KKRTC – ಇಲ್ಲಿ ಭ್ರಷ್ಟಾಚಾರ, ಪ್ರಭಾವಕ್ಕೆ ಅವಕಾಶವೇ ಇಲ್ಲ-ಅರ್ಹರಿಗಷ್ಟೇ ಸರ್ಕಾರಿ ನೌಕರಿ, ದೇಶದಲ್ಲಿಯೇ ವಿನೂತನ ಕ್ರಮ!

| Updated By: ಸಾಧು ಶ್ರೀನಾಥ್​

Updated on: Aug 17, 2023 | 6:44 PM

KKRTC ಕಡೆಯಿಂದ ಅರ್ಹರಿಗಷ್ಟೇ ಸರ್ಕಾರಿ ನೌಕರಿ ಸಿಗಬೇಕು. ನಯಾಪೈಸೆಯಷ್ಟೂ ಭ್ರಷ್ಟಾಚಾರ ಸುಳಿಯಬಾರದು ಅನ್ನೋ ಉದ್ದೇಶದಿಂದ ಗಣಕೀಕೃತ ಚಾಲನಾ ಪಥವನ್ನು ನಿರ್ಮಾಣ ಮಾಡಲಾಗಿದೆ. ಅಲ್ಲೀಗ ದಿನವೂ ಅಭ್ಯರ್ಥಿಗಳ ಪರೀಕ್ಷೆ ನಡೆಯುತ್ತಿದೆ. ದೇಶದಲ್ಲಿ ಇಂತಹ ಮೊದಲ ಪ್ರಯತ್ನವನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಡೆಸುತ್ತಿದೆ ಅಂತಿದ್ದಾರೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್ ರಾಚಪ್ಪ. ಇತ್ತೀಚಿನ ಕಡುಭ್ರಷ್ಟ ಪಿಎಸ್ಐ ಹಗರಣದಿಂದ ರೋಸಿಹೋಗಿರುವ ರಾಜ್ಯದ ಜನತೆಯ ಪರವಾಗಿ ನಿರ್ದೇಶಕ ರಾಚಪ್ಪ ಮತ್ತು ಅವರ ತಂಡಕ್ಕೆ ಬಿಗ್ ಸೆಲ್ಯೂಟ್​!

KKRTC - ಇಲ್ಲಿ ಭ್ರಷ್ಟಾಚಾರ, ಪ್ರಭಾವಕ್ಕೆ ಅವಕಾಶವೇ ಇಲ್ಲ-ಅರ್ಹರಿಗಷ್ಟೇ ಸರ್ಕಾರಿ ನೌಕರಿ, ದೇಶದಲ್ಲಿಯೇ ವಿನೂತನ ಕ್ರಮ!
ಭ್ರಷ್ಟಾಚಾರ, ಪ್ರಭಾವಕ್ಕೆ ಅವಕಾಶವೇ ಇಲ್ಲ-ಅರ್ಹರಿಗಷ್ಟೇ ಸರ್ಕಾರಿ ನೌಕರಿ - KKRTC
Follow us on

