ಸುಮಾರು ಐದು ವರ್ಷಗಳ ಹಿಂದೆ ತಾವು ನೀಡಿದ್ದ ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (Chief Justice of India – CJ) ಡಿ.ವೈ.ಚಂದ್ರಚೂಡ್ ಇತ್ತೀಚೆಗೆ ವಿವರಣೆ ನೀಡಿದ ಅಪರೂಪದ ವಿದ್ಯಮಾನ ವರದಿಯಾಗಿದೆ. ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಣ ವಿವಾದದ ಬಗ್ಗೆ ವಿಚಾರಣೆ ನಡೆಸುತ್ತಿದ್ದ ಸಿಜೆ ಚಂದ್ರಚೂಡ್, ‘ಸಂವಿಧಾನದ ಪಿತೃಗಳು ಮತ್ತು ಮಾತೆಯರು’ ಎಂದು 2018ರಲ್ಲಿ ತಾವು ಹೇಳಿದ್ದೇಕೆ ಎಂದು ವಿವರಿಸಿದರು.
ಚಂದ್ರಚೂಡ್ ಅವರ 2018ರ ತೀರ್ಪು ಉಲ್ಲೇಖಿಸಿದ ವಕೀಲ ಡಾ ಅಭಿಷೇಕ್ ಮನು ಸಿಂಘ್ವಿ, ‘ಸಂವಿಧಾನದ ಮಾತೆಯರು’ (Founding Mothers of Constitution) ಎಂಬ ಉಲ್ಲೇಖವನ್ನು ನಾನು ಎಲ್ಲಿಯೂ ಓದಿಲ್ಲ ಎಂದು ಹೇಳಿದರು. ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ನ್ಯಾಯಮೂರ್ತಿಯೊಬ್ಬರು ತಮ್ಮ ತೀರ್ಪಿನಲ್ಲಿ ಈ ರೀತಿ ಉಲ್ಲೇಖಿಸಿದ್ದು ಇದೇ ಮೊದಲು’ ಎಂದು ಹೇಳಿದರು.
ಇಬ್ಬರ ವಾದಗಳನ್ನೂ ಆಲಿಸಿದ ನಂತರ ಪ್ರತಿಕ್ರಿಯಿಸಿ ಸಿಜೆ ಚಂದ್ರಚೂಡ್, ‘ಸಂವಿಧಾನದ ಕರಡು ಸಿದ್ಧಪಡಿಸುವಲ್ಲಿ ಹಲವು ಮಹಿಳೆಯರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅವರಿಗೆ ತಕ್ಕ ಮನ್ನಣೆ ಸಿಗುವಂತೆ ಆಗಬೇಕು ಎನ್ನುವ ಕಾರಣಕ್ಕೆ ನಾನು ಹೀಗೆ ಹೇಳಿದ್ದೆ’ ಎಂದರು.
‘ತಮ್ಮ ಅಭಿಪ್ರಾಯಕ್ಕೆ ಮತ್ತಷ್ಟು ವಿವರಣೆ ನೀಡಿದ ಅವರು, ‘ತಾಯಂದಿರು ಎಂಬ ಪದವನ್ನು ನಾನು ಉದ್ದೇಶಪೂರ್ವಕವಾಗಿ ಬಳಸಿದ್ದೇನೆ. ಸಂವಿಧಾನದ ಸಭೆಗಳಲ್ಲಿ, ಕರಡು ಸಮಿತಿಗಳಲ್ಲಿ ಮಹಿಳೆಯರು ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಗೌರವ ಸಿಗಬೇಕು. ಮಾನ್ಯತೆ ದೊರೆಯಬೇಕು ಎನ್ನುವ ಕಾರಣಕ್ಕೆ ತಾಯಂದಿರು ಎಂಬ ಪದ ಬಳಸಿದ್ದೆ. ಇಲ್ಲದಿದ್ದರೆ ಅವರಿಗೆ ಸರಿಯಾದ ಕ್ರಮದಲ್ಲಿ ಗೌರವ ಸಲ್ಲಿಸಿದಂತೆ ಆಗುವುದಿಲ್ಲ ಎನಿಸಿತ್ತು. ಸಂವಿಧಾನ ಕರಡು ಸಮಿತಿಯಲ್ಲಿ ದಾಕ್ಷಾಯಿಣಿ ವೇಲಾಯುಧನ್ ಸೇರಿದಂತೆ ಹಲವು ಮಹಿಳೆಯರು ಸಕ್ರಿಯ ಪಾತ್ರ ನಿರ್ವಹಿಸಿದ್ದರು. ಈ ಮಹಿಳೆಯರು ಸಂವಿಧಾನಕ್ಕೆ ಹಲವು ರೀತಿಯಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ’ ಎಂದು ವಿವರಿಸಿದರು.
