ಜಗತ್ತಿನ 99% ಭೂಪ್ರದೇಶ ಕಲುಷಿತ ಗಾಳಿಯನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಮಹತ್ವದ ವಿಚಾರವನ್ನು ತಿಳಿಸಿದೆ. ಐಕ್ಯು ಏರ್ ಸಂಸ್ಥೆ (IQAir) ಯ ವಾಯು ಗುಣಮಟ್ಟದ ವರದಿಯ ಆಧಾರದಲ್ಲಿ ಜಗತ್ತಿನ ಅತ್ಯಂತ ಕಲುಷಿತ ನಗರಗಳ ಪಟ್ಟಿ ತಯಾರಿಸಲಾಗಿದೆ. ಹೀಗೆ ತಯಾರಿಸಲಾದ ಪಟ್ಟಿಯೂ 2022ರ ಪಿಎಂ 2.5 ದಟ್ಟಣೆಯ ಸರಾಸರಿಯನ್ನು ಆಧರಿಸಿದೆ. ಹಾಗಾಗಿ ಜಗತ್ತಿನಲ್ಲಿ ಅತಿಹೆಚ್ಚು ವಾಯು ಮಾಲಿನ್ಯ ಪ್ರಮಾಣ ಹೊಂದಿರುವ ಪ್ರದೇಶಗಳನ್ನು ಹಾಟ್ ಸ್ಪಾಟ್ಸ್ ಎಂದು ಕರೆಯಲಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಓ) ಪಿಎಂ2.5 ದಟ್ಟಣೆಯನ್ನು ತನ್ನ ವಾಯು ಗುಣಮಟ್ಟದ ಸೂಚಕವಾಗಿ ಹೊಂದಿದೆ. ಪಿಎಂ2.5 ಎನ್ನುವುದು ಒಂದು ಮಾದರಿಯ ಕಣಗಳ ವಸ್ತುವಾಗಿದ್ದು, 2.5 ಮೈಕ್ರೋಮೀಟರ್ ಅಥವಾ ಅದಕ್ಕಿಂತ ಕಡಿಮೆ ವ್ಯಾಸ ಹೊಂದಿದ್ದು, ಇದನ್ನು ಗಾಳಿಯ ನಿರ್ದಿಷ್ಟ ಪರಿಮಾಣದಲ್ಲಿ ಅಳೆಯಲಾಗುತ್ತದೆ.
ಈ ಸೂಕ್ಷ್ಮ ಗಾತ್ರದ ಕಣಗಳನ್ನು ಉಸಿರಾಡುವುದರಿಂದ ಶ್ವಾಸಕೋಶವನ್ನು ಪ್ರವೇಶಿಸಿ, ಅಲ್ಲಿಂದ ರಕ್ತವನ್ನು ಸೇರಿ, ಬಳಿಕ ಎಲ್ಲ ಪ್ರಮುಖ ಅಂಗಗಳಿಗೆ ತೊಂದರೆ ಉಂಟುಮಾಡುತ್ತದೆ. 2022ರ ವರದಿಯು ಜಗತ್ತಿನಲ್ಲಿ ಅತ್ಯಧಿಕ ಪಿಎಂ2.5 ದಟ್ಟಣೆಯ ಸರಾಸರಿ ಹೊಂದಿರುವ ನಗರಗಳನ್ನು ಪಟ್ಟಿಮಾಡಿದೆ.
ಇದನ್ನೂ ಓದಿ: ಹಳಿ ತಪ್ಪಬೇಡಿ! ರೈಲ್ವೇ ಟ್ರಾಫಿಕ್ ಕಂಟ್ರೋಲ್ನಲ್ಲಿ ಪಾಯಿಂಟ್ ಮೆಷಿನ್ಸ್ ಅತಿ ಮುಖ್ಯ, ಪ್ರಯೋಜನಗಳು ಇಲ್ಲಿವೆ
ಅಪಾರ ಪ್ರಮಾಣದ ಮಾಲಿನ್ಯಕಾರಕಗಳ ಉಪಸ್ಥಿತಿಯಿಂದ ಈ ನಗರಗಳು ಅಪಾಯವನ್ನು ಎದುರಿಸುತ್ತಿವೆ. ಅವುಗಳು ಈ ಕೆಳಗಿನ ಮಾಲಿನ್ಯಕಾರಕಗಳಲ್ಲಿ ಕೆಲವನ್ನು, ಅಥವಾ ಎಲ್ಲವನ್ನೂ ಹೊಂದಿವೆ.
