ಬೆಂಗಳೂರು, (ಆಗಸ್ಟ್ 22): ಬೆಂಗಳೂರು ಸೇರಿದಂತೆ ಕರ್ನಾಟಕದ 14 ಕಡೆ ಮತ್ತೆ ಲೋಕಾಯುಕ್ತ(Karnataka Lokayukta) ದಾಳಿಯಾಗಿದೆ. ಇಂದು (ಆಗಸ್ಟ್ 22) ಬೆಂಗಳೂರು, ತುಮಕೂರು ಸೇರಿ 14 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಅದಾಯ ಮೀರಿದ ಆಸ್ತಿ ಗಳಿಕೆ ಆರೋಪ ಕೇಳಿಬಂದ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಮೊನ್ನೇ ಅಷ್ಟೇ ಲೋಕಾಯುಕ್ತ ಅಧಿಕಾರಿಗಳು ಕರ್ನಾಟಕದ 48 ಕಡೆಗಳಲ್ಲಿ ದಾಳಿ ಮಾಡಿ ಭ್ರಷ್ಟ ಅಧಿಕಾರಿಗಳಿಂದ ಕೋಟಿ-ಕೋಟಿ ಹಣ ಹಾಗೂ ಆಸ್ತಿ ಪಾಸ್ತಿ ಪತ್ತೆ ಮಾಡಿತ್ತು. ಇದೀಗ ಮತ್ತೆ ಭ್ರಷ್ಟ ಅಧಿಕಾರಿಗಳ ಬೇಟೆ ಮುಂದುವರೆಸಿದ್ದು, ಒಂದು ವಾರದಲ್ಲಿ ಇದು ಎರಡನೇ ದಾಳಿಯಾಗಿದೆ.
ಕೆ.ಆರ್.ಪುರ ತಾಲೂಕು ಕಚೇರಿಯ ಸರ್ವೆ ಸೂಪರ್ವೈಸರ್ ಕೆ.ಟಿ ಶ್ರೀನಿವಾಸಮೂರ್ತಿ ಮನೆಗಳು, ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಶ್ರೀನಿವಾಸಮೂರ್ತಿ 5ಕ್ಕೂ ಹೆಚ್ಚು ಕಡೆ ಅಬಕಾರಿ ಲೈಸೆನ್ಸ್ ಹೊಂದಿದ್ದು, ನಿಗದಿಗಿಂತಲೂ ಹೆಚ್ಚು ವರಿ ಆಸ್ತಿ ಗಳಿಸಿದ ಆರೋಪ ಕೇಳಿಬಂದಿದೆ. ಹೀಗಾಗಿ ಲೋಕಾಯುಕ್ತ ಅಧಿಕಾರಿಗಳು ಅಂಧ್ರಳ್ಳಿಯಲ್ಲಿರುವ ನಿವಾಸ, ಹೆಣ್ಣೂರಿನಲ್ಲಿರುವ ಸಹೋದರಿ ನಿವಾಸ ಹಾಗೂ ಪತ್ನಿ ಹೆಸರಿನಲ್ಲಿರುವ ಹೋಟೆಲ್ ಬೋರ್ಡಿಂಗ್ ಹೌಸ್ಗಳ ಮೇಲೂ ದಾಳಿ ಮಾಡಿದ್ದಾರೆ. ಅಲ್ಲದೇ ತುಮಕೂರಿನಲ್ಲಿರುವ ಶ್ರೀನಿವಾಸ ಸಹೋದರನ ಮನೆಯಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಆಗಸ್ಟ್ 17ರಂದು ಅಷ್ಟೇ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ 48 ಕಡೆ ಏಕಕಾಲದಲ್ಲಿ ದಾಳಿ ಮಾಡಿದ್ದರು,
ಬೆಂಗಳೂರು ನಗರ, ಚಿತ್ರದುರ್ಗ, ಮೈಸೂರು, ತುಮಕೂರು, ಬೀದರ್, ಧಾರವಾಡ, ದಾವಣಗೆರೆ, ರಾಯಚೂರು, ಮಡಿಕೇರಿಯಲ್ಲಿ 200 ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದ್ದು, ಕೊಟ್ಯಾಂತರ ರೂ. ಜಪ್ತಿ ಮಾಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 11:56 am, Tue, 22 August 23