ಹಸಿವಾದಾಗ ಏಕೆ ತಲೆನೋವು ಉಂಟಾಗುತ್ತದೆ? ಈ ಸಮಸ್ಯೆಯನ್ನು ನಿವಾರಿಸಲು ಸುಲಭ ಮಾರ್ಗ ಇಲ್ಲಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 21, 2023 | 6:54 PM

ತಲೆನೋವು ಎಲ್ಲರನ್ನು ಕಾಡುವಂತಹ ಒಂದು ಸಮಸ್ಯೆಯಾಗಿದೆ. ಆದರೆ ಈ ಸಮಸ್ಯೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ತಲೆನೋವು ಕೆಲಸದ ಒತ್ತಡ, ಮಾನಸಿಕ ಒತ್ತಡ, ಸರಿಯಾಗಿ ನಿದ್ರೆಯಾಗದಿದ್ದಾಗ ಉಂಟಾಗಬಹುದು. ಜೊತೆಗೆ ಹಸಿವಿನ ಕಾರಣದಿಂದಲೂ ತಲೆನೋವು ಉಂಟಾಗುತ್ತದೆ. ಹಸಿವಾದಾಗ ಏಕೆ ತಲೆನೋವು ಉಂಟಾಗುತ್ತದೆ, ಆ ಸಮಸ್ಯೆಯನ್ನು ನಿವಾರಿಸುವುದು ಹೇಗೆ ಎಂಬುದನ್ನು ನೋಡೋಣ.

ಹಸಿವಾದಾಗ ಏಕೆ ತಲೆನೋವು ಉಂಟಾಗುತ್ತದೆ? ಈ ಸಮಸ್ಯೆಯನ್ನು ನಿವಾರಿಸಲು ಸುಲಭ ಮಾರ್ಗ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ತಲೆನೋವು ಸಾಮಾನ್ಯ ಸಮಸ್ಯೆಯಾಗಿದೆ. ಇತ್ತೀಚಿನ ದಿನಗಳಲ್ಲಿ ವೇಗದ ಜೀವನಶೈಲಿಯ ಕಾರಣದಿಂದ ಹಲವರು ಪ್ರತಿನಿತ್ಯ ತಲೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ವಿಪರೀತ ನೋವು ನಮ್ಮ ಸಂಪೂರ್ಣ ದಿನವನ್ನೇ ಹಾಳು ಮಾಡಿ ಬಿಡುತ್ತದೆ. ಕೆಲಸದ ಒತ್ತಡ, ಮಾನಸಿಕ ಒತ್ತಡ, ಸರಿಯಾಗಿ ನಿದ್ರೆಯಾಗದಿರುವುದು, ಅತಿಯಾಗಿ ಮೊಬೈಲ್ ಫೋನ್ ನೋಡುವುದು ಇವೆಲ್ಲವೂ ತಲೆನೋವು ಉಂಟಾಗಲು ಕಾರಣ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ನಿಮಗೆ ಗೊತ್ತಾ, ಇದರ ಹೊರತಾಗಿ ಹಸಿವಾದಗಲೂ ತಲೆನೋವು ಉಂಟಾಗುತ್ತದೆ. ನಾವು ಸಮಯಕ್ಕೆ ಸರಿಯಾಗಿ ಊಟ ಮಾಡದಿದ್ದಾಗ, ವಿಶೇಷವಾಗಿ ಬೆಳಗಿನ ಉಪಹಾರವನ್ನು ಸೇವನೆ ಮಾಡುವುದನ್ನು ಬಿಟ್ಟುಬಿಟ್ಟಾಗ ಹಸಿವಿನ ಕಾರಣದಿಂದ ಉಂಟಾಗುವ ತಲೆನೋವು ಕಾಣಿಸಿಕೊಳ್ಳುತ್ತದೆ. ಅಷ್ಟಕ್ಕೂ ಹಸಿದಾಗ ತಲೆನೋವು ಏಕೆ ಉಂಟಾಗುತ್ತದೆ? ಆ ತಲೆನೋವನ್ನು ನಿವಾರಿಸುವುದು ಹೇಗೆ ಎಂಬುದನ್ನು ನೋಡೋಣ.

ಹಸಿದಾಗ ಏಕೆ ತಲೆನೋವು ಉಂಟಾಗುತ್ತದೆ?

ಹಸಿವಿನಿಂದ ತಲೆನೋವು ಉಂಟಾಗಲು ಕಾರಣವೇನೆಂಬುದನ್ನು ನೋಡುವುದಾದರೆ, ಹಸಿವು ಮತ್ತು ನಿರ್ಜಲೀಕರಣದ ಕಾರಣದಿಂದಾಗಿ ದೇಹದಲ್ಲಿನ ಗ್ಲೂಕೋಸ್ ಮಟ್ಟವು ಕುಸಿಯಬಹುದು. ಮೆದುಳಿನಲ್ಲಿನ ಗ್ಲೂಕೋಸ್ ಮಟ್ಟವು ಕಡಿಮೆಯಾಗಲು ಪ್ರಾರಂಭವಾದಾಗ, ಮೆದುಳು ಹೈಪೋಗ್ಲಿಸಿಮಿಯಾ ಮಟ್ಟವನ್ನು ಸಾಧಿಸಲು ಗ್ಲುಕಗನ್, ಕಾರ್ಟಿಸೋಲ್ ಮತ್ತು ಆಡ್ರಿನಾಲಿನ್ ನಂತಹ ಕೆಲವು ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನುಗಳ ಕಾರಣದಿಂದ ತಲೆನೋವು ಕಾಣಿಸಿಕೊಳ್ಳುತ್ತದೆ. ಇದು ಮಾತ್ರವಲ್ಲದೆ ನಿರ್ಜಲೀಕರಣ, ಕೆಫೀನ್ ಮತ್ತು ಆಹಾರದ ಕೊರತೆಯಿಂದಾಗಿ ಮೆದುಳಿನ ಅಂಗಾಂಶದಲ್ಲಿನ ಸಂಕೋಚನ, ನೋವು ಗ್ರಾಹಕಗಳು ಸಕ್ರಿಯಗೊಳ್ಳುತ್ತವೆ. ಇದರಿಂದಾಗಿ ತಲೆನೋವು ಸಂಭವಿಸಬಹುದು.