• ನೆಲ ಮಟ್ಟದ ಓಜೋ಼ನ್
• ಪಾರ್ಟಿಕ್ಯುಲೇಟ್ ಮ್ಯಾಟರ್
• ಕಾರ್ಬನ್ ಮಾನಾಕ್ಸೈಡ್
• ಸಲ್ಫರ್ ಡೈಆಕ್ಸೈಡ್
• ನೈಟ್ರೋಜನ್ ಡೈಆಕ್ಸೈಡ್
ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಪಾಕಿಸ್ತಾನದ ಲಾಹೋರ್ ನಗರ ಅಗ್ರಸ್ಥಾನ ಪಡೆದಿದೆ. ಇದಕ್ಕೆ ವಾಹನಗಳು ಮತ್ತು ಉದ್ಯಮಗಳಿಂದ ಹೊರಸೂಸುವ ಹೊಗೆ, ಇಟ್ಟಿಗೆ ಗೂಡುಗಳ ಹೊಗೆ, ಕೃಷಿ ತ್ಯಾಜ್ಯ ಸುಡುವಿಕೆ, ಹಾಗೂ ಕಟ್ಟಡ ನಿರ್ಮಾಣದಿಂದ ಬರುವ ಧೂಳು ಕಾರಣಗಳಾಗಿವೆ.
ಹೊಸ ರಸ್ತೆಗಳು ಮತ್ತು ಕಟ್ಟಡಗಳ ನಿರ್ಮಾಣಕ್ಕಾಗಿ ಅಪಾರ ಪ್ರಮಾಣದಲ್ಲಿ ಮರಗಳನ್ನು ಕಡಿಯಲಾಗುತ್ತದೆ. ಇದರ ಪರಿಣಾಮವಾಗಿ ವಾಯು ಮಾಲಿನ್ಯ ಹೆಚ್ಚಳಗೊಳ್ಳುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಔದ್ಯಮಿಕ ಅಭಿವೃದ್ಧಿಯ ಕಾರಣದಿಂದ ಭಾರತ ಚೀನಾಗಿಂತಲೂ ಹೆಚ್ಚು ಮಲಿನಗೊಂಡ ನಗರಗಳನ್ನು ಹೊಂದಿದೆ. ಈ ಮೊದಲು ಚೀನಾ ಜಗತ್ತಿನ ಅತಿಹೆಚ್ಚು ಮಾಲಿನ್ಯಕಾರಕ ರಾಷ್ಟ್ರವಾಗಿತ್ತು.
ಆಫ್ರಿಕಾ ಖಂಡದಿಂದ ಕೇವಲ ಚಾಡ್ ರಾಷ್ಟ್ರ ಒಂದೇ ಈ ಪಟ್ಟಿಯಲ್ಲಿ ಸ್ಥಾನ ಸಂಪಾದಿಸಿದೆ. 2022ರಲ್ಲಿ ಚಾಡ್ ದೂಳಿನ ಬಿರುಗಾಳಿ ಎದುರಿಸಿದ ಪರಿಣಾಮವಾಗಿ ಪಿಎಂ2.5 ಮಟ್ಟದಲ್ಲಿ 18% ಹೆಚ್ಚಳ ಉಂಟಾಯಿತು.
ಜಗತ್ತಿನಾದ್ಯಂತ ಅಕಾಲಿಕ ಮರಣಗಳು ಸಂಭವಿಸುತ್ತಿದ್ದು, ಇದಕ್ಕೆ ವಾಯು ಗುಣಮಟ್ಟದ ಕೊರತೆಯೂ ಪ್ರಮುಖ ಕಾರಣವಾಗಿದೆ. ಇದು ಹೆಚ್ಚಿನ ರಕ್ತದೊತ್ತಡ, ಸಿಗರೇಟ್ ಸೇವನೆ ಹಾಗೂ ಪೌಷ್ಟಿಕಾಂಶದ ಕೊರತೆಗಳ ನಂತರದ ಸ್ಥಾನದಲ್ಲಿದೆ.
