Azadi ka amrit mahotsav Part 2: ಭಾರತದ ಮೊದಲ ರಾಕೆಟ್ ಉಡಾವಣೆ -ಜವಾಹರ್ ಲಾಲ್ ನೆಹರು ಸಾವು -ಪಾಕಿಸ್ತಾನದ ವಿರುದ್ಧ 1965ರಲ್ಲಿ ಭಾರತಕ್ಕೆ ಯುದ್ಧದಲ್ಲಿ ಜಯ

| Updated By: Rakesh Nayak Manchi

Updated on: Aug 14, 2022 | 8:40 AM

75 Independence Day: ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು 75 ವರ್ಷವಾಗಿದೆ. ಭಾರತವು ಸಾಕಷ್ಟು ಸಾಧನೆಯನ್ನು ಮಾಡಿದೆ. ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಹೊಸ ಸಾಧನೆಯ ಮೂಲಕ ಅಭಿವೃದ್ದಿಯ ಹಾದಿಯಲ್ಲಿ ದಾಪುಗಾಲು ಇಟ್ಟಿದೆ. ಸ್ವಾತಂತ್ರ್ಯ ನಂತರದ ಭಾರತದ ಪ್ರಮುಖ ಸಾಧನೆಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

Azadi ka amrit mahotsav Part 2: ಭಾರತದ ಮೊದಲ ರಾಕೆಟ್ ಉಡಾವಣೆ -ಜವಾಹರ್ ಲಾಲ್ ನೆಹರು ಸಾವು -ಪಾಕಿಸ್ತಾನದ ವಿರುದ್ಧ 1965ರಲ್ಲಿ ಭಾರತಕ್ಕೆ ಯುದ್ಧದಲ್ಲಿ ಜಯ
ಭಾರತದ ಮೊದಲ ರಾಕೆಟ್ ಉಡಾವಣೆ -ಜವಾಹರ್ ಲಾಲ್ ನೆಹರು ಸಾವು -ಪಾಕಿಸ್ತಾನದ ವಿರುದ್ಧ 1965ರಲ್ಲಿ ಭಾರತಕ್ಕೆ ಯುದ್ಧದಲ್ಲಿ ಜಯ
Follow us on

Azadi ka amrit mahotsav: ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು 75 ವರ್ಷ ಪೂರ್ಣವಾಗಿದೆ. ಕಳೆದ 75 ವರ್ಷದಲ್ಲಿ ಭಾರತವು ಸಾಕಷ್ಟು ಸಾಧನೆಯನ್ನು ಮಾಡಿದೆ. ಅನೇಕ ಮೈಲಿಗಲ್ಲುಗಳನ್ನು ನಿರ್ಮಿಸಿದೆ. ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಭಾರತವು ಹೊಸ ಸಾಧನೆಯ ಮೂಲಕ ಅಭಿವೃದ್ದಿಯ ಹಾದಿಯಲ್ಲಿ ದಾಪುಗಾಲು ಇಟ್ಟಿದೆ. ಸ್ವಾತಂತ್ರ್ಯ ನಂತರದ ಭಾರತದ ಪ್ರಮುಖ ಸಾಧನೆ, ಮೈಲಿಗಲ್ಲು, ಏಳು-ಬೀಳುಗಳು, ಪ್ರಮುಖ ಘಟನಾವಳಿ ಅಕ್ಷರ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

 

  1. 11. ಪಂಚಶೀಲ ತತ್ವ ಆಳವಡಿಕೆ: 1954ರಲ್ಲಿ ಭಾರತ ಹಾಗೂ ಚೀನಾ ದೇಶಗಳು ಪಂಚಶೀಲ ತತ್ವಗಳನ್ನು ಆಳವಡಿಸಿಕೊಂಡವು. 1954ರ ಜೂನ್ ತಿಂಗಳಲ್ಲಿ ಚೀನಾದ ಪ್ರಧಾನಿ ಚೌ ಎನ್ ಲಾಯ್ ಭಾರತಕ್ಕೆ ಭೇಟಿ ನೀಡಿ, ಭಾರತದ ಪ್ರಧಾನಿ ಜವಾಹರ್ ಲಾಲ್ ನೆಹರು ಅವರನ್ನ ಭೇಟಿಯಾದರು. ಪರಸ್ಪರ ಅಂತಾರಾಷ್ಟ್ರೀಯ ಸಂಬಂಧ ವೃದ್ದಿಗಾಗಿ ಪಂಚಶೀಲ ತತ್ವಗಳನ್ನು ಆಳವಡಿಸಿಕೊಳ್ಳಲು ಎರಡು ದೇಶಗಳು ನಿರ್ಧರಿಸಿದ್ದವು. ಭಾರತ ನೆರೆಯ ದೇಶ ಚೀನಾದ ಜೊತೆಗೆ ಸಂಘರ್ಷದ ಬದಲು ಸ್ನೇಹ, ಸೌಹಾರ್ದತೆಯ ಮೂಲಕ ಭಾಂಧವ್ಯ ವೃದ್ದಿಗೆ ನೆಹರು ಹೆಜ್ಜೆ ಹಾಕಿದ್ದರು. ಪಂಚ ಶೀಲ ತತ್ವಗಳೆಂದರೇ, 1-ಪರಸ್ಪರ ರಾಷ್ಟ್ರಗಳ ಪ್ರಾದೇಶಿಕ ಮತ್ತು ಸಾರ್ವಭೌಮತೆಗೆ ಗೌರವ 2-ಪರಸ್ಪರ ಆಕ್ರಮಣ ಮಾಡದಿರುವುದು 3-ಅಂತರಿಕ ವ್ಯವಹಾರಗಳಲ್ಲಿ ಪರಸ್ಪರ ಹಸ್ತಕ್ಷೇಪ ಮಾಡದಿರುವುದು 4-ಪರಸ್ಪರ ಸಹಕಾರ ಮತ್ತು ಸಮಾನತೆ. 5-ಶಾಂತಿಯುತ ಸಹಭಾಳ್ವೆ.
