ಮಡಿಕೇರಿ, ಜುಲೈ 25: ರಾಜ್ಯದಲ್ಲಿ ಡ್ರಗ್ಸ್(Drugs) ಪ್ರಕರಣಗಳ ಸಂಖ್ಯೆ ದಿನೇ ದಿನೇ ಬೆಳೆಯುತ್ತಾ ಹೋಗುತ್ತಿದೆ. ಯುವಕರು(Youth) ಹೆಚ್ಚಾಗಿ ಮಾದಕ ದ್ರವ್ಯಗಳ ದಾಸರಾಗುತ್ತಿದ್ದಾರೆ. ಹೀಗಾಗಿ ತಮ್ಮ ಸಮುದಾಯದ ಯುವಕರು ಮಾದಕ ದ್ರವ್ಯದ ದಾಸರಾಗಬಾರದೆಂದು, ಮಾದಕ ದ್ರವ್ಯ ಸೇವನೆಯನ್ನು ನಿಯಂತ್ರಿಸಲು ಕೊಡಗಿನ ಜಮಾತ್ ವಿಶಿಷ್ಟ ಕ್ರಮಗಳನ್ನು ಕೈಗೊಂಡಿದೆ. ಮಾದಕ ದ್ರವ್ಯ ಸೇವನೆಯ ವಿರುದ್ಧ ಸಮುದಾಯದ ಯುವಕರಿಗೆ ಎಚ್ಚರಿಕೆ ನೀಡುವ ಸಂಕ್ಷಿಪ್ತ, ಕಟ್ಟುನಿಟ್ಟಾದ ಸೂಚನೆಯನ್ನು ಕೊಂಡಂಗೇರಿ ಮಸೀದಿಯ(Kondangeri Mosque) ಹೊರಗೆ ಅಂಟಿಸಲಾಗಿದೆ.
ಕೊಡಗಿನಾದ್ಯಂತ ಮಾದಕ ದ್ರವ್ಯ ಸೇವನೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಕೊಡಗು ಪೊಲೀಸರು ಮಾದಕ ವಸ್ತುಗಳ ಮಾರಾಟ ಪ್ರಕರಣಗಳಲ್ಲಿ ಹೆಚ್ಚಾಗಿ ಯುವಕರನ್ನು ಬಂಧಿಸುತ್ತಿದ್ದಾರೆ. ಹೀಗಾಗಿ ಮಾದಕ ವಸ್ತುಗಳ ಸೇವನೆ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಮಡಿಕೇರಿ ತಾಲೂಕಿನ ಕೊಂಡಂಗೇರಿ ಗ್ರಾಮದ ಸುನ್ನಿ ಮುಸ್ಲಿಂ ಜಮಾತ್ ವಿಶಿಷ್ಟ ಹೆಜ್ಜೆ ಇಟ್ಟಿದೆ. ಗ್ರಾಮದ ಮಸೀದಿ ಆವರಣದ ಹೊರಗೆ, ಜಮಾತ್ ಸಮಿತಿಯು ಮಾದಕ ದ್ರವ್ಯ ಸೇವನೆಯಲ್ಲಿ ತೊಡಗಿರುವ ಯುವಕರನ್ನು ಜಮಾತ್ ಮತ್ತು ಮಸೀದಿಗೆ ಪ್ರವೇಶಿಸುವುದನ್ನು ಬಹಿಷ್ಕರಿಸುವ ಪೋಸ್ಟರ್ ಅನ್ನು ಅಂಟಿಸಿದೆ. ಡ್ರಗ್ಸ್ ಬಳಸುವ ಜನರನ್ನು ನಿಷೇಧಿಸುವುದರ ಜೊತೆಗೆ, ಸ್ಟೈಲ್ ಎಂದು ವಿಲಕ್ಷಣ ಕೇಶವಿನ್ಯಾಸವನ್ನು ಮಾಡಿಸಿಕೊಳ್ಳುವ ಯುವಕರನ್ನೂ ಜಮಾತ್‌ನಿಂದ ನಿಷೇಧಿಸಲಾಗಿದೆ. ಮತ್ತು ಹರಿದ ಬಟ್ಟೆಗಳನ್ನು ಧರಿಸಿ ಮಸೀದಿಗೆ ಪ್ರವೇಶಿಸುವುದನ್ನು ಜಮಾತ್ ನಿಷೇಧಿಸಿದೆ.
