International Dog Day 2023: ಅಂತರಾಷ್ಟ್ರೀಯ ಶ್ವಾನ ದಿನವನ್ನು ಏಕೆ ಆಚರಿಸಲಾಗುತ್ತದೆ? ಇದರ ಇತಿಹಾಸ ಏನು?
ಶ್ವಾನಗಳು ಈ ಭೂಮಿಯ ಮೇಲಿನ ನಿಷ್ಠಾವಂತ ಪ್ರಾಣಿಗಳು. ಹಾಗಾಗಿ ಜನರು ತಮ್ಮ ಮನೆಗಳಲ್ಲಿ ನಾಯಿಯನ್ನು ಸಾಕಲು ಇಷ್ಟಪಡುತ್ತಾರೆ. ಆದರೆ ಹೆಚ್ಚಿನವರು ವಿಶೇಷವಾಗಿ ದುಬಾರಿ ಬೆಲೆಯ ನಾಯಿಗಳನ್ನು ಸಾಕುತ್ತಾರೆ. ಇದರೊಂದಿಗೆ ಸ್ಥಳೀಯ ಜಾತಿಯ ಶ್ವಾನಗಳನ್ನು ದತ್ತು ಪಡೆದು, ಅವುಗಳಿಗೆ ಒಂದು ಉತ್ತಮ ಜೀವನವನ್ನು ಕಲ್ಪಿಸಬೇಕು ಎಂದು ಜನರನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ಆಗಸ್ಟ್ 26ರಂದು ಅಂತರಾಷ್ಟ್ರೀಯ ಶ್ವಾನ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆಯ ಹಿಂದಿನ ಹಿನ್ನೆಲೆ ಏನೆಂಬುವುದನ್ನು ನೋಡೋಣ.
ಶ್ವಾನಗಳು ನಿಷ್ಠಾವಂತ ಪ್ರಾಣಿ ಮಾತ್ರವಲ್ಲದೆ ಅವುಗಳು ಮನುಷ್ಯನ ಉತ್ತಮ ಸ್ನೇಹಿತ ಕೂಡ ಹೌದು. ಮನುಷ್ಯರಿಗಿಂತ ಹೆಚ್ಚಾಗಿ ಈ ಮೂಕ ಜೀವಿಗಳೇ ನಮ್ಮ ಭಾವನೆಗಳಿಗೆ ಹೆಚ್ಚು ಸ್ಪಂದಿಸುತ್ತವೆ. ಮಾತ್ರವಲ್ಲದೆ ಅವುಗಳಿಗೆ ಒಂದು ತುತ್ತು ಅನ್ನ ನೀಡಿದರೆ ಸಾಕು ಅವುಗಳು ನಿಮಗೆ ಜೀವನಪರ್ಯಂತ ಋಣಿಯಾಗಿರುತ್ತವೆ. ಜೊತೆಗೆ ಯಾವುದೇ ಸ್ವಾರ್ಥವಿಲ್ಲದೆ ನಿಷ್ಕಲ್ಮಶ ಪ್ರೀತಿಯನ್ನು ನಿಮಗೆ ಧಾರೆಯೆರೆಯುತ್ತವೆ. ನಾಯಿಗಳ ನೀಯತ್ತು ಮತ್ತು ಅವುಗಳು ನಮ್ಮ ಮೇಲೆ ತೋರುವ ನಿಷ್ಕಲ್ಮಶ ಪ್ರೀತಿಯ ಕಾರಣಕ್ಕೆ ಹೆಚ್ಚಿನವರು ತಮ್ಮ ಮನೆಗಳಲ್ಲಿ ನಾಯಿಗಳನ್ನು ಸಾಕಲು ಇಷ್ಟಪಡುತ್ತಾರೆ. ಕೆಲವರು ಹವ್ಯಾಸಕ್ಕಾಗಿ ಮತ್ತು ಕೆಲವರು ತಮ್ಮ ಅಗತ್ಯಗಳಿಗೆ ಅಂದರೆ ಮನೆಗೆ ಕಾವಲುಗಾರನಾಗಿ ಅವುಗಳನ್ನು ಸಾಕುತ್ತಾರೆ. ಇತ್ತೀಚಿನ ದಿನಗಳಲ್ಲಿ ದುಬಾರಿ ಬೆಲೆಯ ವಿದೇಶಿ ತಳಿಯ ನಾಯಿಗಳನ್ನು ಸಾಕುವುದು ಫ್ಯಾಷನ್ ಆಗಿ ಬಿಟ್ಟಿದೆ. ಆದರೆ ಸ್ಥಳೀಯ ಜಾತಿಯ ನಾಯಿಗಳನ್ನು ಸಾಕಲು ಯಾರು ಇಷ್ಟಪಡುವುದಿಲ್ಲ. ಈ ಕಾರಣದಿಂದ ಅಂತಹ ನಾಯಿಗಳನ್ನು ದತ್ತು ತೆಗೆದುಕೊಂಡು ಅವುಗಳಿಗೆ ಒಂದು ಉತ್ತಮ ನೆಲೆಯನ್ನು ಕಲ್ಪಿಸಬೇಕೆಂದು ಜನರಿಗೆ ಅರಿವು ಮೂಡಿಸಲು ಹಾಗೂ ನಾಯಿಗಳ ಮೇಲೆ ನಡೆಯುವ ದೌರ್ಜನ್ಯವನ್ನು ನಿಲ್ಲಿಸಲು ಪ್ರತಿ ವರ್ಷ ಆಗಸ್ಟ್ 26 ರಂದು ಅಂತರಾಷ್ಟ್ರೀಯ ಶ್ವಾನ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆಯ ಹಿಂದಿನ ಇತಿಹಾಸ ಏನು ಎಂಬುದನ್ನು ನೋಡೋಣ.
ಅಂತರಾಷ್ಟ್ರೀಯ ಶ್ವಾನ ದಿನದ ಇತಿಹಾಸ:
2004 ರಲ್ಲಿ ಪ್ರಾಣಿ ಕಲ್ಯಾಣ ಕಾರ್ಯಕರ್ತೆ ( ಪೆಟ್ & ಫ್ಯಾಮಿಲಿ ಲೈಫ್ಸ್ಟೈಲ್ ಎಕ್ಸ್ಪರ್ಟ್, ಅನಿಮಲ್ ಅಡ್ವೊಕೇಟ್, ಕನ್ಸರ್ವೆಶನಿಸ್ಟ್, ಡಾಗ್ ಟ್ರೈನರ್) ಮತ್ತು ಲೇಖಕಿ ಕೋಲಿನ್ ಪೈಜ್ ಅವರು ಅಂತರಾಷ್ಟ್ರೀಯ ಶ್ವಾನ ದಿನವನ್ನು ಸ್ಥಾಪಿಸಿದರು. ಕೋಲಿನ್ ಪೈಜ್ ಅವರು ಶ್ವಾನ ದಿನದ ಆಚರಣೆಗೆ ನಿರ್ಧಿಷ್ಟವಾಗಿ ಆಗಸ್ಟ್ 26 ನೇ ದಿನಾಂಕವನ್ನು ಏಕೆ ಆಯ್ಕೆ ಮಾಡಿದರು ಎಂದರೆ, ಪೈಜ್ ಅವರು ಹತ್ತು ವರ್ಷ ಪ್ರಾಯದವರಾಗಿದ್ದಾಗ, ಆಕೆಯ ಮನೆಯವರು ಆಗಸ್ಟ್ 26 ನೇ ತಾರೀಕಿನಂದು ಶೆಲ್ಟಿ ಎಂಬ ಹೆಸರಿನ ನಾಯಿಯನ್ನು ದತ್ತು ತೆಗೆದುಕೊಂಡು ಸಾಕಿದರು. ಹಾಗಾಗಿ ಇದೇ ದಿನದಂದು ಅವರು ಅಂತರಾಷ್ಟ್ರೀಯ ಶ್ವಾನ ದಿನವನ್ನು ಆಚರಿಸಬೇಕೆಂದು