ಜೊಹಾನ್ಸ್ಬರ್ಗ್, ಆಗಸ್ಟ್ 23: ಚಂದ್ರಯಾನ-3ರ (Chandrayaan 3) ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹರ್ಷ ವ್ಯಕ್ತಪಡಿಸಿದ್ದು, ಅಮೃತಕಾಲದಲ್ಲಿ ಯಶಸ್ಸಿನ ಅಮೃತ ಸುರಿದಿದೆ ಎಂದು ಬಣ್ಣಿಸಿದರು. ಬ್ರಿಕ್ಸ್ ಶೃಂಗಸಭೆ ಪ್ರಯುಕ್ತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಮೋದಿ ಅವರು ಜೊಹಾನ್ಸ್ಬರ್ಗ್ನಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ವಿಜ್ಞಾನಿಗಳು ಹಾಗೂ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಚಂದ್ರಯಾನ ಮಿಷನ್ ಚಂದ್ರನ ಮೇಲೆ ಕಾಲಿಟ್ಟ ನಂತರ ಪ್ರಧಾನಿ ಮೋದಿ ಅವರು ಇಸ್ರೋ ಮತ್ತು ಇಡೀ ದೇಶವನ್ನು ಅಭಿನಂದಿಸಿದ್ದಾರೆ. ಈ ಕ್ಷಣ ಅಭೂತಪೂರ್ವ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇಂದು ನಾವು ಬಾಹ್ಯಾಕಾಶ ಕ್ಷೇತ್ರದಲ್ಲಿ ನವ ಭಾರತದ ಹೊಸ ಯುಗಕ್ಕೆ ಸಾಕ್ಷಿಯಾಗಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ಈ ಕ್ಷಣ ಭಾರತದ ಹೊಸ ವೈಭವ. ಕಷ್ಟಗಳ ಸಾಗರವನ್ನು ದಾಟಿದ ಕ್ಷಣ ಇದಾಗಿದೆ. ಇಂತಹ ಐತಿಹಾಸಿಕ ಕ್ಷಣವನ್ನು ನೋಡಿದಾಗ ನಮಗೆ ತುಂಬಾ ಹೆಮ್ಮೆಯಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಜತೆಗೆ, ಇದು ನವ ಭಾರತದ ಸೂರ್ಯೋದಯ ಎಂದು ಬಣ್ಣಿಸಿದರು.
ಪ್ರತಿಯೊಬ್ಬ ಭಾರತೀಯನೂ ಇಂದು ಸಂಭ್ರಮ ಆಚರಿಸುತ್ತಿದ್ದಾನೆ. ಪ್ರತಿ ಮನೆಯೂ ಆಚರಿಸುತ್ತಿದೆ. ಈ ಹೆಮ್ಮೆಯ ಕ್ಷಣದಲ್ಲಿ ನಾನು ನನ್ನ ದೇಶದ ಜನರೊಂದಿಗೆ ಸಂಪರ್ಕ ಹೊಂದಿದ್ದೇನೆ. ಇದು ಹೊಸ ಯುಗದ ಉದಯವಾಗಿದೆ ಎಂದು ಮೋದಿ ಹೇಳಿದರು. ಈ ಹಿಂದೆ ಯಾವುದೇ ದೇಶವು (ಚಂದ್ರನ ದಕ್ಷಿಣ ಧ್ರುವ) ಅಲ್ಲಿಗೆ ತಲುಪಿಲ್ಲ. ಕಠಿಣ ಪರಿಶ್ರಮದಿಂದ ನಮ್ಮ ವಿಜ್ಞಾನಿಗಳನ್ನು ನಾವು ಅಲ್ಲಿಗೆ ತಲುಪಿದ್ದೇವೆ ಎಂದು ಮೋದಿ ಹೇಳಿದರು.
ಇದನ್ನೂ ಓದಿ: Chandrayaan-3: ಚಂದ್ರನನ್ನು ಸ್ಪರ್ಶಿಸಿದ ವಿಕ್ರಮ್ ಲ್ಯಾಂಡರ್; ಇದು ಭಾರತದ ಸಾಧನೆ, ಐತಿಹಾಸಿಕ ಕ್ಷಣ
ಈ ಅಭೂತಪೂರ್ವ ಸಾಧನೆಗಾಗಿ ನಾನು ಇಸ್ರೋ ಮತ್ತು ಅದರ ವಿಜ್ಞಾನಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಪ್ರಧಾನಿ ತಮ್ಮ ವರ್ಚುವಲ್ ಭಾಷಣದಲ್ಲಿ ಹೇಳಿದರು.
ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಐತಿಹಾಸಿಕ ದಿನ. ಚಂದ್ರಯಾನ-3 ಗಮನಾರ್ಹ ಯಶಸ್ಸಿಗಾಗಿ ಇಸ್ರೋಗೆ ಅಭಿನಂದನೆಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಸಹ ಮಾಡಿದ್ದಾರೆ.
Historic day for India’s space sector. Congratulations to @isro for the remarkable success of Chandrayaan-3 lunar mission. https://t.co/F1UrgJklfp
— Narendra Modi (@narendramodi) August 23, 2023
ಚಂದ್ರಯಾನದ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಲಿಂಕ್ ಮೂಲಕ ಇಸ್ರೋ ವಿಜ್ಞಾನಿಗಳ ಸಂಭ್ರಮಕ್ಕೆ ಜತೆಯಾದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:19 pm, Wed, 23 August 23