ಟೊಮೆಟೊ ಸುವರ್ಣ ಯುಗ ಅಂತ್ಯ, ಕುಸಿತದತ್ತ ಕೆಂಪು ರಾಣಿ; ಈಗ ಕೋಲಾರ ಎಪಿಎಂಸಿಯಲ್ಲಿ ಬೆಲೆ ಎಷ್ಟಿದೆ?
Tomato Rate: ಕಳೆದ ಎರಡು ತಿಂಗಳಿಂದ ಕೋಲಾರ ಎಪಿಎಂಸಿ ಮಾರುಟ್ಟೆಯಲ್ಲಿ ಬಾರಿ ಅಬ್ಬರ ಮಾಡುತ್ತಿದ್ದ ಟೊಮೆಟೊ ಸದ್ಯ ಬೆಲೆ ಇಳಿಮುಖವಾಗುತ್ತಿದೆ.
ಕೋಲಾರ, ಆ.12: ಕಳೆದ ಎರಡು ತಿಂಗಳಿಂದ ಎಲ್ಲಿ ನೋಡಿದ್ರು ಬರೀ ಟೊಮೆಟೊದೇ(Tomato) ಮಾತಾಗಿತ್ತು. ರಾಜ್ಯ, ದೇಶ, ಹಾಗೂ ಮನೆ ಮನೆಗಳಲ್ಲೂ ಕೂಡಾ ಬರೀ ಟೊಮೆಟೊ ಬೆಲೆ ಏರಿಕೆಯದ್ದೇ ಸುದ್ದಿ. ಆದರೆ ಎರಡು ತಿಂಗಳಿಂದ ಏರಿಕೆಯಾಗುತ್ತಿದ್ದ ಟೊಟೊಮೆ ಬೆಲೆ ಕಳೆದೊಂದು ವಾರದಿಂದ ಇಳಿ ಮುಖವಾಗುತ್ತಿದೆ.
ಕಳೆದ ಎರಡು ತಿಂಗಳಿಂದ ಟೊಮೆಟೊ ಬೆಲೆ ಚಿನ್ನದ ಬೆಲೆಯಂತೆ ಏರಿಕೆ ಕಂಡಿತ್ತು. ಟೊಮೆಟೊ ಬೆಳೆದ ರೈತರು ಕೋಟ್ಯಾಧಿಪತಿಗಳಾಗುವ ಮೂಲಕ ಟೊಮೆಟೊ ಅನ್ನೋದು ಚಿನ್ನಕ್ಕೆ ಸಮಾನವಾಗಿ ಹೋಗಿತ್ತು. ರೈತರು ತಾವು ಬೆಳೆದ ಟೊಮೆಟೊ ಬೆಳೆಯನ್ನು ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುವ ಸ್ಥಿತಿ ಇತ್ತು. ಇನ್ನು ಮಾರುಕಟ್ಟೆಯಲ್ಲೂ ಪೊಲೀಸ್ ಇಲಾಖೆ ಹೆಚ್ಚಿನ ಭದ್ರತೆಯನ್ನಿ ಮಾಡಿದರೆ, ಖಾಸಗಿ ಮಂಡಿಯವರು ಹಾಗೂ ಎಪಿಎಂಸಿ ಮಾರುಕಟ್ಟೆಯವರು ಖಾಸಗಿ ಸೆಕ್ಯೂರಿಟಿಗಳನ್ನು ಇಟ್ಟುಕೊಂಡು ವ್ಯಾಪಾರ ವ್ಯವಹಾರ ಮಾಡುವ ಸ್ಥಿತಿ ಬಂದಿತ್ತು. ಇನ್ನು ಹೊರ ರಾಜ್ಯಗಳಿಗೆ ರಪ್ತು ಮಾಡುವ ಟೊಮೆಟೊಗಂತೂ ಎಸ್ಕಾರ್ಟ್ ವಾಹನದ ಜೊತೆಗೆ ಟೊಮೆಟೊವನ್ನು ಕಳಿಸಬೇಕು ಎನ್ನುವಷ್ಟರ ಮಟ್ಟಿಗೆ ಡಿಮ್ಯಾಂಡ್ ಬಂದಿತ್ತು. ಅದಕ್ಕೆ ಪೂರಕ ಎಂಬಂತೆ ಟೊಮೆಟೊ ಲಾರಿಯನ್ನು ಕಳ್ಳತನ ಮಾಡಿದ ಎರಡು ಮೂರು ಪ್ರಕರಣಗಳು ಕೂಡಾ ನಡೆದು ಹೋದವು. ಆದ್ರೆ ಈ ಟೊಮೆಟೊ ಈಗ ಬೆಲೆ ಕಳೆದುಕೊಳ್ಳುತ್ತಿದೆ.
