Azadi ka amrit mahotsav: ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು 75 ವರ್ಷ ಪೂರ್ಣವಾಗಿದೆ. ಕಳೆದ 75 ವರ್ಷದಲ್ಲಿ ಭಾರತವು ಸಾಕಷ್ಟು ಸಾಧನೆಯನ್ನು ಮಾಡಿದೆ. ಅನೇಕ ಮೈಲಿಗಲ್ಲುಗಳನ್ನು ನಿರ್ಮಿಸಿದೆ. ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಭಾರತವು ಹೊಸ ಸಾಧನೆಯ ಮೂಲಕ ಅಭಿವೃದ್ದಿಯ ಹಾದಿಯಲ್ಲಿ ದಾಪುಗಾಲು ಇಟ್ಟಿದೆ. ಸ್ವಾತಂತ್ರ್ಯ ನಂತರದ ಭಾರತದ ಪ್ರಮುಖ ಸಾಧನೆ, ಮೈಲಿಗಲ್ಲು, ಏಳು-ಬೀಳುಗಳು, ಪ್ರಮುಖ ಘಟನಾವಳಿಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.
5. ಭಾರತದಲ್ಲಿ ಹೈದರಾಬಾದ್ ಸೇರಿದಂತೆ ರಾಜ್ಯಗಳ ವಿಲೀನ: ಸ್ವಾತಂತ್ರ್ಯ ನಂತರವೂ ದೇಶದಲ್ಲಿದ್ದ 545 ಸಂಸ್ಥಾನಗಳ ಪೈಕಿ ಕೆಲ ಸಂಸ್ಥಾನಗಳು, ರಾಜರು ಸ್ವತಂತ್ರವಾಗಿದ್ದರು. ಇಂಥವರ ಪೈಕಿ ರಾಜಸ್ಥಾನದ 15 ರಾಜಮನೆತನ, ಸಂಸ್ಥಾನಗಳು 1949ರ ಮಾರ್ಚ್ 15 ರಂದು ರಾಜಸ್ಥಾನ ರಾಜ್ಯ ಹಾಗೂ ಭಾರತ ದೇಶಕ್ಕೆ ಸೇರ್ಪಡೆಯಾದವು. 1949ರ ಸೆಪ್ಟೆಂಬರ್ 9ರಂದು ತ್ರಿಪುರದ ರಾಣಿ ಕಾಂಚನಾಪ್ರಭಾ ದೇವಿ ತ್ರಿಪುರವನ್ನು ಭಾರತಕ್ಕೆ ಸೇರ್ಪಡೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದೇ ರೀತಿ ಹೈದರಾಬಾದ್ ರಾಜ್ಯ ಕೂಡ ಭಾರತಕ್ಕೆ ಸೇರ್ಪಡೆಯಾಗಿರಲಿಲ್ಲ. ಆಗ ಕೇಂದ್ರ ಗೃಹ ಸಚಿವರಾಗಿದ್ದ ಸರ್ದಾರ್ ಪಟೇಲ್ ಹೈದರಾಬಾದ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸುವ ತೀರ್ಮಾನ ಕೈಗೊಂಡರು. ಹೈದರಾಬಾದ್‌ಗೆ ಭಾರತದ ಮಿಲಿಟರಿಯನ್ನು ನುಗ್ಗಿಸಿದ್ದರು. ಹೈದರಾಬಾದ್‌ನಲ್ಲಿ ಅಪರೇಷನ್ ಪೋಲೋ ಹೆಸರಿನ ಕಾರ್ಯಾಚರಣೆಯನ್ನು ಭಾರತದ ಮಿಲಿಟರಿ ನಡೆಸಿತ್ತು. ಕೊನೆಗೆ ಹೈದರಾಬಾದ್ ನಿಜಾಮ ಮೀರ್ ಉಸ್ಮಾನ್ ಅಲಿ ಖಾನ್, ಹೈದರಾಬಾದ್ ರಾಜ್ಯವನ್ನು ಭಾರತದಲ್ಲಿ ವಿಲೀನಗೊಳಿಸುವ ಒಪ್ಪಂದಕ್ಕೆ 1948ರ ಸೆಪ್ಟೆಂಬರ್ 18ರಂದು ಸಹಿ ಹಾಕಿದ್ದ.
