ರಾತ್ರಿಯ ಅನ್ನ ಮಿಕ್ಕಿದೆಯೇ? ಈ ಅನ್ನದಿಂದ ತಯಾರಿಸಿ ಗರಿಗರಿಯಾದ ಕಟ್ಲೆಟ್

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 21, 2023 | 7:20 PM

ರಾತ್ರಿ ಅನ್ನ ಮಿಕ್ಕಿದೆ, ಆದರೆ ಅದನ್ನು ವ್ಯರ್ಥ ಮಾಡಲು ನಿಮಗೆ ಇಷ್ಟವಿಲ್ಲವಾ? ಹಾಗಿದ್ದರೆ ಮಿಕ್ಕಿರುವ ಅನ್ನದಲ್ಲಿ ರುಚಿಕರವಾದ ಕಟ್ಲೆಟ್ ತಯಾರಿಸಬಹುದು. ಸಂಜೆಯ ಚಹಾ ಸಮಯಕ್ಕೆ ಹೇಳಿ ಮಾಡಿಸಿದ ಪಾಕವಿಧಾನವಿದು. ಹಾಗಿದ್ದರೆ, ರಾತ್ರಿ ಮಿಕ್ಕಿರುವ ಅನ್ನದಿಂದ ಸುಲಭವಾಗಿ ಕಟ್ಲೆಟ್ ಹೇಗೆ ತಯಾರಿಸುವುದು ಎಂಬುದನ್ನು ನೋಡೋಣ.

ರಾತ್ರಿಯ ಅನ್ನ ಮಿಕ್ಕಿದೆಯೇ? ಈ ಅನ್ನದಿಂದ ತಯಾರಿಸಿ ಗರಿಗರಿಯಾದ ಕಟ್ಲೆಟ್
ಸಾಂದರ್ಭಿಕ ಚಿತ್ರ
Follow us on

ಸಾಮಾನ್ಯವಾಗಿ ಸಂಜೆ ಕಾಫಿ, ಟೀ ಸಮಯದಲ್ಲಿ ಹೆಚ್ಚಿನವರಿಗೆ ಏನಾದರೂ ಗರಿಗರಿಯಾದ ತಿನಿಸು ತಿನ್ನಲು ಇರಲೇಬೇಕು. ನೀವು ಕೂಡಾ ಸಂಜೆಯ ಚಹಾ ಸಮಯಕ್ಕೆ ನಿಮ್ಮ ಮನೆಮಂದಿಗೆ ವಿಶೇಷವಾದ ಏನಾದರೂ ತಯಾರಿಸಬೇಕೆಂದು ಬಯಸುತ್ತೀರಾ? ಹಾಗಿದ್ದರೆ ನೀವು ರಾತ್ರಿ ಮಿಕ್ಕಂತಹ ಅನ್ನದಿಂದ ಗರಿಗರಿಯಾದ ಕಟ್ಲೆಟ್ ತಯಾರಿಸಬಹುದು. ಇದರಿಂದ ಅನ್ನವೂ ವ್ಯರ್ಥವಾಗುವುದಿಲ್ಲ, ಜೊತೆಗೆ ನಿಮ್ಮ ಮನೆಯವರಿಗೆ ರುಚಿಯಾದ ತಿಂಡಿ ಮಾಡಿ ಬಡಿಸಿದ ತೃಪ್ತಿಯು ನಿಮಗಿರುತ್ತದೆ. ವಿಶೇಷವೆಂದರೆ ಈ ಟೇಸ್ಟಿ ಕಟ್ಲೆಟ್ ತಯಾರಿಸಲು ನಿಮಗೆ ಹೆಚ್ಚು ವಸ್ತುಗಳ ಅಗತ್ಯವಿಲ್ಲ. ರಾತ್ರಿ ಉಳಿದ ಅನ್ನದ ಸಹಾಯದಿಂದ ನೀವು ಇದನ್ನು ತುಂಬಾ ಸುಲಭವಾಗಿ ಮಾಡಬಹುದು.

