ಅಂದಿನ ಬಿಜಾಪುರ ಹಾಗೂ ಇಂದಿನ ವಿಜಯಪುರ ಒಂದು ಕಾಲದಲ್ಲಿ ದೊಡ್ಡ ಸಾಮ್ರಾಜ್ಯವಾಗಿತ್ತು. ಆದಿಲ್ ಶಾಹಿ ರಾಜರುಗಳು (Bijapur Adil Shahi history) ವಿಜಯಪುರ ಸಾಮ್ರಾಜ್ಯವನ್ನು ಆಳಿದ್ದಾರೆ. 1490 ರಿಂದ 1686 ರವರೆಗೆ ಅಂದರೆ ಹೆಚ್ಚು ಕಮ್ಮಿ 200 ವರ್ಷಗಳವರೆಗೆ ವಿಜಯಪುರ ಸಾಮ್ರಾಜ್ಯದ ಅಧಿಪತಿಗಳಾಗಿ ಆದಿಲ್ ಶಾಹಿ ರಾಜರುಗಳು ರಾಜ್ಯಭಾರ ಮಾಡಿದ್ದಾರೆ. ಯೂಸಫ್ ಆದಿಲ್ ಶಾಹ ಆದಿಲ್ ಶಾ ಸಾಮ್ರಾಜ್ಯದ ಸಂಸ್ಥಾಪಕ. ಬಹುಮನಿ ರಾಜ್ಯ ನಾಶವಾದ ಬಳಿಕ ಉದಯವಾದ ಹಾಗೂ ವಿಜಯನಗರ ಸಾಮ್ರಾಜ್ಯ ಅಳಿದ ಮೇಲೆ ಉತ್ತುಂಗಕ್ಕೆ ಏರಿದ ಬಿಜಾಪುರ (ವಿಜಯಪುರ) ಸಾಮ್ರಾಜ್ಯ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಇರಿಸಿದೆ. ಮುಖ್ಯವಾಗಿ ವಿಶ್ವವಿಖ್ಯಾತ ಗೋಲಗುಮ್ಮಟ, ಬಾರಾ ಕಮಾನ್, ಇಬ್ರಾಹಿಂ ರೋಜಾ, ಬೇಸಿಗೆ ಅರಮನೆ, ಆನಂದ ಮಹಲ್, ಗಗನ್ ಮಹಲ್, ಚೀನಿ ಮಹಲ್, ಸಂಗೀತ್ ಮಹಲ್, ಜಾಮಿಯಾ ಮಸೀದಿ, ಉಪ್ಪಲಿ ಬುರ್ಜ್, ಹತ್ತಾರು ಬಾವಿಗಳು, ಕೆರೆಕಟ್ಟೆಗಳು. ಭೂಮಿಯಾಳದ ಸುರಂಗಗಳ ಮೂಲಕ ಆಗಿನ ಕಾಲದಲ್ಲೇ ನೀರು ಸರಬರಾಜು ಮಾಡುವ ಯೋಜನೆ ಅನುಷ್ಟಾನ, ನವರಸಪುರ ಉತ್ಸವ ಹೀಗೆ ಒಂದೇ ಎರಡೇ ನೂರಾರು ಕೆಲಸ ಕಾರ್ಯ- ಸ್ಮಾರಕಗಳ ನಿರ್ಮಾಣ, ನೆಲ ಜಲದ ಸಂರಕ್ಷಣೆ ಸೇರಿದಂತೆ ಇತರೆ ಕಾರ್ಯಗಳನ್ನು ಮಾಡಿದ ಕೀರ್ತಿ ಆದಿಲ್ ಶಾಹಿ ರಾಜರುಗಳಿಗೆ ಸಲ್ಲುತ್ತದೆ. ಇದೆಲ್ಲದರ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಆದಿಲ್ ಶಾಹಿಗಳು ಅಪಾರ ಸೇವೆ ಮಾಡಿದ್ದಾರೆ. ತಮ್ಮ ರಾಜ್ಯದ ಇತಿಹಾಸವನ್ನು ದಾಖಲೀಕರಣ ಮಾಡುವುದರೊಂದಿಗೆ ಮುಂದಿನ ಪೀಳೆಗೆಗೆ ಆದಿಲ್ ಶಾಹಿಗಳ ರಾಜ್ಯಭಾರದ ಇತಿಹಾಸ ಸಿಗುವಂತೆ ಮಾಡಿದ್ದಾರೆ. ಆದಿಲ್ ಶಾಹಿಗಳ ಇತಿಹಾಸ ಇಲ್ಲಿಯವರೆಗೆ ಪರ್ಶಿಯನ್ ಅರೇಬಿಕ್ ಹಾಗೂ ಧಖಣಿ ಭಾಷೆಯ ಹಸ್ತ ಪ್ರತಿಗಳಲ್ಲಿ ( book release) ಇತ್ತು. ಅಂತಹ ಹಸ್ತ ಪ್ರತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿರುವ ಕೆಲಸ ಸದ್ದಿಲ್ಲದೇ ಆಗಿದೆ.
