Karnataka Polls: ಜಾತಿ ಮೀಸಲಾತಿ ನಿರ್ಣಯ; ಬಿಜೆಪಿಗೆ ವರವೋ?
ಕಾಂಗ್ರೆಸ್ ಪ್ರಾಯಶಃ, ತನ್ನ ಕಾಲಿಗೆ ತಾನೇ ಗುಂಡು ಹೊಡೆದುಕೊಂಡಂತೆ ಕಾಣುತ್ತಿದೆ. ತಾವು ಅಧಿಕಾರಕ್ಕೆ ಬಂದರೆ ಬಿಜೆಪಿ ತಂದ ಮೀಸಲಾತಿಯನ್ನು ತೆಗೆದು ಹಾಕುವುದಾಗಿ ಕೈ ಪಕ್ಷದ ನಾಯಕರು ಹೇಳಿದ್ದಾರೆ. ಇದನ್ನು ವೀರಶೈವ ಲಿಂಗಾಯತರು ಅಷ್ಟು ಹಗುರವಾಗಿ ತೆಗೆದುಕೊಳ್ಳುತ್ತಾರೆ ಎಂದು ಕಾಣುವುದಿಲ್ಲ. ಯಾಕೆಂದರೆ, ಮುಸ್ಲಿಂ ಪರವಾಗಿ ಕಾಂಗ್ರೆಸ್ ಹೆಚ್ಚು ಹೆಚ್ಚು ಬ್ಯಾಟ್ ಬೀಸಿದರೆ ಹಿಂದೂ ಮತ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
- ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದರಿಂದ ಲಿಂಗಾಯತ ಸಮುದಾಯ ಬಿಜೆಪಿ ಕೈ ಹಿಡಿಯುವ ಸಾಧ್ಯತೆ ಹೆಚ್ಚು
- ಬಿಜೆಪಿ ತಂದ ಮೀಸಲಾತಿಯನ್ನು ತೆಗೆದು ಹಾಕುವುದಾಗಿ ಹೇಳುವ ಮೂಲಕ ತನ್ನ ಕಾಲಿಗೆ ತಾನೇ ಗುಂಡು ಹೊಡೆದುಕೊಂಡ ಕಾಂಗ್ರೆಸ್
- ಮುಸ್ಲಿಂ ಪರವಾಗಿ ಕಾಂಗ್ರೆಸ್ ಹೆಚ್ಚು ಹೆಚ್ಚು ಬ್ಯಾಟ್ ಬೀಸಿದರೆ ಹಿಂದೂ ಮತ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು
ತನ್ನ ಅಧಿಕಾರದ ಅವಧಿಯ ಕೊನೆಯಲ್ಲಿ ಬಿಜೆಪಿ (BJP) ಸರಕಾರ ತಂದ ಜಾತಿ ಮೀಸಲಾತಿಯ ನಿರ್ಧಾರ, ವಿಧಾನಸಭೆ ಚುನಾವಣೆಯ (Karnataka Assembly Elections 2023) ಬಹುಚರ್ಚಿತ ವಿಷಯವಾಗಿ ಹೊರಹೊಮ್ಮಿದೆ. ಯಾಕೋ ಏನೋ, ಆಡಳಿತ ಪಕ್ಷ ಬಿಜೆಪಿ, ತಾನು ತಂದ ಹೊಸ ಮೀಸಲಾತಿ ನಿರ್ಣಯವನ್ನು ತನ್ನ ಬಹುದೊಡ್ಡ ಸಾಧನೆಗಳಲ್ಲಿ ಒಂದು ಎಂದು ಘಂಟಾಘೋಷವಾಗಿ ಹೇಳುತ್ತಿಲ್ಲ. ಆದರೆ, ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಮೀಸಲಾತಿಯಿಂದ ಜನರಿಗೆ ಏನು ಪ್ರಯೋಜನವಾಗಲ್ಲ. ಈ ಮೂಲಕ ಬಿಜೆಪಿಯು ಜನರಿಗೆ ಮೋಸ ಮಾಡುತ್ತಿದೆ ಎಂದು ಹೇಳುತ್ತಿವೆ. ಮುಸ್ಲಿಂರಿಗೆ ಈ ಹಿಂದೆ ಕೊಟ್ಟಿದ್ದ ಮೀಸಲಾತಿಯನ್ನು ತೆಗೆದು, ಆ ಸಮುದಾಯವನ್ನು ಆರ್ಥಿಕವಾಗಿ ಬಡವರಾಗಿರುವವರಿಗೆ ಕೊಟ್ಟ 10 ಪ್ರತಿಶತ ಮೀಸಲು ಗುಂಪಿಗೆ (Economically Weaker Section Quota) ಸೇರಿಸಿರುವ ನಿರ್ಣಯವನ್ನು ಸವಾಲಾಗಿ ತೆಗೆದುಕೊಂಡ ಕೆಲವರು ನೇರವಾಗಿ ಸರ್ವೋಚ್ಛ ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ. ನ್ಯಾಯಾಲಯ ಏನು ಮಾಡಬಹುದು ಎನ್ನುವುದನ್ನು ನ್ಯಾಯಾಲಯಕ್ಕೆ ಬಿಡೋಣ ಮತ್ತು ಸರಕಾರ ತೆಗೆದುಕೊಂಡ ಮೀಸಲಾತಿ ನಿರ್ಣಯ ಚುನಾವಣೆಯಲ್ಲಿ ಯಾವ ಪಾತ್ರ ನಿರ್ವಹಿಸಬಹುದು ಎಂಬದನ್ನು ನೋಡೋಣ.
ಬಿಜೆಪಿ ಸರಕಾರ ತಂದ ಮೀಸಲಾತಿಯಲ್ಲಿ ಮೂರು ವಿಚಾರಗಳಿವೆ. ಸಾಮಾಜಿಕವಾಗಿ ಪ್ರಬಲವಾಗಿರುವ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ನೀಡಿರುವ ಮೀಸಲಾತಿ ಪ್ರಮಾಣವನ್ನು ಏರಿಸಿದ್ದು. ಎರಡನೆಯದಾಗಿ, ಮುಸ್ಲಿಂ ಸಮುದಾಯವನ್ನು ಆರ್ಥಿಕವಾಗಿ ಬಡತನದಲ್ಲಿರುವ (EWS quota) ಸ್ತರಕ್ಕೆ ಸೇರಿಸಿರುವುದು ಮತ್ತು ಪರಿಶಿಷ್ಟ ಜಾತಿ ನೀಡಿರುವ ಮೀಸಲಾತಿಯಲ್ಲಿ ಒಳ ಮೀಸಲಾತಿಯನ್ನು ತರುವುದು. ಮುಸ್ಲಿಂ ಸಮುದಾಯದ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಅದನ್ನು ಚರ್ಚಿಸುವುದು ಅನವಶ್ಯಕ. ಆದರೆ, ಒಂದು ಮಾತನ್ನು ಇಲ್ಲಿ ಹೇಳಲೇ ಬೇಕು. ಕಾನೂನು ತಜ್ಞರ ಪ್ರಕಾರ, ಧರ್ಮವನ್ನಾಧರಿಸಿ ನಾವು ಮೀಸಲಾತಿಯನ್ನು ಕೊಡಲಾಗದು. ಒಮ್ಮೆ ಸರ್ವೋಚ್ಛ ನ್ಯಾಯಾಲಯ ಈ ವಿಚಾರವನ್ನು ಎತ್ತಿ ಹಿಡಿದರೆ, ಬಿಜೆಪಿ ಸರಕಾರ ತೆಗೆದುಕೊಂಡ ನಿರ್ಣಯಕ್ಕೆ ಕಾನೂನಿನ ಅಧಿಕೃತ ಮುದ್ರೆ ಬಿದ್ದಂತೆ.
