ಮೈಸೂರು: ಪಾನಮತ್ತರಾಗಿದ್ದ ಕೆಎಸ್‌ಆರ್‌ಟಿಸಿ ಬಸ್ (KSRTC Bus) ಚಾಲಕನೊಬ್ಬ ವಾಹನ ಚಲಾಯಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮೈಸೂರಿನ (Mysore) ಹ್ಯಾಂಡ್‌ಪೋಸ್ಟ್ ಬಳಿ ಬಸ್ ನಿಲ್ಲಿಸಿದ ವಿದ್ಯಮಾನ ಸೋಮವಾರ ನಡೆದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಚಾಲಕ ಮದ್ಯಪಾನದ ಮತ್ತಿನಲ್ಲಿದ್ದ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹಂಚಿಕೊಂಡಿದ್ದಾರೆ. ಚಾಲಕನನ್ನು ಗೋಪಾಲ ಕೃಷ್ಣ ಎಂದು ಗುರುತಿಸಲಾಗಿದ್ದು, ಇವರು ಎಚ್‌ಡಿ ಕೋಟೆ-ಮೈಸೂರು ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಕರ್ತವ್ಯವನ್ನು ಪ್ರಾರಂಭಿಸುವ ಮೊದಲು ಬೆಳಿಗ್ಗೆ ಮದ್ಯಪಾನ ಮಾಡಿದ್ದೆ ಎಂದು ಗೋಪಾಲ ಕೃಷ್ಣ ಹೇಳುತ್ತಿರುವ ವೀಡಿಯೊ ವೈರಲ್ ಆಗಿದೆ.
ಬಸ್‌ನಲ್ಲಿ 50 ಪ್ರಯಾಣಿಕರಿದ್ದರು ಎನ್ನಲಾಗಿದೆ. ಮದ್ಯಪಾನದ ಅಮಲಿನಲ್ಲಿದ್ದ ಚಾಲಕ ಚಾಲನೆ ಮಾಡಲು ಸಾಧ್ಯವಾಗದೆ, ರಸ್ತೆಯ ಮಧ್ಯದಲ್ಲಿಯೇ ಬಸ್ ಅನ್ನು ನಿಲ್ಲಿಸಿದ್ದರಿಂದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಸಿಟ್ಟಿಗೆದ್ದ ಪ್ರಯಾಣಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಕ್ಕಾಗಿ ಚಾಲಕನನ್ನು ನಿಂದಿಸುತ್ತಿದ್ದ ದೃಶ್ಯ ಕಂಡುಬಂತು. ಘಟನೆಯ ನಂತರ ಕೆಎಸ್‌ಆರ್‌ಟಿಸಿ ಬದಲಿ ಚಾಲಕನನ್ನು ಕಳುಹಿಸಿ ಬಸ್ ಅನ್ನು ಡಿಪೋಗೆ ಕರೆಸಿಕೊಂಡಿದೆ. ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಸಂಭವಿಸಿದ ಮತ್ತೊಂದು ಘಟನೆಯಲ್ಲಿ, ಮಡಿಕೇರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸೊಂದು ಪ್ರತಿಮೆಯೊಂದಕ್ಕೆ ಡಿಕ್ಕಿಯಾಗಿದೆ. ರಾಂಗ್ ಸೈಡ್ನಲ್ಲಿ ಚಲಿಸಿದ ಟ್ರಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಬಸ್ ಚಾಲಕ ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್, ಘಟನೆಯ ಸಮಯದಲ್ಲಿ ಬಸ್ ಖಾಲಿಯಾಗಿತ್ತು. ಚಾಲಕ ಮತ್ತು ಕಂಡಕ್ಟರ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಮಧ್ಯೆ, ಮೈಸೂರಿನ ಹುಣಸೂರು ತಾಲೂಕಿನ ಮಲ್ಲಿನಾಥಪುರದ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಕೂಟರ್ ಸವಾರ ಗಿರೀಶ್ (60) ಮೃತಪಟ್ಟಿದ್ದಾರೆ. ಅಪರಿಚಿತ ವಾಹನದ ಸಮೇತ ಅದರ ಚಾಲಕ ಪರಾರಿಯಾಗಿದ್ದಾನೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