6. ಮೊದಲ ಸಾರ್ವಜನಿಕ ಸ್ವಾಮ್ಯದ ಕಂಪನಿ: ಭಾರತದ ಮೊದಲ ಸಾರ್ವಜನಿಕ ಸ್ವಾಮ್ಯದ ಕಂಪನಿ ಅಂದ್ರೆ ಇಂಡಿಯನ್ ಟೆಲಿಪೋನ್ ಇಂಡಸ್ಟ್ರೀಸ್, ಅರ್ಥಾತ್ ಐಟಿಐ. 1948ರಲ್ಲಿ ಇದನ್ನು ಆರಂಭಿಸಲಾಗಿತ್ತು. ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಕಂಪನಿಗಳಿಗೆ ಟೆಲಿಪೋನ್ ಸಾಮಗ್ರಿಗಳನ್ನು ಐಟಿಐ ಪೂರೈಸುತ್ತಿತ್ತು. 1990ರಲ್ಲಿ ದೇಶದಲ್ಲಿ ಟೆಲಿಕಾಂ ಕ್ರಾಂತಿಯೇ ನಡೆಯಿತು. ಖಾಸಗಿ ರಂಗದ ಹೊಸ ಟೆಲಿಕಾಂ ಕಂಪನಿಗಳು ಭಾರತದಲ್ಲಿ ತಲೆ ಎತ್ತಿದ್ದವು. ಇದರಿಂದಾಗಿ ಐಟಿಐ ಕಂಪನಿಯ ಮಹತ್ವ ಕಡಿಮೆಯಾಗಲಾರಂಭಿಸಿತು. 1992-93ರಲ್ಲಿ 86 ಕೋಟಿ ರೂಪಾಯಿ ಲಾಭದಲ್ಲಿದ್ದ ಐಟಿಐ ಕಂಪನಿಯು , 2003-04ರ ವೇಳೆಗೆ 706 ಕೋಟಿ ರೂಪಾಯಿ ನಷ್ಟ ಅನುಭವಿಸಿ ರೋಗಗ್ರಸ್ತ ಕಂಪನಿಯಾಗಿತ್ತು. 2014-15ರಲ್ಲಿ ಐಟಿಐ ನಷ್ಟ 297 ಕೋಟಿ ರೂಪಾಯಿ ಆಗಿತ್ತು. ಆದರೇ, ಬಳಿಕ ಚೇತರಿಸಿಕೊಂಡು 2016-17ರ ವೇಳೆಗೆ ನಷ್ಟವು 56 ಕೋಟಿ ರೂಪಾಯಿ ಆಗಿತ್ತು. ಆದಾಯವು 706 ಕೋಟಿ ರೂಪಾಯಿಯಿಂದ 1,651 ಕೋಟಿ ರೂಪಾಯಿಗೇರಿತ್ತು.
7. 1950 ರಲ್ಲಿ ಭಾರತದ ಹೊಸ ಸಂವಿಧಾನ ಜಾರಿ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಹೊಸ ಸಂವಿಧಾನ ರಚನೆಯಾಗಿ ಜಾರಿಯಾಗುವವರೆಗೂ ಭಾರತದಲ್ಲಿ 1935ರ ಗರ್ವನಮೆಂಟ್ ಆಫ್ ಇಂಡಿಯಾ ಕಾಯಿದೆ ಜಾರಿಯಲ್ಲಿತ್ತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಭಾರತಕ್ಕೆ ತನ್ನದೇ ಆದ ಹೊಸ ಸಂವಿಧಾನ ರಚಿಸಲು ಸಂವಿಧಾನ ರಚನಾ ಸಮಿತಿಯನ್ನು ರಚಿಸಲಾಗಿತ್ತು. ಇದಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಮುಖ್ಯಸ್ಥರಾಗಿದ್ದರು. ಅಂಬೇಡ್ಕರ್ ನೇತೃತ್ವದಲ್ಲಿ ಬೇರೆ ಬೇರೆ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತಕ್ಕೆ ಹೊಸ ಸಂವಿಧಾನ ರಚಿಸಲಾಯಿತು. ಈ ಹೊಸ ಸಂವಿಧಾನವನ್ನು 1949ರ ನವಂಬರ್ 26ರಂದು ಆಳವಡಿಸಿಕೊಳ್ಳಲಾಯಿತು. ಅಂತಿಮವಾಗಿ 1950ಜನವರಿ 26ರಂದು ಸಂವಿಧಾನ ಜಾರಿಗೆ ಬಂದಿತು. ಸಂವಿಧಾನವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ಘೋಷಿಸಿದೆ. ಭಾರತದ ಸಂವಿಧಾನವು ತನ್ನ ನಾಗರಿಕರಿಗೆ ನ್ಯಾಯ, ಸಮಾನತೆ, ಸ್ವಾತಂತ್ರ್ಯವನ್ನು ನೀಡಿದೆ.