ಕಲಬುರಗಿ, ಆಗಸ್ಟ್​​ 17: ಸರ್ಕಾರಿ ನೌಕರಿ ಪಡೆಯಲು ಇತ್ತೀಚೆಗೆ ಅರ್ಹತೆಗಿಂತ ಹಣವೆ ಪ್ರಮುಖ ಪಾತ್ರ ವಹಿಸುತ್ತಿದೆ ಅನ್ನೋ ಆರೋಪಗಳು ಮೇಲಿಂದ ಮೇಲೆ ಕೇಳಿ ಬರುತ್ತಿವೆ. ಕಡುಭ್ರಷ್ಟ ಪಿಎಸ್ಐ ಹಗರಣ ಸೇರಿದಂತೆ ಅನೇಕ ನೇಮಕಾತಿ ಪರೀಕ್ಷೆಯ ಗೋಲ್​​ಮಾಲ್ ಗಳು ಇದಕ್ಕೆ ಉದಾಹರಣೆಯಾಗಿ, ಕಪ್ಪುಚುಕ್ಕೆಯಾಗಿ ಕಾಣುತ್ತವೆ. ಇದರಿಂದ ಅತ್ಯಂತ ಅರ್ಹತೆಯಿದ್ದವರೂ ನೌಕರಿ ಸಿಗದೇ ವಂಚನೆಗೊಳಗಾಗುತ್ತಿದ್ದಾರೆ. ಆದರೆ ಇಡಿ ದೇಶದಲ್ಲಿಯೇ ಮೊದಲ ಬಾರಿಗೆ ಚಾಲಕ, ಮತ್ತು ಚಾಲಕ ಕಂ ನಿರ್ವಾಹಕರ ಹುದ್ದೆ ನೇಮಕಾತಿ (Recruitment) ಪಾರದರ್ಶಕವಾಗಿ, ಭ್ರಷ್ಟಾಚಾರಕ್ಕೆ ಸಣ್ಣ ಅವಕಾಶವನ್ನೂ ನೀಡದೆ, ಭ್ರಷ್ಟರಿಗೆ ಸಡ್ಡು ಹೊಡೆಯುವಂತೆ, ಅರ್ಹರಿಗೆ ಮಾತ್ರವೇ ಸರ್ಕಾರಿ ಉದ್ಯೋಗ ಸಿಗಬೇಕು ಅಂತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್​​ಟಿಸಿ Kalyana Karnataka Road Transport Corporation – KKRTC) ಅಧಿಕಾರಿಗಳು ವಿನೂತನ ಕ್ರಮ ಕೈಗೊಂಡಿದ್ದಾರೆ. ಅಧಿಕಾರಿಗಳ ಕ್ರಮಕ್ಕೆ ಸ್ವತಃ ಅಭ್ಯರ್ಥಿಗಳು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ!

ಕೆಕೆಆರ್​​ಟಿಸಿ ಯಿಂದ ಚಾಲಕರ ನೇಮಕಾತಿ ಆಯ್ಕೆ ಪ್ರಕ್ರಿಯೆ ಹೇಗೆ?

ಕಲಬುರಗಿ (Kalaburagi) ನಗರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಖಾಲಿಯಿರುವ 920 ಚಾಲಕರು ಮತ್ತು 694 ಚಾಲಕ ಕಂ ನಿರ್ವಾಹಕ ಹುದ್ದೆಯ ನೇಮಕಾತಿಯನ್ನು ಮಾಡಿಕೊಳ್ಳುತ್ತಿದೆ. ಒಟ್ಟು 1,619 ಹುದ್ದೆಗಳಿಗೆ 38,000 ಅಭ್ಯರ್ಥಿಗಳು ಅರ್ಜಿ ಹಾಕಿದ್ದರು. ಅದರಲ್ಲಿ ಎತ್ತರ, ತೂಕ ಸೇರಿದಂತೆ ದೇಹದಾರ್ಡ್ಯತೆ ಪರೀಕ್ಷೆಗೆ ಹಾಜರಾಗಿ, ಡ್ರೈವಿಂಗ್ ಪರೀಕ್ಷೆಗೆ ಆಯ್ಕೆಯಾಗಿರೋದು 21 ಸಾವಿರ ಅಭ್ಯರ್ಥಿಗಳು. 21 ಸಾವಿರ ಅಭ್ಯರ್ಥಿಗಳಿಗೆ ಕಳೆದ ಜೂನ್ 3 ರಿಂದ, ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಹೊರವಲಯದಲ್ಲಿ, ಸಂಸ್ಥೆಯ ಪ್ರಾದೇಶಿಕ ಚಾಲನಾ ತರಭೇತಿ ಕೇಂದ್ರದಲ್ಲಿ ಡ್ರೈವಿಂಗ್ ಟೆಸ್ಟ್ ನಡೆಯುತ್ತಿದೆ. ಪ್ರತಿ ದಿನ ನೂರರಿಂದ ನೂರಾ ಇಪ್ಪತ್ತೈದು ಅಭ್ಯರ್ಥಿಗಳಿಗೆ ಚಾಲನಾ ಟೆಸ್ಟ್ ನಡೆಸಲಾಗುತ್ತಿದ್ದು, ಇಲ್ಲಿಯವರೆಗೆ ಸರಿಸುಮಾರು ಮೂರು ಸಾವಿರ ಅಭ್ಯರ್ಥಿಗಳಿಗೆ ಟೆಸ್ಟ್ ನಡೆಸಲಾಗಿದೆ. ಮುಂದಿನ ನವಂಬರ್ ತಿಂಗಳವರಗೆ ಈ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಡ್ರೈವಿಂಗ್ ಟೆಸ್ಟ್ ನಲ್ಲಿ ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ ನೌಕರಿ ನೀಡಲು ಸಂಸ್ಥೆ ಮುಂದಾಗಿದೆ.

