ಸಮೃದ್ಧಿಯ ಸಂಕೇತ! ವಿಜಯಪುರ ಜಿಲ್ಲೆಯ 200 ಕ್ಕೂ ಆಧಿಕ ಕೆರೆಗಳಿಗೆ ನೀರು ಭರ್ತಿ ಮಾಡಲಾಗುತ್ತಿದೆ, ರೈತನಿಗೆ ಖುಷಿ! ವರದಿ ಇಲ್ಲಿದೆ ನೋಡಿ

| Updated By: ಸಾಧು ಶ್ರೀನಾಥ್​

Updated on: Aug 10, 2023 | 4:04 PM

2016 ರಲ್ಲಿ ಕೆರೆಗಳಿಗೆ ನೀರು ತುಂಬಿಸೋ ಕೆಲಸ ಜಿಲ್ಲೆಯಲ್ಲಿ ಆರಂಭವಾಯಿತು. ಅಂದಿನ ಜಲ ಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಈ ನಿಟ್ಟಿನಲ್ಲಿ ಕೆಲಸ ಕಾಮಗಾರಿ ಆರಂಭಿಸಿ ಕೆರೆಗಳಿಗೆ ನೀರು ಬಿಡಿಸಿದ್ದರು. ಮಳೆಯಾಗದೇ ಇದ್ದರೂ ಕೆರೆಗಳಿಗೆ ನೀರು ಹರಿದು ಬಂದು ಎಲ್ಲೆಡೆ ಅಂತರ್ಜಲ ಹೆಚ್ಚಿದೆ. ಮಳೆಯ ಕೊರತೆಯ ನಡುವೆ ಕೆಲ ಬೆಳೆಗಳನ್ನಾದರೂ ಬೆಳೆಯಲು ಮುಂದಾಗಿದ್ದಾರೆ.

ಬರದ ನಾಡು ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡ ಜಿಲ್ಲೆ ವಿಜಯಪುರ (Vijayapur district ). ಆಲಮಟ್ಟಿ ಡ್ಯಾಂ ಇದ್ದರೂ ಜಲ ವಿವಾದದ ಕಾರಣ ಇನ್ನೂ ಸಂಪೂರ್ಣವಾಗಿ ನೀರಾವರಿ ಮಾಡಿಕೊಂಡು ನೀರನ್ನು ಬಳಕೆ ಮಾಡಿಕೊಳ್ಳದಂತಾಗಿದೆ. ಪ್ರತಿ ವರ್ಷ ಇಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತದೆ. ಕೆಲವೊಮ್ಮೆ ಪ್ರವಾಹವನ್ನೇ ಸೃಷ್ಟಿಸಿ ಎಲ್ಲವನ್ನೂ ಆಪೋಷಣ ತೆಗೆದುಕೊಳ್ಳುತ್ತದೆ. ಇಷ್ಟರ ಮಧ್ಯೆ ಕೃಷಿಯನ್ನೇ ನಂಬಬಿದ್ದಾರೆ ಹೆಚ್ಚಿನ ಜನರು. ಈ ಬಾರಿಯೂ ಮಳೆಯ ಪ್ರಮಾಣ ಕಡಿಮೆಯಾದರೂ ರೈತರು ಆತಂಕ ಪಡುತ್ತಿಲ್ಲಾ. ಕಾರಣ ಜಿಲ್ಲೆಯ ಕೆರೆಗಳಿಗೆ ನೀರು ಹರಿದು ಬರುತ್ತಿದೆ. ಕೆರೆಗಳಿಗೆ (lakes) ನೀರು ಭರಿಸೋ ಕಾರ್ಯದಿಂದ ಜನ ಜಾನುವಾರುಗಳಿಗೆ ಹಿಡಿದು ಕೃಷಿಗೂ ಅನಕೂಲವಾಗಿದೆ (farmers). ಇದು ಸಮೃದ್ಧಿಯ (prosperity) ಸಂಕೇತ! ಈ ಕುರಿತ ವರದಿ ಇಲ್ಲಿದೆ ನೋಡಿ….

