ವೀಳ್ಯದೆಲೆಯಲ್ಲಿರುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 22, 2023 | 3:58 PM

ವೀಳ್ಯದೆಲೆ ಕೇವಲ ಪಾನ್ ಮಾಡಿ ಜಗಿಯುವುದಕ್ಕೆ ಮಾತ್ರವಲ್ಲ, ಇದು ಆರೋಗ್ಯ ಪ್ರಯೋಜನಗಳಿಂದ ಕೂಡಿದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಮಧುಮೇಹವನ್ನು ನಿಯಂತ್ರಿಸುವುದರಿಂದ ಹಿಡಿದು ಒತ್ತಡವನ್ನು ಕಡಿಮೆ ಮಾಡುವವರೆಗೆ, ಈ ಎಲೆಯು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ, ಜೊತೆಗೆ ನಿಮ್ಮ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ.

ವೀಳ್ಯದೆಲೆಯಲ್ಲಿರುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ವೀಳ್ಯದೆಲೆ ಅಥವಾ ಪಾನ್ ಶತಮಾನಗಳಿಂದ ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿನಂತೆ ಈ ವೀಳ್ಯದೆಲೆಯ ಗುಣಗಳು ಕೂಡ ಬಹಳ ಶಕ್ತಿಶಾಲಿಯಾಗಿದೆ. ಈ ಎಲೆ ಲಕ್ಷಾಂತರ ಭಾರತೀಯರ ಹೃದಯ ಗೆದ್ದಿದ್ದು ಮದುವೆಗಳಿಂದ ಹಿಡಿದು ಹಬ್ಬಗಳವರೆಗೆ, ವೀಳ್ಯದೆಲೆ ಪ್ರತಿಯೊಂದು ಆಚರಣೆಯ ಪ್ರಮುಖ ಭಾಗವಾಗಿದೆ. ವೀಳ್ಯದೆಲೆ ಕೇವಲ ಪಾನ್ ಮಾಡಿಕೊಂಡು ಜಗಿಯುವುದಕ್ಕೆ ಮಾತ್ರವಲ್ಲ, ಇದು ಆರೋಗ್ಯ ಪ್ರಯೋಜನಗಳಿಂದ ಕೂಡಿದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಮಧುಮೇಹವನ್ನು ನಿಯಂತ್ರಿಸುವುದರಿಂದ ಹಿಡಿದು ಒತ್ತಡವನ್ನು ಕಡಿಮೆ ಮಾಡುವವರೆಗೆ, ಈ ಎಲೆಯು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ, ಜೊತೆಗೆ ನಿಮ್ಮ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ.

ವೀಳ್ಯದೆಲೆಯ ಉತ್ಪಾದನೆ ಎಷ್ಟು ಗೊತ್ತಾ?

ರಿಸರ್ಚ್ ಗೇಟ್ ಪ್ರಕಾರ, ಭಾರತದಲ್ಲಿ ಪ್ರತಿವರ್ಷ ಸುಮಾರು 15 ರಿಂದ 20 ಮಿಲಿಯನ್ ಜನರು ವೀಳ್ಯದೆಲೆಯನ್ನು ಸೇವಿಸುತ್ತಾರೆ. ಈ ಎಲೆಯನ್ನು ಸಾಂಪ್ರದಾಯಿಕವಾಗಿ ಭಾರತದಲ್ಲಿ 55,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ, ವಾರ್ಷಿಕ ಸುಮಾರು 9000 ಮಿಲಿಯನ್ ರೂಪಾಯಿಗಳ ಉತ್ಪಾದನೆ ಇದೆ. ಸರಾಸರಿ, 66 ಪ್ರತಿಶತದಷ್ಟು ಉತ್ಪಾದನೆಯು ಪಶ್ಚಿಮ ಬಂಗಾಳದಿಂದ ಬರುತ್ತದೆ.

ವೀಳ್ಯದೆಲೆಯ ಪೌಷ್ಠಿಕಾಂಶದ ಮೌಲ್ಯವೆಷ್ಟು?