ಕೆಕೆಆರ್​​ಟಿಸಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ಅರ್ಹತೆಯೊಂದೇ ಮಾನದಂಡ!

ಇನ್ನು 1619 ಹುದ್ದೆಗಳ ನೇಮಕಾತಿಗೆ ಈ ಬಾರಿ ಕೆ ಕೆ ಆರ್ ಟಿಸಿ ದೇಶದಲ್ಲಿಯೇ ಮೊದಲ ಬಾರಿಗೆ ವಿನೂತನವಾಗಿ ಆಯ್ಕೆ ಪ್ರಕ್ರಿಯೆ ನಡೆಸುತ್ತಿದ್ದು, ಭ್ರಷ್ಟಾಚಾರಕ್ಕೆ ಸಣ್ಣ ಅವಕಾಶವನ್ನು ನೀಡದೆ, ಅರ್ಹತೆ ಇದ್ದವರಿಗೆ ಮಾತ್ರ ಸರ್ಕಾರಿ ನೌಕರಿ ಸಿಗಬೇಕು ಅಂತ ಗಣಕೀಕೃತ ಚಾಲನಾ ಪಥವನ್ನು ನಿರ್ಮಿಸಿದ್ದು, ಎಲ್ಲವು ಕೂಡಾ ಪಾರದರ್ಶಕ ಕ್ರಮಗಳ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಹೌದು ಚಾಲನಾ ಟೆಸ್ಟ್ ನ್ನು ಆನ್ಲೈನ್ ಮತ್ತು ಸೆನ್ಸಾರ್ ಮೂಲಕ ನಡೆಸಲಾಗುತ್ತಿದೆ. ಇಲ್ಲಿ ಅಭ್ಯರ್ಥಿಗಳಿಗೆ ತಮಗೆ ಬಂದಿರೋ ಅಂಕಗಳೆಷ್ಟು, ಬೇರೆಯವರಿಗೆ ಬಂದಿರೋ ಅಂಕಗಳೆಷ್ಟು ಅನ್ನೋದು ಕೂಡಾ ಸ್ಥಳದಲ್ಲಿಯೇ ಗೊತ್ತಾಗುತ್ತದೆ. www.kkrtcjobs.karnataka.gov.in ವೆಬ್​ಸೈಟ್​​​ ಗೆ ಭೇಟಿ ನೀಡಿ, ಚಾಲನಾ ಪರೀಕ್ಷೆಯಲ್ಲಿ ಯಾರಿಗೆಲ್ಲಾ ಎಷ್ಟು ಅಂಕಗಳು ಬಂದಿವೆ ಅನ್ನೋದನ್ನು ಆನಲೈನ್ ಮೂಲಕ ಯಾರು ಬೇಕಾದರು ನೋಡಬಹುದು. ಯಾರದ್ದೆ ಹಸ್ತಕ್ಷೇಪವಿಲ್ಲದೆ ಎಲ್ಲವು ಕೂಡಾ ಸೆನ್ಸರ್ ಮೂಲಕವೇ ಪರೀಕ್ಷೆ ನಡೆಯುತ್ತದೆ. ಪ್ರತಿಯೊಂದು ಟೆಸ್ಟ್ ನ್ನು ಕೂಡಾ ರೆಕಾರ್ಡ್ ಮಾಡಲಾಗುತ್ತಿದ್ದು, ಸಿಸಿಟಿವಿ ಕಣ್ಗಾವಲಿನಲ್ಲಿ ಚಾಲನಾ ಪರೀಕ್ಷೆ ನಡೆಯುತ್ತಿದೆ.