ಆದಿಲ್ ಶಾಹಿ ಇತಿಹಾಸ ಕನ್ನಡಕ್ಕೆ ಅನುವಾದ:
ಪರ್ಶಿಯನ್, ಅರೇಬಿಕ್ ಹಾಗೂ ಧಖಣಿ ಭಾಷೆಯ ಹಸ್ತ ಪ್ರತಿಗಳಲ್ಲಿ ಇದ್ದ ಆದಿಲ್ ಶಾಹಿಗಳ ಇತಿಹಾಸವನ್ನು ಕನ್ನಡಕ್ಕೆ ಅನುವಾದಿಸುವ ಕಾರ್ಯವನ್ನು ನಗರದ ಬಿ ಎಲ್ ಡಿ ಇ ಸಂಸ್ಥೆಯ ಫ ಗು ಹಳಕಟ್ಟಿ ಸಂಶೋಧನಾ ಕೇಂದ್ರದಿಂದ ಮಾಡಲಾಗಿದೆ. 2014 ರಿಂದಲೇ ಆರಂಭವಾಗಿದೆ. ರಾಜ್ಯ ಸರ್ಕಾರದ 75 ಲಕ್ಷ ರೂಪಾಯಿ ಸಹಾಯ ಧನ ಹಾಗೂ 45 ಲಕ್ಷ ರೂಪಾಯಿ ಬಿ ಎಲ್ ಡಿ ಇ ಸಂಸ್ಥೆಯ ಫ ಗು ಹಳಕಟ್ಟಿ ಸಂಶೋಧನಾ ಕೇಂದ್ರದಿಂದ ವಿನಿಯೋಗಿಸಿ ಒಟ್ಟು 1.10 ಕೋಟಿ ರೂಪಾಯಿ ವೆಚ್ಚದಲ್ಲಿ ಆದಿಲ್ ಶಾಹಿ ರಾಜರುಗಳ ಇತಿಹಾಸವನ್ನು ಕನ್ನಡಕ್ಕೆ ಭಾಷಾಂತರ (Kannada Translation) ಮಾಡುವ ಕಾಯಕವಾಗಿದೆ.
2014 ರಲ್ಲಿ ಖ್ಯಾತ ಸಂಶೋಧಕ, ದಿವಂಗತ ಡಾ ಎಂ ಎಂ ಕಲಬುರಗಿ ಅವರ ಆಧ್ಯಕ್ಷತೆಯಲ್ಲಿ ಆದಿಲ್ ಶಾಹಿ ರಾಜರುಗಳ ಇತಿಹಾಸವನ್ನು ಕನ್ನಡಕ್ಕೆ ಭಾಷಾಂತರ ಮಾಡುವ ಕಾರ್ಯ ಆರಂಭವಾಯಿತು. 20 ಕ್ಕೂ ಆಧಿಕ ವಿದ್ವಾಂಸರು ಹಾಗು ಭಾಷಾಂತರ ಮಾಡುವರು ಅನುವಾದ ಕಾರ್ಯದಲ್ಲಿ ತೊಡಗಿದ್ದರು. ಹೀಗೆ ವೇಗವಾಗಿ ನಡೆಯುತ್ತಿದ್ದ ಭಾಷಾಂತರ ಕಾರ್ಯಕ್ಕೆ ಡಾ ಎಂ ಎಂ ಕಲಬುರ್ಗಿ ಅವರ ನಿಧನ ತಡೆಯನ್ನು ಹಾಕಿದಂತಾಗಿತ್ತು. ಕಲಬುರ್ಗಿ ಅವರ ನಿಧನದ ಬಳಿಕ ಭಾಷಾಂತರ ಕಾರ್ಯದ ನಿರ್ದೇಶಕ ಹಾಗೂ ಸಂಪಾದಕರಾಗಿದ್ದ ಡಾ ಕೃಷ್ಣ ಕೋಲ್ಹಾರ ಕುಲಕರ್ಣಿ ಅವರ ಹೆಗಲಿಗೆ ಹೆಚ್ಚಿನ ಜವಾಬ್ದಾರಿ ಬಿದ್ದಿತ್ತು.
