ಬಿಜೆಪಿಗೆ ಮತ್ತೊಂದು ಶಾಕ್, 40 ಪರ್ಸೆಂಟ್ ಕಮಿಷನ್ ಆರೋಪ ಪ್ರಕರಣ ನ್ಯಾಯಾಂಗ ತನಿಖೆಗೆ ಆದೇಶಿಸಿದ ಸರ್ಕಾರ
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಿಧ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರ ಹಾಗೂ 40 ಪರ್ಸೆಂಟ್ ಆರೋಪ ಪ್ರಕರಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕೊನೆಗೂ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸಿ ಆದೇಶ ಹೊರಡಿಸಿದೆ.
ಬೆಂಗಳೂರು, (ಆಗಸ್ಟ್ 18): ವಿಧಾನಸಭಾ ಚುನಾವಣೆ (Karnataka Assembly Elections 2023) ಮುನ್ನ ಕರ್ನಾಟಕದಲ್ಲಿ ಭಾರೀ ಸದ್ದು ಮಾಡಿದ್ದ ಬಿಜೆಪಿ(BJP) ಸರಕಾರದ 40 ಪರ್ಸೆಂಟ್ ಕಮಿಷನ್ ಆರೋಪವನ್ನು(40 per cent allegation) ಇದೀಗ ಸಿದ್ದರಾಮಯ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ವಹಿಸಿದೆ. ರಾಜ್ಯ ಗುತ್ತಿಗೆದಾರರ ಸಂಘದ ಕೆಂಪಣ್ಣ ಮಾಡಿದ್ದ ಕಮಿಷನ್ ಆರೋಪದ ತನಿಖೆಯನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್ಎನ್ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಸ್ಥಳ ಹಾಗೂ ದಾಖಲಾತಿಗಳನ್ನು ಪರಿಶೀಲಿಸಿ ವಿವರವಾದ ತನಿಖೆ ನಡೆಸಿ, ಲೋಪದೋಷಗಳ ಮಾಹಿತಿ ಹಾಗೂ ಕಾರಣರಾದ ಆರೋಪಿಗಳನ್ನು ಪತ್ತೆ ಮಾಡಿ ಸಂಪೂರ್ಣ ವರದಿಯನ್ನು ಒಂದು ತಿಂಗಳು ದಿನಗಳ ಒಳಗೆ ನೀಡಬೇಕು. ಹಾಗೇ ಈ ಪ್ರಕರಣಕ್ಕೆ ಸಂಬಂಧಿಸಿದ ಅಗತ್ಯ ಕಡತ, ದಾಖಲೆಗಳನ್ನು ಆಯಾ ಇಲಾಖೆಯ ಅಧಿಕಾರಿಗಳು ಈ ತನಿಖಾ ಸಮಿತಿಗೆ ನೀಡಬೇಕೆಂದು ಆದೇಶದಲ್ಲಿ ಸೂಚಿಸಿದೆ.
ಇದನ್ನೂ ಓದಿ: ಕರ್ನಾಟಕದ ದೇವಸ್ಥಾನಗಳ ಜೀರ್ಣೋದ್ದಾರ ಅನುದಾನ ತಡೆ ಹಿಡಿದ ಸರ್ಕಾರ
ಇನ್ನು ತನಿಖಾ ಸಮಿತಿಯು ಸ್ಥಳ ಪರಿಶೀಲನೆ ವೇಳೆ ಖುದ್ದು ಹಾಜರಿದ್ದು, ತನಿಖೆಗೆ ಸಹಕಾರ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ತನಿಖೆಗೆ ಸಂಬಂಧಿಸಿದಂತೆ ಸಹಾಯಕ್ಕೆ ಅಗತ್ಯವಿರುವ ತಾಂತ್ರಿಕ ಸಲಹೆಗಾರರು, ಆರ್ಥಿಕ ಸಲಹೆಗಾರರು ಹಾಗೂ ಆಡಳಿತಾತ್ಮಕ ಸಲಹೆಗಾರರನ್ನು ತೆಗೆದುಕೊಳ್ಳಬಹುದು ಎಂದು ಸಮಿತಿಗೆ ಆದೇಶದಲ್ಲಿ ತಿಳಿಸಿದೆ.
ಬಿಟ್ ಕಾಯಿನ್ ಹಗರಣದ ಕುರಿತು ವಿಶೇಷ ತನಿಖಾ ತಂಡದ (ಎಸ್‌ಐಟಿ) ಮೂಲಕ ಮರು ತನಿಖೆಗೆ ಆದೇಶ ಹೊರಬಿದ್ದ ಬೆನ್ನಲ್ಲೇ ಹಿಂದಿನ ಬಿಜೆಪಿ ಅಧಿಕಾರಾವಧಿಯ ಈ ಮತ್ತೊಂದು ಗಂಭೀರ ಪ್ರಕರಣವಾದ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದ್ದ ಈ ಕಮಿಷನ್ ದಂಧೆ ಆರೋಪವನ್ನು ನ್ಯಾಯಾಂಗ ತನಿಖೆಗೊಪ್ಪಿಸುವ ಮೂಲಕ ಮಹತ್ವದ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:11 am, Fri, 18 August 23