ಕೆರೆಗಳಿಗೆ ನೀರು ಭರಿಸೋ ಯೋಜನೆಯಿಂದ ರೈತರಲ್ಲಿ ನೆಮ್ಮದಿ…. ವಿಜಯಪುರ ಜಿಲ್ಲೆ 200 ಕ್ಕೂ ಆಧಿಕ ಕೆರೆಗಳಿಗೆ ಭರ್ತಿ ಮಾಡಲಾಗುತ್ತಿದೆ ನೀರು…. ಕೃಷ್ಣಾ ನದಿಯಿಂದ ನೀರು ಭರಿಸೋ ಕಾರ್ಯಕ್ಕೆ ರೈತರಿಗೆ ವರದಾನ… ಸರ್ಕಾರದ ಯೋಜನೆಗಳು ಜನರಿಗೆ ತಲುಪಲ್ಲಾ ಎಂದು ಆರೋಪ ಮಾಡುವುದು ವಾಡಿಕೆ, ಅದು ನಿಜವೂ ಕೂಡಾ. ಕಾರಣ ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಲು ಕಷ್ಟವೇ ಆಗಿದ್ದು ಅದಕ್ಕೆ ಕಾರಣಗಳು ಬಹಳಷ್ಟಿವೆ. ಈ ಸಮಸ್ಯೆ ಮದ್ಯೆ ವಿಜಯಪುರ ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ಭರಿಸುವ ಯೋಜನೆ ಸಕ್ಸಸ್ ಆಗಿದೆ. ಕೆರೆಗಳಿಗೆ ನೀರು ಭರಿಸೋ ಕಾರ್ಯದಿಂದ ರೈತರಿಗೆ ವರದಾನವಾಗಿದೆ.

ಮೊದಲೇ ಮಳೆಯಿಲ್ಲದೇ ಬರಡಾಗಿದ್ದ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವೂ ಅಷ್ಟಕಷ್ಟೇ ಇದೆ. ಕೃಷ್ಣಾ ನದಿಗೆ ಅಡ್ಡಲಾಗಿ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ನಿರ್ಮಾಣವಾಗಿ ವಿವಿಧ ಏತ ನೀರಾವರಿ ಯೋಜನೆಗಳಿದ್ದೂ ಜಲ ವಿವಾದದ ಕಾರಣ ಪೂರ್ಣ ಪ್ರಮಾಣದ ನೀರು ಬಳಕೆ ಮಾಡಿಕೊಳ್ಳಲು ಆಗದ ಸ್ಥಿತಿಯಿದೆ. ಆದರೆ ಕೃಷ್ಣಾ ನ್ಯಾಯಾಧಿಕರಣದ ನಿಯಮದಂತೆ ಜನ ಜಾನುವಾರುಗಳಿಗೆ ಕುಡಿಯೋ ನೀರು ಪೂರೈಕೆ ಹಾಗೂ ಕೆರೆಕಟ್ಟೆಗಳಿಗೆ ನೀರು ಭರಿಸಲು ಯಾವುದೇ ಅಡ್ಡಿಯಿಲ್ಲಾ. ಇದನ್ನೇ ಉಪಯೋಗ ಮಾಡಿಕೊಂಡು 2016 ರಲ್ಲಿ ಕೆರೆಗಳಿಗೆ ನೀರು ತುಂಬಿಸೋ ಕೆಲಸ ಜಿಲ್ಲೆಯಲ್ಲಿ ಆರಂಭವಾಯಿತು.

ಅಂದಿನ ಜಲ ಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಈ ನಿಟ್ಟಿನಲ್ಲಿ ಕೆಲಸ ಕಾಮಗಾರಿ ಆರಂಭಿಸಿ ಕೆರೆಗಳಿಗೆ ನೀರು ಬಿಡಿಸಿದ್ದರು. ಅಂದಿನಿಂದ ಪ್ರತಿ ವರ್ಷ ಆಲಮಟ್ಟಿ ಡ್ಯಾಂ ಭರ್ತಿಯಾಗುತ್ತಿದ್ದಂತೆ ಜಿಲ್ಲೆಯ ಇನ್ನೂರಕ್ಕೂ ಹೆಚ್ಚು ಕೆರೆಗಳಿಗೆ ನೀರು ಭರಿಸೋ ಕಾರ್ಯ ಆರಂಭಿಸಲಾಗುತ್ತಿದೆ. ಅದರಲ್ಲೂ ಜಿಲ್ಲೆಯ ಐತಿಹಾಸಿಕ ಕೆರೆಗಳಾದ 560 ಎಕರೆಗೂ ಆಧಿಕ ವಿಸ್ತೀರ್ಣದ ಮಮದಾಪೂರ ದೊಡ್ಡ ಕೆರೆ, 350 ಕ್ಕೂ ಆಧಿಕ ಎಕರೆ ವಿಸ್ತೀರ್ಣದ ಮಮದಾಪೂರ ಚಿಕ್ಕಕೆರೆ, ವಿಜಯಪುರ ನಗರದಲ್ಲಿರೋ 524 ಎಕರೆ ವಿಸ್ತೀರ್ಣದ ಭೂತನಾಳ ಕೆರೆ ಹಾಗೂ 224 ಎಕರೆ ವಿಸ್ತೀರ್ಣದ ಬೇಗಂ ತಲಾಬ್ ಕೆರೆಗಳು ಸೇರಿದಂತೆ ಜಿಲ್ಲೆಯ 200 ಕ್ಕೂ ಆಧಿಕ ಕೆರೆಗಳಿಗೆ ಇದೀಗಾ ನೀರು ಹರಿದು ಬರುತ್ತಿದೆ.