ದೇಶದ ವಿವಿಧ ಭಾಗಗಳಲ್ಲಿ ಹರಿದು ಹಂಚಿಹೋಗಿದ್ದ ಆದಿಲ್ ಶಾಹಿ ಇತಿಹಾಸದ ಹಸ್ತ ಪ್ರತಿಗಳು :
ಹಸ್ತ ಪ್ರತಿಗಳಲ್ಲಿ ಅಡಗಿದ್ದ ಹಾಗೂ ಪರ್ಶಿಯನ್ ಅರೇಬಿಕ್ ಹಾಗೂ ಧಖಣಿ ಭಾಷೆಯಲ್ಲಿದ್ದ ಆದಿಲ್ ಶಾಹಿಗಳ ಇತಿಹಾಸ ಒಂದು ಕಡೆ ಅಂತಾ ಇರಲಿಲ್ಲ. ದೇಶದ ವಿವಿಧ ಭಾಗಗಳಲ್ಲಿ ಹರಿದು ಹಂಚಿಹೋಗಿತ್ತು. ಕಾರಣ ಅಷ್ಟೊಂದು ಸಲೀಸಾಗಿ ಹಸ್ತಪ್ರತಿಗಳನ್ನು ಒಂದೆಡೆ ಕ್ರೋಡೀಕರಿಸುವ ಕೆಲಸ ಸರಳವಾಗಿರಲಿಲ್ಲ. ಡಾ ಕೃಷ್ಣ ಕೋಲ್ಹಾರ ಕುಲಕರ್ಣಿ ಅವರ ನೇತೃತ್ವದಲ್ಲಿ ಹೈದರಾಬಾದಿನ ಸಾಲಾರಜಂಗ ವಸ್ತು ಸಂಗ್ರಹಾಲಯ, ಆಂಧ್ರಪ್ರದೇಶ, ಪುಣೆ, ಔರಂಗಾಬಾದ ಆರ್ಖೈವ್ಸ್, ಭಾರತ ಇತಿಹಾಸ ಸಂಶೋಧಕ ಮಂಡಳಿ ಪುಣೆ, ರಾಷ್ಟ್ರೀಯ ಪತ್ರಾಗಾರ ದೆಹಲಿ, ಭಾರತೀಯ ಪುರಾತತ್ವ ಇಲಾಖೆ ವಸ್ತು ಸಂಗ್ರಹಾಲಯಗಳು ಸೇರಿದಂತೆ ವರುಷಾನುಗಟ್ಟಲೆ ಸುತ್ತಾಡಿ ಮೂಲ ಪರ್ಶಿಯನ್, ಅರೇಬಿಕ್, ಧಖಣಿ ಉರ್ದು ಹಸ್ತಪ್ರತಿಗಳನ್ನು ಗುರುತಿಸಿ ಅವುಗಳ ನಕಲುಗಳನ್ನು ಸಂಗ್ರಹಿಸಲಾಯಿತು. ಜೊತೆಗೆ ಉರ್ದುವಿನಲ್ಲಿ, ಇಂಗ್ಲೀಷಿನಲ್ಲಿ, ಮರಾಠಿಯಲ್ಲಿ ಅನುವಾದವಾಗಿರುವ ವಿಶೇಷವಾಗಿ ಫರ್ಮಾನುಗಳನ್ನು ಕೆಲವು ಕೃತಿಗಳನ್ನು ಸಂಗ್ರಹಿಸಲಾಯಿತು. ಇತಿಹಾಸದ ಹಸ್ತಪ್ರತಿಗಳ ಪೋಟೋಗ್ರಫಿ ಮಾಡಿಕೊಂಡು ಬರಲಾಗಿದೆ.
