ರಾಯಚೂರು, ಆ.10: ಜಿಲ್ಲೆಯಲ್ಲಿ ಅಕ್ರಮ ಮರಳು(Sand Mafia) ದಂಧೆಕೋರರ ಅಟ್ಟಹಾಸ ಹೆಚ್ಚಾಗಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮದ್ಲಾಪುರ ಬಳಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಅಕ್ರಮ ಮರಳುಗಾರಿಕೆ ಕಾರ್ಯಾಚರಣೆ ವೇಳೆ ಐದಾರು ಜನ ಅಕ್ರಮ ಮರಳು ದಂಧೆಕೋರರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ.
ಘಟನೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿರುವ ಖನಿಜ ರಕ್ಷಣಾ ಪಡೆ ಸಿಬ್ಬಂದಿಯಾಗಿರುವ ಹಾಗೂ ನಿವೃತ್ತ ಸೈನಿಕರಾಗಿರುವ ನೀಲಪ್ಪ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆದಿದೆ. ನೀಲಪ್ಪನ ತಲೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿದ್ದು ತಲೆಗೆ ನಾಲ್ಕು ಸ್ಟಿಚ್ಗಳನ್ನ ಹಾಕಲಾಗಿದೆ. ಹಾಗೂ ಮುಖ,ಎಡ ಕಣ್ಣಿನ ಭಾಗಕ್ಕೂ ಗಂಭೀರ ಗಾಯಗಳಾಗಿವೆ. ಸದ್ಯ ಗಾಯಾಳು ನೀಲಪ್ಪನಿಗೆ ರಾಯಚೂರು ನಗರದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್: ಇಂದಿನಿಂದ ಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ, ಎಲ್ಲಿಯವರೆಗೆ?
ನೀಲಪ್ಪ ಅವರು ಸೇನಾ ನಿವೃತ್ತಿ ಬಳಿಕ ಗಣಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ತುಂಗಭದ್ರಾ ನದಿಯಲ್ಲಿ ನಿರಂತರ ಅಕ್ರಮ ಮರಳು ಗಣಿಗಾರಿಕೆ ಹಿನ್ನೆಲೆ ಹಿರಿಯ ಭೂ ವಿಜ್ಞಾನಿ ಮಂಜುನಾಥ ನೇತೃತ್ವದ ತಂಡದಿಂದ ದಾಳಿ ನಡೆದಿತ್ತು. ಯಡಿವಾಳ, ಚಿಕಲಪರ್ವಿ ಹಾಗೂ ಮದ್ಲಾಪುರ ಭಾಗದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಆಕ್ರಮ ಮರಳು ಸಾಗಾಟದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ತಂಡ 4 ಜೆಸಿಬಿ, ಟಿಪ್ಪರ್ ಜಪ್ತಿ ಮಾಡಿಕೊಂಡಿದ್ದರು. ಜಪ್ತಿ ಮಾಡಿದ ವಾಹನ ಠಾಣೆಗೆ ತರುವಾಗ ಮರಳು ದಂಧೆಕೋರರು ಹಲ್ಲೆ ನಡೆಸಿದ್ದಾರೆ. ಟಿಪ್ಪರ್ ಹಾಗೂ ಜೆಸಿಬಿ ಚಾಲಕರ ವಿರುದ್ಧ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು ಗಣಿ & ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನೀಡಿದ ದೂರಿನನ್ವಯ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