೀಡಿತು.

• ನವೆಂಬರ್ 2020ರಲ್ಲಿ ಪೂರ್ವ ಲಡಾಖ್ ಗಡಿಯಲ್ಲಿ ಚೀನಾದೊಡನೆ ಗಡಿ ಚಕಮಕಿ ನಡೆದ ಬಳಿಕ ಭಾರತೀಯ ನೌಕಾಪಡೆ ಎರಡು ಎಂಕ್ಯು-9ಬಿ ಡ್ರೋನ್‌ಗಳನ್ನು ವಿಚಕ್ಷಣೆ ಮತ್ತು ಕಣ್ಗಾವಲಿನ ಉದ್ದೇಶದಿಂದ ಗುತ್ತಿಗೆಗೆ ಪಡೆದುಕೊಂಡಿತ್ತು.

• ಎಂಕ್ಯು-9ಬಿ ಡ್ರೋನ್ ಸ್ಕೈ ಗಾರ್ಡಿಯನ್ ಮತ್ತು ಸೀ ಗಾರ್ಡಿಯನ್ ಎಂಬ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ.

• ಭಾರತೀಯ ನೌಕಾಪಡೆ ಎಂಕ್ಯು-9ಬಿ ಸೀ ಗಾರ್ಡಿಯನ್ ಅನ್ನು ಎರಡು ವರ್ಷಗಳಿಂದ ಬಳಸುತ್ತಿದೆ.

ನವೆಂಬರ್ 2020ರಿಂದಲೂ ಭಾರತೀಯ ನೌಕಾಪಡೆ ಎರಡು ಎಂಕ್ಯು-9ಬಿ ಸೀ ಗಾರ್ಡಿಯನ್ ಡ್ರೋನ್‌ಗಳನ್ನು ಗುತ್ತಿಗೆಗೆ ಪಡೆದುಕೊಂಡು, ದಕ್ಷಿಣ ಭಾರತದ ಅರಕ್ಕೋಣಂ ವಾಯುಸೇನಾ ನೆಲೆಯಿಂದ ಕಾರ್ಯಾಚರಿಸುತ್ತಿದೆ. ಈ ಗುತ್ತಿಗೆ ಒಪ್ಪಂದವನ್ನು ಕನಿಷ್ಠ ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿದ್ದು, ಈ ಡ್ರೋನ್‌ಗಳು ಡಿಸೆಂಬರ್ 2022ರ ತನಕ ಸೇವೆಗೆ ಬಳಕೆಯಾಗಿವ ನಿರೀಕ್ಷೆಗಳಿವೆ.

2023ರ ಫೆಬ್ರವರಿ ತಿಂಗಳಲ್ಲಿ, ಜಗತ್ತಿನ ಅತ್ಯಂತ ದೊಡ್ಡ ಮತ್ತು ಹಳೆಯ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದಕ ಸಂಸ್ಥೆಗಳಲ್ಲಿ ಒಂದಾದ, ಭಾರತದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಹಾಗೂ ಜನರಲ್ ಅಟಾಮಿಕ್ಸ್ ಏರೋನಾಟಿಕಲ್ ಸಿಸ್ಟಮ್ಸ್ (ಜಿಎ-ಎಎಸ್ಐ) ಎಂಬ ಅಮೆರಿಕಾದ ಶಕ್ತಿ ಮತ್ತು ರಕ್ಷಣಾ ಉದ್ಯಮಗಳು ಜಂಟಿಯಾಗಿ ಎಂಕ್ಯು-9ಬಿ ಟರ್ಬೋ – ಪ್ರೊಪೆಲ್ಲರ್ ಇಂಜಿನ್‌ಗಳಿಗೆ ದೇಶೀಯ ಎಂಆರ್‌ಓ ಬೆಂಬಲವನ್ನು ಬೆಂಗಳೂರಿನ ಎಚ್ಎಎಲ್ ಇಂಜಿನ್ ವಿಭಾಗದಲ್ಲಿ ಒದಗಿಸಲಾಗುವುದು ಎಂದು ಹೇಳಿಕೆ ನೀಡಿದವು. ಇತ್ತೀಚೆಗೆ ಈ ಒಪ್ಪಂದ ಚಾಲ್ತಿಯಲ್ಲಿರುವುದು ಖಚಿತಗೊಂಡಿತು. ಮೂಲಗಳ ಪ್ರಕಾರ, ಭಾರತ ಜನರಲ್ ಅಟಾಮಿಕ್ಸ್ ನಿಂದ 31 ಆಯುಧ ಅಳವಡಿಸಬಹುದಾದ ಎಂಕ್ಯು-9ಬಿ ಸೀ ಗಾರ್ಡಿಯನ್ ಡ್ರೋನ್‌ಗಳನ್ನು ಖರೀದಿಸಲಿದೆ. ಗಡಿ ಪ್ರದೇಶಗಳ ಕಣ್ಗಾವಲಿಗೆ ಬಳಸುವ ಉದ್ದೇಶ ಹೊಂದಿರುವ ಈ ಡ್ರೋನ್‌ಗಳನ್ನು ಸೇನೆಯ ಮೂರೂ ವಿಭಾಗಗಳಿಗೆ ಆದ್ಯತೆಯ ಮೇರೆಗೆ ಒದಗಿಸಲಾಗುವುದು. ಭಾರತೀಯ ಸೇನೆಗೆ ಎಂಟು ಡ್ರೋನ್‌ಗಳನ್ನು ನೀಡಿದರೆ, ವಾಯುಪಡೆಗೆ ಎಂಟು ಹಾಗೂ ನೌಕಾಪಡೆಗೆ 15 ಡ್ರೋನ್‌ಗಳನ್ನು ಒದಗಿಸಲಾಗುವುದು.

