ಆಪರೇಷನ್ ಹಸ್ತ: ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆ
ಯಶವಂತಪುರ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಅವರೊಂದಿಗೆ ಬಿಜೆಪಿ ನಾಯಕರು ಸಂಧಾನ ನಡೆಸುತ್ತಿರುವ ನಡುವೆಯೇ ಸೋಮಶೇಖರ್ ಬೆಂಬಲಿಗರು ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಬೆಂಗಳೂರು, ಆಗಸ್ಟ್ 21: ಕಾಂಗ್ರೆಸ್ ಪಕ್ಷವು ಆಪರೇಷನ್ ಹಸ್ತ ಆರಂಭಿಸಿದ್ದು, ಮೊದಲ ಹಂತವಾಗಿ ಯಶವಂತಪುರ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ (S.T.Somashekhar) ಅವರ ಬೆಂಬಲಿಗರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಸಮ್ಮುಖದಲ್ಲಿ ಇಂದು ಸೋಮಶೇಖರ್ ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಬಿಬಿಎಂಪಿ ಮಾಜಿ ಸದಸ್ಯರಾದ ಆರ್ಯ ಶ್ರೀನಿವಾಸ್, ರಾಜಣ್ಣ, ಜಿ.ಪಂ. ಮಾಜಿ ಸದಸ್ಯರಾದ ಶಿವಮಾದಯ್ಯ, ಹನುಮಂತೇಗೌಡ, ತಾಲೂಕು ಪಂಚಾಯತ್ ಮಾಜಿ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ, ನೆಲಮಂಗಲ ಕಾಂಗ್ರೆಸ್ ಶಾಸಕ ಎನ್.ಶ್ರೀನಿವಾಸ್, ಆನೇಕಲ್ ಕಾಂಗ್ರೆಸ್ ಶಾಸಕ ಬಿ.ಶಿವಣ್ಣ ಉಪಸ್ಥಿತರಿದ್ದರು.
ಇದನ್ನೂ ಓದಿ: ಆಪರೇಷನ್ ಹಸ್ತ ಭೀತಿ; ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳೇನು?
ಇದೇ ವೇಳೆ ಮಾತನಾಡಿದ ಮಾಜಿ ಪಾಲಿಕೆ ಸದಸ್ಯ ರಾಜಣ್ಣ, ಸೋಮಶೇಖರ್ ಅವರಿಗೆ ಬಿಜೆಪಿಯಲ್ಲಿ ಇಲ್ಲಸಲ್ಲದ ಕಾಟ ಕೊಡುತ್ತಿದ್ದಾರೆ. ಹೀಗಾಗಿ ಸೋಮಶೇಖರ್ ಅವರು ಆದಷ್ಟು ಬೇಗ ಕಾಂಗ್ರೆಸ್ ಪಕ್ಷಕ್ಕೆ ಬರಬೇಕು ಎಂದು ವೇದಿಕೆ ಮೇಲೆಯೇ ಆಹ್ವಾನ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವೀಟ್
ಯಶವಂತಪುರ ವಿಧಾನಸಭಾ ಕ್ಷೇತ್ರದ ಅನ್ಯ ಪಕ್ಷದ ಕಾರ್ಯಕರ್ತರು, ಮುಖಂಡರು ಇಂದು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ನಂಬಿ ಪಕ್ಷ ಸೇರ್ಪಡೆಯಾದರು. ಅವರನ್ನು ಸ್ವಾಗತಿಸಿ, ಶುಭ ಹಾರೈಸಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ, ಸಂವಿಧಾನ, ರಾಷ್ಟ್ರಧ್ವಜ ನೀಡಿದ ಪಕ್ಷ ನಮ್ಮದು. ಕಾಂಗ್ರೆಸ್ ಪಕ್ಷ ಪ್ರತಿಯೊಂದು ವರ್ಗದ ಜನರ ಬದುಕು… pic.twitter.com/FlqMfK4UFw
— DK Shivakumar (@DKShivakumar) August 21, 2023
ಸೋಮಶೇಖರ್ ಹೆಸರು ಹೇಳದಂತೆ ತಡೆದ ಶಾಸಕ ಶ್ರೀನಿವಾಸ್
ಕೆಪಿಸಿಸಿ ಸಭೆಯಲ್ಲಿ ಮಾತನಾಡುತ್ತಿದ್ದ ಆನೆಕಲ್ ಶಾಸಕ ಶಿವಣ್ಣ ಅವರು, ಸೋಮಶೇಖರ್ ಹೆಸರು ಹೇಳಿದ್ದಾರೆ. ಈ ವೇಳೆ ಸೋಮಶೇಖರ್ ಹೆಸರು ಹೇಳದಂತೆ ನೆಲಮಂಗಲ ಶಾಸಕ ಶ್ರೀನಿವಾಸ್ ಅವರು ತಡೆದಿದ್ದಾರೆ. ಕೂಡಲೇ ಮಾತು ಬದಲಾಯಿಸಿದ ಅವರು, ಸೋಮಶೇಖರ್ ರಾಜಕೀಯ ಬೆಳವಣಿಗೆ ಬಗ್ಗೆ ಹೇಳಿದರು. ನಾನು ಮತ್ತು ಸೋಮಶೇಖರ್ ಒಂದೇ ಬಾರಿಗೆ ಚುನಾವಣೆಗೆ ಸ್ಫರ್ಧೆ ಮಾಡಿದ್ದೆವು. 2004 ರಲ್ಲಿ ನಮಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಎರಡು ಬಾರಿ ಸೋತರೂ ಮತ್ತೆ ಟಿಕೆಟ್ ನೀಡಿತ್ತು. ಇದರರ್ಥ ಕಾಂಗ್ರೆಸ್ ನಮ್ಮ ಕೈಬಿಡಲ್ಲ. ಕೆಲವೊಂದು ಕಾರಣಗಳಿಂದ ಸೋಮಶೇಖರ್ ಬಿಜೆಪಿ ಹೋಗಿದ್ದಾರೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:48 pm, Mon, 21 August 23