    ಭಾರತದ ವಿದೇಶಾಂಗ ನೀತಿಗೆ ಈ ಪಂಚಶೀಲ ತತ್ವಗಳೇ ಈಗಲೂ ಪ್ರಮುಖ ತಳಹದಿಯಾಗಿವೆ. ಈ ಪಂಚಶೀಲ ತತ್ವಗಳ ಆಧಾರದ ಮೇಲೆಯೇ ಭಾರತವು ಯಾವುದೇ ದೇಶದ ಮೇಲೆ ಯುದ್ದ, ಆಕ್ರಮಣ ಮಾಡದಿರುವ ತೀರ್ಮಾನ ತೆಗೆದುಕೊಂಡಿದೆ.
  2. 12. ರಾಜ್ಯ ಪುನರ್ ವಿಂಗಡಣಾ ಕಾಯಿದೆ ಜಾರಿ: 1956ರಲ್ಲಿ ರಾಜ್ಯ ಪುನರ್ ವಿಂಗಡಣಾ ಕಾಯಿದೆ ಜಾರಿಗೆ ಬಂತು. ಭಾಷೆಯ ಆಧಾರದ ಮೇಲೆ ಭಾಷಾವಾರು ರಾಜ್ಯಗಳನ್ನು ರಚನೆ ಮಾಡಲು ಈ ಕಾಯಿದೆ ಅವಕಾಶ ಕೊಟ್ಟಿತ್ತು. ಸ್ವಾತಂತ್ರ್ಯ ನಂತರ ದೇಶದಲ್ಲಿದ್ದ ವಿವಿಧ ರಾಜ್ಯಗಳ ಗಡಿಗಳನ್ನ ಗುರುತಿಸಿ ಭಾಷೆಯ ಆಧಾರದ ಮೇಲೆ ವಿಂಗಡಣೆ ಮಾಡುವ ಉದ್ದೇಶದಿಂದ 1956ರಲ್ಲಿ ರಾಜ್ಯ ಪುನರ್ ವಿಂಗಡಣಾ ಕಾಯಿದೆ ಜಾರಿಗೆ ತರಲಾಯಿತು. ಭಾರತದಲ್ಲಿ ಸ್ವಾತಂತ್ರ್ಯಕ್ಕೂ ಮುನ್ನವೇ ಭಾಷೆಯ ಆಧಾರದ ಮೇಲೆ ರಾಜ್ಯ ರಚನೆಯ ಬೇಡಿಕೆ ಅನೇಕ ರಾಜ್ಯಗಳಿಂದ ಇತ್ತು. 1895ರಲ್ಲಿ ಒರಿಸ್ಸಾ ರಾಜ್ಯದಲ್ಲಿ ಭಾಷಾವಾರು ರಾಜ್ಯ ರಚನೆಯ ಬೇಡಿಕೆ ಇತ್ತು. 1956ರ ರಾಜ್ಯ ಪುನರ್ ವಿಂಗಡಣಾ ಕಾಯಿದೆಯು 1956 ನವಂಬರ್ 1 ರಂದೇ ಜಾರಿಗೆ ಬಂತು. ಅಂದೇ ದೇಶದಲ್ಲಿ ಭಾಷೆಯ ಆಧಾರದ ಮೇಲೆ 14 ರಾಜ್ಯಗಳು ಹಾಗೂ 6 ಕೇಂದ್ರಾಡಳಿತ ಪ್ರದೇಶಗಳು ಆಸ್ತಿತ್ವಕ್ಕೆ ಬಂದವು. ಇವುಗಳಲ್ಲಿ ಕರ್ನಾಟಕ ರಾಜ್ಯವು ಒಂದು. ಮುಂದೆ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು.
