ಆಪರೇಷನ್ ಹಸ್ತದ ಜತೆಗೆ ಆಪರೇಷನ್ ಬಿಬಿಎಂಪಿ ಶುರು, ಸಾಲು-ಸಾಲು ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ
ಬಿಬಿಎಂಪಿ ಹಾಗೂ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ಕಾಂಗ್ರೆಸ್ ಆಪರೇಷನ್ ಹಸ್ತದ ಜತೆಗೆ ಆಪರೇಷನ್ ಬಿಬಿಎಂಪಿ ಶುರು ಮಾಡಿಕೊಂಡಿದೆ. ಹೀಗಾಗಿ ಬೇರೆ ಬೇರೆ ಪಕ್ಷಗಳ ನಾಯಕರಿಗೆ ಗಾಳ ಹಾಕಿದೆ. ಆರ್ಆರ್ ನಗರ ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೆ ಇದೀಗ ಕೆಆರ್ ಪುರ ಬಿಜೆಪಿ ಮಾಜಿ ಕಾರ್ಪೋರೇಟರ್ಗಳು ಕೈ ಹಿಡಿದಿದ್ದಾರೆ. ಇದರಿಂದ ಬಿಜೆಪಿಗೆ ದಿಕ್ಕುತೋಚದಂತಾಗಿದೆ.
ಬೆಂಗಳೂರು, (ಆಗಸ್ಟ್ 21): ಮುಂಬರುವ ಲೋಕಸಭಾ (Loksabha Elctions 2024) ಹಾಗೂ ಬಿಬಿಎಂಪಿ ಚುನಾವಣೆಗೆ (BBMP Elections ) ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ (Congress), ಸದ್ದಿಲ್ಲದೇ ಬೇರೆ ಪಕ್ಷದ ನಾಯಕರಿಗೆ ಗಾಳ ಹಾಕಿದ್ದು,ಇದೀಗ ಆಪರೇಷನ್ ಹಸ್ತದ (Opeation Hasta) ಜೊತೆ ಆಪರೇಷನ್ ಬಿಬಿಎಂಪಿ ಶುರು ಮಾಡಿಕೊಂಡಿದೆ. ಮತ್ತೊಂದೆಡೆ ಕಾಂಗ್ರೆಸ್ನ ಅಸ್ತ್ರದಿಂದ ತಮ್ಮ ನಾಯಕರನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಆದರೂ ಸಹ ಇಂದು (ಆಗಸ್ಟ್ 21) ಹಲವು ಮಾಜಿ ಕಾರ್ಪೊರೇಟರ್‌ಗಳು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. KR ಪುರ ಕ್ಷೇತ್ರದ ಮಾಜಿ ಕಾರ್ಪೊರೇಟರ್‌ಗಳಾದ ವೀರಣ್ಣ, ಶ್ರೀನಿವಾಸ ಅವರು ಇಂದು (ಆಗಸ್ಟ್ 21) ಕುಮಾರಕೃಪಾ ಗೆಸ್ಟ್ಹೌಸ್ನಲ್ಲಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಆರ್.ಆರ್ ನಗರದ ಕ್ಷೇತ್ರದ ಬಿಜೆಪಿ ಮಾಜಿ ಕಾರ್ಪೊರೇಟರ್‌ಗಳು ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಇದೀಗ ಕೆ.ಆರ್ ಪುರ ಕ್ಷೇತ್ರದ ಮಾಜಿ ಕಾರ್ಪೋರೇಟ್ಗಳು ಕೈ ಹಿಡಿದರು.
ವಿಜಿನಾಪುರ ವಾರ್ಡ್ ಮಾಜಿ ಕಾರ್ಪೋರೇಟರ್ ರಾಜಣ್ಣ (ಬಂಡೆ) , ಕೆ.ಆರ್ ಪುರ ವಾರ್ಡ್ ಮಾಜಿ ಕಾರ್ಪೋರೇಟರ್ ವೀರಣ್ಣ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಈ ವೇಳೆ ಸಚಿವ ಬೈರತಿ ಸುರೇಶ್ ಕೂಡ ಉಪಸ್ಥಿತರಿದ್ದರು. ಕೆಲ ದಿನಗಳಿಂದ ಅಷ್ಟೇ ಆರ್ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರ ಬೆಂಬಲಿಗರ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೀಗ ಕೆಆರ್ ಪುರಂ ಕ್ಷೇತ್ರದಲ್ಲೂ ಸದ್ದಿಲ್ಲದೇ ಬಿಜೆಪಿ ಶಾಸಕರ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಬಿಜೆಪಿಗೆ ಆತಂಕ ಶುರುವಾಗಿದೆ.
ಇನ್ನು ಇಂದು ಸಂಜೆ ಕೆಪಿಸಿಸಿ ಕಚೇರಿಯಲ್ಲಿ ಜೆಡಿಎಸ್, ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಆಯನೂರು ಮಂಜುನಾಥ್, ಶಿಕಾರಿಪುರ ನಾಗರಾಜ್ ಗೌಡ ಅಧಿಕೃತವಾಗಿ ಕೈ ಹಿಡಿಯಲಿದ್ದಾರೆ. ಇನ್ನು ಆಪರೇಷನ್ ಹಸ್ತದಲ್ಲಿ ಭಾರೀ ಸುದ್ದಿಯಾಗಿರುವ ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಬೆಂಬಲಿಗರು ಕೂಡ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೊದಲು ತಮ್ಮ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಕಳಿಸುವುದು. ಬಳಿಕ ಕಾಂಗ್ರೆಸ್ ಸೇರುವ ಲೆಕ್ಕಾಚಾರದಲ್ಲಿ ಎಸ್.ಟಿ.ಸೋಮಶೇಖರ್ ಇದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ನಡೆ ನಿಗೂಢವಾಗಿದ್ದು, ಅವರ ಮುಂದಿನ ರಾಜಕೀಯ ನಡೆ ಕುತೂಹಲ ಮೂಡಿಸಿದೆ.
ಸದ್ಯ ಆರ್ಆರ್ ನಗರ, ಕೆಆರ್ ಪುರ ಕ್ಷೇತ್ರದಲ್ಲಿ ಆಪರೇಷನ್ ಸಕ್ಸಸ್ ಆಗಿದೆ. ಇದೀಗ ಎಸ್ಟಿ ಸೋಮಶೇಖರ್ ಅವರ ಯಶವಂತಪುರ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಗಾಳ ಹಾಕಿದೆ. ಹೀಗೆ ಬೆಂಗಳೂರು ನಗರದಲ್ಲಿ ಒಂದೊಂದೇ ಏರಿಯಾದ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಸರಳೆಯುತ್ತಿದ್ದು, ಬಿಜೆಪಿಗೆ ದಿಕ್ಕುತೋಚದಂತಾಗಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 1:20 pm, Mon, 21 August 23