ಹುಬ್ಬಳ್ಳಿ: ಕರೆಂಟ್ ಬಿಲ್ ಜಾಸ್ತಿ ಬಂದಿದ್ದಕ್ಕೆ ಹೆಸ್ಕಾಂ ಸಿಬ್ಬಂದಿಗೆ ಹಲ್ಲೆ; ಆರೋಪಿ ಬಂಧನ
ಗೃಹಜ್ಯೋತಿ ಯೋಜನೆ ಜಾರಿಯಾದ ನಂತರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿದ್ಯುತ್ ಮೀಟರ್ ರೀಡರ್ ಮೇಲೆ ಗ್ರಾಹಕರು ಹಲ್ಲೆ ಮಾಡುತ್ತಿರುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಅದರಂತೆ ಹುಬ್ಬಳ್ಳಿಯ ಮಹಾಲಕ್ಷ್ಮೀ ಬಡಾವಣೆಯಲ್ಲಿ ಕರೆಂಟ್ ಬಿಲ್ ಕೊಡಲು ಹೋದ ಹೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ.
ಹುಬ್ಬಳ್ಳಿ: ಗೃಹಜ್ಯೋತಿ (Gruhajyoti) ಯೋಜನೆ ಜಾರಿಯಾದ ನಂತರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿದ್ಯುತ್ ಮೀಟರ್ ರೀಡರ್ (Meter Reader) ಮೇಲೆ ಗ್ರಾಹಕರು ಹಲ್ಲೆ ಮಾಡುತ್ತಿರುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಅದರಂತೆ ಹುಬ್ಬಳ್ಳಿಯ (Hubballi) ಮಹಾಲಕ್ಷ್ಮೀ ಬಡಾವಣೆಯಲ್ಲಿ ಕರೆಂಟ್ ಬಿಲ್ ಕೊಡಲು ಹೋದ ಹೆಸ್ಕಾಂ (HESCOM) ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ. ಮಲ್ಲಯ್ಯ ಗಣಾಚಾರಿ ಹಲ್ಲೆಗೊಳಗಾದ ಹೆಸ್ಕಾಂ ಮೀಟರ್ ರೀಡರ್. ಅಬ್ದುಲ್ ಹಲ್ಲೆ ಮಾಡಿದ ಗ್ರಾಹಕ.
ಅಬ್ದುಲ್ ಕಳೆದ 2-3 ತಿಂಗಳ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಹೀಗಾಗಿ ಆಗಸ್ಟ್ ತಿಂಗಳ ಬಿಲ್ 5 ಸಾವಿರಕ್ಕಿಂತ ಜಾಸ್ತಿ ಬಂದಿದೆ. ನಿಗದಿತ 200 ಯೂನಿಟ್ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರದ ಗೃಹಜ್ಯೋತಿ ಯೋಜನೆ ಸಹ ಕ್ಯಾನ್ಸಲ್ ಆಗಿದೆ.
ಇದನ್ನೂ ಓದಿ: ಹುಬ್ಬಳ್ಳಿ: ಟವರ್ ಮೇಲೆ ಎರಡು ಧರ್ಮಗಳ ಧ್ವಜ ಕಟ್ಟಿದ ಪ್ರಕರಣ: ಇಬ್ಬರು ವಶಕ್ಕೆ
ಹೀಗಾಗಿ ಮೀಟರ್ ರೀಡರ್ ಮಲ್ಲಯ್ಯ ಗಾಣಾಚಾರಿ ಎಂದಿನಂತೆ ವಿದ್ಯುತ್ ಬಿಲ್ ನೀಡಲು ಹೋಗಿದ್ದಾರೆ. ಈ ವೇಳೆ ವಿದ್ಯುತ್ ಬಿಲ್ ಜಾಸ್ತಿ ಬಂದಿದೆ ಎಂದು ಗ್ರಾಹಕ ಅಬ್ದುಲ್ ಇಟ್ಟಿಗೆಯಿಂದ ಮಲ್ಲಯ್ಯ ಗಾಣಾಚಾರಿ ಅವರ ತಲೆಗೆ ಹೊಡೆದು, ಮನಬಂದಂತೆ ಥಳಿಸಿರುವ ಆರೋಪ ಕೇಳಿಬಂದಿದೆ. ಈ ಕುರಿತು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಮಾಡಿರುವ ಆರೋಪಿ ಅಬ್ದುಲ್ನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:34 pm, Wed, 16 August 23