ವೀಳ್ಯದೆಲೆಯಲ್ಲಿ ಮಧುಮೇಹ ವಿರೋಧಿ, ಹೃದಯರಕ್ತನಾಳದ, ಉರಿಯೂತದ, ಸೋಂಕಿನ ವಿರೋಧಿ ಗುಣಗಳಿವೆ. ಪ್ರತಿ 100 ಗ್ರಾಂ ವೀಳ್ಯದೆಲೆಯಲ್ಲಿ 1.3 ಮೈಕ್ರೋಗ್ರಾಂ ಅಯೋಡಿನ್, 4.6 ಮೈಕ್ರೋಗ್ರಾಂ ಪೊಟ್ಯಾಸಿಯಮ್, 1.9 ಮೋಲ್ ಅಥವಾ 2.9 ಎಂಸಿಜಿ ವಿಟಮಿನ್ ಎ, 13 ಮೈಕ್ರೋಗ್ರಾಂ ವಿಟಮಿನ್ ಬಿ 1 ಮತ್ತು 0.63 ರಿಂದ 0.89 ಮೈಕ್ರೋಗ್ರಾಂ ನಿಕೋಟಿನಿಕ್ ಆಮ್ಲವಿದೆ.

ವೀಳ್ಯದೆಲೆಯ ಆರೋಗ್ಯ ಪ್ರಯೋಜನಗಳೇನು?

ವೀಳ್ಯದೆಲೆಯ ಪ್ರಯೋಜನಗಳು ಮತ್ತು ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

1. ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ: ವೀಳ್ಯದೆಲೆಯನ್ನು ಉತ್ಕರ್ಷಣ ನಿರೋಧಕಗಳ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಇದು ದೇಹದಲ್ಲಿ ಪಿಎಚ್ ಮಟ್ಟವನ್ನು ಸಾಮಾನ್ಯವಾಗಿರಿಸುತ್ತದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಮಲಬದ್ಧತೆಯ ಸಂದರ್ಭಗಳಲ್ಲಿ ಇದರ ಬಳಕೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಹೊಟ್ಟೆಯ ಸಮಸ್ಯೆಗಳಿಂದ ಪರಿಹಾರ ಪಡೆಯಲು, ವೀಳ್ಯದೆಲೆಯನ್ನು ಜಜ್ಜಿ ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದ ನಂತರ, ನೀರನ್ನು ಫಿಲ್ಟರ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

2. ಬಾಯಿಯ ಆರೋಗ್ಯವನ್ನು ಕಾಪಾಡುತ್ತದೆ: ವೀಳ್ಯದೆಲೆಯಲ್ಲಿ ಅನೇಕ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿವೆ, ಇದು ದುರ್ವಾಸನೆ, ಹಲ್ಲುಗಳ ಹಳದಿ ಬಣ್ಣ, ಪ್ಲೇಕ್ ಮತ್ತು ದಂತಕ್ಷಯದಿಂದ ಪರಿಹಾರವನ್ನು ನೀಡುತ್ತದೆ. ಊಟದ ನಂತರ ವೀಳ್ಯದೆಲೆಯನ್ನು ಜಜ್ಜಿ ಸ್ವಲ್ಪ ಪ್ರಮಾಣದಲ್ಲಿ ಪೇಸ್ಟ್ ರೀತಿಯಲ್ಲಿ ಮಾಡಿಕೊಂಡು ಜಗಿಯುವುದರಿಂದ ಬಾಯಿಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಹಲ್ಲುನೋವು, ಒಸಡು ನೋವು, ಊತ ಮತ್ತು ಬಾಯಿಯ ಸೋಂಕಿನಿಂದ ಪರಿಹಾರವನ್ನು ನೀಡುತ್ತದೆ. ವೀಳ್ಯದೆಲೆಯಲ್ಲಿ ನೈಸರ್ಗಿಕ ನಂಜುನಿರೋಧಕ ಗುಣಗಳಿವೆ, ಇದು ಬಾಯಿಯಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯಲು ಮತ್ತು ಬಾಯಿಯ ನೈರ್ಮಲ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಪ್ರಸಿದ್ಧ ಪೌಷ್ಟಿಕ ತಜ್ಞೆ ಶ್ವೇತಾ ಹೇಳುತ್ತಾರೆ.