ಚಾಲನಾ ಟೆಸ್ಟ್ ಗೆ ಬಂದಿರೋ ವ್ಯಕ್ತಿಗೆ ಪರೀಕ್ಷೆಗೆ ಹಾಜರಾಗಲು ಬಂದಾಗ, ನಿಜವಾಗಿಯೂ ಅರ್ಜಿ ಹಾಕಿರುವ ವ್ಯಕ್ತಿಯೇ ಬಂದಿದ್ದಾನಾ ಅನ್ನೋದನ್ನು ಪರೀಕ್ಷೆ ಮಾಡಲಾಗುತ್ತದೆ. ಈಗಾಗಲೇ ಅರ್ಜಿ ಹಾಕಿದ ವ್ಯಕ್ತಿಯ ಮುಖಚಹರೆವನ್ನು ರೆಕಾರ್ಡ್ ಮಾಡಿಟ್ಟುಕೊಳ್ಳಲಾಗಿದ್ದು, ಅದೇ ವ್ಯಕ್ತಿ ಬಂದಿದ್ದಾನಾ, ಬೇರೆಯವರು ಬಂದಿದ್ದಾರಾ ಅನ್ನೋದನ್ನು ಆರ್ ಎಫ್​​ ಐ ಡಿ ಅಂದ್ರೆ,ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಪಿಕೇಷನ್ ಮೂಲಕ ಪತ್ತೆ ಮಾಡಲಾಗುತ್ತದೆ. ನಂತರ ಆತನಿಗೆ ಒಂದು ಡಿಜಿಟಲ್ ಕಾರ್ಡ್ ನ್ನು ನೀಡಲಾಗುತ್ತದೆ. ನಂತರ ಅಭ್ಯರ್ಥಿ ಐದು ಟೆಸ್ಟ್ ಗೆ ಅರ್ಹತೆಯನ್ನು ಪಡೆಯುತ್ತಾನೆ.

ಕೆಕೆಆರ್​​ಟಿಸಿ ಐದು ಹಂತದ ಪರೀಕ್ಷೆ, ಕಣ್ಣ ಮುಂದೆಯೇ ಅಂಕಗಳ ಅನಾವರಣ

ಇನ್ನು ಚಾಲನಾ ನೇಮಕಾತಿಗಾಗಿ ಐದು ಪರೀಕ್ಷೆಗಳನ್ನು ಇಡಲಾಗಿದ್ದು, ಒಟ್ಟು ಐವತ್ತು ಅಂಕಗಳನ್ನು ನಿಗದಿ ಮಾಡಲಾಗಿದೆ. ಪ್ರತಿಯೊಂದು ಪರೀಕ್ಷೆಯನ್ನು ಎರಡು ಸಲ ಅಭ್ಯರ್ಥಿ ಹಾಜರಾಗಬೇಕು. ಗಣಕೀಕೃತ ಚಾಲನಾ ಪಥದಲ್ಲಿ ಸೆನ್ಸರ್ ಯುಕ್ತ ಪೋಲ್ ಗಳಿದ್ದು, ಟೆಸ್ಟ್ ಗೆ ಹಾಜರಾಗುವ ಅಭ್ಯರ್ಥಿ ಚಲಾಯಿಸುತ್ತಿರುವ ಬಸ್, ಪೋಲ್ ಗೆ ಟಚ್ ಆಗದಂತೆ ಬಸ್ ಚಲಾಯಿಸಬೇಕು. ಇನ್ನು ಚಾಲನಾ ಪಥದಲ್ಲಿ ಲೂಪ್ ವೈಯರ್ ಹಾಕಿದ್ದು, ಅದರ ಮೂಲಕ ಸಮಯ ಮತ್ತು ಬಸ್ ಚಾಲನೆ ಮಾಹಿತಿ ಸಿಗಲಿದೆ. ಪೋಲ್ ಗೆ ಬಸ್ ಟಚ್ ಆದ್ರೆ ಅವರ ಅಂಕಗಳು ಕಡಿತವಾಗುತ್ತವೆ. ಯಾರು ಐದು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯುತ್ತಾರೋ ಅವರಿಗೆ ನೌಕರಿ ಸಿಗಲಿದೆ.