ಮಳೆಯಾಗದೇ ಇದ್ದರೂ ಕೆರೆಗಳಿಗೆ ನೀರು ಹರಿದು ಬಂದು ಎಲ್ಲೆಡೆ ಅಂತರ್ಜಲ ಹೆಚ್ಚಿದೆ. ಕೊಳವೆ ಬಾವಿ ಬಾವಿಗಳು ಹಳ್ಳಗಳಲ್ಲಿ ನೀರು ಹರಿಯುತ್ತಿರೋ ಕಾರಣ ರೈತರಿಗೆ ಅನುಕೂಲವಾಗಿದೆ. ಮಳೆಯ ಕೊರತೆಯ ನಡುವೆ ಕೆಲ ಬೆಳೆಗಳನ್ನಾದರೂ ಬೆಳೆಯಲು ಮುಂದಾಗಿದ್ದಾರೆ. ಇನ್ನು ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ ಲಿಂಬೆ ದಾಳಿಂಬೆ ಬೆಳೆಗಳಿಗೂ ಅನಕೂಲವಾಗಿದೆ ಎಂದು ರೈತರು ಖುಷಿಯನ್ನು ಹೊರ ಹಾಕಿದ್ದಾರೆ.

ಸರ್ ಎಂ ವಿಶ್ವೇಶ್ವರಯ್ಯ ಅವರಿಂದ ನಿರ್ಮಾಣವಾಗಿರೋ 524 ಎಕರೆ ವಿಸ್ತೀರ್ಣ ಭೂತನಾಳ ಕೆರೆ:
ಅಮೃತ ಯೋಜನೆಯಡಿ ದಿನದ 24 ಗಂಟೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಮಳೆ ಅಭಾವದಿಂದ ಜು. 20 ರ ಹೊತ್ತಿಗೆ ಬತ್ತಿಹೋಗಿದ್ದ ಭೂತನಾಳ ಕೆರೆಯಲ್ಲಿ ನೀರು ಡೆಡ್ ಸ್ಟೋರೇಜ್‌ಗಿಂತಲೂ ಕಡಿಮೆಯಾಗಿತ್ತು. ಕೆರೆ ನೀರನ್ನು ನಗರದ ಭೂತನಾಳ ಗ್ರಾಮ, ಎಂ.ಬಿ.ಪಾಟೀಲ ನಗರ, ಆದರ್ಶನಗರ, ಆಶ್ರಮ, ಬಿ.ಎಂ.ಪಾಟೀಲ ನಗರ, ವಿಜಯ ಕಾಲೇಜ್, ಕೆ.ಎಚ್.ಬಿ ಕಾಲನಿ, ಚಾಲುಕ್ಯನಗರದವರೆಗಿನ 13 ಸಾವಿರ ಮನೆಗಳಿಗೆ ಪೂರೈಸಲಾಗುತ್ತಿತ್ತು.

ಜಿಲ್ಲೆಯ ಬೃಹತ್ ವಿಸ್ತೀರ್ಣದ ಕೆರೆಗಳಿಂದ ಹಿಡಿದು ಇತರೆ ಪ್ರಮುಖ ಕೆರೆಗಳು ಅಷ್ಟೇಯಲ್ಲಾ ಯಾವ ಯಾವ ಕೆರೆಗಳಿಗೆ ನೀರು ಬರಿಸಲು ಸಾದ್ಯವಿದೆಯೋ ಅವೆಲ್ಲಾ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಇದು ಕುಡಿಯೋ ನೀರಿನ ಸಮಸ್ಯೆ ಬಗೆ ಹರಿಸಿದ್ದಷ್ಟೇ ಅಲ್ಲಾ ಮುಖ್ಯವಾಗಿ ಅಂತರ್ಜಲ ಮಟ್ಟ ಏರಿಕೆಗೆ ಕಾರಣವಾಗಿದೆ. ಹೀಗಾಗಿ ಜಿಲ್ಲೆಯ ರೈತರು ಕೊಳವೆ ಬಾವಿ ಹಾಗೂ ಬಾವಿಯ ನೀರಿನಿಂದ ನಿರ್ಧಿಷ್ಟ ಪ್ರಮಾಣದ ಬೆಳೆಗಳನ್ನು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿದೆ. ಮಳೆಯ ಅಭಾವದ ಮಧ್ಯೆ ರೈತರಿಗೆ ಕೆರೆಗಳಲ್ಲಿನ ನೀರು ಪರೋಕ್ಷವಾಗಿ ಕೈ ಹಿಡಿದಿವೆ.

