ಸಹೋದರರ ಜಗಳದಿಂದ ಬೆಳಕಿಗೆ ಬಂದ ನಾಡ ಬಂದೂಕು ತಯಾರಿಕೆ ಕೃತ್ಯ, ಇಬ್ಬರು ಅರೆಸ್ಟ್
ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ಸಹೋದರರ ನಡುವೆ ಸಾಲ ತೀರಿಸುವ ವಿಚಾರವಾಗಿ ಜಗಳ ನಡೆದಿದೆ. ಈ ಪ್ರಕರಣದಿಂದಾಗಿ ನಾಡ ಬಂದೂಕು ತಯಾರಿ ಕೃತ್ಯ ಬೆಳಕಿಗೆ ಬಂದಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಯಾದಗಿರಿ, ಆಗಸ್ಟ್ 12: ಸಾಲ ತೀತಿಸುವ ವಿಚಾರವಾಗಿ ಸಹೋದರರ ನಡುವೆ ನಡೆದ ಜಗಳದಿಂದಾಗಿ ನಾಡಬಂದೂಕು (Country-Made Gun) ತಯಾರಿಸುವ ಕೃತ್ಯ ಬೆಳಕಿಗೆ ಬಂದು ಇಬ್ಬರು ಬಂಧಿತರಾಗಿರುವ ಘಟನೆ ಯಾದಗಿರಿ (Yadgir) ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ನಡೆದಿದೆ.
ಭೀಮಣ್ಣ ಹಾಗೂ ಕುಟುಂಬಸ್ಥರು ಕಳೆದ ಕೆಲ ವರ್ಷಗಳಿಂದ ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಹೋಗಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಕಳೆದ ಮೂರು ತಿಂಗಳ ಹಿಂದೆ ಕುಟುಂಬಸ್ಥರು ಭೀಮಣ್ಣನ ಮದುವೆ ಮಾಡಲು ಊರಿಗೆ ಬಂದಿದ್ದರು. ಮದುವೆ ಮಾಡಿದ ಬಳಿಕ ಸಾಲವೂ ಆಗಿತ್ತು.
ಇದೇ ಕಾರಣಕ್ಕೆ ಭೀಮಣ್ಣ ಕುಟುಂಬಸ್ಥರು ಭೀಮಣ್ಣನಿಗೆ ಬೆಂಗಳೂರಿಗೆ ಹೋಗಿ ದುಡಿದು ಸಾಲ ಕಟ್ಟುವಂತೆ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಭೀಮಣ್ಣ ನಾನು ಬೆಂಗಳೂರಿಗೆ ಹೋಗಿ ದುಡಿದು ಸಾಲ ಕಟ್ಟಲ್ಲ ಅಂತ ಜಗಳ ಮಾಡಿಕೊಂಡಿದ್ದಾನೆ. ಮತ್ತೆ ಮನೆಯವರು ಒತ್ತಾಯ ಮಾಡಿದ್ದಕ್ಕೆ ಕೈಯಲ್ಲಿ ನಾಡ ಬಂದೂಕು ಹಿಡಿದುಕೊಂಡು ಬಂದ ಭೀಮಣ್ಣ ಕುಟುಂಬಸ್ಥರಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಭೀಮಣ್ಣ ನಾಡ ಬಂದೂಕು ಹಿಡಿದುಕುಟುಂಬಸ್ಥರಿಗೆ ಬೆದರಿಕೆ ಹಾಕುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮಧ್ಯಪ್ರವೇಶಿಸಿದಾಗ ಭೀಮಣ್ಣ ಬಂದೂಕನ್ನು ಬೇರೆ ಕಡೆ ಎಸೆದು ಸ್ಥಳದಿಂದ ಪರಾರಿಯಾಗಿದ್ದ. ಪ್ರಕರಣ ಸಂಬಂಧ ಭೀಮಣ್ಣನ ಸಹೋದರ ಮೌನೇಶ್ ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಭೀಮಣ್ಣನ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಭೀಮಣ್ಣನನ್ನ ಬಂಧಿಸಿದ್ದಾರೆ.
ಇದನ್ನೂ ಓದಿ: ತಾಂಡಾ ಗ್ರಾಮಕ್ಕೆ ತೆರಳಿ ಮಕ್ಕಳಿಗೆ ಕನ್ನಡ ಪಾಠ ಮಾಡಿದ ಯಾದಗಿರಿ ಜಿಲ್ಲಾಧಿಕಾರಿ ಮೇಡಂ!
ವಿಚಾರಣೆ ವೇಳೆ, ಭೀಮಣ್ಣ ನಾಡ ಬಂದೂಕುಗಳನ್ನು ತಯಾರಿಸುತ್ತಿದ್ದ ವಿಚಾರ ತಿಳಿದುಬಂದಿದೆ. ಸ್ಥಳೀಯವಾಗಿ ಸಿಗುವ ಕಚ್ಚಾ ವಸ್ತುಗಳಿಂದ ಮದ್ದು ತಯಾರಿಸುತ್ತಿದ್ದ. ಅಲ್ಲದೆ, ಬಾಗಲಕೋಟೆ ಜಿಲ್ಲೆಯ ಮುದೋಳ್ ಪಟ್ಟಣದ ದೇವಲಾ ಎಂಬಾತನಿಂದ ಬಂದೂಕು ತಯಾರಿಸಲು ಬೇಕಾವ ವಸ್ತುಗಳನ್ನ ಖರೀದಿ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
ಗ್ರಾಮದ ಹೊರ ಭಾಗದ ಬೆಟ್ಟದಲ್ಲಿ ಕುಳಿತುಕೊಂಡು ಸಿಂಗಲ್ ಬ್ಯಾರಲ್ನ ನಾಡ ಬಂದೂಕು ತಯಾರು ಮಾಡುವ ಕೆಲಸ ಮಾಡುತ್ತಿದ್ದ ಎಂಬ ವಿಚಾರ ಬಹಿರಂಗವಾಗಿದೆ. ಹೀಗೆ ತಯಾರಿಸಿದ ಬಂದೂಕುಗಳನ್ನು ತಲಾ ಒಂದಕ್ಕೆ 25 ರಿಂದ 30 ಸಾವಿರಕ್ಕೆ ಮಾರಾಟ ಮಾಡಲು ಪ್ಲಾನ್ ಕೂಡ ಮಾಡಿಕೊಂಡಿದ್ದನಂತೆ. ಇದೆ ಗ್ರಾಮದ ಮಲ್ಲಿಕಾರ್ಜುನ್ ಎಂಬ ಕುರಿಗಾಯಿಗೆ ಈ ಭೀಮಣ್ಣ ತಾನು ತಯಾರು ಮಾಡಿದ ಬಂದೂಕು ಮಾರಾಟ ಮಾಡಿದ್ದನು.
ಈ ವಿಚಾರವೂ ವಿಚಾರಣೆ ವೇಳೆ ಬಾಯಿಬಿಟ್ಟಿದ್ದರಿಂದ ಪೊಲೀಸರು ಬಂದೂಕಿನ ಸಮೇತವಾಗಿ ಮಲ್ಲಿಕಾರ್ಜುನ್ನನ್ನೂ ಬಂಧಿಸಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣವನ್ನು ಇಷ್ಟಕ್ಕೆ ಬಿಡದೆ ಬಂದೂಕು ತಾಯಾರಿ ಮಾಡುವುದರ ಹಿಂದೆ ಯಾರಿದ್ದಾರೆ ಎಂಬ ಸತ್ಯವನ್ನು ಬಯಲಿಗೆಳೆಯಬೇಕಾಗಿದೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