ಕೆಕೆಆರ್​​ಟಿಸಿ ಐದು ಪರೀಕ್ಷೆಗಳು, ಅವುಗಳಿಗೆ ಇರೋ ಅಂಕಗಳು ಮತ್ತು ಸಮಯ ಹೀಗಿದೆ:

ಹಿಮ್ಮುಖ ನಿಲುಗಡೆ ಪರೀಕ್ಷೆ- ಈ ಪರೀಕ್ಷೆಗೆ 12 ಅಂಕಗಳಿದ್ದು, ಇದಕ್ಕೆ ಒಂದು ನಿಮಿಷ ಸಮಯವಿರುತ್ತೆ. ಪಥದಲ್ಲಿರುವ ಒಂದು ಪೋಲ್ ಗೆ ಬಸ್ ಟಚ್ ಆದ್ರೆ ಒಂದು ಅಂಕ ಕಡಿತವಾಗುತ್ತದೆ. ಸಮಯ ಮೀರಿದ್ರು ಕೂಡಾ ಒಂದು ಅಂಕ ಕಡಿತವಾಗುತ್ತದೆ.

ಹಿಮ್ಮುಖ ಎಸ್ ಪಾರ್ಕಿಂಗ್ ಪಥ- ಈ ಪರೀಕ್ಷೆಗೆ ಎರಡು ಹಂತದಲ್ಲಿ 14 ಅಂಕಗಳಿದ್ದು, ಇದಕ್ಕೆ ಮೂರು ನಿಮಿಷ ಸಮಯ ನಿಗದಿ ಮಾಡಲಾಗಿದೆ. ಇಲ್ಲಿ ಕೂಡಾ ಪಥದಲ್ಲಿರುವ ಸೆನ್ಸಾರ್ ಪೋಲ್ ಗೆ ಬಸ್ ಟಚ್ ಆದ್ರೆ ಅಂಕಗಳು ಕಡಿತವಾಗುತ್ತವೆ.

ಏರು ದಿನ್ನೆಯಲ್ಲಿ ಚಾಲನೆ- ಈ ಪರೀಕ್ಷೆಗೆ ಕೂಡಾ 10 ಅಂಕಗಳನ್ನು ನಿಗದಿ ಮಾಡಲಾಗಿದೆ. ಇದಕ್ಕೆ ಯಾವುದೇ ಸಮಯದ ಮಿತಿಯಿಲ್ಲಾ. ಆದರೆ ಎರು ಪ್ರದೇಶದಲ್ಲಿ ಬಸ್ ಚಲಾಯಿಸಿಕೊಂಡು ಬಂದು ಬಸ್ ನ್ನು ನಿಲ್ಲಿಸಬೇಕು. ಮತ್ತೆ ಬಸ್ ಹಿಂದಕ್ಕೆ ಹೋಗದಂತೆ ಮುಂದೆ ತಗೆದುಕೊಂಡು ಹೋಗಬೇಕು. ಹಿಂದೆ ಹೋದ್ರೆ ಅಂಕಗಳು ಕಡಿತವಾಗುತ್ತವೆ.

