ಹಿಂದಿನಿಂದಲೂ ಈ ಸಮಾಜದಲ್ಲಿ ಪುರುಷರಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಾ ಬರಲಾಗುತ್ತಿದೆ. ಇಂದು ಈ ಸಮಾಜ ಎಷ್ಟೇ ಮುಂದುವರೆದಿದ್ದರೂ, ಒಬ್ಬ ಮಹಿಳೆ ತಾನು ಏನನ್ನಾದರೂ ಸಾಧಿಸಿ ತೋರಿಸುತ್ತೇನೆ ಎಂದರೆ, ಆಕೆಯನ್ನು ಪ್ರೋತ್ಸಾಹಿಸುವವರಿಗಿಂತ ಟೀಕಿಸುವವರೇ ಹೆಚ್ಚು. ಸಮಾಜ ಬದಲಾದರೂ ಜನರ ಮನಸ್ಥಿತಿ ಇನ್ನೂ ಬದಲಾಗಿಲ್ಲ. ಪುರುಷರಂತೆ ಮಹಿಳೆಯರು ಕೂಡಾ ಸಮಾನರು ಎಂದು ಹೆಚ್ಚಿನವರು ಒಪ್ಪಿಕೊಂಡಿಲ್ಲ. ಮಹಿಳೆಯರು ಪುರುಷರಂತೆ ಕಾನೂನುಬದ್ಧವಾಗಿ ಸಮಾನ ಹಕ್ಕುಗಳನ್ನು ಪಡೆದಿರಬಹುದು, ಆದರೆ ಸಮಾಜದಲ್ಲಿ ಅವರ ಸ್ಥಾನಮಾನದ ಬಗ್ಗೆ ಅಸಮಾನತೆ ಇದೆ. ಪುರುಷರಿಗೆ ಹೋಲಿಸಿದರೆ ಹೆಣ್ಣಿನ ಬಗ್ಗೆ ದ್ವಂದ್ವ ಮನೋಭಾವನೆ ಜನರ ಮನಸಿನಲ್ಲಿದೆ. ಸಮಾಜದಲ್ಲಿ ಇಂದಿಗೂ ಹೆಣ್ಣಿಗೆ ಪರುಷರಿಗೆ ಸಿಕ್ಕಷ್ಟು ಪ್ರಾಧಾನ್ಯತೆ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಪ್ರಪಂಚದಾದ್ಯಂತ ಮಹಿಳೆಯರಿಗೆ ಸಮಾನ ಹಕ್ಕುಗಳು ಮತ್ತು ಅವಕಾಶವನ್ನು ಒದಗಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಮಹಿಳೆಯರಿಗೆ ಸಮಾನತೆಯ ಹಕ್ಕನ್ನು ನೀಡುವ ಮತ್ತು ಸಮಾಜದಲ್ಲಿ ಅವರ ಸ್ಥಾನವನ್ನು ಬಲಪಡಿಸುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 26 ರಂದು ಮಹಿಳಾ ಸಮಾನತೆಯ ದಿನವನ್ನು ಆಚರಿಸಲಾಗುತ್ತದೆ. ಈ ಮಹಿಳಾ ಸಮಾನತೆಯ ಆಚರಣೆ ಮೊದಲು ಯಾವ ದೇಶದಲ್ಲಿ ಪ್ರಾರಂಭವಾಯಿತು. ಈ ಆಚರಣೆಯ ಹಿಂದಿನ ಇತಿಹಾಸದ ಕುರಿತ ಮಾಹಿತಿ ಇಲ್ಲಿದೆ.