ಹೆಲ್ತ್ ಇಫೆಕ್ಟ್ಸ್ ಇನ್ಸ್ಟಿಟ್ಯೂಟ್ 2020ರಲ್ಲಿ ನೀಡಿದ ವಿಶ್ಲೇಷಣೆಯಲ್ಲಿ, 2019ರಲ್ಲಿ ಸಂಭವಿಸಿದ 6.67 ಮಿಲಿಯನ್ ಸಾವುಗಳಿಗೆ ವಾಯುಮಾಲಿನ್ಯ ಕಾರಣವಾಗಿದೆ ಎಂದಿತ್ತು.
ವಾರ್ಷಿಕವಾಗಿ, ಮಿಲಿಯನ್‌ಗಟ್ಟಲೆ ಅಕಾಲಿಕ ಮರಣಗಳು ಸಂಭವಿಸುತ್ತಿದ್ದು, ಜಾಗತಿಕ ಮಟ್ಟದಲ್ಲಿ 8.1 ಟ್ರಿಲಿಯನ್ ಡಾಲರ್ ಮೊತ್ತವನ್ನು ವಾಯುಮಾಲಿನ್ಯದ ಪರಿಣಾಮವಾಗಿ ಆರೋಗ್ಯಕ್ಕಾಗಿ ವೆಚ್ಚ ಮಾಡಲಾಗುತ್ತಿದೆ.
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕಠಿಣವಾದ ಪರಿಸರ ಸಂರಕ್ಷಣಾ ಕಾನೂನುಗಳಿವೆ. ಪಾಶ್ಚಾತ್ಯ ರಾಷ್ಟ್ರಗಳು ವಾಯುಮಾಲಿನ್ಯದ ಕುರಿತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ ಕಠಿಣ ನಿಯಮಗಳನ್ನು ಹೊಂದಿವೆ. ಈ ನಿಯಮಗಳು ಅಲ್ಲಿ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಹೆಚ್ಚಾಗುತ್ತಿದ್ದರೂ, ವಾಯುಮಾಲಿನ್ಯವನ್ನು ಕಡಿಮೆಗೊಳಿಸಲು ನೆರವಾಗಿವೆ.
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೋಲಿಸಿದರೆ ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿದೆ. ಆದ್ದರಿಂದ ಪಾಶ್ಚಾತ್ಯ ರಾಷ್ಟ್ರಗಳ ಜನರು ತಮ್ಮ ಪ್ರಯಾಣಕ್ಕಾಗಿ ಕಾರುಗಳ ಮೇಲೆ ಕಡಿಮೆ ಅವಲಂಬಿತರಾಗಿರುತ್ತಾರೆ. ಇದರಿಂದ ವಾಯುಮಾಲಿನ್ಯ ಕಡಿಮೆಯಾಗುತ್ತದೆ.
ಅದರೊಡನೆ, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಹಸಿರು ಪ್ರದೇಶಗಳಾದ ಉದ್ಯಾನವನಗಳು, ಕಾಡುಗಳಿವೆ. ಇವುಗಳು ಗಾಳಿಯಲ್ಲಿರುವ ಮಾಲಿನ್ಯಕಾರಕಗಳನ್ನು ಹೀರಿಕೊಂಡು, ವಾಯುಮಾಲಿನ್ಯವನ್ನು ಕಡಿಮೆಗೊಳಿಸುತ್ತವೆ. ಜಗತ್ತಿನ ಅತ್ಯಧಿಕ ಮಲಿನಗೊಂಡ ನಗರಗಳ ಪಟ್ಟಿಯಲ್ಲಿ ಲಾಸ್ ಏಂಜಲೀಸ್ ಹಾಗೂ ಲಂಡನ್ನಿನಂತಹ ಪಾಶ್ಚಾತ್ಯ ದೇಶಗಳ ನಗರಗಳೂ ಇವೆ. ಆದರೆ ಇವುಗಳ ಪರಿಸ್ಥಿತಿ ಪಟ್ಟಿಯಲ್ಲಿರುವ 20 ನಗರಗಳಿಗೆ ಹೋಲಿಸಿದರೆ ಎಷ್ಟೋ ಉತ್ತಮವಾಗಿದೆ.
ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಮತ್ತಷ್ಟು ಅಭಿಮತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:53 pm, Mon, 5 June 23