  3. 13.1962 ರಲ್ಲಿ ಭಾರತ-ಚೀನಾ ಯುದ್ಧ: ಭಾರತವು ಚೀನಾದೊಂದಿಗೆ ಸೌಹಾರ್ದ ಸಂಬಂಧ ಹೊಂದಬೇಕೆಂದು ಬಯಸಿತ್ತು. ಆದರೇ, ಚೀನಾ ಇದಕ್ಕೆ ಪ್ರತಿಯಾಗಿ ಭಾರತದ ನಂಬಿಕೆ, ವಿಶ್ವಾಸಕ್ಕೆ ದ್ರೋಹ ಬಗೆದಿತ್ತು. ಪಂಚಶೀಲ ತತ್ವಗಳಿಗೆ ಸಹಿ ಹಾಕಿದ ಬಳಿಕವೂ ಚೀನಾ, ಭಾರತದ ಭೂ ಭಾಗವನ್ನು ಆಕ್ರಮಿಸಿತ್ತು. ಚೀನಾ ದೇಶ ಟಿಬೆಟ್ ಆಕ್ರಮಿಸುವುದಾಗಿ ಘೋಷಿಸಿತ್ತು. ಇದನ್ನು ಭಾರತ ವಿರೋಧಿಸಿ ಪ್ರತಿಭಟನಾ ಪತ್ರ ಬರೆದಿತ್ತು. ಟಿಬೆಟ್ ವಿಷಯವಾಗಿ ಭಾರತ-ಚೀನಾ ನಡುವೆ ರಾಜೀ ಸಂಧಾನದ ಪ್ರಸ್ತಾವವನ್ನು ಭಾರತ ಇಟ್ಟಿತ್ತು. ಆದರೇ, ಚೀನಾವು ಆಕ್ಸಾಯ್ ಚೀನಾದಲ್ಲಿ ತನ್ನ ಸೇನೆಯನ್ನು ನಿಯೋಜಿಸಿತ್ತು . ಟಿಬೆಟ್ ನಲ್ಲಿ ತನ್ನ ಆಳ್ವಿಕೆಗೆ ಭಾರತ ಬೆದರಿಕೆಯೊಡ್ಡುತ್ತದೆ ಎಂದು ಚೀನಾ ಭಾವಿಸಿತ್ತು. ಆದರೇ, 1959ರಲ್ಲಿ ಭಾರತಕ್ಕೆ ತಾನು ಚೀನಾದ ವಿರುದ್ಧ ಯುದ್ಧಕ್ಕೆ ಸಿದ್ದವಿಲ್ಲ ಎಂಬುದು ಅರಿವಾಗಿತ್ತು. ಆದರೇ, ಕೊಂಗಾಕ್ ಪಾಸ್ ನಲ್ಲಿ ಭಾರತ-ಚೀನಾದ ಸೈನಿಕರ ನಡುವೆ ಘರ್ಷಣೆ ನಡೆದು ಭಾರತದ 9 ಯೋಧರು ಸಾವನ್ನಪ್ಪಿದ್ದರು. ಬಳಿಕ ಗಡಿಯಲ್ಲಿ ಭಾರತ-ಚೀನಿ ಸೈನಿಕರ ನಡುವೆ ಘರ್ಷಣೆಗಳು ನಡೆಯುತ್ತಲೇ ಇದ್ದವು. ಇದು ಭಾರತ-ಚೀನಾ ನಡುವೆ ಯುದ್ಧಕ್ಕೆ ನಾಂದಿ ಹಾಡಿತ್ತು. 1962ರ ಆಕ್ಟೋಬರ್ 20 ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯು ಲಡಾಖ್ ನಲ್ಲಿ ಭಾರತದ ಭೂ ಭಾಗಕ್ಕೆ ನುಗ್ಗಿತ್ತು. ಈ ವೇಳೆ ಭಾರತವು 2 ಸೇನಾ ತುಕಡಿಗಳನ್ನು ಮಾತ್ರ ಯುದ್ಧ ಆರಂಭವಾಗಲ್ಲ ಎಂಬ ನಂಬಿಕೆಯಿಂದ ನಿಯೋಜಿಸಿತ್ತು. ಆದರೇ, ಚೀನಾದ ಸೇನೆ ಭಾರತದೊಳಕ್ಕೆ ನುಗ್ಗಿ ಬಂದು ಮೂವರು ಸೈನಿಕರನ್ನು ಕಿಡ್ನ್ಯಾಪ್ ಮಾಡಿ ಹತ್ಯೆ ಮಾಡಿತ್ತು. ಇದರಿಂದ ಭಾರತ-ಚೀನಾ ನಡುವೆ ಯುದ್ಧ ಆರಂಭವಾಗಿಯೇ ಬಿಟ್ಟಿತ್ತು.