ಅಷ್ಟೇ ಅಲ್ಲಾ 1911 ರಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರಿಂದ ನಿರ್ಮಾಣವಾಗಿರೋ ಭೂತನಾಳ ಕೆರೆ ವಿಜಯಪುರ ನಗರ ಭಾಗದ ಜನರ ನೀರಿನ ದಾಹವನ್ನು ನೀಗಿಸುತ್ತಿತ್ತು. ಸ್ವಾತಂತ್ರ್ಯ ನಂತರ ಭೂತನಾಳ ಕೆರೆಯಿಂದಲೇ ವಿಜಯಪುರ ನಗರಕ್ಕೆ ಕುಡಿಯೋ ನೀರು ಸರಬರಾಜು ಮಾಡಲಾಗುತ್ತಿತ್ತು. ಜನ ಸಂಖ್ಯೆ ಬೆಳೆದಂತೆ ಕೃಷ್ಣಾನದಿಯಿಂದ ನೀರು ತಂದಿತ್ತಾದರೂ ನಗರದ 5 ವಾರ್ಡ್ ಗಳಿಗೆ ಇಂದಿಗೂ ಇದೇ ಭೂತನಾಳ ಕೆರೆಯಿಂದಲೇ ನೀರು ಪೂರೈಕೆ ಮಾಡಲಾಗುತ್ತಿದೆ. ಕಳೆದ ಏಪ್ರೀಲ್ ನಿಂದ ಜುಲೈ 15 ವರೆಗೆ ಮಳೆಯಾಗದೇ ಆಲಮಟ್ಟಿ ಡ್ಯಾಂ ಜೊತೆಗೆ ಭೂತನಾಳ ಕೆರೆಯಲ್ಲಿಯೂ ನೀರು ಖಾಲಿಯಾಗಿತ್ತು. ಆಗ ನಗರದ 5 ವಾರ್ಡ್ ಗಳ ಜನರಿಗೆ ಕುಡಿಯೋ ನೀರಿನ ಪೂರೈಕೆಯಲ್ಲಿ ಸಮಸ್ಯೆಯಾಗಿ, ನೀರನ್ನು ಕೊಂಡುಕೊಳ್ಳುವಂತಾಗಿತ್ತು. ಇದೀಗಾ ಭೂತನಾಳ ಕೆರೆಗೆ ನೀರು ಹರಿದು ಬರುತ್ತಿರೋ ಕಾರಣ ಈ ಸಮಸ್ಯೆಗೂ ಪರಿಹಾರ ಸಿಕ್ಕಿದೆ.

ಒಟ್ಟಾರೆಯಾಗಿ ಕೆರೆಗಳಿಗೆ ನೀರು ತುಂಬಿಸೋ ಕಾಮಗಾರಿ 2016 ರಲ್ಲಿ ಆರಂಭವಾದಾಗ ಈ ಕುರಿತು ಆಡಿಕೊಂಡವರೇ ಹೆಚ್ಚಿದ್ದವು. ಇದೆಲ್ಲಾ ಆಗದ ಕೆಲಸ ಹಣ ಲುಟಿ ಮಾಡುವ ಕೆಲಸ ಎಂದು ಮಾತನಾಡಿದ್ದರು. ಆದರೆ ಕೆರೆಗಳಿಗೆ ನೀರು ಭರಿಸೋ ಕಾರ್ಯ ಮಾದರಿಯಾಗಿದೆ. ಜನ ಜಾನುರುಗಳಿಗೆ ಕುಡಿಯಲು ಹಾಗೂ ಕೃಷಿಗೆ ತೋಟಗಾರಿಕೆಗೆ ಅನಕೂಲವಾಗಿದ್ದು ಖುಷಿಯ ವಿಚಾರವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