8. 1951 ರಲ್ಲಿ ಮೊದಲ ಲೋಕಸಭಾ ಚುನಾವಣೆ: ಭಾರತದಲ್ಲಿ ಸ್ವಾತಂತ್ರ್ಯ ಪಡೆದ ತಕ್ಷಣವೇ ಭಾರತದ ಎಲ್ಲ ವಯಸ್ಕ ನಾಗರಿಕರಿಗೂ ಮತದಾನದ ಹಕ್ಕು ನೀಡಲಾಯಿತು. ಆಮೆರಿಕಾದಂಥ ದೇಶದಲ್ಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ 150 ವರ್ಷದ ಬಳಿಕ ಜನರಿಗೆ ಮತದಾನದ ಹಕ್ಕು ನೀಡಲಾಗಿತ್ತು. 1951ರಲ್ಲಿ ಭಾರತದಲ್ಲಿ ಮೊದಲ ಲೋಕಸಭಾ ಚುನಾವಣೆ ನಡೆಯಿತು. ಸ್ವಾತಂತ್ರ್ಯ ನಂತರ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಭರ್ಜರಿ ಜಯ ಗಳಿಸಿತ್ತು. ಆಗ ದೇಶದಲ್ಲಿ 489 ಲೋಕಸಭಾ ಕ್ಷೇತ್ರಗಳಿದ್ದವು. ಇವುಗಳ ಪೈಕಿ 364 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಜಯ ಗಳಿಸಿತ್ತು. ಪಂಡಿತ್ ಜವಾಹರ್ ಲಾಲ್ ನೆಹರು ಕಾಂಗ್ರೆಸ್ ಪಕ್ಷದಿಂದ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. 1947ರಿಂದಲೂ ದೇಶಕ್ಕೆ ಪ್ರಧಾನಿಯಾಗಿ ನೆಹರು ಅವರೇ ಆಳ್ವಿಕೆ ನಡೆಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ನೆಹರು ಅವರನ್ನು ಪ್ರಧಾನಿಯಾಗಿ ಮಹಾತ್ಮ ಗಾಂಧೀಜಿ ಆಯ್ಕೆ ಮಾಡಿದ್ದರು. 1950ರಲ್ಲಿ ಗೃಹ ಸಚಿವರಾಗಿದ್ದ, ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ವಿಧಿವಶರಾಗಿದ್ದರು.
9. ಮೊದಲ ಐಐಟಿ ಆರಂಭ: ದೇಶದ ಮೊದಲ ಐಐಟಿ ಅಧಿಕೃತವಾಗಿ ಪಶ್ಚಿಮ ಬಂಗಾಳದ ಖರಗಪುರದಲ್ಲಿ 1951 ಆಗಸ್ಟ್ 18ಂದು ಆರಂಭವಾಯಿತು. ಮೌಲಾನ ಅಬ್ದುಲ್ ಕಲಾಂ ಆಜಾದ್ ಸಮ್ಮುಖದಲ್ಲಿ ಸಂಸ್ಥೆಗೆ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಬ ಹೆಸರು ನೀಡಿ ಉದ್ಘಾಟನೆ ನೆರವೇರಿಸಲಾಗಿತ್ತು. 