ಕೊರಟಗೆರೆ: ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಆಗಸ್ಟ್ 16 ರಂದು ಬಂದ್ಗೆ ಕರೆ
ಕೊಬ್ಬರಿಗೆ ಕನಿಷ್ಠ 20 ಸಾವಿರ ರೂಪಾಯಿ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಆಗಸ್ಟ್ 16 ರಂದು ಕೊರಟಗೆರೆ ಪಟ್ಟಣ ಬಂದ್ಗೆ ರೈತ ಸಂಘಟನೆಗಳು ಕರೆ ನೀಡಿವೆ. ಕೊಬ್ಬರಿ ಬೆಲೆ ಕುಸಿದಿರುವ ಹಿನ್ನೆಲೆ ತಕ್ಷಣ ನಾಫೆಡ್ ಮೂಲಕ ಕೊಬ್ಬರಿ ಖರೀದಿ ಪ್ರಕ್ರಿಯೆ ಆರಂಭಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.
ತುಮಕೂರು, ಆಗಸ್ಟ್ 12: ಕೊಬ್ಬರಿಗೆ ಕನಿಷ್ಠ 20 ಸಾವಿರ ರೂಪಾಯಿ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಆಗಸ್ಟ್ 16 ರಂದು ಕೊರಟಗೆರೆ (Koratagere) ಪಟ್ಟಣ ಬಂದ್ಗೆ ರೈತ ಸಂಘಟನೆಗಳು ಕರೆ ನೀಡಿವೆ. ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಭಾಗಿಯಾಗಲಿದ್ದು, ಕನ್ನಡ ಪರ ಸಂಘಟನೆಗಳು, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಕೂಡ ಬೆಂಬಲ ಸೂಚಿಸಿವೆ.
ಆಗಸ್ಟ್ 16 ರಂದು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ಗೆ ಸಹಕಾರ ನೀಡುವಂತೆ ಮಾಲೀಕರಲ್ಲಿ ರೈತ ಸಂಘಟನೆಗಳು ಮನವಿ ಮಾಡಿವೆ. 18 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದ್ದ ಕೊಬ್ಬರಿ ಇದೀಗ 7,500 ರೂ.ಗೆ ಮಾರಾಟವಾಗುತ್ತಿದೆ ಎಂದು ರೈತರು ಹೇಳಿದ್ದಾರೆ.
ಕೊಬ್ಬರಿ ಬೆಲೆ ಕುಸಿತದಿಂದ ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದು, ತಕ್ಷಣ ನಾಫೆಡ್ ಮೂಲಕ ಕೊಬ್ಬರಿ ಖರೀದಿ ಪ್ರಕ್ರಿಯೆ ಆರಂಭಿಸಬೇಕು. ಅಲ್ಲದೆ, ಕೊಬ್ಬರಿಗೆ ಕೇಂದ್ರ ಸರ್ಕಾರ ಕೇವಲ 11,750 ರೂ ಬೆಂಬಲ ಬೆಲೆ ನಿಗದಿ ಪಡಿಸಿದೆ. ಇದನ್ನು 20 ಸಾವಿರ ರೂ.ಗೆ ಹೆಚ್ಚಳ ಮಾಡುವಂತೆ ಆಗ್ರಹಿಸಿ ಕೊರಟಗೆರೆ ಪಟ್ಟಣ ಬಂದ್ಗೆ ಕರೆ ನೀಡಲಾಗಿದೆ.
ಇದನ್ನೂ ಓದಿ: ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ಆಗಸ್ಟ್ 14 ರಂದು ನಂಜನಗೂಡಿನಲ್ಲಿ ಬೃಹತ್ ಪ್ರತಿಭಟನೆ
ಕೊಬ್ಬರಿಗೆ ಕೇಂದ್ರ ಸರ್ಕಾರ ಕೇವಲ 11,750 ರೂ. ಬೆಂಬಲ ಬೆಲೆ ನಿಗದಿ ಪಡಿಸಿದೆ. ಇದು ನ್ಯಾಯಸಮ್ಮತವಾದ ಬೆಲೆ ಅಲ್ಲ. ನುಸಿ ಪೀಡೆ, ಕಾಂಡ ಕೊರೆತ, ಅತಿವೃಷ್ಟಿ, ಅನಾವೃಷ್ಟಿಯಿಂದ ಇಳುವರಿ ಕುಂಟಿತವಾಗಿದೆ. ಈಗ ಬೆಲೆ ಕುಸಿತದಿಂದ ಮತ್ತಷ್ಟು ನಷ್ಟವಾಗುತ್ತಿದೆ ಎಂದು ರೈತರು ಹೇಳಿದ್ದಾರೆ.
ದಿನಗಳ ಹಿಂದೆಯಷ್ಟೇ, ಉಂಡೆ ಕೊಬ್ಬರಿ ಕ್ವಿಂಟಾಲ್ಗೆ 25 ಸಾವಿರ ರೂ. ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ತುಮಕೂರಿನ ತಿಪಟೂರಿನಲ್ಲಿ ಬಂದ್ ನಡೆಸಲಾಗಿತ್ತು. ನೀಲಕಂಠಸ್ವಾಮಿ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿದ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:36 pm, Sat, 12 August 23