ಶಿವಮೊಗ್ಗ: ಉರುಳಿಗೆ ಬಿದ್ದು ಗಂಡು ಚಿರತೆ ಸಾವು
ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿರುವ ಘಟನೆ ಭದ್ರಾವತಿ ತಾಲೂಕಿನ ಅಗರದಹಳ್ಳಿಯಲ್ಲಿ ನಡೆದಿದೆ.
ಶಿವಮೊಗ್ಗ: ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿರುವ ಘಟನೆ ಭದ್ರಾವತಿ (Bhadravathi) ತಾಲೂಕಿನ ಅಗರದಹಳ್ಳಿಯಲ್ಲಿ ನಡೆದಿದೆ. ಚಿರತೆ (Leopard) ಭದ್ರಾ ಅಭಯಾರಣ್ಯದ ವಲಯದಿಂದ ಹೊರಬಂದು ಅಗರದಹಳ್ಳಿಯ ಕಾಲುವೆ ಕೆಳಗೆ ಸೇರಿಕೊಂಡಿತ್ತು. ಇದನ್ನು ಸೆರೆ ಹಿಡಿಯಲು ಭದ್ರಾ ಕಣಿವಮ್ಮ ದೇವಸ್ಥಾನದ ಬಳಿ ಕಳೆದ ಒಂದು ತಿಂಗಳಿಂದ ಬೋನು ಇಟ್ಟಿದ್ದರೂ ಚಿರತೆ ಸೆರೆ ಸಿಕ್ಕಿರಲಿಲ್ಲ. ಆದರೆ ತಡರಾತ್ರಿ ಕಾಲುವೆಯಿಂದ ಅಡಿಕೆ ತೋಟಕ್ಕೆ ಹೋಗವಾಗ ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿದೆ. ಚಿರತೆಯ ಸಾವಿನ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಅಪರಾಧಿಗೆ ದಂಡ ಸಹಿತ 20 ವರ್ಷ ಜೈಲುಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್
ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದಾಗ ಇಲಾಖೆಯ ಉರುಳಲ್ಲ ಎಂದು ತಿಳಿದಿದೆ. ಅಲ್ಲದೇ ಮೃತಪಟ್ಟಿದ್ದು ಗಂಡು ಚಿರತೆ ಎಂದು ಗುರುತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಣಿ ಸಂರಕ್ಷಣೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
ಬಾವಿಗೆ ಬಿದ್ದಿದ್ದ ಎರಡು ಎತ್ತುಗಳ ರಕ್ಷಣೆ
ಚಿಕ್ಕೋಡಿ: ಬಾವಿಗೆ ಬಿದ್ದಿದ್ದ ಎರಡು ಎತ್ತುಗಳನ್ನು ರಕ್ಷಣೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮದಿಹಳ್ಳಿ ಗ್ರಾಮದ ಜಮೀನಿನಲ್ಲಿನ 66 ಅಡಿ ಆಳದ ಬಾವಿಗೆ ಎತ್ತುಗಳು ಬಿದ್ದಿದ್ದವು.
ರೈತ ಭೀಮಪ್ಪ ಪೂಜೇರಿ ಎಂಬುವರಿಗೆ ಸೇರಿದ್ದ ಎತ್ತುಗಳು ಬಾವಿಗೆ ಬೀಳುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಎರಡು ಎತ್ತುಗಳನ್ನ ರಕ್ಷಿಸಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