ತುಮಕೂರು, ಆ.11: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್(Indira Canteen)ಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಮರುಜೀವ ಬಂದಿತ್ತು. ಅದರಂತೆ ಬೆಂಗಳೂರಿನಲ್ಲಿಯೇ 250 ಇಂದಿರಾ ಕ್ಯಾಂಟೀನ್ ಆರಂಭಿಸಲು ಸೂಚಿಸಿದ್ದರು. ಜೊತೆಗೆ ಕ್ವಾಲಿಟಿ ಮತ್ತು ಕ್ವಾಂಟಿಟಿಗೂ ಹೆಚ್ಚಿನ ಮಹತ್ವ ಕೊಡಲಾಗುವುದು ಎಂದು ಹೇಳಿದ್ದರು. ಆದರೀಗ ಗೃಹ ಸಚಿವ ಡಾ.ಜಿ ಪರಮೇಶ್ವರ್ (G Parameshwara) ಕ್ಷೇತ್ರದಲ್ಲಿಯೇ ಇಂದಿರಾ ಕ್ಯಾಂಟೀನ್ ಮುಚ್ಚುವ ಹಂತಕ್ಕೆ ತಲುಪಿದೆ. ಹೌದು, ಕಳೆದ 7 ತಿಂಗಳಿನಿಂದ ರಿವಾರ್ಡ್ ಏಜೆನ್ಸಿಯವರು ಸಂಬಳ ನೀಡದೇ ಸಿಬ್ಬಂದಿಗಳಿಗೆ ಸತಾಯಿಸುತ್ತಿದ್ದಾರೆ.
ಇನ್ನು ಈ ಇಂದಿರಾ ಕ್ಯಾಂಟೀನ್ನಲ್ಲಿ 8 ಜನ ಸಿಬ್ಬಂದಿ ಕೆಲಸ ಮಾಡಬೇಕಿದೆ. ಆದರೆ, ಈಗ ನಾಲ್ಕು ಜನ ಸಿಬ್ಬಂದಿಯಿಂದಲೇ ಕೆಲಸ ನಡೆಯುತ್ತಿದೆ. ಆದರೆ, ಕಳೆದ ಏಳು ತಿಂಗಳಿನಿಂದ ಸಂಬಳ ಇಲ್ಲದ ಕಾರಣ ಅಡುಗೆ ಹೆಡ್ ಕುಕ್ ಹಾಗೂ ಕ್ಯಾಷಿಯರ್ ಜೊತೆಗೆ ಸಿಬ್ಬಂದಿಗಳು ಕಂಗಾಲಾಗಿದ್ದಾರೆ. ಇನ್ನು ‘ಸಂಬಳ ಇಲ್ಲವಾದರೇ ಏನ್ ಮಾಡುವುದು ಸರ್. ಪ್ರತಿದಿನ ಬರುವ ಹಣದಲ್ಲಿಯೇ ದಿನಸಿ ತಂದು ಅಡುಗೆ ಮಾಡುತ್ತಿದ್ದೇವೆ. ಬೆಳಿಗ್ಗೆಯಿಂದ ರಾತ್ರಿವರೆಗೂ ಕೆಲಸ ಮಾಡಿದ್ರು, ಸಂಬಳ ಇಲ್ಲವೆಂದು ಸಿಬ್ಬಂದಿಗಳು ಅಳಲು ತೋಡಿಕೊಂಡಿದ್ದಾರೆ.
ತಾಲೂಕು ಕಚೇರಿಗೆ ಬರುವವರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿ ಪ್ರತಿನಿತ್ಯ ಬೆಳಿಗ್ಗೆ ಮಧ್ಯಾಹ್ನ ಸೇರಿ 600 ರಿಂದ700 ಜನರು ಊಟ ಸೇವಿಸುತ್ತಾರೆ. ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿನಿಧಿಸುವ ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆಯ ಆಗರವಾಗಿದೆ. ರೇಷನ್, ಸಿಬ್ಬಂದಿಗೆ ಸಂಬಳ ಇಲ್ಲದೆ ಕೊರಟಗೆರೆ ಇಂದಿರಾ ಕ್ಯಾಂಟೀನ್ ಮುಚ್ಚುವ ಹಂತ ತಲುಪಿದೆ.
ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:12 pm, Fri, 11 August 23