ಉತ್ತರ ಕನ್ನಡ, ಆಗಸ್ಟ್ 05: ಎರಡು ತಿಂಗಳ ನಿಷೇಧ ಅವಧಿ ಮುಗಿದು ಕರಾವಳಿಯಲ್ಲಿ ಅಗಸ್ಟ್ 1 ರಿಂದ ಯಾಂತ್ರೀಕೃತ ಮೀನುಗಾರಿಕೆ ಆರಂಭವಾಗಿದೆ. ಮಳೆಗಾಲದ ಆರಂಭದಲ್ಲಿ ರಜೆಗೆ ಊರುಗಳಿಗೆ ತೆರಳಿದ್ದ ಆಳಸಮುದ್ರ ಮೀನುಗಾರಿಕಾ ಬೋಟುಗಳ ಕಾರ್ಮಿಕರು ಇದೀಗ ಕೆಲಸಕ್ಕೆ ಮರಳುತ್ತಿದ್ದು ಬೋಟುಗಳು ಮೀನುಗಾರಿಕೆಗೆ ತೆರಳಲು ಸನ್ನದ್ಧವಾಗುತ್ತಿವೆ. ಆದರೆ ಇದೀಗ ಹೊರರಾಜ್ಯದಿಂದ ಬರುತ್ತಿರುವ ಕಾರ್ಮಿಕರಲ್ಲಿ ಕಣ್ಣುಬೇನೆ ಸಮಸ್ಯೆ (Madras eye infection) ಕಾಣಿಸಿಕೊಳ್ಳುತ್ತಿದ್ದು ಮೀನುಗಾರಿಕೆಗೆ ತೆರಳಲು ಅಡ್ಡಿಯುಂಟು ಮಾಡಿದೆ.
ದೇಶದೆಲ್ಲೆಡೆ ಜನರ ಕಣ್ಣು ಕೆಂಪು ಮಾಡಿರುವ ಮಡ್ರಾಸ್ ಐ ಸೋಂಕು ಇದೀಗ ಉತ್ತರಕನ್ನಡ ಕರಾವಳಿಯಲ್ಲಿ ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಮೀನುಗಾರಿಕೆ ಮೇಲಿನ ನಿಷೇಧ ಅವಧಿ ಮುಗಿದು ಯಾಂತ್ರೀಕೃತ ಬೋಟುಗಳು ಮೀನುಗಾರಿಕೆಗೆ ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಕಾರವಾರದ ಬೈತಕೋಲ ಮೀನುಗಾರಿಕಾ ಬಂದರಿನಲ್ಲಿ ಪರ್ಸಿನ್ ಹಾಗೂ ಟ್ರಾಲರ್ ಬೋಟುಗಳು ಮೀನುಗಾರಿಕೆಗೆ ಮುಂದಾಗಿವೆ.
ಇದನ್ನೂ ಓದಿ: ಕಾರವಾರ: ಕಡಲತೀರದಲ್ಲಿ ಸಿಲಿಂಡರ್ ರೂಪದ ವಸ್ತು ಪತ್ತೆ, ಜನರಲ್ಲಿ ಆತಂಕ
ಆಳಸಮುದ್ರಕ್ಕೆ ತೆರಳುವ ಬೋಟುಗಳಲ್ಲಿ ಹೆಚ್ಚಿನದಾಗಿ ಹೊರರಾಜ್ಯದ ಕಾರ್ಮಿಕರೇ ಕೆಲಸಗಾರರಾಗಿದ್ದು ಓರಿಸ್ಸಾ, ಜಾರ್ಖಂಡ್, ಛತ್ತೀಸ್ಗಢ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸುತ್ತಾರೆ. ಇದೀಗ ಹೀಗೆ ಬೋಟ್ ಕೆಲಸಕ್ಕೆಂದು ಆಗಮಿಸುತ್ತಿರುವ ನೂರಾರು ಕಾರ್ಮಿಕರಲ್ಲಿ ಕಣ್ಣುಬೇನೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಬೋಟುಗಳಲ್ಲಿ 20 ರಿಂದ 30 ಮಂದಿ ಕಾರ್ಮಿಕರು ಒಟ್ಟಾಗಿ ಇರುವುದರಿಂದ ಕಣ್ಣುಬೇನೆ ಸೋಂಕು ಇದೀಗ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತಿದ್ದು, ಸ್ಥಳೀಯ ಮೀನುಗಾರರಿಗೂ ಸಮಸ್ಯೆ ಉಂಟುಮಾಡುತ್ತಿದೆ.
ಒಮ್ಮೆ ಯಾಂತ್ರೀಕೃತ ಬೋಟುಗಳು ಆಳಸಮುದ್ರ ಮೀನುಗಾರಿಕೆಗೆ ಹೊರಟರೆ ವಾರಗಳ ಕಾಲ ಸಮುದ್ರದಲ್ಲೇ ಕಾಲ ಕಳೆಯುತ್ತವೆ. ಇದೀಗ ಕಾರ್ಮಿಕರಲ್ಲಿ ಕಣ್ಣುಬೇನೆ ಸೋಂಕು ಕಾಣಿಸಿಕೊಂಡಿರುವುದರಿಂದ ಸಾಕಷ್ಟು ಮಂದಿ ಕಾರ್ಮಿಕರು ಕೆಲಸ ಮಾಡಲಾಗದೇ ಪರದಾಡುವಂತಾಗಿದ್ದು, ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತಿರುವುದರಿಂದ ಮೀನುಗಾರಿಕೆಗೆ ತೆರಳುವುದಕ್ಕೂ ಇದೀಗ ಸಮಸ್ಯೆ ಎದುರಾಗಿದೆ.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಸಮುದಾಯದವರಿಂದಲೇ 2 ಕುಟುಂಬಗಳಿಗೆ ಬಹಿಷ್ಕಾರ: ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಮೊರೆ ಹೋದ ಕುಟುಂಬಸ್ಥರು
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯಾಧಿಕಾರಿಗಳು, ಕಣ್ಣುಬೇನೆ ಕಾಣಿಸಿಕೊಂಡಿರುವ ಬೈತಖೋಲ ಬೋಟಿನ ಕಾರ್ಮಿಕರನ್ನ ತಪಾಸಣೆಗೊಳಪಡಿಸಲು ಆರೋಗ್ಯ ಸಿಬ್ಬಂದಿಗೆ ಸೂಚಿಸಲಾಗಿದೆ. ಸೋಂಕು ಕಾಣಿಸಿಕೊಂಡವರು ಇತರರಿಂದ ಅಂತರ ಕಾಯ್ದುಕೊಳ್ಳಬೇಕಿದ್ದು, ವಾರದೊಳಗೆ ಕಡಿಮೆಯಾಗದಿದ್ದಲ್ಲಿ ಕಣ್ಣಿನ ವೈದ್ಯರನ್ನ ಸಂಪರ್ಕಿಸಿ ಎಂದು ಸಲಹೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಕಣ್ಣುಬೇನೆ ಸೋಂಕಿನ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿದ್ದು, ಸಾರ್ವಜನಿಕರು ಅಗತ್ಯ ಮುಂಜಾಗ್ರತೆವಹಿಸಿ ಸೋಂಕು ತಗಲದಂತೆ ಎಚ್ಚರಿಕೆ ವಹಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.