ಒಳ ಮೀಸಲಾತಿಯ ವಿಚಾರ ಕಳೆದ 12 ವರ್ಷಗಳಿಂದ ಸರಕಾರ ಮುಂದಿತ್ತು. ಮೂವರು ಮುಖ್ಯಮಂತ್ರಿಗಳು ಈ ವಿಚಾರವನ್ನು ಮುಂದೂಡುತ್ತಾ ಬಂದರು. ಕೊನೆಗೆ ಬಸವರಾಜ ಬೊಮ್ಮಾಯಿ ಸರಕಾರ ತನ್ನ ಅಧಿಕಾರವಧಿಯ ಕೊನೆ ಸಮಯದಲ್ಲಿ ಈ ನಿರ್ಣಯ ತೆಗೆದುಕೊಂಡಿತು. ಪರಿಶಿಷ್ಟ ಜಾತಿಯಲ್ಲಿ ಎರಡು ವರ್ಗಗಳಿವೆ. ಆಡು ಭಾಷೆಯಲ್ಲಿ ಅವನ್ನು ಎಡಗೈ ಮತ್ತು ಬಲಗೈ ಎಂದು ವರ್ಗೀಕರಿಸುತ್ತಾರೆ. ಎಡಗೈ ಎಂದರೆ ಅಸ್ಪೃಶ್ಯರು ಮತ್ತು ಬಲಗೈ ಎಂದರೆ ಸ್ಪೃಶ್ಯರು ಎಂದರ್ಥ. ರಾಜ್ಯದಲ್ಲಿ 101 ಸಮುದಾಯಗಳು ಪರಿಶಿಷ್ಟ ಜಾತಿ ಗುಂಪಿನಲ್ಲಿವೆ. ಇವುಗಳಲ್ಲಿ ಸುಮಾರು 60 ಪ್ರತಿಶತ ಸಮುದಾಯಗಳು ಎಡಗೈ ಕೆಳಗೆ ಮತ್ತು ಉಳಿದವುಗಳನ್ನು ಬಲಗೈ ಗುಂಪಿನ ಕೆಳಗಿವೆ. ಪರಿಶಿಷ್ಟ ಜಾತಿಗೆ ನೀಡಿದ ಮೀಸಲಾತಿ ಸೌಲಭ್ಯ, ಬಲಗೈ ಗುಂಪಿನ ಸಮುದಾಯಗಳಿಗೆ ತಲುಪಿವೆ. ಮತ್ತು ಸಾಂಪ್ರದಾಯಿಕವಾಗಿ, ಎಡಗೈ ಕೆಳಗಿರುವ ಸಮುದಾಯಗಳಿಗೆ ಅಷ್ಟೇನೂ ಸಿಕ್ಕಿಲ್ಲ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಬಿಜೆಪಿ ತಂದ ಒಳ ಮೀಸಲಾತಿ ಎಡಗೈ ಸಮುದಾಯಗಳಿಗೆ ಅನುಕೂಲ ಮಾಡಿಕೊಡುವುದು ಖಂಡಿತ. ಇದು ಬಿಜೆಪಿಗೆ ಈ ಚುನಾವಣೆಯಲ್ಲಿ ಸಹಾಯವಾಗುವ ಸಾಧ್ಯತೆ ಹೆಚ್ಚು.
ಇದನ್ನೂ ಓದಿ: Karnataka Polls: ಕರ್ನಾಟಕದಲ್ಲಿ ಗುಜರಾತ್ ಮಾದರಿ; 72 ಹೊಸ ಮುಖ, ಮೋದಿ – ಶಾ ಲೆಕ್ಕಾಚಾರ ಏನು?
