ಈ ಬಾರಿಯ ವರಮಹಾಲಕ್ಷ್ಮೀ ವ್ರತವನ್ನು ಇದೇ ಶುಕ್ರವಾರದಂದು ಆಚರಿಸಲಾಗುತ್ತಿದೆ. ಈ ಹಬ್ಬದಂದು ವಿಶೇಷವಾಗಿ ನಾರಿಯರು ಸೀರೆಯುಟ್ಟು, ಮೈತುಂಬಾ ಒಡವೆಗಳನ್ನು ಧರಿಸುವ ಮೂಲಕ ಮಹಾಲಕ್ಷ್ಮೀಯಂತೆ ಸಿಂಗಾರಗೊಳ್ಳುತ್ತಾರೆ. ಈ ಹಬ್ಬದಂದು ಚೆನ್ನಾಗಿ ಸಿಂಗಾರಗೊಳ್ಳುವುದರ ಜೊತೆಗೆ ಹೊಳೆಯುವ ಕಾಂತಿಯುತವಾದ ತ್ವಚೆಯನ್ನು ಪಡೆಯಲು ನೀವು ಬ್ಯೂಟಿ ಪಾರ್ಲರ್ ಗೆ ಹೋಗಿ ಫೇಶಿಯಲ್ ಮಾಡಿಸಬೇಕಾಗಿಲ್ಲ. ಮನೆಯಲ್ಲಿಯೇ ಸಿಗುವ ಕೆಲವೊಂದು ವಸ್ತುಗಳಿಂದ ಹಬ್ಬದ ಸ್ಪೆಷಲ್ ಫೇಶಿಯಲ್ ಮಾಡಬಹುದು. ಅದಕ್ಕಾಗಿ ನಿಮಗೆ ಕಡ್ಲೆ ಹಿಟ್ಟು ಬೇಕಾಗುತ್ತದೆ. ಹಿಂದಿನ ಕಾಲದಿಂದಲೂ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಲು ಕಡ್ಲೆಹಿಟ್ಟನ್ನು ಬಳಸುತ್ತಾ ಬರಲಾಗುತ್ತಿದೆ. ಇಂದು ಅದೇ ಹಿಟ್ಟಿನಿಂದ ಫೇಶಿಯಲ್ ಮಾಡುವ ವಿಧಾನವನ್ನು ಹೇಳಿಕೊಡುತ್ತೇವೆ.
ಕ್ಲೆನ್ಸರ್: ಮೊದಲು ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕಾಗುತ್ತದೆ. ಇದಕ್ಕಾಗಿ 1 ಚಮಚ ಮೊಸರು ಮತ್ತು 1 ಚಮಚ ಕಡ್ಲೆ ಹಿಟ್ಟನ್ನು ಬೆರೆಸಿ ಅದನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಹಾಗೆ ಬಿಡಿ, ಬಳಿಕ ವೃತ್ತಾಕರವಾಗಿ ಮಸಾಜ್ ಮಾಡಿ. ಕನಿಷ್ಟ 10 ನಿಮಿಷಗಳ ಕಾಲ ಹೀಗೆ ಮಾಡಿ. ನಂತರ ಮುಖವನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ.
ಟೋನರ್: ಇದು ಫೇಶಿಯಲ್ನ ಎರಡನೇ ಹಂತವಾಗಿದೆ. ಇದಕ್ಕಾಗಿ 1 ಚಮಚ ಕಡ್ಲೆ ಹಿಟ್ಟಿಗೆ, ಅರ್ಧ ಚಮಚ ಅರಶಿನ ಪುಡಿ ಮತ್ತು ಸ್ವಲ್ಪ ರೋಸ್ ವಾಟರ್ ಮಿಶ್ರಣ ಮಾಡಿ ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿ 20 ನಿಮಿಷಗಳ ಹಾಗೆನೇ ಬಿಡಿ. ನಂತರ ಶುದ್ಧ ನೀರಿನಿಂದ ಮುಖವನ್ನು ತೊಳೆಯಿರಿ.
ಸ್ಕ್ರಬ್ಬಿಂಗ್: ಫೇಶಿಯಲ್ನಲ್ಲಿ ಸ್ಕ್ರಬ್ಬಿಂಗ್ ಬಹಳ ಮುಖ್ಯ. ಇದರ ಸಹಾಯದಿಂದ ಚರ್ಮದ ಸತ್ತ ಜೀವಕೋಶಗಳನ್ನು ತೆಗೆದುಹಾಕಬಹುದು. ಇದಕ್ಕಾಗಿ 2 ಚಮಚ ಕಡ್ಲೆ ಹಿಟ್ಟಿಗೆ 1 ಚಮಚ ಪುಡಿ ಮಾಡಿದ ಅಥವಾ ರುಬ್ಬಿದ ಓಟ್ಸ್, 2 ಚಮಚ ಅಕ್ಕಿ ಹಿಟ್ಟು ಮತ್ತು 1 ಚಮಚ ಹಸಿ ಹಾಲನ್ನು ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ ನ್ನು ಮುಖಕ್ಕೆ ಅನ್ವಯಿಸಿ, ವೃತ್ತಾಕಾರವಾಗಿ ಮುಖವನ್ನು ನಿಧಾನಕ್ಕೆ ಸ್ಕ್ರಬ್ ಮಾಡಿ. ಪೂರ್ತಿ ಮುಖವನ್ನು ಸ್ಕ್ರಬ್ ಮಾಡಿದ ನಂತರ ಶುದ್ಧ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ.
ಇದನ್ನೂ ಓದಿ: ವರಮಹಾಲಕ್ಷ್ಮೀ ಹಬ್ಬದಂದು ಮನೆಯ ಅಲಂಕಾರ ಹೀಗಿರಲಿ
ಫೇಸ್ ಪ್ಯಾಕ್: ಕಡ್ಲೆ ಹಿಟ್ಟಿನ ಫೇಸ್ ಪ್ಯಾಕ್ ಮಾಡಲು 1 ಚಮಚ ಕಡ್ಲೆ ಹಿಟ್ಟಿಗೆ 1 ಚಮಚ ರೋಸ್ ವಾಟರ್, 1 ಚಮಚ ಹಾಲಿನ ಕೆನೆ ಬೆರೆಸಿ ಪೇಸ್ಟ್ ಮಾಡಿ ಈ ಪ್ಯಾಕ್ನ್ನು ಮುಖದ ಮೇಲೆ ಹಚ್ಚಿ 15 ರಿಂದ 20 ನಿಮಿಷಗಳ ಬಳಿಕ ಬಿಡಿ. ಫೇಸ್ ಪ್ಯಾಕ್ ಒಣಗಿದ ಬಳಿಕ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ. ಹೀಗೆ ಈ ಫೇಶಿಯಲ್ ಸಹಾಯದಿಂದ ಕಾಂತಿಯುತ ತ್ವಚೆಯನ್ನು ಪಡೆಯಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: