ವಿಜಯಪುರ, ಆ.9: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹರಿಂದ್ರಾಳ ಗ್ರಾಮದ ಬಳಿ ಆಲಮಟ್ಟಿ(Almatti) ಎಡದಂಡೆ ಮುಖ್ಯ ಕಾಲುವೆ ಒಡೆದು ಬರೊಬ್ಬರಿ 200 ಎಕರೆಗೂ ಹೆಚ್ಚು ಜಮೀನಿಗೆ ಕಾಲುವೆಯ ನೀರು ನುಗ್ಗಿದೆ. ಈ ಹಿನ್ನಲೆ ಅಪಾರ ಪ್ರಮಾಣದ ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳಿಗೆ ಹಾನಿಗೊಳಗಾಗಿದ್ದು, ಸ್ಥಳಕ್ಕೆ ಕೆಬಿಜೆಎನ್ಎಲ್(Krishna Bhagya Jala Nigam Ltd) ಆಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಕಾಲುವೆ ಒಡೆದ ಸ್ಥಳದಲ್ಲಿ, ಕೂಡಲೇ ಜೆಸಿಬಿ ಮೂಲಕ ಮಣ್ಣು ಹಾಕಿ ಮುಚ್ಚಲು ವಿಫಲ ಯತ್ನ ನಡೆಸಿದ್ದಾರೆ. ಇನ್ನು ಕಳಪೆ ಕಾಮಗಾರಿಯೇ ಕಾಲುವೆ ಒಡೆಯಲು ಕಾರಣವೆಂದು ಸ್ಥಳೀಯರು ಆರೋಪಿಸಿದ್ದು, ಕೂಡಲೇ ಕಾಲುವೆ ದುರಸ್ಥಿ ಮಾಡಿ, ಜಮೀನಿಗೆ ನೀರು ನುಗ್ಗಿ ಹಾಳಾದ ಬೆಳೆಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಹೌದು, ಇಂತಹ ಘಟನೆ ಇದೇ ಮೊದಲಲ್ಲ. ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಲೂಟಗೇರಿ ಗ್ರಾಮದ ಬಳಿ 2018 ರ ಜುಲೈ 24 ರಂದು ಕಾಲುವೆ ಒಡೆದು 300 ಎಕರೆ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆಗಳಿಗೆ ಹಾನಿಯಾಗಿತ್ತು. ಅಂದು ಆಲಮಟ್ಟಿ ಎಡದಂಡೆಯ ಮುಖ್ಯ ಕಾಲುವೆಗೆ ನೀರು ಬಿಡಲಾಗಿತ್ತು. ನೀರಿನ ಹರಿವು ಹೆಚ್ಚಾಗಿದ್ದರಿಂದ ಒಂದು ಬದಿಯ ದಂಡೆ ಒಡೆದು, ರೈತರ ಜಮೀನುಗಳಿಗೆ ನೀರು ನುಗ್ಗಿತ್ತು.
ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ನಿರ್ಮಾಣ ಮಾಡಿರುವ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರದ ಇಂದಿನ ನೀರಿನ ಮಟ್ಟ 519.55 ಮೀಟರ್ ಇದ್ದು, ಗರಿಷ್ಟ ಮಟ್ಟ :519.60 ಮೀಟರ್ ಇದೆ. ಇನ್ನು ಒಳಹರಿವು : 48,121 ಕ್ಯೂಸೆಕ್ ಹಾಗೂ ಹೊರ ಹರಿವು : 34,231 ಕ್ಯೂಸೆಕ್ ಇದೆ. 123 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿರುವ ಡ್ಯಾಂನಲ್ಲಿ ಇದೀಗ 122.132 ಟಿಎಂಸಿ ನೀರು ಸಂಗ್ರಹವಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