ಹಸಿವಿನಿಂದ ಉಂಟಾಗುವ ತಲೆನೋವು ಬಾರದಂತೆ ತಡೆಯವುದು ಹೇಗೆ?

• ಸಮಯಕ್ಕೆ ಸರಿಯಾಗಿ ಆರೋಗ್ಯಕರ ಆಹಾರವನ್ನು ಸೇವನೆ ಮಾಡಿ. ವಿಶೇಷವಾಗಿ ಬೆಳಗಿನ ಉಪಹಾರವನ್ನು ಬಿಟ್ಟುಬಿಡುವುದನ್ನು ತಪ್ಪಿಸಿ.

• ಕೆಲವೊಮ್ಮೆ ನಿರ್ಜಲೀಕರಣವೂ ತಲೆನೋವಿಗೆ ಕಾರಣವಾಗಬಹುದು. ನಿಮಗೆ ಹಸಿವಿನಿಂದ ತಲೆನೋವು ಇದ್ದರೆ, ಸ್ವಲ್ಪ ಸ್ವಲ್ಪ ನೀರು ಕುಡಿಯಿರಿ. ನೀವು ಅದರಲ್ಲಿ ನಿಂಬೆ ಮತ್ತು ಸಕ್ಕರೆಯನ್ನು ಸಹ ಬೆರೆಸಿ ಕುಡಿಯಬಹುದು.

ಇದನ್ನೂ ಓದಿ:ಪದೇ ಪದೇ ತಲೆನೋವು ನಿಮ್ಮನ್ನು ಕಾಡುತ್ತಿದೆಯಾ? ಹಾಗಾದರೆ ಇಲ್ಲಿದೆ ಸರಳ ಮನೆಮದ್ದು!

• ನಿಮಗೆ ಹಸಿವಿನಿಂದ ತಲೆನೋವು ಉಂಟಾದರೆ ಸೇಬು ಅಥವಾ ಕಿತ್ತಲೆಯಂತಹ ಹಣ್ಣನ್ನು ಸೇವನೆ ಮಾಡಿ.

• ನೀವು ಹಸಿದಿರುವಾಗ ಹೆಚ್ಚಿನ ಸಕ್ಕರೆಯುಕ್ತ ಚಾಕೋಲೇಟ್ ಅಥವಾ ಹೆಚ್ಚು ಸಿಹಿ ಹೊಂದಿರುವ ಜ್ಯೂಸ್ ಗಳನ್ನು ಸೇವಿಸುವುದನ್ನು ತಪ್ಪಿಸಿ. ಏಕೆಂದರೆ ಅವುಗಳು ಗ್ಲೂಕೋಸ್ ಮಟ್ಟವನ್ನು ಇದ್ದಕ್ಕಿದ್ದಂತೆ ಹೆಚ್ಚಿಸಬಹುದು. ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.

• ನೀವು ನಿಮ್ಮ ಊಟವನ್ನು ಸಮಯಕ್ಕೆ ಸರಿಯಾಗಿ ತಿನ್ನಿರಿ. ಬಿಡುವಿಲ್ಲದ ವೇಳಾಪಟ್ಟಿಯ ಕಾರಣದಿಂದಾಗಿ ಸಮಯಕ್ಕೆ ಸರಿಯಾಗಿ ತಿನ್ನಲು ಸಾಧ್ಯವಾಗದಿದ್ದರೆ, ನಿಯಮಿತ ಮಧ್ಯಂತರದಲ್ಲಿ ಸಣ್ಣ ಪ್ರಮಾಣದ ಆಹಾರವನ್ನು ಸೇವಿಸುತ್ತಿರಿ, ದ್ರವ ಪದಾರ್ಥಗಳನ್ನು ಸೇವಿಸಿ.

• ಮುಖ್ಯವಾಗಿ ಬೆಳಗ್ಗೆ, ಮದ್ಯಾಹ್ನ, ರಾತ್ರಿ ಈ ಮೂರು ಹೊತ್ತು ಸಮಯಕ್ಕೆ ಸರಿಯಾಗಿ ಆರೋಗ್ಯಕರ ಆಹಾರವನ್ನು ಸೇವಿಸಿ. ಈ ಅಭ್ಯಾಸವು ತಲೆನೋವು ಮಾತ್ರವಲ್ಲದೆ ಇತರ ಆರೋಗ್ಯ ಸಮಸ್ಯೆ ಭಾದಿಸುವುದನ್ನು ಕೂಡಾ ತಡೆಯುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