8 ಆಕಾರದ ಪಥ- ಈ ಪರೀಕ್ಷೆಗೆ 10 ಅಂಕಗಳಿದ್ದು, ಎಂಟು ನಂಬರ್ ಆಕಾರದಲ್ಲಿ ಪೋಲ್ ಗಳಿದ್ದು, ಪೋಲ್ ಗಳಿಗೆ ಟಚ್ ಆಗದಂತೆ ಬಸ್ ಚಾಲನೆ ಮಾಡಬೇಕು. ಇದಕ್ಕೆ ಒಂದು ನಿಮಿಷ ಸಮಯವಿರುತ್ತದೆ.

ಸಿಗ್ನಲ್ ಗುರುತಿಸುವಿಕೆ – ಈ ಪರೀಕ್ಷೆಗೆ 4 ಅಂಕಗಳಿವೆ. ಯಾವ ಸಿಗ್ನಲ್ ಇದ್ದಾಗ ಏನು ಮಾಡಬೇಕು ಅನ್ನೋ ಪರೀಕ್ಷೆಯನ್ನು ಕೂಡಾ ಆನ್ಲೈನ್ ಪರದೆ ಮೂಲಕ ಉತ್ತರಿಸಬೇಕಾಗುತ್ತದೆ.

ಕೆಕೆಆರ್​​ಟಿಸಿ ದೇಶದಲ್ಲಿಯೇ ಮೊದಲ ಮತ್ತು ವಿನೂತನ ಪ್ರಯತ್ನ

ಇನ್ನು ಕಲಬುರಗಿ ನಗರದಲ್ಲಿ ಕೇಂದ್ರಸ್ಥಾನ ಹೊಂದಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ನೇಮಕಾತಿಗೆ ದೇಶದಲ್ಲಿಯೇ ಮೊದಲ ಬಾರಿಗೆ ಇಷಗ್ಟು ಕರಾರುವಕ್ಕಾದ/ ಖಡಕ್ಕಾದ ವಿನೂತನ ಕ್ರಮ ಕೈಗೊಂಡಿದೆ. ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದೇ, ಪಾರದರ್ಶಕವಾಗಿ ಯಾವ ರೀತಿ ಆಯ್ಕೆ ಪ್ರಕ್ರಿಯೆ ನಡೆಸಬೇಕು ಅಂತ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್. ರಾಚಪ್ಪ ಅವರು ಸಿಬ್ಬಂದಿ ಜೊತೆ ಚರ್ಚೆ ಮಾಡಿ, ಅನೇಕ ರೀತಿಯ ಚರ್ಚೆ ನಂತರ ಗಣಕೀಕೃತ ಚಾಲನಾ ಪಥದಲ್ಲಿ ಟೆಸ್ಟ್ ನಡೆಸಿ, ಆಯ್ಕೆ ಪ್ರಕ್ರಿಯೆ ನಡೆಸಿದ್ರೆ ಭ್ರಷ್ಟಾಚಾರಕ್ಕೆ ಆಸ್ಪದವಿರೋದಿಲ್ಲ. ಅರ್ಹರಿಗೆ ನೌಕರಿ ಸಿಗುತ್ತೆ ಅಂತ ತಿಳಿದು, ಈ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಇನ್ನು ತಂತ್ರಜ್ಞಾನದ ಸಹಾಯಕ್ಕೆ ಬೆಂಗಳೂರು ಮೂಲದ ಸೆರಬ್ರಾ ಅನ್ನೋ ಕಂಪನಿಗೆ ಗುತ್ತಿಗೆ ನೀಡಿದೆ. ಅವರು ತಾಂತ್ರಿಕತೆ ನೆರವು ಒದಗಿಸಿದ್ರೆ, ಸಾರಿಗೆ ಸಂಸ್ಥೆಯ ಸಿಬ್ಬಂಧಿ ಸ್ಥಳದಲ್ಲಿದ್ದು ಅದರ ಮೇಲ್ವಿಚಾರಣೆ ಮಾಡುತ್ತಾರೆ. ಆಯ್ಕೆ ಪ್ರಕ್ರಿಯೆಗಾಗಿಯೇ ಸಂಸ್ಥೆ ಆರವತ್ತು ಸಿಬ್ಬಂದಿಯನ್ನು ನಿಯೋಜಿಸಿದೆ.

