ನವದೆಹಲಿ : ಕಳೆದ ವರ್ಷ ಉತ್ತರಾಖಂಡದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಚುನಾವಣಾ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಇದೀಗ ಮತ್ತೊಮ್ಮೆ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ. ಈ ಬಾರಿ ಪ್ರಲ್ಹಾದ ಜೋಶಿಯವರಿಗೆ ರಾಜಸ್ಥಾನ ರಾಜ್ಯದ ಉಸ್ತುವಾರಿ (Rajasthan Assembly Elections 2023) ಜವಾಬ್ದಾರಿ ನೀಡಲಾಗಿದೆ.
ನಾಲ್ಕು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯ ಅಖಾಡ ಸಿದ್ದವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ನಾಲ್ವರು ಪ್ರಮುಖ ನಾಯಕರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಿದೆ. ಈ ಬಗ್ಗೆ ಬಿಜೆಪಿ ಅಧಿಕೃತ ಹೇಳಿಕೆಯನ್ನು ಪ್ರಕಟಿಸಿದ್ದು, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ಭೂಪೇಂದ್ರ ಯಾದವ್ ಅವರನ್ನು ಕ್ರಮವಾಗಿ ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳಿಗೆ ಉಸ್ತುವಾರಿಯನ್ನಾಗಿ ನೇಮಿಸಿದೆ.
ರಾಜಸ್ಥಾನದಲ್ಲಿ ಅರಳಲಿದೆ ಕಮಲ
ಬರಲಿರುವ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಚುನಾವಣಾ ಪ್ರಭಾರಿಯ ಜವಾಬ್ದಾರಿಯನ್ನು ನನಗೆ ವಹಿಸಿರುವ ಪ್ರಧಾನಮಂತ್ರಿ ಶ್ರೀ @narendramodi ಅವರಿಗೆ ಹಾಗೂ @BJP4India ದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @JPNadda ಅವರಿಗೆ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ.
— Pralhad Joshi (@JoshiPralhad) July 7, 2023
ಕಳೆದ ವರ್ಷದ ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಪ್ರಲ್ಹಾದ್ ಜೋಶಿ ಅವರನ್ನು ಉಸ್ತುವಾರಿಯನ್ನಾಗಿ ಮಾಡಿದ್ದ ಸಮಯದಲ್ಲೇ ಪಕ್ಷ ಅಧಿಕಾರವನ್ನು ಪಡೆದುಕೊಂಡಿತು. ಜೋಶಿ, ಭೂಪೇಂದ್ರ ಯಾದವ್ ನಂತರ ಕೇಂದ್ರದ ಮಾಜಿ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಓಂ ಪ್ರಕಾಶ್ ಮಾಥುರ್ ಅವರನ್ನು ಕ್ರಮವಾಗಿ ತೆಲಂಗಾಣ, ಛತ್ತೀಸಗಢ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.
ಇದರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಹೆಗಲಿಗೆ ವರಿಷ್ಠರು ಮತ್ತೊಂದು ಪ್ರಮುಖ ಜವಾಬ್ದಾರಿ ವಹಿಸಿದಂತಾಗಿದೆ. ಕಳೆದ ಬಾರಿ ಉತ್ತರಾಖಂಡದ ಜವಾಬ್ದಾರಿ ಹೊತ್ತಿದ್ದ ಪ್ರಲ್ಹಾದ ಜೋಶಿಯವರು ಪಕ್ಷವನ್ನು ಗೆಲುವಿನ ದಡಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅದೇ ನಿರೀಕ್ಷೆಯೊಂದಿಗೆ ಬಿಜೆಪಿ ವರಿಷ್ಠ ನಾಯಕರು ಜೋಶಿಯವರಿಗೆ ರಾಜಸ್ಥಾನದ ಉಸ್ತುವಾರಿ ನೀಡಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:10 pm, Fri, 7 July 23