ರೀಪರ್ ಡ್ರೋನ್‌ಗಳು ಎಂಕ್ಯು-9ಬಿ ಸೀ ಗಾರ್ಡಿಯನ್ ಸೇರಿದಂತೆ ವಿವಿಧ ಆವೃತ್ತಿಗಳಲ್ಲಿ ಲಭ್ಯವಿದೆ. ಸೀ ಗಾರ್ಡಿಯನ್ ನೌಕಾಪಡೆಯ ಆವೃತ್ತಿಯಾಗಿದ್ದು, ಭಾರತೀಯ ನೌಕಾಪಡೆ ಕಳೆದ ಕೆಲವು ವರ್ಷಗಳಿಂದ ಇದಕ್ಕಾಗಿ ಬೇಡಿಕೆ ಸಲ್ಲಿಸುತ್ತಿದೆ. ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಭಾವವೂ ಭಾರತೀಯ ನೌಕಾಪಡೆ ಇದರ ಖರೀದಿಗೆ ಹೆಚ್ಚಿನ ಒತ್ತು ನೀಡಲು ಕಾರಣವಾಗಿತ್ತು. ಅದರೊಡನೆ, ಚೀನಾದ ಗಡಿ ಪ್ರದೇಶಗಳು ಮತ್ತು ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಕಣ್ಗಾವಲು ಹೆಚ್ಚಿಸಲು ಇದು ನೆರವಾಗಲಿದೆ.

ರೀಪರ್ ಡ್ರೋನ್ ವೈಶಿಷ್ಟ್ಯಗಳು

ಅಮೆರಿಕಾದ ವಾಯುಪಡೆಯ ಮಾಜಿ ಮುಖ್ಯಸ್ಥರಾದ ಜನರಲ್ ಟಿ ಮೈಕೇಲ್ ಮೋಸೆಲಿ ಅವರು ಪ್ರಿಡೇಟರ್ ಬಿ ಎಂದೂ ಹೆಸರಾದ ರೀಪರ್ ಡ್ರೋನ್ ಅತ್ಯಂತ ವಿಶಿಷ್ಟವಾದ ಅನ್ ಮ್ಯಾನ್ಡ್ ಏರಿಯಲ್ ವೆಹಿಕಲ್ (ಯುಎವಿ) ಆಗಿದೆ ಎಂದಿದ್ದಾರೆ. ಇದು ಅಮೆರಿಕಾದ ವಾಯುಪಡೆಗೆ ಸುದೀರ್ಘ ಅವಧಿಗೆ, ಅತ್ಯಂತ ಎತ್ತರದಲ್ಲಿ ಕಣ್ಗಾವಲು ನಡೆಸಲು ನೆರವಾಗಲಿದ್ದು, ಇದು ಗಾಳಿಯಲ್ಲೇ 27 ಗಂಟೆಗಳ ಕಾಲ ಹಾರಾಟ ನಡೆಸಬಲ್ಲದು. ಪ್ರಿಡೇಟರ್ ಬಿ ಡ್ರೋನಿನ ಉತ್ಪಾದಕರಾದ ಜನರಲ್ ಅಟಾಮಿಕ್ಸ್ ಸಂಸ್ಥೆ ಈ ಯುಎವಿ ಸಾಟಿಯಿಲ್ಲದ ಕುಶಲತೆ ಹೊಂದಿದೆ ಎಂದು ಪ್ರಚಾರಪಡಿಸುತ್ತಿದೆ.