  4. 14. ಚೀನಾ ವಿರುದ್ಧ ಯುದ್ಧದಲ್ಲಿ ಸೋತ ಭಾರತ: ಭಾರತ-ಚೀನಾ ಸೇನೆಗಳ ನಡುವೆ ಆಕ್ಟೋಬರ್ 20, 1962ರಲ್ಲಿ ಯುದ್ಧ ಆರಂಭವಾಯಿತು. ಚೀನಾದ ಸೇನೆಯು ಭಾರತದ ಸೇನೆಯ ಟೆಲಿಪೋನ್ ಸಂಪರ್ಕ ಕಡಿತ ಮಾಡಿತ್ತು. ಇದರಿಂದ ಭಾರತದ ಸೈನಿಕರು ಹೆಚ್ಚಿನ ಸೈನಿಕರನ್ನು ಕಳಿಸಲು ಸೇನಾ ಹೆಡ್ ಕ್ವಾರ್ಟರ್ ಗೆ ಮೇಸೇಜ್ ಕಳಿಸಲು ಸಾಧ್ಯವಾಗಲಿಲ್ಲ. ಮೊದಲ ದಿನ ಹಿಂಭಾಗದಿಂದ ಚೀನಾದ ಸೇನೆ ಭಾರತದ ಸೈನಿಕರ ಮೇಲೆ ದಾಳಿ ಮಾಡಿತ್ತು. ಇದರಿಂದ ಭಾರತದ ಸೈನಿಕರು ಭೂತಾನ್‌ಗೆ ಹೋಗಿ ರಕ್ಷಣೆ ಪಡೆಯಬೇಕಾಯಿತು. ಆಕ್ಟೋಬರ್ 22ರಂದು ಚೀನಾದ ಸೇನೆಯ ದಾಳಿಯು ಭಾರತದ ಸೈನಿಕರಲ್ಲಿ ಗೊಂದಲ ಮೂಢಿಸಿತ್ತು. 400 ಮಂದಿ ಚೀನೀ ಸೈನಿಕರು ಭಾರತದ ಸೈನಿಕರ ಮೇಲೆ ದಾಳಿ ಮಾಡಿದ್ದರು. ಆಗ ಭಾರತದ ಸೇನೆಯು ಮೋರ್ಟಾರ್ ದಾಳಿ ನಡೆಸಿ ಚೀನಾದ ದಾಳಿಯನ್ನು ತಡೆಯಿತು. ಬಳಿಕ ಚೀನಾದ ಸೈನಿಕರು ಜಮಾಯಿಸಿದ್ದ ಸ್ಥಳವನ್ನು ಪತ್ತೆ ಹಚ್ಚಿ ಭಾರತದ ಸೇನೆಯು ದಾಳಿ ನಡೆಸಿತ್ತು. ಇದರಿಂದ 200 ಚೀನಾ ಸೈನಿಕರು ಸಾವನ್ನಪ್ಪಿದ್ದರು. ಯುದ್ಧದಲ್ಲಿ ಭಾರತದ 20 ಸಾವಿರ ಸೈನಿಕರು ಭಾಗವಹಿಸಿದ್ದರೇ, ಚೀನಾದ 80 ಸಾವಿರ ಸೈನಿಕರು ಭಾಗವಹಿಸಿದ್ದರು. ಯುದ್ಧವು 1962ರ ನವಂಬರ್ 21ರವರೆಗೂ ನಡೆಯಿತು. ಒಂದು ತಿಂಗಳು ಪೂರ್ಣವಾದ ಬಳಿಕ ಚೀನಾ ಕದನ ವಿರಾಮ ಘೋಷಿಸಿತ್ತು. ಯುದ್ಧದಲ್ಲಿ ಭಾರತ ಸೋತಿತ್ತು. ಪರಿಣಾಮವಾಗಿ ಭಾರತವು 14,500 ಚದರ ಮೈಲು ಪ್ರದೇಶವನ್ನು ಕಳೆದುಕೊಂಡಿತ್ತು.
  5. 15. ಭಾರತದ ಮೊದಲ ರಾಕೆಟ್ ಉಡಾವಣೆ: 1963, ನವಂಬರ್ 21 ರಂದು ಭಾರತದ ಮೊದಲ ಸಣ್ಣ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಕೇರಳದ ತಿರುವನಂತಪುರದ ಹೊರ ವಲಯದ ತುಂಬಾ ಎಂಬ ಸ್ಥಳದಿಂದ ರಾಕೆಟ್ ಅನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಯಿತು. ಈ ಮೂಲಕ ಭಾರತವು ಬಾಹ್ಯಾಕಾಶ ರಂಗವನ್ನು ಪ್ರವೇಶ ಮಾಡಿತ್ತು. ಬಾಹ್ಯಾಕಾಶದಲ್ಲಿ ಇದು ಭಾರತದ ಮೊದಲ ಮೈಲಿಗಲ್ಲು. ತುಂಬಾ ಸ್ಥಳವನ್ನು