ಫೊಟೋಗ್ರಫಿಯಿಂದ ಅನುವಾದ ಕಾರ್ಯ ಆರಂಭ :
ದೇಶದ ವಿವಿಧೆಡೆಯ ಪುರಾತತ್ವ ಇಲಾಖೆ ಹಾಗೂ ಮ್ಯೂಸಿಯಂಗಳಲ್ಲಿ ಹಸ್ತಪ್ರತಿಗಳಲ್ಲಿದ್ದ ಆದಿಲ್ ಶಾಹಿಗಳ ಇತಿಹಾಸವನ್ನು ಅರ್ಹ ವಿದ್ವಾಂಸರ ಮೂಲಕ ಭಾಷಾಂತರ ಮಾಡುವ ಕಾರ್ಯ ಆರಂಭವಾಯಿತು. ಮೂಲ ಹಸ್ತಪ್ರತಿಗಳ ಪೋಟೋಗಳನ್ನು ಮಾಡಿಟ್ಟುಕೊಳ್ಳಲಾಗಿತ್ತು. ಅವುಗಳ ಆಧಾರದಲ್ಲಿ ಮೂಲ ಹಸ್ತಪ್ರತಿಗಳಲ್ಲಿ ದಾಖಲಾಗಿದ್ದ ಆದಿಲ್ ಶಾಹಿಗಳ ಇತಿಹಾಸವನ್ನು ಕನ್ನಡಕ್ಕೆ ಭಾಷಾಂತರ ಮಾಡಲಾಗಿದೆ. ಹಸ್ತಪ್ರತಿಗಳನ್ನು ಬಿಟ್ಟು ಬೇರೆ ಯಾವುದೇ ಗ್ರಂಥವಾಗಲಿ, ಪುಸ್ತಕ ಸೇರಿದಂತೆ ಬೇರೆ ಯಾವುದೇ ವಿಷಯವನ್ನು ತೆಗೆದುಕೊಂಡಿಲ್ಲಾ ಎಂದು ಅನುವಾದಕರು ಹೇಳಿದ್ದಾರೆ.
ಆದಿಲ್ ಶಾಹಿಗಳ ಇತಿಹಾಸ ಒಟ್ಟು 22 ಸಂಪುಟ :
ಕಳೆದ 2014 ರಿಂದ ಆರಂಭವಾದ ಆದಿಲ್ ಶಾಹಿಗಳ ಇತಿಹಾಸ ಭಾಷಾಂತರ ಕಾರ್ಯ ಇದೀಗ ಮುಕ್ತಾಯವಾಗಿದೆ. ಒಟ್ಟು 19 ಸಂಪುಟಗಳು ಕನ್ನಡದಲ್ಲಿ, 2 ಸಂಪುಟ ಇಂಗ್ಲೀಷ್ ನಲ್ಲಿ, 1 ಸಂಪುಟ ಉರ್ದು ಭಾಷೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇದರ ಜೊತೆಗೆ ಆದಿಲ್ ಶಾಹಿಗಳ ಇತಿಹಾಸ ಕನ್ನಡ ಭಾಷೆಗೆ ಮಾತ್ರ ಸೀಮಿತವಾಗಬಾರದು ಹಾಗೂ ಜನರ ಬೇಡಿಕೆಯ ಹಿನ್ನೆಲೆಯಲ್ಲಿ ಈ ಎಲ್ಲ ಕೃತಿಗಳನ್ನು ಇಂಗ್ಲಿಷ್ ಮತ್ತು ಉರ್ದು ಭಾಷೆಗಳಿಗೂ ಅನುವಾದ ಮಾಡಲು ಸಂಶೋಧನ ಕೇಂದ್ರ ನಿರ್ಧರಿಸಿದೆ. ಪ್ರಾಯೋಗಿಕವಾಗಿ ತಾರೀಖೆ ಅಲಿ ಆದಿಲಶಾಹ ಉರ್ದುವಿನಲ್ಲೂ, ಕರ್ನಾಟಕದಲ್ಲಿಯ ಪರ್ಶಿಯನ್ ಅರೇಬಿಕ್ ಮತ್ತು ಉರ್ದು ಭಾಷೆಗಳ ಶಾಸನಗಳು ಮತ್ತು ತಜಕೀರಾತ್ ಉಲ್ ಮುಲ್ಕ ಎಂಬ ಎರಡು ಪುಸ್ತಕಗಳನ್ನು ಇಂಗ್ಲೀಷಿನಲ್ಲಿ ಪ್ರಕಟಿಸಲಾಗಿದೆ.