ಕರ್ನಾಟಕದ ರಾಜಕೀಯ ಇತಿಹಾಸವನ್ನು ನೋಡಿದಾಗ, ಒಂದು ಅಂಶ ಎದ್ದು ಕಾಣುತ್ತದೆ: ಒಕ್ಕಲಿಗರು ಮತ್ತು ಲಿಂಗಾಯತರು ಮುಖ್ಯಮಂತ್ರಿ ಹುದ್ದೆಗೆ ಸೆಣಸುವುದು. ಇದು ಇಂದು ನಿನ್ನೆಯ ಕಥೆಯಲ್ಲ. ಯಾವಾಗಿನಿಂದ ವೀರಶೈವ ಲಿಂಗಾಯತರು ಬಿಜೆಪಿ ಕಡೆ ವಾಲಿದರೋ ಅವತ್ತಿನಿಂದ ಬಿಜೆಪಿ ಲಿಂಗಾಯತರನ್ನೇ ಮುಖ್ಯಮಂತ್ರಿ ಮಾಡಲು ಬಯಸಿದ್ದು ಕಾಣುತ್ತದೆ. ಮಧ್ಯಂತರದಲ್ಲಿ, ಡಿ.ವಿ. ಸದಾನಂದ ಗೌಡ ಮುಖ್ಯಮಂತ್ರಿ ಆದರೂ, ಚುನಾವಣೆಗೆ ಸ್ವಲ್ಪವೇ ಸಮಯ ಇರುವಾಗ ಮತ್ತೋರ್ವ ಲಿಂಗಾಯತ ನಾಯಕ, ಜಗದೀಶ್ ಶೆಟ್ಟರ್ ಅವರಿಗೋಸ್ಕರ ಸದಾನಂದ ಗೌಡ ರಾಜೀನಾಮೆ ನೀಡಲೇ ಬೇಕಾಯ್ತು.
ಒಕ್ಕಲಿಗ ಮತ್ತು ಲಿಂಗಾಯತರಿಗೆ ನೀಡಿರುವ ಮೀಸಲಾತಿ ಪ್ರಮಾಣ ಹೆಚ್ಚಿಸಿರುವ ಕ್ರಮವನ್ನು ಇದೊಂದು ಅತ್ಯುತ್ತಮ ರಾಜಕೀಯ ತಂತ್ರ (political masterstroke) ಎಂದು ಕೆಲವು ರಾಜಕೀಯ ತಜ್ಞರು ಬಿಂಬಿಸಿದ್ದಾರೆ. ಹಾಗೆ ಬಿಂಬಿಸಲು ಇನ್ನೂ ಒಂದು ಕಾರಣ ಇದೆ. ಪಂಚಮಸಾಲಿ ಲಿಂಗಾಯತರು ತಮಗೆ ಬೇರೆಯದಾಗಿ ಮೀಸಲಾತಿ ಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಅದನ್ನು ಕೊಡಲು ಕಾನೂನಿನ ತೊಡಕಿತ್ತು. ಅದನ್ನು ನಿವಾರಿಸುವುದು ಅಷ್ಟು ಸುಲಭ ಆಗಿರಲಿಲ್ಲ. ಅದಕ್ಕಾಗಿಯೇ, ವೀರಶೈವ ಲಿಂಗಾಯತರಿಗೆ ನೀಡಿರುವ ಮೀಸಲಾತಿ ಪ್ರಮಾಣವನ್ನು ಸರಕಾರ ಹೆಚ್ಚಿಸಿತು. ಬರೀ ವೀರಶೈವ ಲಿಂಗಾಯತರಿಗೆ ನೀಡಿದ ಮೀಸಲಾತಿ ಪ್ರಮಾಣ ಹೆಚ್ಚಿಸಿದರೆ, ಒಕ್ಕಲಿಗರಿಂದ ತೀವ್ರ ವಿರೋಧ ಬರಬಹುದೆಂದು, ಅವರಿಗೆ ನೀಡಿರುವ ಮೀಸಲಾತಿ ಪ್ರಮಾಣದಲ್ಲಿ ಕೂಡ ಹೆಚ್ಚಳ ಮಾಡಲಾಯ್ತು.