ತುಂಬಾ ಇಕ್ವೋಟೋರಿಯಲ್ ರಾಕೆಟ್ ಲಾಂಚ್ ಸಿಸ್ಟಮ್ ಎಂದು ಕರೆಯಲಾಯಿತು. ಇದೇ ಮುಂದೆ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ಆಗಿ ಅಭಿವೃದ್ದಿಯಾಯಿತು. ವಿಕ್ರಮ್ ಸಾರಾಭಾಯಿ ಅವರೇ ಭಾರತದ ಬಾಹ್ಯಾಕಾಶ ಕ್ಷೇತ್ರದ ಪಿತಾಮಹ. ಮೊದಲ ರಾಕೆಟ್, ಫಿಜಿಕ್ಸ್, ಅಸ್ಟ್ರೋನಾಮಿ, ಮೆಟೋರಾಲಜಿ ವಿಭಾಗಗಳಲ್ಲಿ ಎಲೆಕ್ಟ್ರೋನ್ ಗಳ ಬಗ್ಗೆ ಅಧ್ಯಯನ ಮಾಡುವ ರಾಕೆಟ್ ಆಗಿತ್ತು. ಮೊದಲ ರಾಕೆಟ್ ನ ಬಿಡಿಭಾಗಗಳಲ್ಲಿ ಕೇರಳದ ತುಂಬಾ ಗ್ರಾಮದ ಬಳಿಗೆ ಎತ್ತಿನ ಗಾಡಿ ಹಾಗೂ ಸೈಕಲ್ ಗಳಲ್ಲಿ ತೆಗೆದುಕೊಂಡು ಹೋಗಲಾಗಿತ್ತು. ಅಲ್ಲಿದ್ದ ಚರ್ಚ್ ಅನ್ನೇ ಬಾಹ್ಯಾಕಾಶ ವರ್ಕ್ ಶಾಪ್ ಆಗಿ ಪರಿವರ್ತನೆ ಮಾಡಲಾಗಿತ್ತು. ಬಿಷಪ್ ಮನೆಯನ್ನು ಕಚೇರಿಯಾಗಿ ಪರಿವರ್ತಿಸಲಾಗಿತ್ತು. ದನದ ಕೊಟ್ಟಿಗೆಯನ್ನು ಸ್ಟೋರ್ ರೂಮು, ಲ್ಯಾಬೋರೇಟರಿ ಆಗಿ ಪರಿವರ್ತಿಸಲಾಗಿತ್ತು. ಹೆಚ್ಚಿನ ಸೌಲಭ್ಯ ಇಲ್ಲದೇ ಇದ್ದರೂ, ಕಡಿಮೆ ಹಣದ ವ್ಯವಸ್ಥೆಯಲ್ಲಿ ಉತ್ಸಾಹಿ ವಿಜ್ಞಾನಿಗಳು ಸೇರಿ ಮೊದಲ ರಾಕೆಟ್ ಅನ್ನ ಉಡಾವಣೆ ಮಾಡಿದ್ದರು.
  6. 16. ಜವಾಹರ್ ಲಾಲ್ ನೆಹರು ಸಾವು: ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ದೇಶದ ಪ್ರಧಾನಿ ಯಾರಾಗಬೇಕೆಂಬ ಪ್ರಶ್ನೆ ಉದ್ಭವವಾಯಿತು. ಆಗ ಬಹುತೇಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಸರ್ದಾರ್ ವಲ್ಲಭಭಾಯಿ ಪಟೇಲ್ ದೇಶದ ಪ್ರಧಾನಿಯಾಗಬೇಕೆಂದು ತಮ್ಮ ಅಭಿಪ್ರಾಯವನ್ನು ಮಹಾತ್ಮ ಗಾಂಧೀಜಿ ತಿಳಿಸಿದ್ದರು. ಆದರೇ, ಗಾಂಧೀಜಿ ದೇಶದ ಪ್ರಧಾನಿ ಹುದ್ದೆಗೆ ಜವಾಹರ್ ಲಾಲ್ ನೆಹರು ಅವರನ್ನು ಆಯ್ಕೆ ಮಾಡಿದ್ದರು. ಇದರಿಂದಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ 1950 ಮರಣ ಹೊಂದುವವರೆಗೂ ದೇಶದ ಗೃಹ ಮಂತ್ರಿ ಆಗಿ ಸೇವೆ ಸಲ್ಲಿಸಿದ್ದರು. ಜವಾಹರ್ ಲಾಲ್ ನೆಹರು 1947ರಿಂದ 1964ರವರೆಗೆ ದೇಶದ ಪ್ರಧಾನಮಂತ್ರಿಯಾಗಿ ಆಳ್ವಿಕೆ ನಡೆಸಿದ್ದರು. ದೇಶದಲ್ಲಿ ಕೃಷಿ, ಕೈಗಾರಿಕೆ ಸ್ಥಾಪನೆ, ಶಿಕ್ಷಣ, ಹೊಸ ಡ್ಯಾಮ್ ಗಳ ನಿರ್ಮಾಣಕ್ಕೆ ನೆಹರು ಒತ್ತು ನೀಡಿದ್ದರು. ಪಂಚ ವಾರ್ಷಿಕ ಯೋಜನೆಗಳನ್ನು ಆರಂಭಿಸಿದ್ದರು. 