ಹಾಸನ, ಆಗಸ್ಟ್ 7: ಗೋಮಾಳ ಜಮೀನಿಗಾಗಿ (Gomala Land) ವಿಷದ ಬಾಟಲಿ ಹಿಡಿದುಕೊಂಡು ಅಧಿಕಾರಿಗಳ ಎದುರು ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಬೇಲೂರು (Belur) ತಾಲೂಕಿನ ತಟ್ಟೆಹಳ್ಳಿಯಲ್ಲಿ ನಡೆದಿದೆ. ಗ್ರಾಮದ 50 ಕ್ಕೂ ಹೆಚ್ಚು ಕುಟುಂಬಗಳು ಕಳೆದ 30 ವರ್ಷಗಳಿಂದ ಗೋಮಾಳದಲ್ಲಿ ಉಳುಮೆ ಮಾಡಿಕೊಂಡು ಬರುತ್ತಿವೆ. ಈ ಜಮೀನನ್ನು ಅಧಿಕಾರಿಗಳು ಗ್ರಾಮಸ್ಥರಿಂದ ಬಿಡಿಸಲು ಹೋದಾಗ ಈ ಘಟನೆ ನಡೆದಿದೆ.
ಗೋಮಾಳ ಜಮೀನಿನಿಂದ ಕುಟುಂಬಗಳನ್ನು ತೆರವುಗೊಳಿಸಲು ಅಧಿಕಾರಿಗಳು ಆಗಸ್ಟ್ 7 ರಂದು ಮಧ್ಯಾಹ್ನ ಹೋದಾಗ ಗ್ರಾಮಸ್ಥರು ಕೈಯಲ್ಲಿ ವಿಷದ ಬಾಟಲಿ ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಅದಾಗ್ಯೂ, ಜಮೀನಿನಲ್ಲಿ ಬೆಳೆದ ತೆಂಗಿನ ಮರಗಳನ್ನು ಕಿತ್ತುಹಾಕಿದ್ದಾರೆ. ಈ ವೇಳೆ ಪ್ರತಿಭಟನಾ ನಿರತ ವ್ಯಕ್ತಿಯೊಬ್ಬರು ವಿಷ ಸೇವಿಸಿದ್ದಾರೆ. ಕೂಡಲೇ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ತಾಯಿಯಿಂದ ಬೇರ್ಪಟ್ಟಿದ್ದ ಮರಿಯಾನೆ ಹತ್ತು ದಿನಗಳ ನಂತರ ಸಾವು: ಕಾಫಿ ತೋಟದಲ್ಲಿ ಶವ ಪತ್ತೆ
ಇದೇ ರೀತಿ ಸರ್ಕಾರಿ ಭೂಮಿಗಳನ್ನು ಕಬಳಿಕೆ ಮಾಡುತ್ತಿರುವುದು ರಾಜ್ಯಾದ್ಯಂತ ನಡೆಯುತ್ತಲೇ ಇದೆ. ದಕ್ಷಿಣ ಕರ್ನಾಟಕದ ಸರ್ಕಾರಿ ಭೂಮಿ ಒತ್ತುವರಿಯಲ್ಲಿ ಚಿಕ್ಕಮಗಳೂರು ಜಿಲ್ಲೆ ಅಗ್ರಸ್ಥಾನದಲ್ಲಿದೆ. ಜಿಲ್ಲೆಯಾದ್ಯಂತ ಎರಡು ಲಕ್ಷ ಎಕರೆಗೂ ಅಧಿಕ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ನಿಯಮಾವಳಿ ಉಲ್ಲಂಘಿಸಿ ಅಕ್ರಮವಾಗಿ ಭೂಮಿ ಮಂಜೂರು ಮಾಡಿರುವ 48 ಪ್ರಕರಣಗಳಿದ್ದು, ಒಂಬತ್ತು ತಹಶೀಲ್ದಾರ್‌ಗಳ ವಿರುದ್ಧ ಎಫ್‌ಐಆರ್ ದಾಖಲಾಗಿವೆ.
ಸಾಗುವಳಿ ಮಾಡಲು ಗೋಮಾಳ ಜಮೀನು ಮಂಜೂರು ಮಾಡಲು ಯಾವುದೇ ಅಧಿಕಾರಿಗಳಿಗೆ ಅಧಿಕಾರವಿಲ್ಲ, ಮಂಜೂರು ಮಾಡಿದರೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. 2002ಕ್ಕಿಂತ ಮೊದಲು ಯಾರಾದರೂ ಗೋಮಾಳದ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದರೆ ಅದನ್ನು ಮಂಜೂರು ಮಾಡಬಹುದು. ಆದರೆ, ಖಾಸಗಿಯವರಿಗೆ ಗೋಮಾಳ ಭೂಮಿ ಮಂಜೂರು ಮಾಡುವಂತಿಲ್ಲ ಎಂದು ಚಿಕ್ಕಮಗಳೂರು ಜಿಲ್ಲಾ ನೋಡಲ್ ಕಾರ್ಯದರ್ಶಿ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