ಕೋಲಾರ, ಆ.23: ಜಿಲ್ಲೆಯ ಶ್ರೀನಿವಾಸಪುರ(Srinivaspur) ಪಟ್ಟಣದ ಚಿಂತಾಮಣಿ ವೃತ್ತದಲ್ಲಿರುವ ಎಸ್ಬಿಐ ಎಟಿಎಂನಲ್ಲಿ (SBI, ATM) ಖದೀಮರು ಕೈಚಳಕ ತೋರಿಸಿದ್ದಾರೆ. ಹೌದು, ಗ್ಯಾಸ್ ಕಟ್ಟರ್ ಮೂಲಕ ಎಟಿಎಂ ಮೆಷಿನ್ ಕತ್ತರಿಸಿ, ಅಂದಾಜು 11 ಲಕ್ಷಕ್ಕೂ ಅಧಿಕ ಹಣ ಕದ್ದು ಪರಾರಿಯಾಗಿದ್ದಾರೆ. ಇನ್ನು ಈ ಖತರ್ನಾಕ್ ಆಸಾಮಿಗಳು ಎಟಿಎಂ ಸಿಸಿ ಕ್ಯಾಮೆರಾ ಗಳಿಗೆ ಕಪ್ಪು ಬಣ್ಣವನ್ನು ಸ್ಪ್ರೇ ಮಾಡಿ ಕದ್ದಿದ್ದಾರೆ. ಸ್ಥಳಕ್ಕೆ ಕೋಲಾರ ಎಸ್ಪಿ ನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೀದರ್: ತೆಲಂಗಾಣದಿಂದ ಬೀದರ್ ಮಾರ್ಗವಾಗಿ ಮುಂಬೈಗೆ ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ಬೀದರ್ ಪೊಲೀಸರು ದಾಳಿ ಮಾಡಿದ್ದರು. ಇನ್ನು ದಾಳಿ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಅವರನ್ನು ಬೆನ್ನುಹತ್ತಿದ್ದಾರೆ. ಈ ವೇಳೆ ಚಿಟಗುಪ್ಪಾ ತಾಲೂಕಿನ ಮಂಗಲಗಿ ಟೋಲ್ ಬಳಿ ಕಾರು ನಿಲ್ಲಿಸಿ ಗಾಂಜಾ ಸಾಗಾಟಗಾರರು ಪರಾರಿಯಾಗಿದ್ದಾರೆ. ಆದರೆ, ಕಾರ್ನಲ್ಲಿದ್ದ 1.18 ಕೋಟಿ ರೂಪಾಯಿ ಮೌಲ್ಯದ 118 ಕೆಜಿಯಷ್ಟು ಗಾಂಜಾ ವಶಕ್ಕೆ ಪಡೆದ್ದಾರೆ. ಇನ್ನು ಗಾಂಜಾ ಸಾಗಾಟ ಮಾಡುತ್ತಿದ್ದ ಕಾರು ಸಹ ಪೊಲೀಸರು ಜಪ್ತಿ ಮಾಡಿಕೊಂಡಿದ್ದು, ಕಾರಿನ ಮೌಲ್ಯ 8 ಲಕ್ಷ ರೂಪಾಯಿ ಎಂದು ತಿಳಿದು ಬಂದಿದೆ. ಕಾರ್ಯಚರಣೆ ನಡೆಸಿದ ಮನ್ನಾಖೇಳ್ಳಿ ಪೋಲಿಸರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪೋಲಿಸರಿಗೆ ಬೀದರ್ ಎಸ್ಪಿ ಚೆನ್ನಬಸವಣ್ಣರಿಂದ ಬಹುಮಾನ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ:ಮಂಗಳೂರು: ಜೆಸಿಬಿ ಬಳಸಿ ಎಟಿಎಂ ಕಳವು ಮಾಡಲು ಯತ್ನ, ಪೊಲೀಸರ ಕಂಡು ಪರಾರಿಯಾದ ಆರೋಪಿಗಳು
ಬೆಂಗಳೂರು ಗ್ರಾಮಾಂತರ: ದಾಳಿಂಬೆ ಕಳ್ಳತನ ಆರೋಪಿಸಿ ನಾಲ್ವರು ಸೇರಿ ಮರಕ್ಕೆ ಕಟ್ಟಿ ಮನಸೋ ಇಚ್ಛೆ ಥಳಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಕಾಚನಹಳ್ಳಿಯಲ್ಲಿ ನಡೆದಿದೆ. ಕೋಡಿಪಾಳ್ಯ ಮೂಲದ ಕಾಂತರಾಜು, ಶಶಿಕುಮಾರ್, ಕೆಂಪರಾಜು ಮೇಲೆ ಪಕ್ಕದ ಬರದಿ ಗ್ರಾಮದ ಕೇಶವ ಮೂರ್ತಿ, ಬೈಲಪ್ಪ, ರವಿ, ಲೋಕೇಶ್ ಸೇರಿದಂತೆ ನಾಲ್ಕು ಜನರ ತಂಡ ಮನಸೋ ಇಚ್ಛೆ ಹಲ್ಲೆ ನಡೆಸಿದ್ದು, ಇನ್ನು ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಹಲ್ಲೆಗೊಳಗಾದ ಯುವಕರ ಪೋಷಕರು ಹೇಳುವ ಪ್ರಕಾರ ಹಳೆಯ ವ್ಯಷ್ಯಮ್ಯದಿಂದಾಗಿ ನಡೆದಿರುವ ಘಟನೆ ಎಂದು ಅರೋಪಿಸುತ್ತಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