1964ರಲ್ಲಿ ನೆಹರು ಅವರ ಆರೋಗ್ಯ ಕ್ಷೀಣಿಸಲು ಆರಂಭಿಸಿತ್ತು. 1964ರ ಮೇ ತಿಂಗಳ 23 ರಿಂದ 26ರವರೆಗೆ ಉತ್ತರಾಖಂಡ್‌ನ ಡೆಹಾರಾಡೂನ್‌ಗೆ ವಿಶ್ರಾಂತಿಗಾಗಿ ತೆರಳಿದ್ದರು. ಮೇ, 26ರಂದು ದೆಹಲಿಯ ತೀನ್ ಮೂರ್ತಿ ಭವನದ ತಮ್ಮ ನಿವಾಸಕ್ಕೆ ಆಗಮಿಸಿದ್ದರು. 1964ರ ಮೇ, 27ರಂದು ತೀನ್ ಮೂರ್ತಿ ಭವನದಲ್ಲಿ ಹೃದಯಾಘಾತದಿಂದ ನೆಹರು ಸಾವನ್ನಪ್ಪಿದ್ದರು. ಆಗ ನೆಹರು ಅವರಿಗೆ 74 ವರ್ಷ ವಯಸ್ಸಾಗಿತ್ತು . ಸ್ವಾತಂತ್ರ್ಯ ನಂತರ ದೇಶದ ಮೊದಲ ಪ್ರಧಾನಿಯಾಗಿ ನೆಹರು ಆಳ್ವಿಕೆ ನಡೆಸಿದ್ದರು. ನೆಹರು ಬರೆದಿದ್ದ ವಿಲ್ ಪ್ರಕಾರವೇ ಚಿತಾಭಸ್ಮವನ್ನು ಅಲಹಾಬಾದ್‌ನ ಗಂಗಾನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಜೊತೆಗೆ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ವಿಸರ್ಜನೆ ಮಾಡಲಾಯಿತು. ಜೊತೆಗೆ ನಾಲ್ಕು ವಿಮಾನಗಳ ಮೂಲಕ ದೇಶಾದ್ಯಂತ ಚಿತಾಭಸ್ಮವನ್ನು ಹಾಕುವ ಮೂಲಕ ಭಾರತದ ಭೂಮಿಯ ಮಣ್ಣಿನಲ್ಲಿ ವಿಲೀನವಾಗುವಂತೆ ಮಾಡಲಾಯಿತು. ಭಾರತದ ಮಣ್ಣಿನಿಂದ ಬೇರ್ಪಡಿಸಲಾಗದಂತೆ ತಮ್ಮ ಚಿತಾಭಸ್ಮ ವಿಸರ್ಜಿಸಬೇಕೆಂದು ನೆಹರು ವಿಲ್ ನಲ್ಲಿ ಹೇಳಿದ್ದರು.
  7. 17. ನೆಹರು ನಂತರ ಲಾಲ್ ಬಹಾದ್ದೂರ್ ಶಾಸ್ತ್ರಿ ಪ್ರಧಾನಿ ಹುದ್ದೆಗೆ: ಜವಾಹರ್ ಲಾಲ್ ನೆಹರು ನಿಧನ ನಂತರ ದೇಶದ ಪ್ರಧಾನಿಯಾಗಿ ಲಾಲ್ ಬಹಾದ್ದೂರ್ ಶಾಸ್ತ್ರಿ 1964ರ ಜೂನ್ 9ರಂದು ದೇಶದ ಪ್ರಧಾನಿ ಹುದ್ದೆಗೇರಿದ್ದರು. ಶಾಸ್ತ್ರಿ ಅವರು ಪ್ರಮಾಣಿಕತೆ ಹಾಗೂ ಸರಳತೆಯನ್ನು ಮೈಗೂಡಿಸಿಕೊಂಡಿದ್ದರು. ನೆಹರು ಕ್ಯಾಬಿನೆಟ್ ನಲ್ಲಿ ಕೇಂದ್ರ ರೈಲ್ವೇ ಹಾಗೂ ಗೃಹ ಮಂತ್ರಿಯಾಗಿ ಲಾಲ್ ಬಹಾದ್ದೂರ್ ಶಾಸ್ತ್ರಿ ಕಾರ್ಯನಿರ್ವಹಿಸಿದ್ದರು. ಲಾಲ್ ಬಹಾದ್ದೂರ್ ಶಾಸ್ತ್ರಿ ಕ್ಯಾಬಿನೆಟ್ ನಲ್ಲಿ ನೆಹರು ಪುತ್ರಿ ಇಂದಿರಾಗಾಂಧಿ ವಾರ್ತಾ ಮತ್ತು ಪ್ರಸಾರ ಖಾತೆ ಮಂತ್ರಿಯಾಗಿದ್ದರು.
