ಬೆಂಗಳೂರು, ಆಗಸ್ಟ್ 15: ಕರ್ನಾಟಕದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಲೋಡ್ ಶೆಡ್ಡಿಂಗ್ (Load shedding) ಅನಿವಾರ್ಯ ಎಂದು ಸಚಿವ ಜಿ ಪರಮೇಶ್ವರ (G Parameshwara) ಮಂಗಳವಾರ ಹೇಳಿದ್ದಾರೆ. ಮಳೆ ಕೊರತೆಯಿಂದ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮವಾಗಿದೆ. ಬೇಡಿಕೆಯೂ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ. ತುಮಕೂರಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಳೆ ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆಗೆ ಧಕ್ಕೆಯಾಗುವ ಸಂಭವವಿದೆ ಎಂದು ಹೇಳಿದ್ದಾರೆ.
ರಾಜ್ಯದ ಸುಮಾರು ಹನ್ನೊಂದು ಜಿಲ್ಲೆಗಳಲ್ಲಿ ಈ ವರ್ಷ ಸರಾಸರಿಗಿಂತ ಕಡಿಮೆ ಮಳೆಯಾಗಿದೆ. ಜಲವಿದ್ಯುತ್ ಉತ್ಪಾದನೆಗೆ ಧಕ್ಕೆಯಾಗಿದೆ. ಲೋಡ್ ಶೆಡ್ಡಿಂಗ್ ಮಾಡುವ ಮೂಲಕ ನಾವು ವಿದ್ಯುತ್ ಬೇಡಿಕೆಯನ್ನು ನಿರ್ವಹಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಮಳೆ ಕಡಿಮೆಯಾದ ಕಾರಣ ರಾಜ್ಯದ ಕೆಲವು ಭಾಗಗಳನ್ನು ಬರ ಪೀಡಿತ ಪ್ರದೇಶಗಳೆಂದು ಘೋಷಿಸಲಾಗುವುದು. ತುಮಕೂರಿನ ಶೇ 35ರಷ್ಟು ರೈತರು ಮಾತ್ರ ಬಿತ್ತನೆ ಆರಂಭಿಸಿದ್ದಾರೆ. ಮಳೆ ಕಡಿಮೆಯಾಗಿರುವುದೇ ಕಡಿಮೆ ಪ್ರಮಾಣದಲ್ಲಿ ರೈತರು ಬಿತ್ತನೆ ಮಾಡಲು ಕಾರಣವಾಗಿದೆ. ವಾಡಿಕೆಗಿಂತ ಕಡಿಮೆ ಮಳೆಯಾಗುವ ಪ್ರದೇಶಗಳನ್ನು ಮಾಹಿತಿ ಪಡೆದ ನಂತರ ಬರಪೀಡಿತ ಪ್ರದೇಶಗಳೆಂದು ಘೋಷಿಸುತ್ತೇವೆ ಎಂದು ಪರಮೇಶ್ವರ ಹೇಳಿದ್ದಾರೆ.
ಇದನ್ನೂ ಓದಿ: Coal Shortage-Load Shedding: ದೇಶದಲ್ಲಿ ಮತ್ತೆ ಕಲ್ಲಿದ್ದಲು ಕೊರತೆ; ಕೆಲವು ಕಡೆ ದಿನಕ್ಕೆ 8 ಗಂಟೆ ವಿದ್ಯುತ್ ಕಡಿತ ಶುರು
31 ಜಿಲ್ಲೆಗಳ ಪೈಕಿ 18 ಜಿಲ್ಲೆಗಳಲ್ಲಿ ಮಾತ್ರ ಆಗಸ್ಟ್ 11 ರ ಹೊತ್ತಿಗೆ ಸಾಮಾನ್ಯ ಮಳೆಯಾಗಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ರಾಜ್ಯದ ಬಹುತೇಕ ಜಲಾಶಯಗಳಲ್ಲಿ ಕಡಿಮೆ ನೀರಿದೆ. ಕೃಷ್ಣರಾಜ ಸಾಗರ ಮತ್ತು ಕಬಿನಿ ಜಲಾಶಯಗಳಲ್ಲಿ ಆಗಸ್ಟ್ 11 ರ ಹೊತ್ತಿಗೆ ಅವುಗಳ ಪೂರ್ಣ ಸಂಗ್ರಹ ಸಾಮರ್ಥ್ಯದ ಅರ್ಧದಷ್ಟು ನೀರು ಇದೆ ಎಂದು ಅಂಕಿಅಂಶಗಳು ತಿಳಿಸಿವೆ.
ಬರಗಾಲದಿಂದ ಸಂತ್ರಸ್ತರಾದ ರೈತರಿಗೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕಾಗಿದ್ದು, ಇದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಹೊರೆಯಾಗಲಿದೆ. ಸರ್ಕಾರವು ತನ್ನ ಐದು ಚುನಾವಣಾ ಗ್ಯಾರಂಟಿಗಳನ್ನು ಪೂರೈಸಲು ಹಣವನ್ನು ಸಂಗ್ರಹಿಸಲು ಒತ್ತಡದಲ್ಲಿದೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ವಾರ್ಷಿಕ 52,000 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