ಶುರುವಾದ ಒಂದೇ ತಿಂಗಳಿಗೆ ಬಂದ್ ಆದ ಭಾರತದ ಮೊದಲ ಲೈಂಗಿಕ ಆಟಿಕೆ ಅಂಗಡಿ

| Updated By: ganapathi bhat

Updated on: Mar 19, 2021 | 7:24 PM

ಅಂಗಡಿಯಲ್ಲಿ ನಾವು ನಗ್ನತೆಯನ್ನು ಬಿಂಬಿಸಿದ್ದೇವೆಯೇ ಹೊರತು ಅಶ್ಲೀಲತೆಯನ್ನು ತೋರಿಸಿಲ್ಲ ಎಂದು ಕಾಮಾಕಾರ್ಟ್​​ನ ಸಿಇಓ ಪ್ರವೀಣ್ ಗಣೇಶನ್ ಮಾಹಿತಿ ನೀಡಿದ್ದಾರೆ.

ಶುರುವಾದ ಒಂದೇ ತಿಂಗಳಿಗೆ ಬಂದ್ ಆದ ಭಾರತದ ಮೊದಲ ಲೈಂಗಿಕ ಆಟಿಕೆ ಅಂಗಡಿ
ಗೋವಾದ ಲೈಂಗಿಕ ಆಟಿಕೆಗಳ ಅಂಗಡಿ ಮುಚ್ಚಲು ಕಾರಣವೇನು?
Follow us on

ಪಣಜಿ: ಭಾರತದ ಮೊದಲ ಲೈಂಗಿಕ ಆಟಿಕೆಗಳ ಅಂಗಡಿ ಎಂದೇ ಹೆಸರಾಗಿದ್ದ ಗೋವಾದ ‘ಕಾಮಾ ಗಿಜ್ಮೋಸ್’ ಆರಂಭವಾದ ಒಂದೇ ತಿಂಗಳಿಗೆ ಬಾಗಿಲು ಹಾಕಿದೆ. ಫೆಬ್ರವರಿ 14ರ ಪ್ರೇಮಿಗಳ ದಿನದಂದು ಆರಂಭವಾಗಿದ್ದ ಈ ಅಂಗಡಿಗೆ ಸ್ಥಳೀಯರ ವಿರೋಧ ವ್ಯಕ್ತವಾಗಿತ್ತು. ಪ್ರವಾಸಿಗರು ಕಿಕ್ಕಿರಿದು ನೆರೆಯುವ ಸ್ಥಳದಲ್ಲಿ ಇಂತಹ ಅಂಗಡಿಗಳು ಇರಬಾರದು ಎಂಬ ಸ್ಥಳೀಯರ ದೂರಿದ ಪರಿಣಾಮ ಕಾಮಾ ಗಿಜ್ಮೋಸ್ ಬಂದ್ ಆಗಿದೆ. ಗೋವಾದ ಕಾಲಾಂಗ್ಯುಟ್ ಬಳಿ ಶುರುವಾಗಿದ್ದ ಅಂಗಡಿ ಭಾರತದ ಮೊದಲ ಕಾನೂನುಬದ್ಧ ಲೈಂಗಿಕ ಆಟಿಕೆಗಳ ಅಂಗಡಿ ಎಂದು ಪ್ರಸಿದ್ಧವಾಗಿತ್ತು.

ಲೈಂಗಿಕ ಆಟಿಕೆಗಳ ಅಂಗಡಿ ಸ್ಥಳೀಯರು ನೆರೆಯುವ ಪ್ರದೇಶದಲ್ಲಿ ಇರಬಾರದು, ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಈ ಅಂಗಡಿಯ ಕುರಿತು ನಮಗೆ ದೂರು ನೀಡಿದ್ದರು. ಅಲ್ಲದೇ, ಕಾಮಾ ಗಿಜ್ಮೋಸ್ ಕುರಿತು ಆಕ್ಷೇಪಿಸಿ ಸಾಮಾಜಿಕ ಜಾಲತಾಣಗಳಲ್ಲೂ ಬರೆದುಕೊಂಡಿದ್ದರು. ‘ನಾವು ಕಾಮಾ ಗಿಜ್ಮೋಸ್ ಅಂಗಡಿಯ ಪ್ರವರ್ತಕರಲ್ಲಿ ವಿಚಾರಿಸಿದಾಗ ಅವರಲ್ಲಿ ಮಾರಾಟ ಪರವಾನಗಿ ಇಲ್ಲದಿರುವುದು ಬೆಳಕಿಗೆ ಬಂತು. ಹೀಗಾಗಿ ಲೈಂಗಿಕ ಆಟಿಕೆಗಳ ಅಂಗಡಿಯನ್ನು ಸ್ಥಗಿತಗೊಳಿಸುವ ನಿರ್ಣಯ ಕೈಗೊಂಡಿದ್ದೇವೆ’ ಎಂದು ಸ್ಥಳೀಯ ಪಂಚಾಯತ್​ನ ಅಧ್ಯಕ್ಷರು ತಿಳಿಸಿದ್ದಾರೆ.