  8. 18. ಪಾಕಿಸ್ತಾನದ ವಿರುದ್ಧ 1965ರಲ್ಲಿ ಭಾರತಕ್ಕೆ ಯುದ್ಧದಲ್ಲಿ ಜಯ: ಲಾಲ್ ಬಹಾದ್ದೂರ್ ಶಾಸ್ತ್ರಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅನಿರೀಕ್ಷಿತವಾಗಿ 1965ರಲ್ಲಿ ಭಾರತ-ಪಾಕಿಸ್ತಾನ ಯುದ್ಧ ಶುರುವಾಯಿತು. ಭಾರತದ ಬಳಿ ಉತ್ತಮ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಇರಲಿಲ್ಲ. ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಆದರೂ ಭಾರತವು ಪಾಕಿಸ್ತಾನದ ವಿರುದ್ಧ ಹೋರಾಟ ಮಾಡಿತ್ತು. ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆಯನ್ನು ದೇಶಕ್ಕೆ ನೀಡಿದ್ದರು. ಈ ಘೋಷಣೆಯು ಅಂದಿನಿಂದ ಇಂದಿನವರೆಗೂ ಪ್ರಸಿದ್ದವಾಗಿದೆ. 1965ರಲ್ಲಿ ನಾವು ಅಗತ್ಯವಿರುವವರೆಗೂ ಬಡತನದಲ್ಲಿ ಇರುತ್ತೇವೆ, ಆದರೇ, ಸ್ವಾತಂತ್ರ್ಯ ಕಳೆದುಕೊಳ್ಳಲು ಬಯಸಲ್ಲ ಎಂದಿದ್ದರು. 1966ರ ಜನವರಿ 10 ರಂದು ಆಗಿನ ರಷ್ಯಾದ ತಾಷ್ಕೆಂಟ್ ನಲ್ಲಿ ಭಾರತದ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಹಾಗೂ ಪಾಕಿಸ್ತಾನದ ಪ್ರಧಾನಿ ಅಯೂಬ್ ಖಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆದ್ದಿತ್ತು. ಪಾಕಿಸ್ತಾನದ ಲಾಹೋರ್‌ ವರೆಗೂ ಭಾರತದ ಸೇನೆ ಮುತ್ತಿಗೆ ಹಾಕಿ ಲಾಹೋರ್ ವಶಪಡಿಸಿಕೊಳ್ಳಲು ಯತ್ನಿಸಿತ್ತು.
  9. 19. ದೂರ ದರ್ಶನ ಆರಂಭ: ಭಾರತದಲ್ಲಿ ದೂರದರ್ಶನವು 1959ರ ಸೆಪ್ಟೆಂಬರ್ 15 ರಂದು ಪ್ರಾಯೋಗಿಕವಾಗಿ ಆರಂಭವಾಯಿತು. ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯಡಿಯಲ್ಲಿ ದೂರದರ್ಶನ ಕಾರ್ಯನಿರ್ವಹಿಸುತ್ತದೆ. 1965ರಿಂದ ಪ್ರತಿನಿತ್ಯ ಪ್ರಸಾರ ಆರಂಭಿಸಿತು. ದೂರದರ್ಶನದ ಮೂಲಕ ಹೊರಜಗತ್ತಿನ ಸುದ್ದಿಗಳನ್ನು ದೇಶದ ಜನರು ಆಗಿನಿಂದಲೇ ತಿಳಿದುಕೊಳ್ಳುತ್ತಿದ್ದರು. ಪ್ರತಿಮಾ ಪುರಿ ಹಾಗೂ ಸಲ್ಮಾ ಸುಲ್ತಾನ್ ದೂರದರ್ಶನದ ಪ್ರಾರಂಭದ ದಿನಗಳಲ್ಲಿ ನ್ಯೂಸ್ ಆ್ಯಂಕರ್ ಆಗಿದ್ದರು. 1967ರ ಜನವರಿ 26ರಂದು ಕೃಷಿ ದರ್ಶನ ಕಾರ್ಯಕ್ರಮವು ದೂರದರ್ಶನದಲ್ಲಿ ಪ್ರಾರಂಭವಾಯಿತು. ಪ್ರಾರಂಭದಲ್ಲಿ ಹಿಂದಿ ಭಾಷೆಯಲ್ಲಿ ಪ್ರಸಾರವಾಗುತ್ತಿದ್ದ ದೂರದರ್ಶನ, ಬಳಿಕ ಪ್ರಾದೇಶಿಕ ಭಾಷೆಗಳಲ್ಲೂ ತನ್ನ ಪ್ರಸಾರ ಆರಂಭಿಸಿತು. 1972ರಲ್ಲಿ ದೂರದರ್ಶನ ಸೇವೆಯು ಮುಂಬೈ, ಪಂಜಾಬ್ ನ ಅಮೃತಸರ ನಗರಗಳಿಗೆ ವಿಸ್ತರಣೆಯಾಯಿತು. 1975ರಲ್ಲಿ ದೇಶದ ಏಳು ನಗರಗಳಿಗೆ ದೂರದರ್ಶನ ಸೇವೆ ವಿಸ್ತರಣೆಯಾಯಿತು. ಆಗ ದೂರದರ್ಶನ ಮಾತ್ರ ದೇಶದ ಏಕೈಕ ಟೆಲಿವಿಷನ್ ಆಗಿತ್ತು. ರಾಷ್ಟ್ರೀಯ ದೂರದರ್ಶನ 1982ರಲ್ಲಿ ಆರಂಭವಾಯಿತು. 1982ರ ಆಗಸ್ಟ್ 15 ರಂದು ಕಲರ್ ಟೆಲಿವಿಷನ್ ಆರಂಭವಾಗಿದ್ದು, ಅಂದು ಪ್ರಧಾನಮಂತ್ರಿ ಇಂದಿರಾಗಾಂಧಿ ಅವರ ಕೆಂಪುಕೋಟೆಯ ಭಾಷಣವನ್ನು ನೇರಪ್ರಸಾರ ಮಾಡಲಾಯಿತು. 1982ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ಅನ್ನು ಕಲರ್ ಟೆಲಿವಿಷನ್ ನಲ್ಲಿ ಪ್ರಸಾರ ಮಾಡಲಾಯಿತು. ಕರ್ನಾಟಕದಲ್ಲಿ ದೂರದರ್ಶನವು ಡಿಡಿ ಚಂದನ ಚಾನಲ್ ಆಗಿ ಪ್ರಸಾರವಾಗುತ್ತಿದೆ. ಖಾಸಗಿ ಸ್ಯಾಟಲೈಟ್ ಚಾನಲ್ ಗಳು ಆರಂಭವಾದ ಮೇಲೆ ದೂರದರ್ಶನ ವೀಕ್ಷಕರ ಸಂಖ್ಯೆ ಕುಸಿಯಿತು.