ಜನರಲ್ ಅಟಾಮಿಕ್ಸ್ ಯುಎಸ್ ಮರೀನ್ ಕಾರ್ಪ್ಸ್‌ಗಾಗಿ 40 ಗಂಟೆಗಳ ಹಾರಾಟ ಸಾಮರ್ಥ್ಯ ಹೊಂದಿರುವ ಪ್ರಿಡೇಟರ್ ಡ್ರೋನನ್ನು ಅಭಿವೃದ್ಧಿ ಪಡಿಸುತ್ತಿದ್ದು, ಯುಎವಿಯ ಕಾರ್ಯಾಚರಣಾ ಸಾಮರ್ಥ್ಯವನ್ನು ವೃದ್ಧಿಸಲಿದೆ. ನೂತನ ಆವೃತ್ತಿಯನ್ನು 2023ರ ಅಂತ್ಯದ ವೇಳೆಗೆ ಕಾರ್ಪ್ಸ್‌ಗೆ ಸೇರ್ಪಡೆಗೊಳಿಸುವ ನಿರೀಕ್ಷೆಯಿದೆ.

ಎಂಕ್ಯು-9 ಶೂನ್ಯದಿಂದ 50,000 ಅಡಿಗಳ ಎತ್ತರದ ತನಕ ಹಾರಾಟ ನಡೆಸಬಲ್ಲದಾಗಿದ್ದು, 240 ನಾಟ್‌ಗಳ ಗರಿಷ್ಠ ವೇಗದಲ್ಲಿ (ಕೆಟಿಎಎಸ್) ಚಲಿಸಬಲ್ಲದು. ಇದು ಏರ್ ಮಾಸ್‌ಗೆ ಸಂಪರ್ಕಿಸಿರುವ ವಿಮಾನದ ವೇಗಕ್ಕೆ ಸಮಾನವಾಗಿದೆ. 950 ಹಾರ್ಸ್ ಪವರ್ (712 ಕಿಲೋವ್ಯಾಟ್) ಇಂಜಿನ್ ಹೊಂದಿರುವ ಪ್ರಿಡೇಟರ್ 1,746 ಕೆಜಿ ತನಕದ ಆಯುಧಗಳನ್ನು ಹೊತ್ತೊಯ್ಯಬಲ್ಲದು. ರೀಪರ್ ಡ್ರೋನ್‌ನಲ್ಲಿ ಹೆಲ್‌ಫೈರ್ ಕ್ಷಿಪಣಿ ಅಳವಡಿಸಬಹುದಾಗಿದ್ದು, ಈ ಕ್ಷಿಪಣಿ ಸೈನಿಕರ ಸಹಾಯವಿಲ್ಲದೆ, ಶತ್ರು ಪ್ರದೇಶದೊಳಗೆ ನುಗ್ಗಿ, ಪ್ರಮುಖ ಗುರಿಗಳನ್ನೂ ಅತ್ಯಂತ ನಿಖರವಾಗಿ ನಾಶಪಡಿಸಬಲ್ಲದು.

