ಮಂಡ್ಯ, ಆಗಸ್ಟ್ 25: ಇಂದಿನ ಅಂತರ್ಜಾಲ ಯುಗದಲ್ಲಿ ಸಾಮಾಜಿಕ ಜಾಲತಾಣ ಎಂಬುದು ಮಂಗನ ಕೈಗೆ ಮಾಣಿಕ್ಯ ಕೊಟ್ಟಂತಾಗಿದ್ದು, ಇದೇ ಸಾಮಾಜಿಕ ಜಾಲತಾಣದ ಮೋಸಕ್ಕೆ (Facebook fraud) ಇಂಜಿನಿಯರಿಂಗ್ ವಿದ್ಯಾರ್ಥಿ (Engineering student) ಬಲಿಯಾಗಿರುವ ದಾರುಣ ಘಟನೆ ವರದಿಯಾಗಿದೆ. ಇಂಜಿನಿಯರಿಂಗ್ ವಿದ್ಯಾರ್ಥಿ ಷಣ್ಮುಖ (20) ಡೆತ್ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ (suicide) ಮಾಡಿಕೊಂಡಿದ್ದಾನೆ. ಮಂಡ್ಯ ಜಿಲ್ಲೆ ಪಾಂಡವಪುರ (Pandavapura, Mandya) ಪಟ್ಟಣದಲ್ಲಿ ಘಟನೆ ನಡೆದಿದೆ.
ಷಣ್ಮುಖ, ಮಂಡ್ಯದ PES ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಆತನಿಗೆ ಫೇಸ್ಬುಕ್ ಸಂಗವೂ ಇತ್ತು. ಫೇಸ್ಬುಕ್ ಜಾಲತಾಣದಲ್ಲಿ ಪರಿಚಯವಾಗಿದ್ದ ಸ್ನೇಹಿತನಿಗೆ ಹಣದ ಸಹಾಯ ಮಾಡುವ ಭರದಲ್ಲಿ ಮೋಸಕ್ಕೆ ಬಲಿಯಾಗಿದ್ದಾನೆ ಎನ್ನಲಾಗಿದೆ. ಅಮೇರಿಕಾ ದೇಶದವನು ಎಂದು ಹೇಳಿಕೊಂಡಿರೊ ವ್ಯಕ್ತಿಯೊಬ್ಬನ ಮೋಸದ ಜಾಲದಲ್ಲಿ ಷಣ್ಮುಖ ಸಿಲುಕಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಕಾಲ ಕೆಟ್ಟೋಯ್ತು! ಪೋಷಕರಿಗೆ ಕಂಪ್ಲೆಂಟ್ ಮಾಡಿದ್ದಕ್ಕೆ ಉಪನ್ಯಾಸಕರಿಗೆ ಮಚ್ಚು ತೋರಿಸಿದ ವಿದ್ಯಾರ್ಥಿ
ಅಮೇರಿಕಾ ದೇಶದವನು ಎಂದು ಹೇಳಿಕೊಂಡಿರುವ ವ್ಯಕ್ತಿಯಿಂದ ಷಣ್ಮುಖನಿಗೆ ನಾಲ್ಕೈದು ಲಕ್ಷ ರೂಪಾಯಿ ವಂಚನೆಯಾಗಿದೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿ ಷಣ್ಮುಖ ತಾಯಿಗೆ ಸೇರಿದ ಚಿನ್ನಾಭರಣವನ್ನು ಗಿರವಿ ಇಟ್ಟು ಹಣ ಹೊಂದಿಸಿ ಪರದೇಸಿ ಗೆಳೆಯನಿಗೆ ನೀಡಿದ್ದ ಷಣ್ಮುಖ. ಮುಂದೆ, ತಾನು ಮೋಸದ ಜಾಲಕ್ಕೆ ಸಿಲುಕಿ, ನೀಡಿದ್ದ ಹಣ ವಾಪಸ್ ಬರೊಲ್ಲ ಎಂಬುದನ್ನ ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೆಲ್ಲಾ ತನ್ನ ಡೆತ್ ನೋಟ್ ನಲ್ಲಿ ಬರೆದಿಟ್ಟು ಷಣ್ಮುಖ ಸಾವಿಗೆ ಶರಣಾಗಿದ್ದಾನೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:49 am, Fri, 25 August 23