ಆಷಾಢ ಮಾಸದ (Ashada Masam 2023) ಮೊದಲ ಶುಕ್ರವಾರದ (Ashada Friday) ಪೂಜೆಗೆ ಕ್ಷಣಗಣನೆ ಆರಂಭವಾಗಿದೆ. ಇದಕ್ಕಾಗಿ ಮೈಸೂರಿನ (Mysore) ಚಾಮುಂಡಿಬೆಟ್ಟದಲ್ಲಿ (Chamundeshwari) ಸಿದ್ದತಾ ಕೆಲಸ ಭರದಿಂದ ಸಾಗಿದೆ. ಲಕ್ಷಾಂತರ ಭಕ್ತರು ಆಷಾಢ ಮಾಸದ ಪೂಜೆಯಲ್ಲಿ ಭಾಗವಹಿಸಲು ಕಾತುರದಿಂದ ಕಾಯುತ್ತಿದ್ದಾರೆ. ಶಕ್ತಿ ದೇವತೆಯ ಅನುಗ್ರಹಕ್ಕಾಗಿ ಪ್ರಾರ್ಥಿಸಲು ಸಜ್ಜಾಗಿದ್ದಾರೆ. ಬರುವ ಭಕ್ತರಿಗೆ ವಿಶೇಷ ಪ್ರಸಾದ ಸಿದ್ದಪಡಿಸಲಾಗುತ್ತಿದೆ. ಆಷಾಢ ಮಾಸ ಬಂತೆಂದ್ರೆ ಸಾಕು ಚಾಮುಂಡಿಬೆಟ್ಡದಲ್ಲಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡುತ್ತದೆ. ಕಾರಣ ಆಷಾಢಮಾಸದಲ್ಲಿ ಹೆಣ್ಣು ದೇವತೆಗಳನ್ನು, ಅದರಲ್ಲೂ ಶಕ್ತಿ ದೇವತೆಗಳನ್ನು ಪೂಜಿಸಿದ್ರೆ ಒಳ್ಳೆಯದಾಗುತ್ತದೆ ಎಂಬುದು ಪ್ರತೀತಿ. ಹೀಗಾಗಿ ಆಷಾಢದಲ್ಲಿ ಮೈಸೂರಿನ ಅಧಿದೇವತೆ ಬೆಟ್ಟದ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಈ ಪೂಜೆಗಾಗಿ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಚಾಮುಂಡಿಬೆಟ್ಟಕ್ಕೆ ಆಗಮಿಸುತ್ತಾರೆ. ಬರುವ ಭಕ್ತರಿಗೆ ಪ್ರಸಾದ ವಿತರಿಸಲು ಚಾಮುಂಡೇಶ್ವರಿ ಪೂಜಾ ಸಮಿತಿಯವರು ಸಿದ್ದತೆ ನಡೆಸಿದ್ದಾರೆ. ಇದಕ್ಕಾಗಿ 25 ಸಾವಿರ ಮ್ಯಾಂಗೋ ಬರ್ಫಿ ಸಿದ್ದಗೊಳಿಸಲಾಗುತ್ತಿದೆ.
ಮೈಸೂರಿನ ಚಾಮುಂಡಿ ಸೇವಾ ಸಮಿತಿಯವರು ಕಳೆದ ಹಲವು ವರ್ಷಗಳಿಂದ ಮೊದಲ ಆಷಾಢ ಶುಕ್ರವಾರದ ದಿನ ವಿಶೇಷ ಪ್ರಸಾದವನ್ನು ವಿತರಿಸುತ್ತಾ ಬಂದಿದ್ದಾರೆ. ಕಳೆದ ಬಾರಿ ವಿಶೇಷ ಮೈಸೂರು ಪಾಕ್ ವಿತರಿಸಲಾಗಿತ್ತು. ಈ ಬಾರಿ ಭಕ್ತರಿಗೆ ಮ್ಯಾಂಗೋ ಬರ್ಫಿ ವಿತರಿಸಲು ಸಿದ್ದತೆ ನಡೆಸಲಾಗಿದೆ. ಇದಕ್ಕಾಗಿಯೇ ಮ್ಯಾಂಗೋ ತಯಾರಿಕೆಯಲ್ಲಿ ಅಡುಗೆಯವರು ನಿರತರಾಗಿದ್ದಾರೆ.
ಮ್ಯಾಂಗೋ ಬರ್ಫಿ ತಯಾರಿಕೆಗಾಗಿ 30 ಕೆಜಿ ಮೈದಾ, 200 ಕೆಜಿ ಆಲ್ಕೋವಾ, ಸಕ್ಕರೆ 400 ಕೆಜಿ, ಮಾವಿನಹಣ್ಣಿನ ಫಲ್ಪ್ 100 ಲೀಟರ್, ಬಾದಾಮಿ 5 ಕೆಜಿ, ನಂದಿನಿ ತುಪ್ಪ 2 ಟಿನ್ ಹಾಗೂ ಮಿಲ್ಕ್ ಪೌಡರ್ 30 ಕೆಜಿ ಬಳಕೆ ಮಾಡಲಾಗುತ್ತಿದೆ. ಆಷಾಢ ಶುಕ್ರವಾದ ಬೆಳಗ್ಗೆಯಿಂದ ಪ್ರಸಾದ ವಿತರಣೆ ಮಾಡಲಾಗುತ್ತದೆ. ಸುಮಾರು 8ಕ್ಕೂ ಹೆಚ್ಚು ನುರಿತ ಅಡುಗೆ ಭಟ್ಟರು ಶ್ರದ್ದಾ ಭಕ್ತಿಯಿಂದ ಸಿಹಿ ಪ್ರಸಾದವನ್ನು ತಯಾರಿಸಿದ್ದಾರೆ. ತಾಯಿ ಚಾಮುಂಡೇಶ್ವರಿಯ ಕೃಪಾಕಟಾಕ್ಷದಿಂದ ಎಲ್ಲವೂ ಸುಸೂತ್ರವಾಗಿ ಆಗಿದ್ದು ಶುಕ್ರವಾರ ಭಕ್ತರು ಪ್ರಸಾದ ರೂಪವಾಗಿ ಮ್ಯಾಂಗೋ ಬರ್ಫಿ
ಸವಿ ಸವಿಯಲಿದ್ದಾರೆ.
ಶುಕ್ರವಾರ ಬೆಳಗ್ಗೆ 3.30 ರಿಂದಲೇ ಚಾಮುಂಡಿಬೆಟ್ಟದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಲಿವೆ. ತಾಯಿ ಚಾಮುಂಡೇಶ್ವರಿಗೆ ವಿಶೇಷ ಅಲಂಕಾರ ಪೂಜೆಗೆ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಒಟ್ಟಾರೆ ಅಧಿದೇವತೆ ತಾಯಿ ಚಾಮುಂಡೇಶ್ವರಿಯ ಆಷಾಢಮಾಸದ ಪೂಜೆಗೆ ಕ್ಷಣಗಣನೆ ಆರಂಭವಾಗಿದೆ.
ಮೈಸೂರು ಜಿಲ್ಲಾ ವರದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