ನಾಳೆ ಬೆಂಗಳೂರಿನಲ್ಲಿ ( ಡಿಸೆಂಬರ್ 18 ) ಆದಿಲ್ ಶಾಹಿಗಳ ಇತಿಹಾಸ ಸಂಪುಟಗಳ ಬಿಡುಗಡೆ :
ವಿಜಯಪುರ ಜಿಲ್ಲೆಯ ಬಿ ಎಲ್ ಡಿ ಇ ಸಂಸ್ಥೆಯ ವಚನ ಪಿತಾಮಹ ಡಾ. ಫ ಗು ಹಳಕಟ್ಟಿ ಸಂಶೋಧನ ಕೇಂದ್ರ ಕನ್ನಡದಲ್ಲಿ ಆದಿಲ್ ಶಾಹಿ ಇತಿಹಾಸ ಸಂಪುಟಗಳನ್ನು ಹೊರತಂದಿದೆ. ನಾಳೆ ಇದೇ ಡಿಸೆಂಬರ್ 18 ರಂದು ರವಿವಾರ ಬೆಂಗಳೂರಿನ ಬಸವ ಸಮಿತಿ ಸಭಾಂಗಣದಲ್ಲಿ ವಿದೇಶಾಂಗ ಖಾತೆ ಮಾಜಿ ಸಚಿವ ಸಲ್ಮಾನ ಖುರ್ಶಿದ್ ಅವರು ಆದಿಲ್ ಶಾಹಿಗಳ ಇತಿಹಾಸ ಸಂಪುಟಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಖ್ಯಾತ ಅಂಕಣಕಾರ ಸುಧೀಂದ್ರ ಕುಲಕರ್ಣಿ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಆಧ್ಯಕ್ಷ ಎಂ ಬಿ ಪಾಟೀಲ್ ಉಪಸ್ಥಿತಿಯಾಗಲಿದ್ದು, ಕೇಂದ್ರ ಮಾಜಿ ಸಚಿವ ಮತ್ತು ರಾಜ್ಯಸಭೆಯ ಉಪ ಸಭಾಪತಿಯಾಗಿದ್ದ ಕೆ. ರಹಮಾನ್ ಖಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಜಯಪುರ ಸಾಮ್ರಾಜ್ಯವನ್ನು ಆಳಿಯ ಆದಿಲ್ ಶಾಹಿಗಳ ಇತಿಹಾಸವನ್ನು ಕನ್ನಡಕ್ಕೆ ಅನುವಾದ ಕಾರ್ಯವನ್ನು ನಮ್ಮ ಸಂಸ್ಥೆಯ ಡಾ. ಫ ಗು ಹಳಕಟ್ಟಿ ಸಂಶೋಧನಾ ಕೇಂದ್ರದಿಂದ ಮಾಡಿದ್ದು ಸಂತೋಷದ ಸಂಗತಿ. ಹಲವಾರು ವರ್ಷಗಳಿಂದ ಫ ಗು ಹಳಕಟ್ಟಿ ಸಂಶೋಧನಾ ಕೇಂದ್ರ ಅಪರೂಪದ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಡಾ. ಫ ಗು ಹಳಕಟ್ಟಿ ಅವರ ಸಮಗ್ರ ಸಾಹಿತ್ಯವನ್ನು 15 ಸಂಪುಟಗಳಲ್ಲಿ ಸಂಪಾದಿಸಿ ಪ್ರಕಟಿಸಲಾಗಿದೆ. ಇದೀಗ ಆದಿಲ್ ಶಾಹಿಗಳ ಇತಿಹಾಸ ಕನ್ನಡಕ್ಕೆ ಅನುವಾದಿಸೋ ಕೆಲಸ ಮಾಡಲಾಗಿದೆ. ಇದೇ ರೀತಿ ಮತ್ತಷ್ಟು ಕಾರ್ಯಗಳು ನಮ್ಮ ಸಂಸ್ಥೆಯಿಂದ ನಡೆಯುತ್ತವೆ -ಎಂ ಬಿ ಪಾಟೀಲ್, ಅಧ್ಯಕ್ಷ ಬಿ ಎಲ್ ಡಿ ಇ ಸಂಸ್ಥೆ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಆಧ್ಯಕ್ಷ
ಮಧ್ಯಯುಗೀನ ಭಾರತದ ಚರಿತ್ರೆಯಲ್ಲಿ ವಿಜಯಪುರದ ಆದಿಲಶಾಹಿಗಳ ಪಾತ್ರ ಬಹು ದೊಡ್ಡದಾಗಿದೆ. ದಕ್ಷಿಣ ಭಾರತದ ಬಹುಪಾಲು ಪ್ರದೇಶವನ್ನು ಈ ಬಾದಷಹರು ವಿಜಯಪುರ ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದರು. ಇಂದಿನ ಅಖಂಡ ಕರ್ನಾಟಕವನ್ನು ಅವರು ಸುಮಾರು ಒಂದು ಶತಮಾನದಷ್ಟು ಕಾಲ ತಮ್ಮ ಅಂಕಿತದಲ್ಲಿ ಇಟ್ಟುಕೊಂಡಿದ್ದರು. ಹೀಗಾಗಿ ಆದಿಲ ಶಾಹಿಗಳ ಚರಿತ್ರೆಯನ್ನು ಅಭ್ಯಸಿಸದೆ ಮಧ್ಯಯುಗೀನ ಭಾರತದ ಅದರಲ್ಲೂ ಕರ್ನಾಟಕದ ಚರಿತ್ರೆ ಪೂರ್ಣಗೊಳ್ಳುವುದಿಲ್ಲ. ನಾಡಿನ ವಿಶ್ವವಿದ್ಯಾಲಯಗಳು, ಭಾರತೀಯ ಇತಿಹಾಸ ಅನುಸಂಧಾನ ಇತ್ಯಾದಿ ಸಂಸ್ಥೆಗಳು ಇತಿಹಾಸದ ಕೆಲಸ ಮಾಡುತ್ತಿದ್ದರೂ ಬಿಜಾಪುರ ಇತಿಹಾಸದ ವಿಷಯದಲ್ಲಿ ಆಗಬೇಕಾದಷ್ಟು ಆಗಿಲ್ಲ. ವಿಜಯಪುರ ಸಾಮ್ರಾಜ್ಯವನ್ನು ಆಳಿದ ಆದಿಲ್ ಶಾಹಿ ರಾಜರುಗಳು ಸರ್ವ ಧರ್ಮ ಸಹಿಷ್ಟುಗಳಾಗಿದ್ದರು. ಯಾವುದೇ ಮತಾಂತರದಂತ ಕಾರ್ಯ ಮಾಡಲಿಲ್ಲಾ, ಸಮಾನತೆಯನ್ನು ಬಿತ್ತಿ ಬೆಳೆದಿದ್ದರು -ಕೃಷ್ಣ ಕೊಲ್ಹಾರ ಕುಲಕರ್ಣಿ, ನಿರ್ದೆಶಕ ಹಾಗೂ ಸಂಪಾದಕ ಆದಿಲ್ ಶಾಹಿ ಇತಿಹಾಸ
ವರದಿ: ಅಶೋಕ ಯಡಳ್ಳಿ, ಟಿವಿ 9, ವಿಜಯಪುರ