ಅವರಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ, ನಾವು ಯಾವುದೇ ಆಪರೇಷನ್ ಹಸ್ತ ಮಾಡುತ್ತಿಲ್ಲ: ಡಿಸಿಎಂ ಡಿಕೆ ಶಿವಕುಮಾರ್
ಆಪರೇಷನ್ ಈ ಒಂದು ಶಬ್ದ ಸದ್ಯ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತಾಗಿ ಮೈಸೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು, ನಾವಾಗಿಯೇ ಯಾರನ್ನೂ ಕರೆತರುವ ಪ್ರಯತ್ನ ಮಾಡುತ್ತಿಲ್ಲ. ಅವರಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ. ನಾವು ಯಾವುದೇ ಆಪರೇಷನ್ ಹಸ್ತ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಮೈಸೂರು, ಆಗಸ್ಟ್ 24: ನಾವಾಗಿಯೇ ಯಾರನ್ನೂ ಕರೆತರುವ ಪ್ರಯತ್ನ ಮಾಡುತ್ತಿಲ್ಲ. ಅವರಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ನಾವು ಯಾವುದೇ ಆಪರೇಷನ್ ಹಸ್ತ ಮಾಡುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಬರುವವರಿಗೆ ನಾವು ಸ್ವಾಗತ ಕೋರುತ್ತಿದ್ದೇವೆ. ತಮ್ಮ ಭವಿಷ್ಯ, ನಮ್ಮ ಪಕ್ಷದ ವರ್ಚಸ್ಸು ಗಮನಿಸಿ ನಿರ್ಧರಿಸುತ್ತಿದ್ದಾರೆ. ಎಷ್ಟು ಜನ ಬರ್ತಾರೆ ಅಂತಾ ಈಗಲೇ ನಾನು ಹೇಳಲು ಸಾಧ್ಯವಿಲ್ಲ. ಎಲ್ಲದಕ್ಕೂ ಕಾಲ, ಸಮಯ ಗಳಿಗೆ ಎಂಬುದು ಇರುತ್ತದೆ. ಆ ಗಳಿಗೆ ಬಂದಾಗ ಎಲ್ಲವೂ ನಡೆಯುತ್ತದೆ ಎಂದರು.
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಸೆಳೆಯಲು ಯತ್ನಿಸಿದೆ ಎಂಬ ವಿಚಾರವಾಗಿ ಮಾತನಾಡಿ, ಇಂತಹ ಮಾತು ಹೇಳುತ್ತಾ ಹೋದರೆ ಅದು ಬಹಳ ದೊಡ್ಡದಾಗುತ್ತೆ. ಈಗ ಅದರ ಬಗ್ಗೆ ಚರ್ಚೆ ಬೇಡ ಎಂದು ಹೇಳಿದರು.
ದೇಶದ ಎಲ್ಲ ಕಡೆ ನಮ್ಮ ಗ್ಯಾರಂಟಿ ಯೋಜನೆಗಳು ಸದ್ದು ಮಾಡುತ್ತಿವೆ
ದೇಶದ ಎಲ್ಲ ಕಡೆ ನಮ್ಮ ಗ್ಯಾರಂಟಿ ಯೋಜನೆಗಳು ಸದ್ದು ಮಾಡುತ್ತಿವೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತೆ ಅಂತಾ ಪ್ರಧಾನಮಂತ್ರಿ ಮೋದಿ ಟೀಕಿಸಿದ್ದರು. ಈಗ ಅವರದೇ ಸರ್ಕಾರ ನಮ್ಮನ್ನು ನೋಡಿ ಗ್ಯಾರಂಟಿ ಜಾರಿ ಮಾಡಿದೆ.
ಇದನ್ನೂ ಓದಿ: ಕಾಂಗ್ರೆಸ್ ಸೇರ್ಪಡೆಯಾದ ಆಯನೂರು ಮಂಜುನಾಥ್, ಬೆಂಗಳೂರಿನಿಂದಲೇ ಶಿವಮೊಗ್ಗ ಕೈ ನಾಯಕನಿಗೆ ತಿರುಗೇಟು
ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಇದಕ್ಕೆ ಪ್ರಧಾನಮಂತ್ರಿ ಮೋದಿಯವರು ಏನು ಹೇಳುತ್ತಾರೆ. ದೇಶದಲ್ಲಿ ಎಲ್ಲರೂ ಈಗ ನಮ್ಮ ಕಾರ್ಯಕ್ರಮಗಳನ್ನು ನೋಡುತ್ತಿದ್ದಾರೆ ಎಂದು ಹೇಳಿದರು.
ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮ ಬೆಳಗಾವಿಯಿಂದ ಶಿಫ್ಟ್ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ
ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮ ಬೆಳಗಾವಿಯಿಂದ ಶಿಫ್ಟ್ ವಿಚಾರವಾಗಿ ಮಾತನಾಡಿದ ಅವರು, ಕಾರ್ಯಕ್ರಮ ಸ್ಥಳಾಂತರ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟನೆ ನೀಡಿದರು. ಬೆಳಗಾವಿಯಲ್ಲಿ ಮತ್ತೊಂದು ಕಾರ್ಯಕ್ರಮ ಆಯೋಜಿಸಲಾಗುವುದು. ಸದ್ಯ ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.
ಇದನ್ನೂ ಓದಿ: ದೆಹಲಿಗೆ ಬರುವಂತೆ ಆಹ್ವಾನ: ಕಾಂಗ್ರೆಸ್ ಆಪರೇಷನ್ ಹಸ್ತದ ಗುಟ್ಟು ಬಿಚ್ಚಿಟ್ಟ ಜೆಡಿಎಸ್ ಶಾಸಕ
ಆ.30ರಂದು ಫಲಾನುಭವಿಗಳ ಬ್ಯಾಂಕ್ ಖಾತೆಗೆ ₹2000 ಜಮೆ ಆಗಲಿದೆ. ಫಲಾನುಭವಿಗಳ ಮೊಬೈಲ್ಗೆ ಕೂಡಲೇ ಸಂದೇಶ ರವಾನೆ ಆಗಲಿದೆ. ನಮ್ಮಲ್ಲಿ ಹಣದ ಕೊರತೆ ಇಲ್ಲ, ಹಣ ಬ್ಯಾಂಕ್ಗೆ ಡೆಪಾಸಿಟ್ ಆಗಿದೆ. ಸರ್ವರ್ ಸಮಸ್ಯೆಯಾದರೆ ಹಣ ಜಮೆ ಆಗುವುದು ತಡವಾಗಬಹುದು ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.