1950ರ ಮೇ ತಿಂಗಳಿನಲ್ಲಿ ಖರಗಪುರದ ಹಿಜಲಿಯಲ್ಲಿ ಐಐಟಿ ಆರಂಭವಾಗಿತ್ತು. ಪ್ರಾರಂಭದಲ್ಲಿ ಕೆಲ ದಿನಗಳ ಕಾಲ ಕೋಲ್ಕತ್ತಾದಲ್ಲಿ ಐಐಟಿ ಕಾರ್ಯನಿರ್ವಹಿಸಿತ್ತು. ಬಳಿಕ ಖರಗಪುರಕ್ಕೆ ಶಿಫ್ಟ್ ಆಗಿತ್ತು, ಸ್ವಾತಂತ್ರ್ಯ ಪೂರ್ವದಲ್ಲೇ ಐಐಟಿ ಸ್ಥಾಪನೆಯ ಕನಸುನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರು ಕಂಡಿದ್ದರು. ಹಳೆಯ ಹಿಜಲಿ ಡಿಟೆನ್ಸನ್ ಕ್ಯಾಂಪ್ ನಲ್ಲೇ ಐಐಟಿ ಆರಂಭವಾಗಿತ್ತು. ಪ್ರಾರಂಭದಲ್ಲಿ 42 ಶಿಕ್ಷಕರು ಹಾಗೂ 224 ವಿದ್ಯಾರ್ಥಿಗಳಿದ್ದರು . ಹಿಜಲಿ ಡಿಟೆನ್ಸನ್ ಕ್ಯಾಂಪ್ ನಲ್ಲೇ ಕ್ಲಾಸ್ ರೂಮು, ಲ್ಯಾಬೋರೇಟರಿ, ಆಡಳಿತ ಕಟ್ಟಡಗಳು ಇದ್ದವು. 1952ರ ಮಾರ್ಚ್ ತಿಂಗಳಲ್ಲಿ ಪ್ರಧಾನಿ ನೆಹರು ಐಐಟಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಜೆ.ಸಿ. ಘೋಷ್ ಐಐಟಿ ಖರಗಪುರದ ಮೊದಲ ಡೈರೆಕ್ಟರ್ ಆಗಿದ್ದರು. 1956ರ ಸೆಪ್ಟೆಂಬರ್ ನಲ್ಲಿ ಪಾರ್ಲಿಮೆಂಟ್ ಕಾಯಿದೆಯ ಮೂಲಕ ಐಐಟಿ ಖರಗಪುರ ಅನ್ನು ರಾಷ್ಟ್ರೀಯ ಮಹತ್ವದ ಶಿಕ್ಷಣ ಸಂಸ್ಥೆ ಎಂದು ಘೋಷಿಸಲಾಗಿದೆ. ಸದ್ಯ ಐಐಟಿ ಖರಗಪುರ 2,100 ಎಕರೆ ವಿಸ್ತೀರ್ಣದಲ್ಲಿದ್ದು, 18 ವಿಭಾಗಗಳಿದ್ದು, 550 ಮಂದಿ ಭೋಧಕ ವರ್ಗ, 9 ಸಾವಿರ ವಿದ್ಯಾರ್ಥಿಗಳಿದ್ದಾರೆ.
10. ಇಂಡಿಯನ್ ಏರ್ ಲೈನ್ಸ್ ಆರಂಭ: 1953 ರಲ್ಲಿ ಭಾರತದಲ್ಲಿ ಇಂಡಿಯನ್ ಏರ್ ಲೈನ್ಸ್ ಅನ್ನು ಪ್ರಾರಂಭಿಸಲಾಯಿತು. ಅನೇಕ ಪ್ರಾದೇಶಿಕ ಏರ್ ಲೈನ್ಸ್ ಗಳನ್ನು ಒಗ್ಗೂಡಿಸಿ ಇಂಡಿಯನ್ ಏರ್ ಲೈನ್ಸ್ ಅನ್ನು ದೇಶದಲ್ಲಿ ಆರಂಭಿಸಲಾಯಿತು. ಸ್ಥಳೀಯ ಏವಿಯೇಷನ್ ಮಾರ್ಕೆಟ್ ಮತ್ತು ಸ್ಪರ್ಧಾತ್ಮಕ ಏರ್ ಲೈನ್ಸ್ ಅನ್ನು ಸ್ಥಾಪಿಸಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಇಂಡಿಯನ್ ಏರ್ ಲೈನ್ಸ್ ಅನ್ನು ಆರಂಭಿಸಿತು. ಡೆಕ್ಕನ್ ಏರ್ ವೇಸ್, ಏರ್ ವೇಸ್ ಇಂಡಿಯಾ, ಭಾರತ್ ಏರ್ ವೇಸ್, ಹಿಮಾಲಯನ್ ಏರ್ ವೇಸ್, ಕಳಿಂಗ ಏರ್ ಲೈನ್ಸ್, ಇಂಡಿಯನ್ ನ್ಯಾಷನಲ್ ಏರ್ ಲೈನ್ಸ್, ಏರ್ ಸರ್ವೀಸಸ್ ಆಫ್ ಇಂಡಿಯಾ ಹಾಗೂ ಏರ್ ಇಂಡಿಯಾದ ಸ್ವದೇಶಿ ವಿಭಾಗವನ್ನು ಒಗ್ಗೂಡಿಸಿ ಇಂಡಿಯನ್ ಏರ್ ಲೈನ್ಸ್ ಅನ್ನು ಆರಂಭಿಸಲಾಯಿತು. 2011ರವರೆಗೂ ಇಂಡಿಯನ್ ಏರ್ ಲೈನ್ಸ್ ಕಾರ್ಯಾಚರಣೆ ನಡೆಸಿತು. (ಮುಂದುವರಿಯುವುದು)