ಮೀಸಲಾತಿ ವಿಚಾರದಲ್ಲಿ ಸಿಎಂ ಪಟ್ಟವನ್ನೇ ಬಿಡಲು ತಯಾರಾಗಿದ್ದ ಲಿಂಗಾಯತ ಒಳ ಪಂಗಡ ಪಂಚಮಸಾಲಿಗಳು ಮೇಲ್ನೋಟಕ್ಕೆ ಖುಷಿ ಆದಂತಿದೆ. ಇದು ಬಿಜೆಪಿಗೆ ದ್ವಿವಳಿ ಗೆಲುವು (Double bonanza) ತಂದು ಕೊಟ್ಟಂತಿದೆ. ಒಮ್ಮೆ, ಪಕ್ಷ ಗೆದ್ದರೆ, ಸಿಎಂ ಪಟ್ಟ ಲಿಂಗಾಯತರಿಗೆ ಸಿಗುವ ಸಾಧ್ಯತೆ ಹೆಚ್ಚು. ಇದು ಆ ಸಮುದಾಯಕ್ಕೆ ಗೊತ್ತು. ಇನ್ನೊಂದು, ಮೀಸಲಾತಿ ಪ್ರಮಾಣ ಹೆಚ್ಚಿದ್ದು. ಹಾಗಾಗಿ ಆ ಸಮುದಾಯ ಬಿಜೆಪಿ ಕೈ ಹಿಡಿಯುವ ಸಾಧ್ಯತೆ ಹೆಚ್ಚು. ಕಾಂಗ್ರೆಸ್ ಪ್ರಾಯಶಃ, ತನ್ನ ಕಾಲಿಗೆ ತಾನೇ ಗುಂಡು ಹೊಡೆದುಕೊಂಡಂತೆ ಕಾಣುತ್ತಿದೆ. ತಾವು ಅಧಿಕಾರಕ್ಕೆ ಬಂದರೆ ಬಿಜೆಪಿ ತಂದ ಮೀಸಲಾತಿಯನ್ನು ತೆಗೆದು ಹಾಕುವುದಾಗಿ ಕೈ ಪಕ್ಷದ ನಾಯಕರು ಹೇಳಿದ್ದಾರೆ. ಇದನ್ನು ವೀರಶೈವ ಲಿಂಗಾಯತರು ಅಷ್ಟು ಹಗುರವಾಗಿ ತೆಗೆದುಕೊಳ್ಳುತ್ತಾರೆ ಎಂದು ಕಾಣುವುದಿಲ್ಲ. ಯಾಕೆಂದರೆ, ಮುಸ್ಲಿಂ ಪರವಾಗಿ ಕಾಂಗ್ರೆಸ್ ಹೆಚ್ಚು ಹೆಚ್ಚು ಬ್ಯಾಟ್ ಬೀಸಿದರೆ ಹಿಂದೂ ಮತ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇನ್ನೊಂದೆಡೆ, ವೀರಶೈವ ಲಿಂಗಾಯತರು, ಕೈ ನಾಯಕರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡರೆ, ಕೈಗೆ ಸಂಕಷ್ಟ ಬರುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಮ್ಮ ಮೀಸಲಾತಿ ಪ್ರಮಾಣ ಕೀಳುತ್ತಾರೆ ಎಂಬ ಸಂದೇಶ ರಾಜ್ಯಾದ್ಯಂತ ಹೋದರೆ, ರಾಜ್ಯದ ವೀರಶೈವ ಲಿಂಗಾಯತರು ಮತದಾರರು ತಿರುಗಿಬೀಳುವ ಸಾಧ್ಯತೆ ಇದೆ. ಇದರಿಂದ ಹಲವಾರು ಕ್ಷೇತ್ರಗಳಲ್ಲಿ ಬಿಜೆಪಿಗೆ ಸಹಾಯವಾಗುವ ಸಾಧ್ಯತೆ ಇದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:09 pm, Wed, 19 April 23