ತುಮಕೂರು, ಆ.18: ಗೋಕಟ್ಟೆಗೆ ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ತುಮಕೂರು(Tumakur) ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಊರ್ಡಿಗೆರೆ ಹೋಬಳಿ ತಿಮ್ಮನಾಯಕನಹಳ್ಳಿ ಗ್ರಾಮದ ಸೌಂದರ್ಯ(26) ಮೃತ ಮಹಿಳೆ. ತಿಮ್ಮನಾಯಕನಹಳ್ಳಿಯ ತವರು ಮನೆಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ನಿನ್ನೆ (ಆ.17) ಮಧ್ಯಾಹ್ನ ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ಮನೆಗೆ ವಾಪಸ್ ಬಾರದೇ ಇದ್ದ ಕಾರಣ ಗಂಡನ ಮನೆಗೆ ಹೋಗಿರಬೇಕು ಎಂದು ಭಾವಿಸಿದ್ದರು. ಶುಕ್ರವಾರ ಬೆಳಿಗ್ಗೆ ಗ್ರಾಮಸ್ಥರು ಗೋಕಟ್ಟೆ ಬಳಿ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಕ್ಯಾತ್ಸಂದ್ರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು: ಆಗಸ್ಟ್ 15 ರ ರಾತ್ರಿ ಕೆಂಗೇರಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಎರಡು ಬೈಕ್ಗಳ ನಡುವೆ ಡಿಕ್ಕಿಯಾಗಿ ನರಸಪ್ಪ (51) ಹಾಗೂ ರಕ್ಷಾ (21) ಇಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕ್ನಲ್ಲಿ ಸ್ನೇಹಿತನ ಜೊತೆಗೆ ಆಗಮಿಸುತ್ತಿದ್ದ ಮೃತ ರಕ್ಷಾ ಅವರಿಗೆ ಅಡ್ಡಲಾಗಿ ನರಸಪ್ಪ ಅವರ ಬೈಕ್ ಬಂದಿದ್ದು, ಈ ವೇಳೆ ಮುಖಾಮುಖಿ ಡಿಕ್ಕಿಯಾಗಿ, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಮೃತ ರಕ್ಷಾ ಸ್ನೇಹಿತ ಚಂದನ್ಗೆ ಗಂಭೀರ ಗಾಯವಾಗಿತ್ತು. ಈ ಕುರಿತು ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಪ್ರತ್ಯೇಕ ಘಟನೆ: ಕಾಫಿ ಎಸ್ಟೇಟ್ ಮ್ಯಾನೇಜರ್ ಅನುಮಾನಾಸ್ಪದ ಸಾವು, ಹೆಣ್ಣು ಕೊಟ್ಟ ಮಾವನನ್ನೇ ಹತ್ಯೆಗೈದ ಅಳಿಯ
ಬೆಂಗಳೂರು: ಆಗಸ್ಟ್ 16 ರ ರಾತ್ರಿ 8 ಗಂಟೆ ಸುಮಾರಿಗೆ ನಗರದ ಕೆಂಗೇರಿ ನೈಸ್ ರೋಡ್ ಬಳಿಯ ದೊಡ್ಡಬೆಲೆ ಜಂಕ್ಷನ್ನಲ್ಲಿ ಕರ್ತವ್ಯದಲ್ಲಿದ್ದ ಹೋಮ್ ಗಾರ್ಡ್ಗೆ ಕ್ಯಾಂಟರ್ ಡಿಕ್ಕಿಯಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಗರದ ಒಳಗಡೆ ಬರುತ್ತಿದ್ದ ವಾಹನಗಳನ್ನು ಹೋಂ ಗಾರ್ಡ್ ಡೈವರ್ಟ್ ಮಾಡುತ್ತಿದ್ದರು. ಈ ವೇಳೆ ಕುಂಬಳಗೋಡು ಕಡೆಯಿಂದ ಬರುತ್ತಿದ್ದ ಕ್ಯಾಂಟರ್ನ್ನು ಡೈವರ್ಟ್ ಮಾಡಲು ಮುಂದಾಗಿದ್ದ ಹೋಂ ಗಾರ್ಡ್ ವಿಜಯ್ ಕುಮಾರ್ಗೆ ನೇರವಾಗಿ ಹೋಗುತ್ತಿದ್ದ ಟ್ಯಾಂಕರ್ ಡಿಕ್ಕಿ ಹೊಡೆದಿತ್ತು. ಇದರಿಂದ ಕೆಳಗೆ ಬಿದ್ದ ಹೋಂಗಾರ್ಡ್ ಮೇಲೆ ಕ್ಯಾಂಟರ್ ಹರಿದಿದ್ದು, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಿಜಯ್ ಕುಮಾರ್ ಅವರನ್ನು ತಕ್ಷಣವೇ ಟ್ರಾಫಿಕ್ ಪೊಲೀಸ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಮಾರ್ಗ ಮಧ್ಯೆಯೆ ವಿಜಯ್ ಕುಮಾರ್ ಮೃತಪಟ್ಟಿದ್ದರು. ಈ ಕುರಿತು ಕೆಂಗೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