ನಿರ್ಧರಿಸಿದರು. ಮಾತ್ರವಲ್ಲದೆ, ಪ್ರಪಂಚದಾದ್ಯಂತ ಪ್ರಾಣಿಗಳ ಪ್ರಾಮುಖ್ಯತೆಯನ್ನು ಸಾರಲು ಮತ್ತು ಪ್ರಾಣಿಗಳನ್ನು ದತ್ತು ಪಡೆಯಲು ಜನರನ್ನು ಪ್ರೋತ್ಸಾಹಿಸಲು ಪೈಜ್ ಅವರು ರಾಷ್ಟ್ರೀಯ ನಾಯಿಮರಿ ದಿನ, ರಾಷ್ಟ್ರೀಯ ಬೆಕ್ಕು ದಿನ, ವನ್ಯಜೀವಿ ದಿನದ ಆಚರಣೆಯನ್ನು ಕೂಡಾ ಸ್ಥಾಪಿಸಿದ್ದಾರೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ನ್ಯಾಯಕ್ಕಾಗಿ ವಿಶ್ವ ದಿನ;ದ ಇತಿಹಾಸ, ಮಹತ್ವ ಇಲ್ಲಿದೆ
ಅಂತರಾಷ್ಟ್ರೀಯ ಶ್ವಾನ ದಿನದ ಆಚರಣೆಯ ಮಹತ್ವ:
ಅಂತರಾಷ್ಟ್ರೀಯ ಶ್ವಾನ ದಿನವನ್ನು ಆರಿಸುವ ಮುಖ್ಯ ಉದ್ದೇಶವೆಂದರೆ ಸ್ಥಳೀಯ ನಾಯಿಗಳನ್ನು ದತ್ತು ತೆಗೆದುಕೊಳ್ಳುವಂತೆ ಜನರನ್ನು ಪ್ರೋತ್ಸಾಹಿಸುವುದು ಮತ್ತು ಆ ನಾಯಿಗಳಿಗೆ ಉತ್ತಮ ಜೀವನವನ್ನು ಕಲ್ಪಿಸುವುದಾಗಿದೆ. ನಮ್ಮಲ್ಲಿ ಹೆಚ್ಚಿನವರು ನಾಯಿಗಳು ನಮ್ಮ ಉತ್ತಮ ಸ್ನೇಹಿತ ಎಂದುಕೊಂಡರೂ, ನಾಯಿಗಳನ್ನು ವಿಶೇಷವಾಗಿ ಬೀದಿನಾಯಿಗಳನ್ನು ನಿಷ್ಕರುಣೆಯಿಂದ ಅವುಗಳ ಮೇಲೆ ದೌರ್ಜನ್ಯವೆಸಗುವ ಅನೇಕ ಜನರಿದ್ದಾರೆ. ಇಂತಹ ದುಷ್ಕೃತ್ಯಗಳನ್ನು ಮಾಡದಂತೆ ಈ ವಿಶೇಷ ದಿನದಂದು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಇನ್ನೂ ಅನೇಕ ಜನರು ತಮ್ಮ ಸಾಕು ಪ್ರಾಣಿಗಳಿಗೆ ವಯಸ್ಸಾದಾಗ ರೋಗ ರುಜಿನಗಳು ಬರಲಾರಂಭಿಸಿದಾಗ ನಿಷ್ಕರುಣೆಯಿಂದ ಅಂತಹ ನಾಯಿಗಳನ್ನು ಬೀದಿಪಾಲು ಮಾಡುತ್ತಾರೆ. ಈ ರೀತಿಯ ಕ್ರೂರ ಕೆಲಸವನ್ನು ಮಾಡದಂತೆ ಜಾಗೃತಿಯನ್ನು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:33 pm, Thu, 24 August 23