ಈ ಕಟ್ಲೆಟ್ ಮಾಡಲು ಬೇಕಾಗುವ ಸಾಮಾಗ್ರಿಗಳು:

• 2 ಬೌಲ್ ಬೇಯಿಸಿದ ಅನ್ನ

• 1 ಕಪ್ ರವೆ

• 2 ಹಸಿಮೆಣಸಿನಕಾಯಿ

• 1 ಸಣ್ಣಗೆ ಹೆಚ್ಚಿದ ಈರುಳ್ಳಿ

• 1 ಕ್ಯಾರೆಟ್

• ಬೇಯಿಸಿದ ಬಟಾಣಿ

• ಬೇಯಿಸದ ಆಲೂಗಡ್ಡೆ

• ಗರಂ ಮಸಾಲ

• ಅಚ್ಚಖಾರದ ಪುಡಿ

• ರುಚಿಗೆ ತಕ್ಕಷ್ಟು ಉಪ್ಪು

ಇದನ್ನೂ ಓದಿ: ವಾಸ್ತು ನಿಯಮಗಳು ಆಹಾರ ಸೇವನೆಗೂ ಅನ್ವಯಿಸುತ್ತದೆ

ರಾತ್ರಿ ಮಿಕ್ಕಿರುವ ಅನ್ನದಿಂದ ಕಟ್ಲೆಟ್ ತಯಾರಿಸುವುದು ಹೇಗೆ:

ಮೊದಲು ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಸೇರಿಸಿ, ಅದು ಕಂದು ಬಣ್ಣ ತಿರುಗುವವರೆಗೆ ಹುರಿಯಿರಿ. ನಂತರ ಬೇಯಿಸಿದ ಆಲೂಗಡ್ಡೆ, ಸಣ್ಣಗೆ ಹೆಚ್ಚಿದ ಕ್ಯಾರೆಟ್, ಬಟಾಣಿ ಎಲ್ಲವನ್ನು ಸೇರಿಸಿ 3 ರಿಂದ 4 ನಿಮಿಷಗಳ ಕಾಲ ಬೇಯಿಸಿ. ಬಳಿಕ ಒಂದು ಪಾತ್ರೆಯಲ್ಲಿ ಬೇಯಿಸಿದ ಅನ್ನ, ರವೆ, ಗರಂ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು, ಅಚ್ಚಖಾರದ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಅದಕ್ಕೆ ಬೇಯಿಸಿಟ್ಟ ತರಕಾರಿ ಮಿಶ್ರಣವನ್ನು ಸೇರಿಸಿ ಮತ್ತೊಮ್ಮೆ ಎಲ್ಲವನ್ನು ಚೆನ್ನಾಗಿ ಮಿಶ್ರಣಮಾಡಿಕೊಳ್ಳಿ. ನಂತರ ಸಣ್ಣ ಸಣ್ಣ ಕಟ್ಲೆಟ್ ತಯಾರಿಸಿಟ್ಟುಕೊಳ್ಳಿ. ಬಳಿಕ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದು ಕಾದ ಬಳಿಕ ಅದಕ್ಕೆ ಕಟ್ಲೆಟ್ ಹಾಕಿ ಎರಡೂ ಕಡೆ ಕಂದು ಬಣ್ಣ ಆಗುವವರೆಗೆ ಹುರಿದರೆ ರುಚಿಕರವಾದ ಅನ್ನದಿಂದ ತಯಾರಿಸಿದ ಕಟ್ಲೆಟ್ ಸವಿಯಲು ಸಿದ್ಧ. ನೀವು ಈ ಕಟ್ಲೆಟ್ ನ್ನು ಪುದೀನಾ ಚಟ್ನಿ ಅಥವಾ ಸಾಸ್ ನೊಂದಿಗೆ ಸವಿಯಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