ಬೆಂಗಳೂರು, ಆಗಸ್ಟ್ 14 : ಕಾವೇರಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡು (Tamil Nadu) ಸರ್ಕಾರ ಇಷ್ಟು ಬೇಗ ಸುಪ್ರೀಂ ಕೋರ್ಟ್ (Supreme Court) ಮೊರೆ ಹೋಗುವ ಅಗತ್ಯ ಇರಲಿಲ್ಲ. ಪರಿಸ್ಥಿತಿ ನೋಡಿಕೊಂಡು ನಾವೇ ನೀರು ಕೊಡುತ್ತಿದ್ದೆವು. ಅಷ್ಟಕ್ಕೂ ನೀರು ಕೊಡುವುದು, ಬಿಡುವುದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಕೈಯಲ್ಲಿದೆ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸೋಮವಾರ ಹೇಳಿದರು. ಕರ್ನಾಟಕ ಸರ್ಕಾರವು ತಮ್ಮ ಪಾಲಿನ ನೀರು ಬಿಡುಗಡೆ ಮಾಡುತ್ತಿಲ್ಲ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ ವಿಚಾರವಾಗಿ ಶಿವಕುಮಾರ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಮಳೆ ಎಷ್ಟು ಬರ್ತಿದೆ, ಕಾವೇರಿ ಜಲಾಶಯ ಪ್ರದೇಶದಲ್ಲಿ ನೀರು ಎಷ್ಟಿದೆ ಎಷ್ಟಿದೆ ಎಂಬುದನ್ನು ಗಮನಿಸುತ್ತಿದ್ದೇವೆ. ಬೆಳೆಗಳನ್ನು ಬೆಳೆಯುವ ವಿಚಾರವಾಗಿಯೂ ಕೃಷಿ ಸಚಿವ ಚಲುವರಾಯಸ್ವಾಮಿ ರೈತರಿಗೆ ಸಂದೇಶ ನೀಡಿದ್ದಾರೆ. ಈಗಿನ ಪರಿಸ್ಥಿತಿ ಏನು ಎಂಬುದು ಗೊತ್ತಿದೆ. ಸದ್ಯಕ್ಕೆ ಡಿಸ್ಟೆನ್ಸ್ ಫಾರ್ಮುಲಾ ಬಳಸಬೇಕಿದೆ. ನಾವೇ ನಮ್ಮ ವಿಚಾರ ನೋಡಿಕೊಂಡು, ನಮಗೆ ಬೇಕಿರುವ ನೀರು ಇಟ್ಟುಕೊಂಡು, ಕುಡಿಯುವ ನೀರು ಇಟ್ಟುಕೊಂಡು ನಮ್ಮ ರೈತರ ಭಾವನೆ ಅರಿತು, ಅವರಿಗೂ ನೀರು ಕೊಡುತ್ತಿದ್ದೆವು. ಅಷ್ಟಕ್ಕೂ ನೀರು ಕೊಡುವುದು ಎಲ್ಲಾ ಪ್ರಾಧಿಕಾರದ ಕೈಯಲ್ಲಿದೆ. ನಾವು ಎರಡೂ ರಾಜ್ಯಗಳ ರೈತರನ್ನು ಉಳಿಸಬೇಕಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಇದನ್ನೂ ಓದಿ: Kaveri Water Dispute: ಕಾವೇರಿ ನೀರಿಗಾಗಿ ಮತ್ತೆ ಕ್ಯಾತೆ; ಸುಪ್ರೀಂ ಕೋರ್ಟ್ ಮೊರೆಹೋದ ತಮಿಳುನಾಡು
ವಿವಾದದ ಮೂಲಕ ಎರಡೂ ರಾಜ್ಯಗಳ ರೈತರನ್ನು ಹೈರಾಣಾಗಿಸುವುದು ಬೇಡ ಎಂದು ತಮಿಳುನಾಡಿಗೂ ಮನವಿ ಮಾಡುತ್ತೇನೆ. ಸಂಪೂರ್ಣ ಮಾಹಿತಿ ಕೈಸೇರಿದ ಬಳಿಕ ಅಡ್ವೋಕೇಟ್ ಜನರಲ್ ಬಳಿ ಮಾತನಾಡುತ್ತೇನೆ. ಬಳಿಕ ಅವರ ಜೊತೆಯಲ್ಲಿ ಮಾತನಾಡುತ್ತೇನೆ ಎಂದು ಅವರು ಹೇಳಿದರು.
ಸದ್ಯದ ಮಟ್ಟಿಗೆ ನಾವು ಜಗಳ ಮಾಡಿಕೊಳ್ಳುವಂಥ ಸಂದರ್ಭ ಏನಿಲ್ಲ. ನಾವೆಲ್ಲಾ ಅಣ್ಣ ತಮ್ಮಂದಿರು ಅಂತ ಮೊದಲಿನಿಂದಲೂ ಹೇಳಿದ್ದೇನೆ. ನಮ್ಮ ರೈತರಿಗೆ ಸಂದೇಶ ನೀಡಲಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ಕಾರಣ ಹೆಚ್ಚು ನೀರು ಬಿಡಲಾಗದು ಎಂದು ಕರ್ನಾಟಕ ಸರ್ಕಾರದ ಅಧಿಕಾರಿಗಳು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕಳೆದ ವಾರ ತಿಳಿಸಿದ್ದರು. ಇದರಿಂದ ತಮಿಳುನಾಡು ಅಸಮಾಧಾನಗೊಂಡಿದೆ. ಹೀಗಾಗಿ ಅದು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:09 pm, Mon, 14 August 23