ಇದನ್ನೂ ಓದಿ: ಮಂಗಳೂರು ಸಿಸಿಬಿ ಭರ್ಜರಿ ಕಾರ್ಯಚರಣೆ, ಮಾದಕ ವಸ್ತು ಸಹಿತ ಪಿಸ್ತೂಲ್ ಹೊಂದಿದ್ದ ಡ್ರಗ್ ಪೆಡ್ಲರ್ಗಳ ಬಂಧನ
ಯಾವುದೇ ಯುವಕರು ಅಥವಾ ಇತರ ಯಾವುದೇ ನಿವಾಸಿಗಳು ಮಾದಕ ದ್ರವ್ಯ ಸೇವಿಸುತ್ತಿದ್ದಾರೆ ಎಂಬ ಬಗ್ಗೆ ನಮಗೆ ಶಂಕೆಯಾದ್ರೆ, ನಾವು ಮೊದಲು ಅವರನ್ನು ವಿಚಾರಿಸುತ್ತೇವೆ ಮತ್ತು ಅವರನ್ನು ಮಾದಕ ವ್ಯಸನ ಕೇಂದ್ರಕ್ಕೆ ಸೇರಿಸಬಹುದೇ ಎಂದು ನೋಡುತ್ತೇವೆ. ಜಮಾತ್‌ನಿಂದ ಕೌನ್ಸೆಲಿಂಗ್ ಮಾಡಲಾಗುವುದು. ಅವರು ಇನ್ನೂ ಮಾದಕ ದ್ರವ್ಯ ಸೇವನೆಯನ್ನು ಮುಂದುವರಿಸಿದರೆ, ಅವರನ್ನು ಕೊಂಡಂಗೇರಿ ಮಸೀದಿಗೆ ಪ್ರವೇಶಿಸದಂತೆ ಬಹಿಷ್ಕರಿಸಲಾಗುವುದು ಮತ್ತು ಜಮಾತ್‌ನಿಂದ ಮದುವೆ ಸಮಾರಂಭದಲ್ಲಿ ನೀಡಲಾದ ಪ್ರಮಾಣಪತ್ರಗಳಲ್ಲಿ ನಾವು ಅದೇ ವಿಷಯವನ್ನು ನಮೂದಿಸುತ್ತೇವೆ ಎಂದು ಜಮ್ಮಾತ್ ಕಚೇರಿ ಕಾರ್ಯದರ್ಶಿ ರಫೀಕ್ ತಿಳಿಸಿದರು.
ನಮ್ಮ ವ್ಯಾಪ್ತಿಗೆ ಬರುವ ಯುವಕರಲ್ಲಿ ಮಾದಕ ವ್ಯಸನ ಸುಳಿವು ಸಿಕ್ಕರೆ ಜಮಾತ್ ನೀಡುವ ಮದುವೆ ಕ್ಲಿಯರೆನ್ಸ್ ಪ್ರಮಾಣಪತ್ರದಲ್ಲಿ ಈ ಬಗ್ಗೆ ನಮೂದಿಸಲಾಗುವುದು. ಪ್ರತಿಯೊಬ್ಬ ನಿವಾಸಿಗೆ ಮದುವೆಯ ಸಮಯದಲ್ಲಿ ಈ ಪ್ರಮಾಣಪತ್ರದ ಅಗತ್ಯವಿದೆ. ಮಾದಕ ದ್ರವ್ಯ ಸೇವನೆಯ ವಿಷಯವನ್ನು ಪ್ರಮಾಣಪತ್ರದಲ್ಲಿ ನಮೂದಿಸಿದರೆ, ಇತರ ಎಲ್ಲ ಜಮಾತ್‌ಗಳಿಗೆ ಅದರ ಬಗ್ಗೆ ಎಚ್ಚರಿಕೆ ನೀಡಿದಂತಾಗುತ್ತದೆ. ಗ್ರಾಮದಲ್ಲಿ ಯಾವುದೇ ಮಾದಕ ದ್ರವ್ಯ ಸೇವನೆ ಪ್ರಕರಣಗಳು ಕಂಡುಬಂದಲ್ಲಿ, ಜಮಾತ್ ಸದಸ್ಯರು ಪೊಲೀಸರೊಂದಿಗೆ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗದಂತೆ ನೋಡಿಕೊಳ್ಳುತ್ತಾರೆ ಎಂದು ರಫಿಕ್ ಹೇಳಿದರು.
ಮಾದಕ ವ್ಯಸನದ ವಿರುದ್ಧದ ಈ ಮೊದಲ ರೀತಿಯ ಹೋರಾಟದೊಂದಿಗೆ, ಜಿಲ್ಲೆಯ ಇತರ ಎಲ್ಲಾ ಜಮಾತ್‌ಗಳು ಸಹ ಅದೇ ಹಾದಿಯಲ್ಲಿ ಸಮುದಾಯದ ಯುವಕರನ್ನು ಮಾದಕ ವ್ಯಸನದಿಂದ ರಕ್ಷಿಸಲು ಜಮಾತ್ ಸಮಿತಿಯು ಆಶಿಸುತ್ತದೆ ಎಂದರು.
ಮಡಿಕೇರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