ಉತ್ತರ ಕನ್ನಡ, ಆ.18: ಕುದುರೆ ಮೇಲೆ ಸವಾರಿ ಮಾಡುತ್ತಿರುವ 19ರ ಹರೆಯದ ಈ ಯುವಕನ ಹೆಸರು ನಿತ್ಯಾನಂದ ಸಿದ್ದಿ. ಇತ ಉತ್ತರ ಕನ್ನಡ(Uttara Kannada) ಜಿಲ್ಲೆಯ ಯಲ್ಲಾಪುರ(Yellapura)ದ ಕೆಳಾಷೆ ಅಡವಿಯಲ್ಲಿ ವಾಸವಾಗಿರುವ ಸಿದ್ದಿ ಬುಡಕಟ್ಟು ನಿವಾಸಿ. ದೇಶ ವಿದೇಶಗಳಲ್ಲಿ ಹಾರ್ಸ್ ರೈಡಿಂಗ್(Horse Riding) ಅಂದರೆ, ಅದು ಶ್ರೀಮಂತ ವರ್ಗದ ಕ್ರೀಡೆ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕು. ಅಂತಹ ಐಶಾರಾಮಿ ಕ್ರೀಡೆಗೆ ರಾಜ್ಯದ ಬುಡಕಟ್ಟು ಜನಾಂಗದ ಯುವಕ ಎಂಟ್ರಿಯಾಗಿದ್ದಾನೆ. ಹೌದು, ಜೊತೆಗೆ ಈಗ ರಾಷ್ಟ್ರ ಮಟ್ಟದ ಕುದುರೆ ರೇಸ್‌ಗೆ ತಯಾರಾಗುತ್ತಿದ್ದಾನೆ. ಕುದುರೆ ರೇಸ್‌ಗೆ ಸಜ್ಜಾದ ಸಿದ್ದಿ ಜನಾಂಗದ ಮೊದಲ ಯುವಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಯುವಕ, ಕಳೆದ ಒಂದು ವರ್ಷದಿಂದ ಮಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾನೆ.
ಇದೀಗ ಬೆಂಗಳೂರಿನಲ್ಲಿ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಇಂಟರ್ ಕ್ಲಬ್ ಎಂಬೆಸಿ ಪ್ರೀಮಿಯರ್ ಶೋ ಜಂಪಿಂಗ್ ಲೀಗ್‌ನಲ್ಲಿ ನಿತ್ಯಾನಂದ ಸ್ಪರ್ಧಿಸಲಿದ್ದಾನೆ. ವರ್ಷಕ್ಕೊಮ್ಮೆ ನಡೆಯುವ ಈ ಸ್ಪರ್ಧೆಯಲ್ಲಿ ನಾನಾ ರಾಜ್ಯಗಳ 100ಕ್ಕೂ ಅಧಿಕ ಪ್ರತಿಭಾನ್ವಿತ ಹಾರ್ಸ್ ರೈಡರ್‌ಗಳು ಭಾಗವಹಿಸುತ್ತಿದ್ದಾರೆ. ಈ ಸ್ಪರ್ಧೆಯಲ್ಲಿ ಗೆದ್ದರೆ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ.
ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಯುವಕ ನಿತ್ಯಾನಂದ ಸಿದ್ದಿ, ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ. ಈತನ ಕಲೆಯ ಆಸಕ್ತಿ ಕಂಡು ಪರಿಸರ ಪ್ರೇಮಿ ದಿನೇಶ್ ಹೊಳ್ಳ ಅವರು ಇತನನ್ನು ಕಾಡಿನಿಂದ ಮಂಗಳೂರಿಗೆ ಕರೆ ತಂದಿದ್ದರು. ಬಳಿಕ ಮಂಗಳೂರಿನಲ್ಲಿ ಮಂಗಳೂರು ಹಾರ್ಸ್ ರೈಡಿಂಗ್ ಅಕಾಡೆಮಿಯಲ್ಲಿ ಕುದುರೆ ತರಬೇತಿಗೆ ಸೇರಿಸಿದ್ದರು. ಈಗ ಕುದುರೆ ರೇಸ್ ತರಬೇತಿ ಪಡೆಯುತ್ತಿರುವ ನಿತ್ಯಾನಂದ ಸಿದ್ದಿಗೆ ಅಕಾಡೆಮಿಯ ಅವಿನಂದ್ ಅಚ್ಚನಹಳ್ಳಿ ತರಬೇತಿ ನೀಡುತ್ತಿದ್ದಾರೆ.