ಕಂಟ್ರೋಲ್ ರೂಂ ಸ್ಥಾಪನೆ: ಇನ್ನು ಗಣಕೀಕೃತ ಚಾಲನಾ ಪಥದಲ್ಲಿ ಸಿಸಿಟಿವಿ, ಸೆನ್ಸಾರ್ ಪೋಲ್, ಲೂಪ್ ವೈಯರ್ ಅಳವಡಿಸಲಾಗಿದೆ. ಅಲ್ಲಿ ಸಿಬ್ಬಂದಿ ಕೂಡಾ ಇರ್ತಾರೆ. ಅದೇ ರೀತಿ ಚಾಲನಾ ಪರೀಕ್ಷೆಯ ಕೇಂದ್ರದಲ್ಲಿ ಕಂಟ್ರೋಲ್ ರೂಮ್ ಕೂಡಾ ಸ್ಥಾಪನೆ ಮಾಡಲಾಗಿದೆ. ಟೆಸ್ಟ್ ನ ಸ್ಥಳದಲ್ಲಿ ನಡೆಯುವ ಪ್ರತಿಯೊಂದು ಪರೀಕ್ಷೆ ಕೂಡಾ ಕಂಟ್ರೋಲ್ ರೂಮ್ ನಲ್ಲಿ ದಾಖಲಾಗುತ್ತದೆ. ಕಂಟ್ರೋಲ್ ರೂಮ್ ನ ಸಿಬ್ಬಂದಿ ಎಲ್ಲವನ್ನು ರೆಕಾರ್ಡ್ ಮಾಡುತ್ತಾರೆ. ಎಲ್ಲಾ ಟೆಸ್ಟ್ ಗಳು ಮುಗಿದ ಮೇಲೆ ಒಟ್ಟಾರೆಯಾಗಿ ಅಭ್ಯರ್ಥಿ ಪಡೆದಿರೋ ಅಂಕಗಳು ಎಷ್ಟು ಅನ್ನೋದನ್ನು ಅಧಿಕೃತವಾಗಿ ನೀಡಲಾಗುತ್ತದೆ.

ಅರ್ಹರಿಗಷ್ಟೇ ಸರ್ಕಾರಿ ನೌಕರಿ ಸಿಗಬೇಕು. ನೇಮಕಾತಿಯಲ್ಲಿ ನಯಾಪೈಸೆ ಹಣವನ್ನು ಕೂಡಾ ಅಭ್ಯರ್ಥಿಗಳು ಯಾರಿಗೂ ನೀಡಬಾರದು ಅನ್ನೋ ಉದ್ದೇಶದಿಂದ ಗಣಕೀಕೃತ ಚಾಲನಾ ಪಥವನ್ನು ನಿರ್ಮಾಣ ಮಾಡಲಾಗಿದೆ. ಅಲ್ಲಿಯೇ ಇದೀಗ ಅಭ್ಯರ್ಥಿಗಳ ಪರೀಕ್ಷೆ ನಡೆಯುತ್ತಿದೆ. ದೇಶದಲ್ಲಿ ಮೊದಲ ಪ್ರಯತ್ನವನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಡೆಸುತ್ತಿದೆ ಅಂತಿದ್ದಾರೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್ ರಾಚಪ್ಪ. ಇತ್ತೀಚಿನ ಕಡುಭ್ರಷ್ಟ ಪಿಎಸ್ಐ ಹಗರಣದಿಂದ ರೋಸಿಹೋಗಿರುವ ರಾಜ್ಯದ ಜನತೆಯ ಪರವಾಗಿ ನಿರ್ದೇಶಕ ರಾಚಪ್ಪ ಮತ್ತು ಅವರ ತಂಡಕ್ಕೆ ಬಿಗ್ ಸೆಲ್ಯೂಟ್​!

Published On - 6:41 pm, Thu, 17 August 23