‘ಸಂವಿಧಾನ ಸಮಿತಿಯಲ್ಲಿ ಹಲವು ಮಹಿಳೆಯರಿದ್ದರು. ಅವರಲ್ಲಿ ಹಲವರಿಗೆ ಪ್ರಬುದ್ಧ ಸಂಗಾತಿಗಳೂ ಇದ್ದರು. ಆದರೆ ಗಂಡನ ಚಾತುರ್ಯ ಅಥವಾ ಸ್ಥಾನಮಾನಗಳ ಹೊರತಾಗಿಯೂ ಈ ಮಹಿಳೆಯರು ಪ್ರತಿಭಾವಂತರಾಗಿದ್ದರು. ದುರ್ಗಾಭಾಯಿ ದೇಶಮುಖ್ ಅವರು ನನ್ನ ಮಾತಿಗೆ ಒಂದು ಉದಾಹರಣೆ ಮಾತ್ರ. ಅವರು ಆದರ್ಶಗಳಿಗಾಗಿ ಹೋರಾಡಿದರು. ಎಷ್ಟೋ ವಿಚಾರಗಳಲ್ಲಿ ತಮ್ಮ ಗಂಡಂದಿರ ವಿಚಾರಗಳಿಗೂ ಇವರ ವಿಚಾರಗಳಿಗೂ ವ್ಯತ್ಯಾಸಗಳಿದ್ದವು. ಹೀಗಾಗಿ ಅವರಿಗೆ ಶಾಸನಸಭೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿತು’ ಎಂದು ಸಿಂಘ್ವಿ ಪ್ರತಿಕ್ರಿಯಿಸಿದರು.
ಭಾರತ ಸೇರಿದಂತೆ ಹಲವು ದೇಶಗಳು ‘ತಾಯಿನಾಡು’ (Motherland) ಎನ್ನುವ ಭಾವನೆಯನ್ನು ದೇಶದ ಬಗ್ಗೆ ಹೊಂದಿವೆ. ಜರ್ಮನಿಯಂಥ ಕೆಲವೇ ದೇಶಗಳು ‘ತಂದೆನೆಲ’ ಎಂದು ಹೇಳಿಕೊಳ್ಳುತ್ತವೆ ಎಂದೂ ಅಭಿಷೇಕ್ ಮನು ಸಿಂಘ್ವಿ ವಿವರಿಸಿದರು.
ಇದನ್ನೂ ಓದಿ: ಭಾರತ ಸಂವಿಧಾನ ರಕ್ಷಣೆಗೆ ಪ್ರಮಾಣ ಸ್ವೀಕರಿಸಿ, ಸಂವಿಧಾನದ ಪೀಠಿಕೆ ಓದಲು ಕರೆ ನೀಡಿದ ಸಚಿವ ಪ್ರಲ್ಹಾದ್ ಜೋಶಿ
ಮತ್ತಷ್ಟು ರಾಷ್ಟ್ರೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:24 pm, Fri, 13 January 23