ನಿತ್ಯಾನಂದ ಸಿದ್ದಿಯವರು ಮೊದಲು ಚಿತ್ರಕಲೆ ನಿಮಿತ್ತ ಮಂಗಳೂರಿಗೆ ಬಂದು, ಇದೀಗ ಒಂದು ವರ್ಷಗಳು ಆಗಿದೆ. ಮೊದಲ ವರ್ಷದ ಪಿಯುಸಿ ಓದಿದ ಬಳಿಕ ಶಿಕ್ಷಣವನ್ನು ಮೊಟುಕುಗೊಳಿಸಿ, ಊರಿನಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದಾಗ, ನನ್ನನ್ನು ಗುರುತಿಸಿ ದಿನೇಶ್ ಹೊಳ್ಳ ಅವರು ಮಂಗಳೂರಿಗೆ ಕರೆತಂದಿದ್ದರು, ಅದಾದ ಬಳಿಕ ಹಾರ್ಸ್ ರೈಡಿಂಗ್ ಕಲಿತು, ಇದರಲ್ಲಿಯೇ ಸಾಧನೆ ಮಾಡಬೇಕೆಂದುಕೊಂಡಿರುವುದಾಗಿ ನಿತ್ಯಾನಂದ ಅವರು ಹೇಳಿದರು.
ಇನ್ನು ನಿತ್ಯಾನಂದ ಸಿದ್ದಿ, ಹಾರ್ಸ್ ಜಂಪಿಂಗ್ ಸೇರಿದಂತೆ ಕುದುರೆಯನ್ನು ಚೆನ್ನಾಗಿ ಪಳಗಿಸಿಯೇ ರೇಸ್‌ಗಳಲ್ಲಿ ಭಾಗಿಯಾಗುತ್ತಿದ್ದಾನೆ. ಇದರ ಜೊತೆಗೆ ನಿತ್ಯಾನಂದ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಟೋಬಿ ಸಿನಿಮಾ ಸೇರಿದಂತೆ ಇತರೆ ಕನ್ನಡ ಸಿನಿಮಾದಲ್ಲಿ ಹಾರ್ಸ್ ರೈಡಿಂಗ್ ಮಾಡಿ ಗಮನ ಸೆಳೆದಿದ್ದಾನೆ.
ಮಂಗಳೂರು ಹಾರ್ಸ್ ರೈಡಿಂಗ್ ಅಕಾಡೆಮಿಯಲ್ಲಿ ನಿತ್ಯಾನಂದಗೆ ತರಬೇತಿ ನಡೆಯುತ್ತಿದ್ದು, ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯಲಿರುವ ‘ಶೋ ಜಂಪಿಂಗ್’ ಸ್ಪರ್ಧೆಯಲ್ಲಿ ನಿತ್ಯಾನಂದ ಭಾಗವಹಿಸಲಿದ್ದಾನೆ. ಈ ಮೂಲಕ ಕುದುರೆ ರೇಸ್‌ನಲ್ಲಿ ಭಾಗವಹಿಸುತ್ತಿರುವ ರಾಜ್ಯದ ಮೊದಲ ಸಿದ್ದಿ ಯುವಕ ಎಂಬ ಹೆಗ್ಗಳಿಕೆಗೂ ಈತ ಪಾತ್ರನಾಗುತ್ತಿದ್ದಾನೆ. ಈ ಮೂಲಕ ತನ್ನ ಜನಾಂಗಕ್ಕೂ ಹಿರಿಮೆ ತಂದುಕೊಡುತ್ತಿದ್ದಾನೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