ಏರಿಕೆಯಾದಷ್ಟೇ ವೇಗವಾಗಿ ಇಳಿಯುತ್ತಿದೆ ಟೊಮೆಟೊ ಬೆಲೆ
ಸದ್ಯ ಕಳೆದ ಎರಡು ತಿಂಗಳಿಂದ ಕೋಲಾರ ಎಪಿಎಂಸಿ ಮಾರುಟ್ಟೆಯಲ್ಲಿ ಬಾರಿ ಅಬ್ಬರ ಮಾಡುತ್ತಿದ್ದ ಟೊಮೆಟೊ ಸದ್ಯ ಬೆಲೆ ಇಳಿಮುಖವಾಗುತ್ತಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಎರಡು ತಿಂಗಳ ಹಿಂದೆ ಹದಿನೈದು ಕೆಜಿಯ ಬಾಕ್ಸ್ ಟೊಮೆಟೊ ಬೆಲೆ 2,500- 2,700 ರೂಪಾಯಿಗೆ ಹರಾಜಾಗುತ್ತಿತ್ತು. ಆದರೆ ಕಳೆದ ಒಂದು ವಾರದಿಂದ ಟೊಮೆಟೊ ಆಮದು ಅಥವಾ ಪೂರೈಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಾಗೂ ಉತ್ತರ ಭಾರತದಲ್ಲಿ ಮಳೆಯ ಪ್ರಮಾಣ ಕಡಿಮೆ ಇದೆ. ಜೊತೆಗೆ ಹೊರ ರಾಜ್ಯಗಳಿಂದ ಟೊಮೆಟೊಗೆ ಬೇಡಿಕೆ ಕುಸಿತವಾಗಿರುವ ಹಿನ್ನೆಲೆಯಲ್ಲಿ ಟೊಮೆಟೊ ಬೆಲೆ ಕೂಡಾ ಗಣನೀಯ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ. ಒಂದು ವಾರದಲ್ಲಿ ನಾಲ್ಕನೇ ಬಾರಿಗೆ ಟೊಮೆಟೊ ಬೆಲೆ ಕುಸಿತ ಕಂಡಿದೆ. ಕೇವಲ ಹತ್ತು ದಿನಗಳ ಅಂತದಲ್ಲಿ ಒಂದು ಬಾಕ್ಸ್ ಟೊಮೆಟೊ ಬೆಲೆ ಸುಮಾರು 1500 ರೂಪಾಯಿ ಕುಸಿತ ಕಂಡಿದೆ. ಅಂದರೆ 170-180 ರೂಪಾಯಿ ಇದ್ದ ಕೆಜಿ ಟೊಮೆಟೊ ಬೆಲೆ 50-60 ರೂಪಾಯಿಗೆ ಇಳಿಮುಖವಾಗಿದೆ.
ಇದನ್ನೂ ಓದಿ: ಶಕ್ತಿ ಯೋಜನೆಯಡಿ ಅಂತಾರಾಜ್ಯ ಬಸ್ನಲ್ಲಿ ಉಚಿತ ಪ್ರಯಾಣ, ಮುಂದುವರಿದ ಗೊಂದಲ
ಏಷ್ಯಾದಲ್ಲೇ ದೊಡ್ಡ ಮಾರುಕಟ್ಟೆಯಲ್ಲಿ ಕೆಂಪು ಸುಂದರಿಯ ಅಬ್ಬರ
ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಎಪಿಎಂಸಿ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ದೇಶದ ಬಹುತೇಕ ಎಲ್ಲಾ ರಾಜ್ಯಳಿಗೂ ಹಾಗೂ ಹೊರ ದೇಶಗಳಿಗೂ ಇಲ್ಲಿಂದಟೊಮೆಟೊವನ್ನು ರಪ್ತು ಮಾಡಲಾಗುತ್ತದೆ. ಅದರಲ್ಲೂ ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು ಅಲ್ಲಿ ಬೆಳೆಯಲ್ಲಾ ಸಂಪೂರ್ಣವಾಗಿ ಹಾಳಾಗಿದ್ದ ಪರಿಣಾಮ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಬೆಳೆದ ಟೊಮೆಟೊಗೆ ಉತ್ತರ ಭಾರತದಿಂದ ಬೇಡಿಕೆ ಹೆಚ್ಚಾಗಿತ್ತು.