ಇದನ್ನೂ ಓದಿ:ಸಂವಹನ ವ್ಯವಸ್ಥೆ ಬಲಪಡಿಸಲು ಮುಂದಾದ ಭಾರತೀಯ ಸೇನೆ: ಐಕಾಮ್ ಟೆಲಿ ಲಿಮಿಟೆಡ್​ನೊಂದಿಗೆ 500 ಕೋಟಿ ರೂ. ಒಪ್ಪಂದಕ್ಕೆ ಸಹಿ

ಅಮೆರಿಕನ್ ಸಂಸ್ಥೆ ಜನರಲ್ ಅಟಾಮಿಕ್ಸ್ ಪ್ರಕಾರ, ರೀಪರ್ ಕ್ಷಿಪಣಿಯ ಪ್ರಾಥಮಿಕ ಉದ್ದೇಶ ಭೂಮಿ ಮತ್ತು ಸಾಗರಗಳ ಮೇಲೆ “ಮಲ್ಟಿ ಮಿಷನ್ ಇಂಟಲಿಜೆನ್ಸ್, ಸರ್ವಯಲೆನ್ಸ್ ಆ್ಯಂಡ್ ರಿಕನಯಸೆನ್ಸ್ (ಐಎಸ್ಆರ್)” ಕಾರ್ಯಾಚರಣೆ ನಡೆಸುವುದು.

ಎಂಕ್ಯು-9 ರೀಪರ್ ಹೇಗೆ ಅತ್ಯಂತ ಮಾರಣಾಂತಿಕ ಮಿಲಿಟರಿ ಡ್ರೋನ್ ಎನಿಸಿದೆ?

ಅಮೆರಿಕಾದ ಮಾಜಿ ಅಧ್ಯಕ್ಷರಾದ ಜಾರ್ಜ್ ಡಬ್ಲ್ಯು ಬುಶ್ ಅವರ ಅವಧಿಯಲ್ಲಿ 9/11 ಉಗ್ರಗಾಮಿ ದಾಳಿಯ ಬಳಿಕ ಅಫ್ಘಾನಿಸ್ತಾನ ಮತ್ತು ಇರಾಕ್ ಮೇಲೆ “ಉಗ್ರ ನಿಗ್ರಹ ಯುದ್ಧ” ಕೈಗೊಂಡಾಗ ಈ ಪ್ರಿಡೇಟರ್ ಡ್ರೋನ್‌ಗಳನ್ನು ಅಪಾರವಾಗಿ ಬಳಸಲಾಯಿತು. ಅವುಗಳು ಯುದ್ಧಪೀಡಿತ ರಾಷ್ಟ್ರಗಳಲ್ಲಿ ಅಮೆರಿಕಾ ವಿರೋಧಿ ಪಡೆಗಳನ್ನು ಮತ್ತು ಭಯೋತ್ಪಾದಕರನ್ನು ಮಣಿಸಲು ನೆರವಾದವು. ಆದರೆ ಈ ಡ್ರೋನ್‌ಗಳ ಬಳಕೆಯಿಂದ ಸಾಮಾನ್ಯ ನಾಗರಿಕರೂ ಸಾವಿಗೀಡಾದರು ಎಂಬ ಆರೋಪಗಳು ಅಮೆರಿಕಾದ ಮಿಲಿಟರಿ ನಾಯಕತ್ವವನ್ನು ಬಾಧಿಸುತ್ತಾ ಬಂದಿವೆ.

ಇತ್ತೀಚೆಗೆ, ಅಂದರೆ ಜುಲೈ 31, 2022ರಲ್ಲಿ ಸಲಾಫಿ ಜಿಹಾದಿ ತಂಡ ಅಲ್ ಖೈದಾದ ನಾಯಕ ಅಯ್ಮಾನ್ ಅಲ್ ಜವಾಹಿರಿಯನ್ನು ಅಮೆರಿಕಾ ಅಫ್ಘಾನಿಸ್ತಾನದ ಕಾಬೂಲ್ ನಗರದಲ್ಲಿ ಡ್ರೋನ್ ದಾಳಿ ನಡೆಸಿ ಕೊಲೆಗೈದಿತು. ಅಲ್ ಜವಾಹಿರಿಯನ್ನು ಸಂಹರಿಸಲು ಎಂಕ್ಯು-9 ರೀಪರ್‌ನ ಎಂಕ್ಯು-9ಬಿ ಆವೃತ್ತಿಯಲ್ಲಿ ಮಾರ್ಪಡಿಸಲಾದ ಹೆಲ್‌ಫೈರ್ ಕ್ಷಿಪಣಿ ಬಳಸಲಾಯಿತು.