  10. 20. ಲಾಲ್ ಬಹಾದ್ದೂರ್ ಶಾಸ್ತ್ರಿ ನಿಗೂಢ ಸಾವು: ಆಗಿನ ರಷ್ಯಾ, ಈಗಿನ ಉಜಬೇಕಿಸ್ತಾನದ ರಾಜಧಾನಿ ತಾಷ್ಕೆಂಟ್ ನಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಹಾಗೂ ಪಾಕ್ ಪ್ರಧಾನಿ ಅಯೂಬ್ ಖಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಭಾರತ-ಪಾಕ್ ಯುದ್ಧ ನಿಂತಿತ್ತು. ಭಾರತದ ಸೇನೆ ಪಾಕಿಸ್ತಾನದ ಲಾಹೋರ್ ಅನ್ನು ಮುತ್ತಿಗೆ ಹಾಕಲು ಯತ್ನಿಸಿತ್ತು. ಭಾರತದ ಸೇನೆ ಪಾಕ್ ಸೇನೆಯನ್ನು ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದ ಮಾರನೇ ದಿನವೇ ಅಂದರೇ, 1966ರ ಜನವರಿ 11 ರಂದು ಲಾಲ್ ಬಹಾದ್ದೂರ ಶಾಸ್ತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆದರೇ, ಶಾಸ್ತ್ರಿ ಸಾವಿನ ಬಗ್ಗೆ ಅನೇಕ ಅನುಮಾನಗಳಿವೆ. ಶಾಸ್ತ್ರಿ ಅವರನ್ನು ವಿಷಪ್ರಾಶನದಿಂದ ಕೊಲ್ಲಲಾಗಿದೆ ಎಂದು ಪತ್ನಿ ಲಲಿತಾ ಶಾಸ್ತ್ರಿ ಹಾಗೂ ಕುಟುಂಬ ವರ್ಗ ಆರೋಪಿಸಿದೆ. ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಮರಣೋತ್ತರ ಪರೀಕ್ಷೆಯನ್ನೇ ತಾಷ್ಕೆಂಟ್ ನಲ್ಲಿ ನಡೆಸಲೇ ಇಲ್ಲ. ಭಾರತದ ರಾಜಕೀಯ ಇತಿಹಾಸದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಸಾವು ಅತಿ ದೊಡ್ಡ ನಿಗೂಢತೆಯಾಗಿಯೇ ಉಳಿದಿದೆ. ಆಮೆರಿಕಾದ ಸಿಐಎ ಸೀಕ್ರೆಟ್ ಅಪರೇಷನ್ ನಡೆಸಿ ಏಷ್ಯಾ ಖಂಡದಲ್ಲಿ ಅಣ್ವಸ್ತ್ರ ಪರೀಕ್ಷೆ ತಡೆಯುವ ದುರುದ್ದೇಶದಿಂದ ಶಾಸ್ತ್ರಿ ಅವರನ್ನು ನಿಗೂಢವಾಗಿ ಕೊಂದಿರಬಹುದು ಎಂಬ ಶಂಕೆ ಇದೆ. ಆಮೆರಿಕಾದ ಗುಪ್ತಚರ ಸಂಸ್ಥೆ ಸಿಐಎ ಅಧಿಕಾರಿ ರಾಬರ್ಟ್‌ ಕ್ರೌಲಿ, ಸಿಐಎ ಯೇ ಶಾಸ್ತ್ರಿ ಅವರನ್ನು ಕೊಂದಿತ್ತು ಎಂದು 1993ರಲ್ಲಿ ಪತ್ರಕರ್ತ ಗ್ರೋಗ್ರೇರಿ ಡೌಗಲ್ಸ್ ಅವರಿಗೆ ಸಂದರ್ಶನದಲ್ಲಿ ಹೇಳಿದ್ದಾರೆ. (ಮುಂದುವರಿಯುವುದು)