ವೈರಸ್ ಕಾಟದಿಂದ ಕಂಗಾಲಾದ ರೈತರು
ಪ್ರತಿ ವರ್ಷಕ್ಕೆ ಹೋಲಿಕೆ ಮಾಡಿದೆರೆ ಈ ಬಾರಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಟೊಮೆಟೊ ಬೆಳೆಯನ್ನು ರೈತರು ಹೆಚ್ಚಾಗಿಯೇ ಬೆಳೆದಿದ್ದರು. ಕಾರಣ ಮೇ, ಜೂನ್, ಜುಲೈ, ಆಗಸ್ಟ್ ತಿಂಗಳು ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಸೀಸನ್ ಎಂದೇ ಪರಿಗಣಿಸಲಾಗುತ್ತದೆ. ಕಾರಣ ಉತ್ತರ ಭಾರತದಲ್ಲಿ ಹೆಚ್ಚಿನ ಮಳೆಯಾಗುವ ಹಿನ್ನೆಲೆಯಲ್ಲಿ ಅಲ್ಲಿ ಟೊಮೆಟೊಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಅದಕ್ಕೆ ತಕ್ಕಂತೆ ಕೋಲಾರದಲ್ಲಿ ಟೊಮೆಟೊ ಬೆಳೆಯಲು ಉತ್ತಮ ವಾತಾವರಣ ಇರುತ್ತದೆ. ಅದೇ ಕಾರಣಕ್ಕಾಗಿಯೇ ಜಿಲ್ಲೆಯಲ್ಲಿ ಹೆಚ್ಚಾಗಿ ರೈತರು ಟೊಮೆಟೊ ಬೆಳೆಯುತ್ತಾರೆ. ಆದರೆ ಈ ಬಾರಿ ಕೋಲಾರದ ರೈತರು ಬೆಳೆದ ಟೊಮೆಟೊಗೆ ವೈರಸ್ ಹಾವಳಿಯಿಂದ, ಬೆಂಗಿ ರೋಗ, ಎಲೆಸುರಳಿ ರೋಗ, ಆವರಿಸಿ ರೈತರು ಬೆಳೆದ ಟೊಮೆಟೊ ಸಂಪೂರ್ಣ ಹಾಳಾಗಿತ್ತು.
ಅಲ್ಲದೆ ಟೊಮೆಟೊ ಫಸಲು ಕೂಡಾ ನಿರೀಕ್ಷಿತ ಮಟ್ಟದಲ್ಲಿ ಬರಲಿಲ್ಲ ಅದೇ ಕಾರಣಕ್ಕೆ ಕೋಲಾರ ಎಪಿಎಂಸಿ ಮಾರುಕಟ್ಟೆ ಇತಿಹಾಸದಲ್ಲೇ ಎಂದು ಕಾಣದಷ್ಟು ಟೊಮೆಟೊಗೆ ಬೆಲೆ ಬಂದಿತ್ತು. ಅದರಲ್ಲೂ ಪ್ರಮುಖವಾಗಿ ಸತತವಾಗಿ ಎರಡು ತಿಂಗಳ ಕಾಲ ಟೊಮೆಟೊಗೆ ಬೆಲೆ ಬಂದಿತ್ತು. ಅಷ್ಟೇ ಅಲ್ಲದೆ ಉತ್ತಮವಾಗಿ ಫಸಲು ಕಂಡು ಕೆಲವೇ ಕೆಲವು ರೈತರನ್ನು ಕೋಟ್ಯಾಧಿಪತಿಗಳನ್ನಾಗಿ ಈ ಟೊಮೆಟೊ ಮಾಡಿದೆ.
ಕೋಲಾರದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