‘ನಾವು ಲೈಂಗಿಕ ಆಟಿಕೆಗಳ ಅಂಗಡಿ ಸ್ಥಾಪಿಸಲು ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದೇವೆ. ಇನ್ನೇನು ಕೆಲವೇ ದಿನಗಳಲ್ಲಿ ನಮಗೆ ಪರವಾನಗಿ ಪತ್ರ ದೊರೆಯಲಿದೆ. ಆದರೆ ಸ್ಥಳೀಯರು ನಮ್ಮ ಅಂಗಡಿಯ ವಿರುದ್ಧ ದೂರು ನೀಡಿದ್ದಾರೆ. ಅಂಗಡಿ ಮುಚ್ಚಲೇಬೇಕೆಂದು ಒತ್ತಡ ಹಾಕಿದ್ದಾರೆ. ಕೆಲಕಾಲ ಅಂಗಡಿ ಮುಚ್ಚುವಂತೆ ಸ್ಥಳೀಯ ಪಂಚಾಯತ್​ ತಿಳಿಸಿದೆ. ಹೀಗಾಗಿ ಅಂಗಡಿ ಮುಚ್ಚುತ್ತಿದ್ದೇವೆ’ ಎಂದು ಕಾಮಾಕಾರ್ಟ್​​ನ ಸಿಇಓ ಪ್ರವೀಣ್ ಗಣೇಶನ್ ತಿಳಿಸಿದ್ದಾರೆ. ನಾವು ಸ್ಥಳೀಯರಲ್ಲದ ಕಾರಣ ಒತ್ತಡ ಹೇರಿ ಅಂಗಡಿ ಮುಚ್ಚಿಸಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮ ಅಂಗಡಿ ಪುರುಷ ಮತ್ತು ಮಹಿಳೆಯರಿಬ್ಬರನ್ನೂ ಸೆಳೆದಿದೆ. ಯಾವುದೇ ಮುಜುಗರವಿಲ್ಲದೆ ಅಗತ್ಯ ಆಟಿಕೆಗಳನ್ನು ಗ್ರಾಹಕರು ಖರೀದಿಸಿದ್ದಾರೆ ಎಂದು ಪ್ರವೀಣ್ ಗಣೇಶನ್ ವಿವರಿಸಿದ್ದಾರೆ. ಅಲ್ಲದೇ ಅಂಗಡಿಯಲ್ಲಿ ನಾವು ನಗ್ನತೆಯನ್ನು ಬಿಂಬಿಸಿದ್ದೇವೆಯೇ ಹೊರತು ಅಶ್ಲೀಲತೆಯನ್ನು ತೋರಿಸಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ನಾವು ಅಕ್ರಮವಾಗಿ ಲೈಂಗಿಕ ಆಟಿಕೆಗಳನ್ನು ಮಾರುತ್ತಿಲ್ಲ. ಕಾನೂನುಬದ್ಧವಾಗಿಯೇ ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದೇವೆ. ಪರವಾನಗಿ ಪಡೆದು ಮತ್ತೆ ಅಂಗಡಿ ತೆರೆಯುತ್ತೇವೆ. ಅಲ್ಲಿಯವರೆಗೂ ಗೋವಾದ ಗ್ರಾಹಕರನ್ನು ಆನ್​ಲೈನ್​ ಮೂಲಕವೇ ಸೆಳೆಯುತ್ತೇವೆ ಎಂದು ಪ್ರವೀಣ್ ಗಣೇಶನ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಮಹಿಳೆಯರೇ.., ಈ ಸಮಸ್ಯೆಗಳು ನಿಮ್ಮನ್ನು ಹೈರಾಣಾಗಿಸಿಬಿಡಬಹದು; ಆರೋಗ್ಯದತ್ತ ಗಮನ ಇರಲಿ

ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಗೆ ರಕ್ಷಾಬಂಧನ ಕಟ್ಟಲು ಆದೇಶ; ಸ್ಟೀರಿಯೊಟೈಪ್ ಬಿಟ್ಟುಬಿಡಿ ಎಂದ ಸುಪ್ರೀಂಕೋರ್ಟ್