ಮಹಿಳಾ ಸಮಾನತೆಯ ದಿನವನ್ನು ಅಮೇರಿಕಾದಲ್ಲಿ ಮೊದಲು ಆಚರಿಸಲಾಯಿತು. ಅಮೇರಿಕಾದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಈ ನಿಟ್ಟಿನಲ್ಲಿ 1853ರಲ್ಲಿ ಅಮೇರಿಕಾದಲ್ಲಿ ಮಹಿಳೆಯರ ಹಕ್ಕುಗಳ ಹೋರಾಟ ಆರಂಭವಾಯಿತು. ಮಹಿಳೆಯರ ಸಮಾನತೆಗಾಗಿ ಸುದೀರ್ಘ 50 ವರ್ಷಗಳ ಕಾಲ ಈ ಹೋರಾಟ ನಡೆಯಿತು. 1920 ರ ವೇಳೆಯಲ್ಲಿ ಅಮೇರಿಕಾದಲ್ಲಿ ಸಮಾನತೆಗಾಗಿ ಮಹಿಳೆಯರ ಮುಷ್ಕರ ಹಾಗೂ ಸಮಾನ ಹಕ್ಕುಗಳ ತಿದ್ದುಪಡಿಗಾಗಿ ಹೋರಾಟವು ಉಲ್ಬಣಗೊಂಡಾಗ ಅದೇ ವರ್ಷ ಆಗಸ್ಟ್ 26 ರಂದು ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಯಿತು. ಅದರ ನಂತರ 1971 ರಲ್ಲಿ ಅಮೇರಿಕಾದ ಸಂಸತ್ತು ಆಗಸ್ಟ್ 26 ನ್ನು ಮಹಿಳಾ ಸಮಾನತೆಯ ದಿನವಾಗಿ ಆಚರಿಸಲು ಘೋಷಿಸಿತು, ನಂತರ ಈ ದಿನವನ್ನು ಪ್ರಪಂಚದ ಎಲ್ಲಾ ದೇಶಗಳಲ್ಲೂ ಆಚರಿಸಲಾಯಿತು.
ಇದನ್ನೂ ಓದಿ: ವಿಶ್ವ ಛಾಯಾಗ್ರಹಣ ದಿನದ ಇತಿಹಾಸ, ಮಹತ್ವ ಏನು? ಫೋಟೋಗ್ರಾಫಿಯ ಈ ವಿಚಾರಗಳು ಗೊತ್ತಾ?
ಮಹಿಳೆಯರು ಮಾಡಿದ ಸಾಧನೆಗಳನ್ನು ಗುರುತಿಸಲು ಪ್ರತಿ ವರ್ಷ ಮಹಿಳಾ ಸಮಾನತೆ ದಿನವನ್ನು ಆಚರಿಸಲಾಗುತ್ತದೆ. ಮಹಿಳಾ ಸಬಲೀಕರಣವನ್ನು ಉತ್ತೇಜಿಸುವುದು, ಅವರ ಕಾರ್ಯಗಳಿಗೆ ಪ್ರೋತ್ಸಾಹ ನೀಡುವುದು, ಮತ್ತೊಂದೆಡೆ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು, ತಾರತಮ್ಯ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ದಿನದ ಆಚರಣೆಯ ಉದ್ದೇಶವಾಗಿದೆ. ಅಲ್ಲದೆ ಈ ದಿನದಂದು ಪ್ರಪಂಚದ ಅನೇಕ ದೇಶಗಳಲ್ಲಿ ಮಹಿಳೆಯರ ಹಕ್ಕುಗಳ ಕುರಿತಾಗಿ ಸಮ್ಮೇಳನಗಳು ಮತ್ತು ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುತ್ತದೆ. ಮಹಿಳೆಯರ ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಹಿಳಾ ಸಂಘಟನೆಗಳು ಅಭಿಯಾನವನ್ನು ನಡೆಸುತ್ತವೆ. ಮುಖ್ಯವಾಗಿ ಲಿಂಗ ಸಮಾನತೆಯನ್ನು ಸಾಧಿಸುವ ಸಲುವಾಗಿ ಈ ದಿನವು ಕಾರ್ಯನಿರ್ವಹಿಸುತ್ತದೆ. ಜೊತೆಗೆ ರಾಜಕೀಯ, ವ್ಯಾಪಾರ ಮತ್ತು ಇತರ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಛಾಪನ್ನು ಮೂಡಿಸಲು ಅವಕಾಶವನ್ನು ನೀಡುತ್ತದೆ.
ಈ ವರ್ಷದ ಮಹಿಳಾ ಸಮಾನತೆಯ ದಿನದ ಥೀಮ್ #Embrace Equity. ಈ ಥೀಮ್ 2021ರಿಂದ 2026ರ ವರೆಗಿನ ಕಾರ್ಯತಂತ್ರದ ಯೋಜನೆಯ ಭಾಗವಾಗಿದೆ. ಇದು ಲಿಂಗ ಸಮಾನತೆಯನ್ನು ಸಾಧಿಸುವ ಪ್ರಾಮುಖ್ಯತೆಯನು ಒತ್ತಿ ಹೇಳುತ್ತದೆ. ಹಾಗೂ ಇದು ಆರ್ಥಿಕ ಪ್ರಗತಿಗೆ ನಿರ್ಣಾಯಕ ಮಾತ್ರವಲ್ಲದೆ ಮೂಲಭೂತ ಮಾನವ ಹಕ್ಕುಗಳಿಗೂ ಅವಶ್ಯಕವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: