ಉತ್ತರ ಕನ್ನಡ: ರಾಜ್ಯದ ಕರಾವಳಿ ಪ್ರದೇಶದಲ್ಲಿ (Costal Karnataka) ಯಾಂತ್ರಿಕೃತ ಮೀನುಗಾರಿಕೆಗೆ (Mechanised Fishing) ವಿಧಿಸಿದ್ದ ನಿಷೇಧ ಸೋಮವಾರ (ಜು.31) ರಂದು ಕೊನೆಗೊಂಡಿದ್ದು, ಇಂದಿನಿಂದ (ಆ.1) ಮತ್ತೆ ಪ್ರಾರಂಭವಾಗಲಿದೆ. ದಕ್ಷಿಣ ಕನ್ನಡ (Dakshin Kannada), ಉಡಪಿ (Udupi), ಉತ್ತರ ಕನ್ನಡ (Uttar Kannada) ಜಿಲ್ಲೆಯ ಯಾಂತ್ರೀಕೃತ ಬೋಟ್‌ಗಳು ಮತ್ತೆ ಸಮುದ್ರಕ್ಕೆ ಇಳಿದಿವೆ. ಈ ಹಿನ್ನೆಲೆ ಮೀನುಗಾರರು ಬೋಟ್‌ಗಳನ್ನು ಸ್ವಚ್ಛಗೊಳಿಸಿ, ಅಗತ್ಯ ವಸ್ತುಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಇಂದು ಬೆಳಿಗ್ಗೆ ಬೋಟ್‌ಗಳಿಗೆ ಪೂಜೆ ಸಲ್ಲಿಸಿ, ಸಮುದ್ರ ಹಾಗೂ ಗಂಗಾದೇವಿಗೆ ಬಾಗಿನ ಅರ್ಪಿಸಿ ಮೀನುಗಾರಿಗೆ ತೆರಳುತ್ತಿದ್ದಾರೆ.
ಯಾಂತ್ರಿಕೃತ ಮೀನುಗಾರಿಕೆ ಇಂದಿನಿಂದ ಆರಂಭವಾದ ಹಿನ್ನೆಲೆ ಪರ್ಸೀನ್ ಹಾಗೂ ಟ್ರಾಲ್ ಬೋಟ್‌ಗಳು ಸಮುದ್ರಕ್ಕೆ ಇಳಿಯಲಿವೆ. ಹೀಗಾಗಿ ಮೀನುಗಾರರಿಗೆ ಬೇಕಾದ ಸಬ್ಸಿಡಿ ಡೀಸಿಲ್, ಸೀಮೆ ಎಣ್ಣೆ ಹಾಗೂ ಸೌಲಭ್ಯಗಳನ್ನು ಸರಿಯಾದ ಸಮಯಕ್ಕೆ ಒದಗಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಪ್ರತಿ ವರ್ಷ ಪಶ್ಚಿಮ ಕರಾವಳಿಯಲ್ಲಿ ಜೂನ್ 1 ರಿಂದ ಜುಲೈ 31 ವರೆಗೆ ಎರಡು ತಿಂಗಳ ಕಾಲ ಯಾಂತ್ರಿಕೃತ ಮೀನುಗಾರಿಕೆಗೆ ನಿಷೇಧವಿರುತ್ತದೆ. ಮಳೆಗಾಲದ ಆರಂಭದ ಎರಡು ತಿಂಗಳ ಈ ಅವಧಿಯಲ್ಲಿ ಮೀನುಗಳು ಸಂತಾನೋತ್ಪತ್ತಿ ಮಾಡುವ ಸಮಯ. ಈ ಅವಧಿಯಲ್ಲಿ ಮೀನುಗಳ ಸಂತತಿ ಹೆಚ್ಚಲಿದೆ. ಈ ಸಂದರ್ಭದಲ್ಲಿ ಮೀನುಗಾರಿಕೆ ನಡೆಸಿದರೆ ಮೀನುಗಳ ಸಂತತಿ ಕಡಿಮೆ ಆಗಿ ಮತ್ಸ್ಯಕ್ಷಾಮ ಆಗುವ ಸಾಧ್ಯತೆ ಇದೆ.
ಮಳೆಗಾಲದ ಆರಂಭದ ಈ ಅವಧಿಯಲ್ಲಿ ಅರಬ್ಬಿ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಮೀನುಗಾರರಿಗೆ ಮತ್ತು ಮೀನುಗಾರಿಕೆ ಬೋಟ್‌ಗಳಿಗೆ ಅಪಾಯ ಉಂಟು ಮಾಡುತ್ತವೆ. ಹೀಗಾಗಿ ಸರ್ಕಾರ ಎರಡು ತಿಂಗಳು ಯಾಂತ್ರಿಕೃತ ಮೀನುಗಾರಿಕೆಗೆ ನಿಷೇಧ ಹೇರಿದೆ.
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ ಜಿಲ್ಲಾಡಳಿತ
ರಾಜ್ಯದ ಕರಾವಳಿ ಪ್ರದೇಶದಲ್ಲಿ ಯಾಂತ್ರಿಕೃತ ಅವೈಜ್ಞಾನಿಕ ಮೀನುಗಾರಿಕೆ ನಡೆಸಲಾಗುತ್ತದೆ. ಅರಬ್ಬಿ ಸಮುದ್ರದಲ್ಲಿ ದೊಡ್ಡದೊಡ್ಡ ದೋಣಿಗಳಿಂದ ಲೈಟ್ ಫಿಶಿಂಗ್ ಮತ್ತು ಬುಲ್ ಟ್ರಾಲ್ ಫಿಶಿಂಗ್ ನಡೆಸಲಾಗುತ್ತಿದೆ ಇದರಿಂದ ಸಾಂಪ್ರದಾಯಿಕ ಮೀನುಗಾರರಿಗೆ ಹೊಡೆತ ಬಿದ್ದಿದೆ. ನಾಡದೋಣಿ ಮೀನುಗಾರರ ಭವಿಷ್ಯದ ಸುರಕ್ಷತೆಗಾಗಿ ಬೆಳಕು ಆಧಾರಿತ ಮೀನುಗಾರಿಕೆ ಸಂಪೂರ್ಣ ನಿಷೇಧಿಸಬೇಕೆಂದು ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