TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
ದೇವರಾಜ ಅರಸು ರಸ್ತೆಯ ಕೆ ಆರ್ ವೃತ್ತದ ಬಾಟ ಶೋರೂಂ ಬಳಿಯಿಂದ ಎತ್ತಿಕೊಂಡು ಹೋಗಿದ್ದ ಬೆಕ್ಕನ್ನು ಯುವಕ ಮರಳಿ ಅದರ ಮಾಲೀಕರಿಗೆ ಒಪ್ಪಿಸಿದ್ದಾನೆ.
ಮೈಸೂರು: ದೇವರಾಜ ಅರಸು ರಸ್ತೆಯ ಬಾಟ ಶೋರೂಂನಲ್ಲಿದ್ದ ಬೆಕ್ಕನ್ನು ಎತ್ತಿಕೊಂಡು ಹೋಗಿದ್ದ ಯುವಕ ವಾಪಸ್ ಮಾಲೀಕರಿಗೆ ಒಪ್ಪಿಸಿದ್ದಾನೆ. ಬೆಕ್ಕು ನೋಡಲು ಚೆನ್ನಾಗಿ ಕಂಡ ಹಿನ್ನೆಲೆ ಅದನ್ನು ಸಾಕಲೆಂದು ಮಂಡ್ಯದ ಯುವಕ ಜಿತೇಂದ್ರ ತನ್ನ ಮನೆಗೆ ಕೊಂಡೊಯ್ದಿದ್ದಾನೆ. ಬಳಿಕ ಟಿವಿ9 ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬೆಕ್ಕಿನ ನಾಪತ್ತೆ ಸುದ್ದಿ ಓದಿ ಸತ್ಯಾಂಶ ತಿಳಿದು ಮಾಲೀಕರಿಗೆ ವಾಪಸ್ ತಂದು ಮಾಲೀಕರಿಗೆ ಒಪ್ಪಿಸಿದ್ದಾನೆ. ಆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಜಾಹೀರಾತು ಫಲಪ್ರದವಾಗಿದ್ದು, ಬೆಕ್ಕು ಮರಳಿ ಮಾಲೀಕರ ಕೈ ಸೇರಿಕೊಂಡಿತು. ಅಲ್ಲದೆ, ಜಾಹೀರಾತಿನಲ್ಲಿ ಘೋಷಣೆ ಮಾಡಿದಂತೆ ಯುವಕನಿಗೆ ಮಾಲೀಕರು 5ಸಾವಿರ ರೂಪಾಯಿ ಬಹುಮಾನ ನೀಡಲು ಮುಂದಾದಾಗ ಜಿತೇಂದ್ರ ನಿರಾಕರಿಸಿದ್ದಾನೆ.
ಎರಡು ದಿನಗಳ ಹಿಂದೆ ದೇವರಾಜ ಅರಸು ರಸ್ತೆಯ ಕೆ ಆರ್ ವೃತ್ತದ ಬಾಟ ಶೋರೂಂನಿಂದ ಸೃಷ್ಟಿ ಎಂಬ ಹೆಸರಿನ ಬೆಕ್ಕು ನಾಪತ್ತೆಯಾಗಿತ್ತು. ಅದರಂತೆ ಮಾಲೀಕ ನಾಚಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ ಬೆಕ್ಕಿನ ಫೋಟೋಗಳ ಸಹಿತ ಅಪ್ಲೋಡ್ ಮಾಡಿ ಬೆಕ್ಕು ಕಾಣೆಯಾಗಿದೆ, ಹುಡುಕಿಕೊಟ್ಟವರಿಗೆ 5ಸಾವಿರ ಬಹುಮಾನ ನೀಡುವುದಾಗಿ ಬರೆದುಕೊಂಡಿದ್ದರು. ಅದಾದ ನಂತರ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದಾಗ ಯುವಕನೊಬ್ಬ ಬೆಕ್ಕನ್ನು ಎತ್ತಿಕೊಂಡು ಹೋಗುವ ದೃಶ್ಯಾವಳಿ ಸೆರೆಯಾಗಿದೆ. ಸದ್ಯ ಬೆಕ್ಕು ಮಾಲೀನ ಕೈಸೇರಿದೆ.
ಸಿಸಿಕ್ಯಾಮಾರದಲ್ಲಿ ಕಂಡಿದ್ದೇನು?
ಬೆಕ್ಕು ಕಳವಾದ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮಾರಗಳನ್ನು ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಹೊರಭಾಗದಲ್ಲಿ ಬೆಕ್ಕೊಂದು ನಿಂತಿರುತ್ತದೆ. ಇದನ್ನು ನೋಡಿದ ಯುವಕನೊಬ್ಬ ಹತ್ತಿರಕ್ಕೆ ಬಂದು ತನ್ನ ಬಳಿ ಕರೆಯುತ್ತಾನೆ. ನಂತರ ಅದನ್ನು ಹಿಡಿದುಕೊಂಡು ಸಿಸಿ ಕ್ಯಾಮಾರ ಇದ್ದ ಕಡೆಯ ದಾರಿಯಿಂದ ಹೋಗುವ ದೃಶ್ಯಾವಳಿ ಸೆರೆಯಾಗಿದೆ.