ಕೊಡಗು ಜು.30: ಜಿಲ್ಲೆಯಲ್ಲಿ ವಿದ್ಯುತ್ ತಗುಲಿ ಆನೆಗಳು (Elephant) ಸಾವನ್ನಪ್ಪುತ್ತಿರುವ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ (Forest Department) ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತುಕೊಂಡಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಮತ್ತೆ ಜಿಲ್ಲೆಯ ಕುಶಾಲನಗರ (Kushalnagar) ತಾಲೂಕಿನ ಕಂಬಿಬಾಣೆ ಗ್ರಾಮದ ಕಾಫಿ ತೋಟವೊಂದಕ್ಕೆ ಹಾಕಲಾಗಿದ್ದ ವಿದ್ಯುತ್ ತಂತಿ ತಗುಲಿ ಆನೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಉದಯ್ ಎಂಬುವವರ ಕಾಫಿ ತೋಟದಲ್ಲಿ ಅಂದಾಜು 16 ವರ್ಷದ ಗಂಡಾನೆ ಶವ ಪತ್ತೆಯಾಗಿದ್ದು, ಎರಡು ದಿನಗಳ ಹಿಂದೆಯೇ ಆನೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಜಾಸ್ತಿಯಾಗಿದೆ. ಸದ್ಯ 10 ಕಾಡಾನೆಗಳು ಹಂಪಾಪುರ ಗ್ರಾಮದ ಬಳಿಯ ಜಮೀನಿನಲ್ಲಿ ಕಳೆದ 15 ದಿನಗಳಿಂದ ಬೀಡು ಬಿಟ್ಟಿವೆ. ಈ ಆನೆಗಳು ಪ್ರತಿದಿನ ರಾತ್ರಿ ಊರಿಂದ ಊರಿಗೆ ತೆರಳುತ್ತಿರುವ ಹಿನ್ನೆಲೆ ಇವುಗಳನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ. ಇವುಗಳನ್ನು ಸೆರೆ ಹಿಡಿಯಲು ಹುಣಸೂರು ವಿಭಾಗದ ಎಲಿಫೆಂಟ್ ಟಾಸ್ಕ್ ಪೋರ್ಸ್ ಕಾರ್ಯಾಚರಣೆ ನಡೆಸುತ್ತಿದೆ.
ಇದನ್ನೂ ಓದಿ: ಕೊಡಗು ಪೊಲೀಸರ ಭರ್ಜರಿ ಕಾರ್ಯಾಚರಣೆ: 36 ಮಂದಿ ಡ್ರಗ್ಸ್ ಪೆಡ್ಲರ್ಗಳು, ಗಾಂಜಾ ವ್ಯಸನಿಗಳ ಬಂಧನ
ಇನ್ನು ಮದ್ದೂರಿನ ಶಿಂಷಾ ನದಿಯ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಕಾಡಾನೆಗಳನ್ನು ಹಿಮ್ಮೆಟ್ಟಿಸುವಂತೆ ಸ್ಥಳೀಯರ ಆಗ್ರಹಿಸುತ್ತಿದ್ದಾರೆ.
ಹಾಸನ: ಬೇಲೂರು ತಾಲೂಕಿನ ಕೋಗೋಡು ಗ್ರಾಮದ ರಸ್ತೆ ಹಾಗೂ ಕಾಫಿ ತೋಟಗಳಲ್ಲಿ ಮರಿಯಾನೆ ಏಕಾಂಗಿಯಾಗಿ ಓಡಾಡುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಹಿಂಡಿನಿಂದ ಬೇರ್ಪಟ್ಟ ಮರಿಯಾನೆ ತನ್ನವರನ್ನು ಹುಡುಕುತ್ತಾ ಅಲೆದಾಡುತ್ತಿದೆ.
ಇನ್ನು ಇದರ ಜೊತೆಯಲ್ಲಿದ ಎಂಟು ಕಾಡಾನೆಗಳು ಗಿರಿಯಪ್ಪಶೆಟ್ಟಿ ಎಂಬುವವರ ತೋಟದಲ್ಲಿ ಬೀಡುಬಿಟ್ಟಿವೆ. ಹೀಗಾಗಿ ಗ್ರಾಮಸ್ಥರು ಮರಿಯಾನೆಯನ್ನು ಕಾಡಾನೆಗಳ ಹಿಂಡಿನತ್ತ ಓಡಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:54 pm, Sun, 30 July 23