3. ಉಸಿರಾಟದ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ: ಕೆಮ್ಮು, ಬ್ರಾಂಕೈಟಿಸ್ ಮತ್ತು ಅಸ್ತಮಾದಂತಹ ಉಸಿರಾಟದ ಕಾಯಿಲೆಗಳ ಚಿಕಿತ್ಸೆಗಾಗಿ ಆಯುರ್ವೇದದಲ್ಲಿ ವೀಳ್ಯದೆಲೆಯನ್ನು ವಿಶೇಷವಾಗಿ ಬಳಸಲಾಗುತ್ತದೆ. ಎಲೆಗಳಲ್ಲಿ ಕಂಡುಬರುವ ಸಂಯುಕ್ತಗಳು ಉಸಿರಾಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

4. ಒತ್ತಡವನ್ನು ನಿವಾರಿಸುತ್ತದೆ: ವೀಳ್ಯದೆಲೆಯನ್ನು ಜಗಿಯುವುದರಿಂದ ಒತ್ತಡ ಮತ್ತು ಆತಂಕದಿಂದ ಪರಿಹಾರ ಪಡೆದುಕೊಳ್ಳಬಹುದಾಗಿದೆ. ಇದು ದೇಹ ಮತ್ತು ಮನಸ್ಸನ್ನು ವಿಶ್ರಾಂತಿಗೊಳಿಸುತ್ತದೆ. ಮತ್ತು ವೀಳ್ಯದೆಲೆಯಲ್ಲಿ ಕಂಡುಬರುವ ಫಿನೋಲಿಕ್ ಸಂಯುಕ್ತಗಳು ದೇಹದಿಂದ ಸಾವಯವ ಸಂಯುಕ್ತ ಕ್ಯಾಟೆಕೊಲಮೈನ್ ಅನ್ನು ಬಿಡುಗಡೆ ಮಾಡುತ್ತವೆ. ಆದ್ದರಿಂದ, ವೀಳ್ಯದೆಲೆಯನ್ನು ಜಗಿಯುವುದರಿಂದ, ಆಗಾಗ ಆಗುವ ಮನಸ್ಥಿತಿಯ ಬದಲಾವಣೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

5. ಮಧುಮೇಹವನ್ನು ನಿಯಂತ್ರಿಸುತ್ತದೆ: ವೀಳ್ಯದೆಲೆಯಲ್ಲಿ ಹೈಪರ್ಗ್ಲೈಸೆಮಿಕ್ ವಿರೋಧಿ ಗುಣಗಳಿವೆ, ಇದು ಡಯಾಬಿಟಿಸ್ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ವೀಳ್ಯದೆಲೆಗಳು ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ಹೆಚ್ಚಿಸದಂತೆ ತಡೆಯುತ್ತವೆ. ಟೈಪ್ 2 ಡಯಾಬಿಟಿಸ್ ಇರುವವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದರ ಎಲೆಗಳನ್ನು ಜಗಿಯುವುದರಿಂದ ಅನೇಕ ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು.

ಇದಲ್ಲದೆ, ವೀಳ್ಯದೆಲೆಗಳು ಕೂದಲಿಗೆ ವಿವಿಧ ಪ್ರಯೋಜನಗಳನ್ನು ನೀಡುತ್ತವೆ ಮತ್ತು ಅವು ನಿಮ್ಮ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಕೂದಲು ಉದುರುವುದನ್ನು ತಡೆಯಲು ಈ ಪಾನ್ ಹೇರ್ ಮಾಸ್ಕ್ ಗಳನ್ನು ಬಳಸಲು ಪ್ರಯತ್ನಿಸಿ!

ಇದನ್ನೂ ಓದಿ: ವೀಳ್ಯದೆಲೆ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ತಿಳಿಯಿರಿ

ಉತ್ತಮ ಫಲಿತಾಂಶಕ್ಕಾಗಿ ವೀಳ್ಯದೆಲೆಯನ್ನು ಸೇವಿಸುವುದು ಹೇಗೆ? ಇಲ್ಲಿದೆ ಮಾಹಿತಿ

1. ಮಧುಮೇಹವನ್ನು ನಿಯಂತ್ರಿಸಲು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆಯನ್ನು ಜಗಿಯಬೇಕು.

2. ನೀವು ಒತ್ತಡದಲ್ಲಿದ್ದಾಗ ಸಿಹಿ ಪಾನ್ ತಿನ್ನಬಹುದು. ಏಕೆಂದರೆ ಇದರ ಫಿನೋಲಿಕ್ ಸಂಯುಕ್ತಗಳು ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

3. ಮಲಬದ್ಧತೆಯಿಂದ ಪರಿಹಾರ ಪಡೆದುಕೊಳ್ಳಲು, ವೀಳ್ಯದೆಲೆಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಫಿಲ್ಟರ್ ಮಾಡಿದ ನಂತರ ಈ ನೀರನ್ನು ಕುಡಿಯುವುದರಿಂದ ಮಲಬದ್ಧತೆಯಿಂದ ಪರಿಹಾರ ಸಿಗುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:31 pm, Mon, 21 August 23