ಮೈಸೂರು, ಆ.22: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2023ಕ್ಕೆ(Mysore Dasara 2023) ಅರಮನೆ ನಗರಿಯಲ್ಲಿ ಭರ್ಜರಿ ಸಿದ್ಧತೆಗಳು ಶುರುವಾಗಿವೆ. ಮೈಸೂರು ದಸರಾ ಮಹೋತ್ಸವವನ್ನು ಅರ್ಥಪೂರ್ಣ, ಅದ್ದೂರಿಯಾಗಿ ಆಚರಿಸಬೇಕು ಮತ್ತು ದಸರಾ ಜನರ ಉತ್ಸವವಾಗಬೇಕು ಎಂದು ಈ ಹಿಂದೆ ಸಿಎಂ ಸಿದ್ದರಾಮಯ್ಯ(Siddaramaiah) ಹೇಳಿದ್ದರು. ಅದರಂತೆಯೇ ಈ ಬಾರಿಯೂ ವಿದ್ಯುತ್ ದೀಪಾಲಂಕಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮೈಸೂರಿನ 119 ವೃತ್ತಗಳಲ್ಲಿ ಝಗಮಗಿಸುವ ವಿದ್ಯುತ್ ದೀಪಾಲಂಕಾರಕ್ಕೆ ತಯಾರಿ ನಡೆದಿದೆ.
ಮೈಸೂರಿನ 119 ವೃತ್ತಗಳಲ್ಲಿ ಅಂದ್ರೆ ಬರೋಬ್ಬರಿ 135 ಕಿ.ಮೀ ರಸ್ತೆಗೆ ವಿದ್ಯುತ್ ದೀಪಾಲಂಕಾರ ಮಾಡಲು ಚಿಂತನೆ ನಡೆದಿದೆ. ಕೆ.ಆರ್.ವೃತ್ತ, ಚಾಮರಾಜ ವೃತ್ತ, ರಾಮಸ್ವಾಮಿ ವೃತ್ತ, ಗನ್ಹೌಸ್ ವೃತ್ತ, ಎಲ್ಐಸಿ ವೃತ್ತ ಸೇರಿ ನಗರದ ಹಲವು ಕಡೆ ದೀಪಾಲಂಕಾರ ಮಾಡಲಾಗುತ್ತೆ. ಮೈಸೂರಿನ ಸರ್ಕಾರಿ ಕಟ್ಟಡಗಳಿಗೂ ವಿಶೇಷ ದೀಪಾಲಂಕಾರ ಮಾಡಲಾಗುತ್ತೆ. 6.03 ಕೋಟಿ ರೂ. ಅಲ್ಪಾವಧಿ ಟೆಂಡರ್ ಮೂಲಕ ಚೆಸ್ಕಾಂನಿಂದ ಆಕರ್ಷಕ ವಿದ್ಯುತ್ ದೀಪಾಲಂಕಾರಕ್ಕೆ ಸಿದ್ದತೆ ನಡೆಯುತ್ತಿದೆ.
ಅಕ್ಟೋಬರ್ 15ರ ಬೆಳಿಗ್ಗೆ 10.15 ರಿಂದ 10.30 ಕ್ಕೆ ಸಲ್ಲುವ ಮಹೂರ್ತದಲ್ಲಿ ಮೈಸೂರು ದಸರಾ ಉದ್ಘಾಟನೆ ನೆರವೇರಲಿದ್ದು, ಪಂಜಿನ ಕವಾಯತು ವಿಜಯದಶಮಿ ದಿನದಂದು ನಡೆಯಲಿದೆ. ಈ ಬಾರಿ ದೀಪಾಲಂಕಾರ ದಸರಾ ಉದ್ಘಾಟನೆಯಾದ ದಿನದಿಂದ ದಸರಾ ಮುಗಿಯುವವರೆಗೂ ಹಾಗೂ ನಂತರ ಒಂದು ವಾರದವವರೆಗೆ ದೀಪಾಲಂಕಾರ ಇರಬೇಕು ಎಂದು ಸಿಎಂ ಸೂಚಿಸಿದ್ದಾರೆ.
ಪ್ರಸಕ್ತ ವರ್ಷ ದಸರಾ ಅಂಗವಾಗಿ ಏರ್ ಶೋ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ಈ ವಿಚಾರವಾಗಿ ರಕ್ಷಣಾ ಸಚಿವರ ಜೊತೆ ಚರ್ಚೆ ಮಾಡುತ್ತೇವೆ. ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದಾಗ ದಸರಾ ವೇಳೆ ಏರ್ ಶೋ ಆಯೋಜಿಸಿದ್ದೆವು ಎಂದು ಅವರು ಹೇಳಿದರು. ಮೈಸೂರು ದಸರಾ ಮಹೋತ್ಸವದಲ್ಲಿ ಅನಗತ್ಯ ಖರ್ಚು ಇರಬಾರದು. ಶಕ್ತಿ ಯೋಜನೆ ಜಾರಿಯಾಗಿರುವ ಕಾರಣ ಮಹಿಳೆಯರು ಹೆಚ್ಚು ಬರುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