ಇಸ್ಲಾಮಿಕ್ ಸ್ಟೇಟ್ (ದಾಯೆಶ್ ಅಥವಾ ಐಎಸ್ಐಎಸ್) ಸ್ಥಾಪಕ ಅಬು ಬಕರ್ ಅಲ್ ಬಾಗ್ದಾದಿ, ಅಲ್ ಖೈದಾದ ಮಿಲಿಟರಿ ಮುಖಂಡ ಮುಹಮ್ಮದ್ ಆತೆಫ್ ಇಬ್ಬರನ್ನೂ ಪ್ರಿಡೇಟರ್ / ರೀಪರ್ ಡ್ರೋನ್ ಮೂಲಕ ನಿಖರ ದಾಳಿ ನಡೆಸಿ ಕೊಲೆಗೈಯಲಾಯಿತು. ಅಲ್ ಖೈದಾ ಹಾಗೂ ದಾಯೆಶ್ ಉಗ್ರ ಸಂಘಟನೆಗಳು ರಷ್ಯಾ, ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟಿವೆ. ಇರಾನಿನ ಜನರಲ್ ಖಾಸೆಮ್ ಸೊಲೆಮಾನಿಯನ್ನೂ ಅಮೆರಿಕಾ ಡ್ರೋನ್ ದಾಳಿ ನಡೆಸಿ 2020ರಲ್ಲಿ ಕೊಂದಿತ್ತು.

ಜುಲೈ 26, 2016ರಂದು ಇಸ್ಲಾಮಿಕ್ ಸ್ಟೇಟ್ಸ್‌ನ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ವಿಭಾಗದ ಮುಖ್ಯಸ್ಥನನ್ನೂ ಅಮೆರಿಕಾ ನಿಖರ ಡ್ರೋನ್ ದಾಳಿ ನಡೆಸಿ ಕೊಲೆಗೈಯಿತು. ತನ್ನ ನೆಲೆಗಳಾದ ಇರಾಕ್ ಮತ್ತು ಸಿರಿಯಾಗಳಿಂದ ಅಫ್ಘಾನಿಸ್ತಾನ, ಪಾಕಿಸ್ತಾನಗಳಿಗೂ ವಿಸ್ತರಿಸಬೇಕೆಂಬ ಇಸ್ಲಾಮಿಕ್ ಸ್ಟೇಟ್ಸ್ ಪ್ರಯತ್ನಗಳಿಗೆ ಹಫೀಜ್ ಸಯೀದ್ ಖಾನ್ ಸಾವು ದೊಡ್ಡ ಆಘಾತವಾಗಿ ಪರಿಣಮಿಸಿತ್ತು. ಅಫ್ಘಾನಿಸ್ತಾನ – ಪಾಕಿಸ್ತಾನಗಳು ಈಗಾಗಲೇ ಜಿಹಾದಿ ಸಂಘಟನೆಗಳಾದ ಅಲ್ ಖೈದಾ ಮತ್ತು ತಾಲಿಬಾನ್ ದಾಳಿಗಳಿಂದ ನಲುಗಿ ಹೋಗಿವೆ. ಹಫೀಜ್ ಸಯೀದ್ ಸಾವು ಈ ಪ್ರದೇಶದಲ್ಲಿ ಅಮೆರಿಕಾ ನಡೆಸಿದ ಎರಡನೆಯ ಮಹತ್ವದ ಉಗ್ರ ಮುಖಂಡನ ಹತ್ಯೆಯಾಗಿದೆ.

ಇದಕ್ಕೂ ಮೊದಲು, ಮೇ 21, 2016ರಂದು ಅಫ್ಘಾನ್ ತಾಲಿಬಾನ್ ಮುಖಂಡ ಮುಲ್ಲಾ ಅಖ್ತರ್ ಮನ್ಸೂರ್‌ನನ್ನು ಪಾಕಿಸ್ತಾನ – ಅಫ್ಘಾನಿಸ್ತಾನ ಗಡಿಯ ಬಳಿ, ಪಾಕಿಸ್ತಾನದ ಎನ್-40 ರಾಷ್ಟ್ರೀಯ ಹೆದ್ದಾರಿಯಲ್ಲಿ ಅಮೆರಿಕಾ ಡ್ರೋನ್ ದಾಳಿ ನಡೆಸಿ ಸಂಹರಿಸಿತ್ತು.

ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಗಿರೀಶ್ ಲಿಂಗಣ್ಣ

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