ತುಮಕೂರು, ಅಗಸ್ಟ್ ( 16): ರಸ್ತೆ ಅಪಘಾತಗಳಲ್ಲಿ (Road Accidents) ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ಬಗ್ಗೆ ಪೊಲೀಸರು ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಅಪಘಾತಗಳು ಕಡಿಮೆಯಾಗುತ್ತಿಲ್ಲ. ಇದಕ್ಕೆ ಪೂರಕವೆಂಬಂತೆ ಶನಿವಾರ (ಆಗಸ್ಟ್ 12) ಕರ್ನಾಟಕದಲ್ಲಿ ಬರೋಬ್ಬರಿ 32 ಜನರು ಈ ರಸ್ತೆ ಅಪಘಾತದಲ್ಲಿ ಬಲಿಯಾಗಿದ್ದರು. ಇದರ ಬೆನ್ನಲ್ಲೇ ಇದೀಗ ತಮಕೂರಿನಲ್ಲಿ (Tumakuru) ಮೂರು ಪ್ರತ್ಯೇಕ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ ಮೂವರು ಮೃತಪಟ್ಟಿದ್ದಾರೆ. ಈ ಮೂರು ಪ್ರತ್ಯೇಕ ಘಟನೆಗಳ ವಿವರ ಈ ಕೆಳಗಿನಂತಿದೆ ನೋಡಿ.
ತಮಕೂರಿನ ಮದ್ದೇನಹಳ್ಳಿ ಗೇಟ್ ಬಳಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಸವಾರ ಸಾವನ್ನಪ್ಪಿದ್ದಾನೆ. ಕೋರಾ ನಿವಾಸಿಯಾದ ಶಂಕರ್ (21) ಮೃತಪಟ್ಟ ವ್ಯಕ್ತಿಯಾಗಿದ್ದು, ಕೋರಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ತುಮಕೂರು: ಕಾಂಗ್ರೆಸ್ ಮುಖಂಡ ಅನುಮಾನಸ್ಪದ ಸಾವು, ಪರಮೇಶ್ವರ್ಗೆ ಮತ ಹಾಕಿದ್ದಕ್ಕೆ ಕೊಲೆ ಶಂಕೆ
ತಮಕೂರಿನ ತಿಮ್ಮರಾಜನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ-48ರ ಬಳಿ ಕಾರು ಪಲ್ಟಿಯಾಗಿ ಓರ್ವ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ. ಬೆಂಗಳೂರಿನಿಂದ ಚಿತ್ರದುರ್ಗ ತೆರಳುತ್ತಿದ್ದ ಮಾರ್ಗ ಮಧ್ಯೆ ಕಾರಿನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ 4 ಜನರ ಪೈಕಿ ಪ್ರಕಾಶ್ ಎನ್ನುವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊರ್ವ ಗಂಭೀರ ಗಾಯಗೊಂಡಿದ್ದು, ಉಳಿದ ಇಬ್ಬರು ಪ್ರಯಾಣಿಕರಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ. ಸದ್ಯ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಕೋರಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಣಿಗಲ್ ತಾಲೂಕಿನ ಸಂತೆ ಮಾವತ್ತೂರು ಬಳಿ ಕಾರು ಡಿಕ್ಕಿಯಾದ ಪರಿಣಾಮ ಪಾದಾಚಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗಂಗಹುಚ್ಚಯ್ಯ(54) ಎನ್ನುವಾತ ನಿನ್ನೆ (ಆಗಸ್ಟ್ 15) ತಡರಾತ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ವೇಗವಾಗಿ ಬಂದು ಕಾರು ಡಿಕ್ಕಿ ಹೊಡೆದಿದ್ದು, ಗಂಗಹುಚ್ಚಯ್ಯ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಕುಣಿಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ತುಮಕೂರು ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